“ಬೆಂಗಳೂರು ಮಳೆಯಿಂದ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ – 7 ಮಂದಿ ಬಲಿ, ಸಿಎಂ ಪರಿಹಾರ ಘೋಷಣೆ”
ಬೆಂಗಳೂರು, ಏ. 29-ಬೆಂಗಳೂರು ನಗರದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಯಿಂದ ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆ ಕುಸಿದು ಭೀಕರ ದುರಂತ ಸಂಭವಿಸಿದೆ. ಈ ಗೋಡೆ ಕುಸಿತದಲ್ಲಿ ಮೂವರು ಮಕ್ಕಳನ್ನು ಒಳಗೊಂಡು ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ಮೃತರು ಹೆಚ್ಚಿನವರು ಬೀದಿ ಬದಿ ವ್ಯಾಪಾರಿಗಳು .ಮುಖ್ಯ ಮಂತ್ರಿ ಸಿದ್ದರಾಮಯ್ಯ ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದರಲ್ಲದೆ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಕಳೆದ ಎರಡು ಗಂಟೆಗಳಲ್ಲಿ ಬೆಂಗಳೂರಿನಲ್ಲಿ 78 ಮಿ.ಮಿ ಮಳೆಯಾಗಿದೆ. ಹೆಚ್‌ಎಎಲ್ ಏರ್‌ಪೋರ್ಟ್‌ನಲ್ಲಿ 24.7 ಮಿ.ಮಿ ಮಳೆಯಾಗಿದೆ. ಆಲಿಕಲ್ಲು ಸಹಿತ ಮಳೆ ಆತಂಕ ಹೆಚ್ಚಿಸಿದೆ. ಶಿವಾಜಿನಗರದ ರಸೆಲ್ ಮಾರ್ಕೆಟ್ ಹಾಗೂ ಬೌರಿಂಗ್ ಆಸ್ಪತ್ರೆ ಸುತ್ತಮುತ್ತ ನೀರು ತುಂಬಿಕೊಂಡಿತ್ತು. ಈ ವೇಳೆ ಹಳೆಯ ಗೋಡೆ ಮಳೆಯ ಹೊಡೆತಕ್ಕೆ ತುತ್ತಾಗಿ ಕುಸಿಯಿತು. ಗೋಡೆಯ ಪಕ್ಕದಲ್ಲಿ ವ್ಯಾಪಾರ ಮಾಡುತ್ತಿದ್ದವರು ಹಾಗೂ ಮಳೆಯಿಂದ ರಕ್ಷಿಸಿಕೊಳ್ಳಲು ಆಶ್ರಯ ಪಡೆದವರು ಗೋಡೆಯ ಅಡಿಯಲ್ಲಿ ಸಿಲುಕಿದರು.
ಮೃತರಲ್ಲಿ ಮೂವರು ಪುಟ್ಟ ಮಕ್ಕಳು ಸೇರಿರುವುದು ದುರಂತದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಮಳೆ-ಗಾಳಿ ತೀವ್ರಗೊಂಡಾಗ ವ್ಯಾಪಾರಿಗಳು ಟಾರ್ಪಲ್ ಹಾಕಿಕೊಂಡು ನಿಂತಿದ್ದರು. ಆ ವೇಳೆ ಗೋಡೆ ಕುಸಿದಿದೆ ಎಂದು ಸಾಕ್ಷಿಗಳು ತಿಳಿಸಿದ್ದಾರೆ. ಶಿವಾಜಿನಗರ ಪೊಲೀಸರು ಹಾಗೂ ಅಗ್ನಿಶಾಮಕ ದಳ ತಕ್ಷಣ ಸ್ಥಳಕ್ಕೆ ಧಾವಿಸಿ ಜೆಸಿಬಿ, ಕಟರ್ ಬಳಸಿ ಅವಶೇಷಗಳನ್ನು ತೆರವುಗೊಳಿಸಿದರು. ಆದರೆ ಅವಶೇಷಗಳ ಅಡಿ ಸಿಲುಕಿದ್ದವರಲ್ಲಿ ಯಾರನ್ನೂ ಜೀವಂತವಾಗಿ ರಕ್ಷಿಸಲು ಸಾಧ್ಯವಾಗಲಿಲ್ಲ.
