ಒಂದು ವಾರದೊಳಗೆ ಎತ್ತಿನಹೊಳೆ ಬಾಕಿ ಕಾಮಗಾರಿ ಪ್ರಾರಂಭ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರಿನಾದ್ಯಂತ ಕಾಂಪೌಂಡ್ ಗಳ ಪಕ್ಕ ಇರುವ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಸೂಚನೆ: ಡಿಸಿಎಂ ಡಿ.ಕೆ. ಶಿವಕುಮಾರ್
ಮಳೆ ಹಾನಿ ತಡೆಯಲು ಸಿದ್ದತೆ
ಮಳೆ ಚೆನ್ನಾಗಿ ಬರಲಿ ಎಂದು ಪ್ರಾರ್ಥನೆ
ಖರ್ಗೆ ಸಾಹೇಬರನ್ನು ಕೇಳಿ
ಬೆಂಗಳೂರು, ಏ.30:
“ಇಡೀ ಬೆಂಗಳೂರಿನಾದ್ಯಂತ ಅಪಾಯಕಾರಿಯಾಗಿರುವ ಕಾಂಪೌಂಡ್ ಗಳ ಪಕ್ಕ ಇರುವ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಎಂದು ಸೂಚನೆ ನೀಡಲಾಗಿದೆ. ಇಂತಹ ಪ್ರದೇಶಗಳನ್ನು ಗುರುತಿಸಿ ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರದಂದು ಪ್ರತಿಕ್ರಿಯೆ ನೀಡಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆಯೇ ಎಂದು ಕೇಳಿದಾಗ, “ಈ ದುರ್ಘಟನೆ ಸಂಭವಿಸಬಾರದಿತ್ತು, ಆದರೂ ಸಂಭವಿಸಿದೆ ಯಾವ ಅಧಿಕಾರಿಗಳ ನಿರ್ಲಕ್ಷ್ಯ ಎಂದು ನಾನು ಹೇಳುವುದಿಲ್ಲ. ವಾಜಪೇಯಿ (ಬೌರಿಂಗ್) ಆಸ್ಪತ್ರೆಯ ಕಾಂಪೌಂಡ್ ಪಕ್ಕದಲ್ಲಿ ಮಣ್ಣಿನ ರಾಶಿ ಹಾಕಿದ್ದಾರೆ. ಇದರ ಒತ್ತಡ ತಾಳಲಾರದೆ ಕಾಂಪೌಂಡ್ ಕುಸಿದಿದೆ. ಈ ರಸ್ತೆಯಲ್ಲಿಯೂ ಯಾವ ವ್ಯಾಪಾರಿಗಳನ್ನು ಕೂರಿಸಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ.” ಎಂದರು.
“ಬೆಂಗಳೂರಿನ ಎಲ್ಲಾ ರಸ್ತೆಗಳಲ್ಲಿ ಇರುವ ದುರ್ಬಲ ಮರಗಳು, ಕೊಂಬೆಗಳನ್ನು ಕತ್ತರಿಸಲಾಗುವುದು. ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಇದರ ಬಗ್ಗೆ ಪೊಲೀಸ್ ಹಾಗೂ ಬಿಬಿಎ ಅಧಿಕಾರಿಗಳು ಕೆಲಸ ಮಾಡಿ ಪಟ್ಟಿ ತಯಾರಿಸಿದ್ದಾರೆ. ಮಳೆಹಾನಿ ತಡೆಗೆ ಕಂಟ್ರೋಲ್ ರೂಮ್ ಸಹ ಅಣಿಯಾಗಿದೆ. ಅಧಿಕಾರಿಗಳು ಸಹ ಕಾರ್ಯಪ್ರವೃತ್ತರಾಗಿದ್ದಾರೆ” ಎಂದು ತಿಳಿಸಿದರು.
