ಗ್ಯಾಸ್ ಸಿಲಿಂಡರ್ ತಲೆ ಮೇಲೆ ಹೊತ್ತು ಪ್ರತಿಭಟನೆ ಮಾಡಿದೋರು ಎಲ್ಲಿ ಹೋದರು: ಖಂಡ್ರೆ
ಬೆಂಗಳೂರು, ಮೇ20: ಯುಪಿಎ ಕಾಲದಲ್ಲಿ 400 ರೂ. ಇದ್ದ ಅಡುಗೆ ಅನಿಲ ಸಿಲಿಂಡರ್ ದರ ಅಲ್ಪ ಏರಿಕೆ ಮಾಡಿದ್ದಕ್ಕೆ ತಲೆಯ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತು ಪ್ರತಿಭಟನೆ ಮಾಡಿದ ಬಿಜೆಪಿ ನಾಯಕರು ಈಗ ಎಲ್ಲಿ ಹೋದರು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರವನ್ನು ಪದೇ ಪದೇ ಏರಿಸುತ್ತಿರುವ ಕೇಂದ್ರ ಎನ್.ಡಿ.ಎ. ಸರ್ಕಾರದ ವಿರುದ್ಧ ಧ್ವನಿ ಎತ್ತಲಾಗದ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಸಾಧನೆ ಸಮಾವೇಶದ ಬಗ್ಗೆ ಮಾತನಾಡುತ್ತಾರೆ. 2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂಬುದು ಬಿಜೆಪಿ ನಾಯಕರಿಗೆ ಮನವರಿಕೆಯಾಗಿದೆ ಹೀಗಾಗಿಯೇ ಹೌಹಾರುತ್ತಿದ್ದಾರೆ ಎಂದರು.
ನೀಟ್ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಲಾಗದೆ, ಪ್ರಶ್ನೆಪತ್ರಿಕೆ ಲೀಕ್ ಆದರೂ ಸಚಿವ ರಾಜೀನಾಮೆ ಪಡೆಯದ, ಕ್ರಮ ಕೈಗೊಳ್ಳದೆ 25 ಲಕ್ಷ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟ ಆಡುತ್ತಿರುವ ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿ ಎಂದರು.
ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಪಂಚ ಗ್ಯಾರಂಟಿಗಳಿಗೆ 1ಕೋಟಿ 25 ಲಕ್ಷ ರೂ.ಗಳನ್ನು ಬಳಕೆ ಮಾಡಿ, ಮಹಿಳಾ ಸಬಲೀಕರಣ, ಬಡವರ ಸಬಲೀಕರಣ ಮಾಡುತ್ತಿದೆ. ಜೊತೆಗೆ ಅಭಿವೃದ್ಧಿಯೂ ಆಗುತ್ತಿದೆ. ಆದರೆ ಬಿಜೆಪಿಯವರು ರಾಜ್ಯದಲ್ಲಿ 4 ವರ್ಷ ಅಧಿಕಾರದಲ್ಲಿದ್ದಾಗ ಜನರಿಗೆ ಏನು ಕೊಟ್ಟರು ಎಂದು ಪ್ರಶ್ನಿಸಿದರು.
ಪ್ರತಿವರ್ಷ 2 ಕೋಟಿ ಯುವಜನರಿಗೆ ಉದ್ಯೋಗ ಕೊಡುವುದಾಗಿ ಹೇಳಿದರು ಕೊಟ್ಟರೇ, 2023ರೊಳಗೆ ಸರ್ವರಿಗೂ ಸೂರು ಎಂದರೆ ಎಲ್ಲರಿಗೂ ಮನೆ ಕೊಟ್ಟರಾ, 2022ರ ಹೊತ್ತಿಗೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಕೊಚ್ಚಿಕೊಂಡವರು ಏನು ಮಾಡಿದರು. ಕರೋನಾ ಕಾಲದಲ್ಲಿ ಗಂಟೆ ಹೊಡಿಸಿದರು, ರೆಮಿಡಿ ಸಿವೀರ್ 2000ರೂ. ಬದಲು 30-30 ಸಾವಿರಕ್ಕೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದರೂ ಸುಮ್ಮನಿದ್ದರು. ಈಗ ಊಟ ಕಡಿಮೆ ಮಾಡಿ, ನೀರು ಕಡಿಮೆ ಕುಡಿಯಿರಿ, ಚಿನ್ನ ಖರೀದಿಸಬೇಡಿ ಎನ್ನುತ್ತಿದ್ದಾರೆ ಎಂದು ಈಶ್ವರ ಖಂಡ್ರೆ ವ್ಯಂಗ್ಯವಾಡಿದರು.






Comments
Leave a Comment