ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾದ ರಾಜ್ಯ ಚುನಾವಣಾ ಆಯೋಗ: ಛಲವಾದಿ ನಾರಾಯಣಸ್ವಾಮಿ
ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾದ ರಾಜ್ಯ ಚುನಾವಣಾ ಆಯೋಗ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿ ರಾಜ್ಯ ಚುನಾವಣಾ ಆಯೋಗವು ಬೆಂಗಳೂರಿನ 27 ವಾರ್ಡ್‍ಗಳಲ್ಲಿ ಎಸ್‍ಐಆರ್ ನಡೆಸುತ್ತಿದೆ. ಇದು ಕಾನೂನು ಬಾಹಿರ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಆಕ್ಷೇಪಿಸಿದ್ದಾರೆ.
ರಾಜ್ಯದ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಭಾರತ ಚುನಾವಣಾ ಆಯೋಗವು ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‍ಐಆರ್) ನಡೆಸುತ್ತಿದೆ. ಆದರೆ ಇದಕ್ಕೆ ಸಮಾನಾಂತರವಾಗಿ ರಾಜ್ಯ ಚುನಾವಣಾ ಆಯೋಗವು ಎಸ್‍ಐಆರ್ ನಡೆಸುತ್ತಿದೆ. ಇದು ತಪ್ಪು. ಈ ಬಗ್ಗೆ ರಾಜ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರಿಗೆ ಮನವಿ ಸಲ್ಲಿಸಿರುವುದಾಗಿ ಹೇಳಿದರು.
ಅನಧಿಕೃತವಾಗಿ ಈ ರೀತಿ ಎಸ್‍ಐಆರ್ ನಡೆಸುವುದು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ. ಒಬ್ಬರ ಹೆಸರು ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಇದ್ದರೆ ಅದನ್ನು ಎಸ್‍ಐಆರ್ ನಲ್ಲಿ ತೆಗೆಯಲಾಗುತ್ತದೆ. ಇಲ್ಲಿ ಪಕ್ಷಗಳ ಪ್ರಶ್ನೆ ಬರುವುದಿಲ್ಲ, ವ್ಯಕ್ತಿ ಮುಖ್ಯವಾಗುವುದಿಲ್ಲ. ಒಬ್ಬರ ಹೆಸರು ಒಂದೇ ಕಡೆ ಇರಬೇಕು ಎಂಬುದೇ ಇದರ ಪ್ರಮುಖ ಉದ್ದೇಶ ಎಂದು ವಿವರಿಸಿದರು.
ಕೇಂದ್ರ ಚುನಾವಣಾ ಆಯೋಗವು ಕಾನೂನು ಪ್ರಕಾರ ಎಸ್‍ಐಆರ್ ನಡೆಸುತ್ತಿದೆ. ಆದರೆ ತಮಗೆ ಬೇಕಾದವರ ಹೆಸರು ಉಳಿಸಲು ಹೀಗೆ ಎಸ್‍ಐಆರ್ ನಡೆಸಲಾಗುತ್ತಿದೆ ಎಂದು ದೂರಲಾಗುತ್ತಿದೆ. ಇದು ತಪ್ಪು. ಕೇಂದ್ರ ಚುನಾವಣಾ ಆಯೋಗದ ಅನುಮತಿ ಇಲ್ಲದೆ ಮತ್ತೊಂದು ಎಸ್‍ಐಆರ್ ಅನ್ನು ರಾಜ್ಯ ಚುನಾವಣಾ ಆಯೋಗ ಮಾಡುವಂತಿಲ್ಲ. ಆದರೆ ಇಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿಸುತ್ತಿದೆ. ತಕ್ಷಣ ಇದನ್ನು ಕೈಬಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿರುವುದಾಗಿ ಹೇಳಿದರು.
ರಾಜ್ಯ ಚುನಾವಣಾ ಆಯೋಗವು ಕೇಂದ್ರ ಚುನಾವಣಾ ಆಯೋಗದ ಅಧೀನದಲ್ಲಿ ಕೆಲಸ ಮಾಡಬೇಕು. ಯಾವುದೇ ರಾಜ್ಯ ಸರ್ಕಾರದ ಅಧೀನದಲ್ಲಿ ಅಲ್ಲ. ಇಂತಹ ಸಮಾನಾಂತರ ಎಸ್‍ಐಆರ್‍ನಿಂದ ಜನರಲ್ಲಿ ಅನಗತ್ಯ ಆತಂಕ ಉಂಟಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅನವಶ್ಯಕವಾಗಿ ಆತಂಕ ಹುಟ್ಟಿಸುತ್ತಿದೆ ಎಂದು ದೂರಿದರು. ಇಂತಹ ಎಸ್‍ಐಆರ್ ವಿರುದ್ಧ ಕಾನೂನು ಕ್ರಮವಾಗಬೇಕು. ನಮ್ಮ ಮನವಿ ಪರಿಗಣಿಸಿದ ಆಯುಕ್ತರು ಕೇಂದ್ರ ಚುನಾವಣಾ ಆಯೋಗಕ್ಕೆ ಮುಂದಿನ ಕ್ರಮಕ್ಕೆ ಕಳುಹಿಸುವುದಾಗಿ ಹೇಳಿದ್ದಾರೆ ಎಂದು ಹೇಳಿದರು.





Comments
Leave a Comment