ಮಳೆ ಚೆನ್ನಾಗಿ ಬರಲಿ ಎಂದು ಪ್ರಾರ್ಥನೆ
ಹವಾಮಾನ ಇಲಾಖೆಯವರು ಈ ವರ್ಷ ಮಳೆ ಕಡಿಮೆ ಬರುತ್ತದೆ ಎಂದು ಹೇಳಿದ್ದಾರೆ. ಇದರಿಂದ ಆಣೆಕಟ್ಟುಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಲಿದೆ. ನಂತರ ವಿದ್ಯುತ್ ಉತ್ಪಾದನೆ ಕುಸಿಯಲಿದೆ. ನಾನು ನಾಡಿದ್ದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡುತ್ತಿದ್ದೇನೆ. ಅಲ್ಲಿ ಎಲ್ಲಾ ಗೇಟ್ ಬದಲಿ ಕಾರ್ಯ ಮುಕ್ತಾಯವಾಗಿದ್ದು, ನೀರಿನ ಶೇಖರಣೆ ಆರಂಭಿಸಬೇಕಿದೆ. ಇನ್ನು ಕಾವೇರಿ ನೀರಿನ ವಿಚಾರದಲ್ಲಿ 177 ಟಿಎಂಸಿ ನೀರು ಹರಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಕಾರಣಕ್ಕೆ ಮಳೆ ಚೆನ್ನಾಗಿ ಬರಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಹೆಚ್ಚಿನ ಮಳೆ ಬಂದರೆ ಅದನ್ನು ಎದುರಿಸಲು ಈಗಾಗಲೇ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ” ಎಂದು ಹೇಳಿದರು.
ಆದಷ್ಟು ಬೇಗ ಅಧಿಕಾರ ಹಂಚಿಕೆ ಗೊಂದಲ ಬಗೆಹರಿಸುವಿರಾ, ಮಲ್ಲಿಕಾರ್ಜುನ ಖರ್ಗೆ ಅವರು ಬದಲಾವಣೆ ಇಲ್ಲ ಎಂದಿದ್ದಾರೆ ಎಂದು ಕೇಳಿದಾಗ, “ಗೊಂದಲವೇ ಇಲ್ಲ. ನೀವುಗಳು ಏನಿದ್ದರೂ ಮಲ್ಲಿಕಾರ್ಜುನ ಖರ್ಗೆ ಸಾಹೇಬರನ್ನು ಕೇಳಿ. ನಾಯಕತ್ವ ಬದಲಾವಣೆ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದು ಪಕ್ಷ ಹೈಕಮಾಂಡ್ ಗೆ ಬಿಟ್ಟ ವಿಚಾರ ಅವರು ತೀರ್ಮಾನ ಮಾಡುತ್ತಾರೆ” ಎಂದರು.
ಒಂದು ವಾರದೊಳಗೆ ಎತ್ತಿನಹೊಳೆ ಬಾಕಿ ಕಾಮಗಾರಿ ಪ್ರಾರಂಭ: ಡಿಸಿಎಂ ಡಿ.ಕೆ. ಶಿವಕುಮಾರ್
ಮೇಕೆದಾಟು ಯೋಜನೆಗಾಗಿ ಅರಣ್ಯ ಇಲಾಖೆಗೆ 5,300 ಎಕರೆ ಬದಲಿ ಜಾಗ
ಬೆಂಗಳೂರು, ಏ.30:
“ಕೇಂದ್ರ ಪರಿಸರ ಇಲಾಖೆಯವರು ದಂಡ ಹಾಗೂ ಮಿಟಿಗೇಷನ್ ಪ್ಲಾನ್ ಸೇರಿ 257 ಕೋಟಿ ರೂಪಾಯಿ ಹಣ ಸಂದಾಯ ಮಾಡಬೇಕು ಎಂದು ಸೂಚಿಸಿದ್ದಾರೆ. ಇಂದೇ ಈ ಹಣ ಪಾವತಿ ಮಾಡಿ ಎಂದು ಮಾರ್ಗದರ್ಶನ ನೀಡಿದ್ದೇನೆ. ಕಟ್ಟಿದ ಕೂಡಲೇ ಈ ವಾರದೊಳಗೆ ಎತ್ತಿನಹೊಳೆ ಕೆಲಸ ಪ್ರಾರಂಭ ಮಾಡಿ ಎಂದು ಗುತ್ತಿಗೆದಾರರಿಗೆ ಸೂಚಿಸಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಎತ್ತಿನಹೊಳೆ, ಮೇಕೆದಾಟು, ಭದ್ರಾ ಮೇಲ್ದಂಡೆ ವಿಚಾರವಾಗಿ ವಿಧಾನಸೌಧದಲ್ಲಿ ನಡೆದ ಸಭೆಯ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.
“ತುಮಕೂರು ಭಾಗದಲ್ಲೂ ಭೂಸ್ವಾಧೀನಕ್ಕೆ ಸರ್ವೆ ನಡೆಸಲು ಕ್ರಮ ತೆಗೆದುಕೊಳ್ಳಲಾಗುವುದು. ಆದಷ್ಟು ಬೇಗ ಚಿಕ್ಕಬಳ್ಳಾಪುರ ಹಾಗೂ ಕೋಲಾರಕ್ಕೆ ನೀರನ್ನು ತೆಗೆದುಕೊಂಡು ಹೋಗಲಾಗುವುದು. ಎತ್ತಿನಹೊಳೆ ಯೋಜನೆಗೆ ಕೇಂದ್ರ ಪರಿಸರ ಇಲಾಖೆಯವರು ಒಂದಷ್ಟು ಷರತ್ತುಗಳನ್ನು ವಿಧಿಸಿ ಕಡತವನ್ನು ವಾಪಸ್ ಕಳುಹಿಸಿದ್ದರು. ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಬದಲಿ ಭೂಮಿಯನ್ನು ಹಸ್ತಾಂತರ ಮಾಡಲಾಗುತ್ತಿದೆ. ಶೇ 10 ರಷ್ಟು ಭೂಮಿ ವರ್ಗಾವಣೆ ಬಾಕಿಯಿತ್ತು. ಮುಂದಿನ ಒಂದು ವಾರದೊಳಗೆ ಈ ಪ್ರಕ್ರಿಯೆ ನಡೆಯಲಿದೆ” ಎಂದರು.
“ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಹಾಗೂ ಮೇಕೆದಾಟು ವಿಚಾರವಾಗಿ ಸಂಬಂಧಪಟ್ಟ ಶಾಸಕರ, ಅಧಿಕಾರಿಗಳ ಸಭೆ ನಡೆಸಲಾಯಿತು. ಕಂದಾಯ, ಅರಣ್ಯ ಹಾಗೂ ಗೃಹಸಚಿವರು ಭಾಗವಹಿಸಿದ್ದರು. ಎತ್ತಿನಹೊಳೆ ವಿಚಾರವಾಗಿ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿದ್ದೆ. ನಾವು ಅವರ ಷರತ್ತುಗಳನ್ನು ಒಪ್ಪಿಕೊಂಡು ಮುಂದುವರೆದಿದ್ದೇವೆ” ಎಂದರು.
5300 ಎಕರೆ ಬದಲಿಯಾಗಿ ಅರಣ್ಯ ಇಲಾಖೆಗೆ
“ಮೇಕೆದಾಟು ವಿಚಾರವಾಗಿ ಡಿಪಿಆರ್ ಸಿದ್ಧವಾಗಿದ್ದು ಅದನ್ನು ಸಹ ಸಮಿತಿ ಮುಂದೆ ಸಲ್ಲಿಕೆ ಮಾಡಲಾಗುವುದು. ಮತ್ತೊಮ್ಮೆ ವೆಚ್ಚ ಪರಿಷ್ಕರಣೆ ಮಾಡಿದ್ದೇವೆ. ಸುಮಾರು 5,300 ಎಕರೆ ಜಮೀನನ್ನು ನಾವು ಅರಣ್ಯ ಇಲಾಖೆಗೆ ನೀಡಬೇಕಿದೆ. ಇದರ ಬಗ್ಗೆಯೂ ಕಂದಾಯ ಇಲಾಖೆ ಜೊತೆ ಮಾತನಾಡಲಾಗುವುದು” ಎಂದರು.
ಬೆಂಗಳೂರು ನಗರ ಪ್ರದಕ್ಷಿಣೆ ಬಗ್ಗೆ ಕೇಳಿದಾಗ, “ಈಗಾಗಲೇ ಶಿಥಿಲ ಮರಗಳು, ಹಾಗೂ ಕೊಂಬೆಗಳ ತೆರವಿಗೆ ಸೂಚಿಸಲಾಗಿದೆ. ನೀರು ಹರಿವಿಗೆ ತಡೆಗಳನ್ನು ತೆರವುಗೊಳಿಸಲಾಗುವುದು. ಮೊದಲು ಮಳೆ ಬರಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ನಾಳೆ ಮೂರು ಗಂಟೆಗೆ ಬೆಂಗಳೂರು ನಗರ ಸಂಚಾರ ಮಾಡಲಿದ್ದೇನೆ. ಒಂದೆರಡು ಮೇಲ್ಸೆತುವೆಗಳ ಲೋಕಾರ್ಪಣೆಗೂ ಪೂಜೆ ನೆರವೇರಿಸಲಾಗುವುದು” ಎಂದರು.





Comments
Leave a Comment