ಸ್ಥಳೀಯರು ಹಳೆಯ ಗೋಡೆ ನಿರ್ವಹಣೆ ಇಲ್ಲದೆ ಕುಸಿದಿದೆ ಎಂದು ಆರೋಪಿಸಿದ್ದಾರೆ. ಮಕ್ಕಳು ಹಾಗೂ ವ್ಯಾಪಾರಿಗಳು ಕಣ್ಣೆದುರೇ ಮಣ್ಣಿನ ಪಾಲಾದುದನ್ನು ಕಂಡು ಸ್ಥಳೀಯರು ಕಣ್ಣೀರಿಟ್ಟರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ. ಈ ದುರಂತ ಆಡಳಿತ ಮಂಡಳಿಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಬೇಕು ಹಾಗೂ ದುರ್ಬಲ ಗೋಡೆಗಳನ್ನು ತೆರವುಗೊಳಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಮಳೆಯಿಂದಾಗಿ ಹಳೆಯ ಕಟ್ಟಡಗಳ ಪಕ್ಕ ಎಚ್ಚರಿಕೆ ವಹಿಸಲು ಪೊಲೀಸರು ಸೂಚಿಸಿದ್ದಾರೆ. ಮಳೆಯ ತೀವ್ರತೆಗೆ ಹಲವೆಡೆ ಮರಗಳು ಧರೆಗುರುಳಿವೆ. ವಾಹನಗಳಿಗೆ ಹಾನಿಯಾಗಿದೆ. ಕಮಿಷನರ್ ಕಚೇರಿಯ ಆವರಣದಲ್ಲಿ ಮರದ ಕೊಂಬೆಗಳು ಮುರಿದು ಬಿದ್ದು ವಾಹನಗಳಿಗೆ ಹಾನಿಯಾಗಿದೆ. ತಗ್ಗು ಪ್ರದೇಶದ ರಸ್ತೆಗಳು ಜಲಾವೃತವಾಗಿ ದ್ವಿಚಕ್ರ ವಾಹನ ಸವಾರರ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಮೆಜೆಸ್ಟಿಕ್, ಮಾರುಕಟ್ಟೆ, ಶಾಂತಿನಗರ, ರಿಚ್ಮಂಡ್ ಸರ್ಕಲ್, ಕೋರಮಂಗಲ, ಮಲ್ಲೇಶ್ವರಂ, ಜಯನಗರ, ಹೆಬ್ಬಾಳ, ಬನಶಂಕರಿ, ಸದಾಶಿವನಗರ, ವಿಲ್ಸನ್ ಗಾರ್ಡನ್, ಲಾಲ್ ಬಾಗ್ ಹಾಗೂ ವಿಧಾನಸೌಧದ ಸುತ್ತಮುತ್ತ ಮಳೆ ಅಬ್ಬರಿಸಿದೆ. ಬಿರು ಬಿಸಿಲ ನಡುವೆ ಆಗಮಿಸಿದ ದಿಢೀರ್ ಮಳೆಗೆ ರಸ್ತೆ ಬದಿ ವ್ಯಾಪಾರಿಗಳು ಪರದಾಡಿದ್ದು, ಫ್ಲೈಓವರ್, ಸ್ಕೈವಾಕ್ ಕೆಳಗೆ ಬೈಕ್ ಸವಾರರು ಆಶ್ರಯ ಪಡೆದರು.
ಅಕಾಲಿಕ ಮಳೆ ಅಬ್ಬರಕ್ಕೆ ನಗರದಲ್ಲಿ ಕೆಲ ಅವಾಂತರಗಳು ಸಂಭವಿಸಿದವು. ಶೇಷಾದ್ರಿಪುರಂ-ಮಲ್ಲೇಶ್ವರಂ ರಸ್ತೆಯಲ್ಲಿ ಮರ ಬಿದ್ದು ಸಂಚಾರ ಸ್ಥಗಿತಗೊಂಡಿದೆ. ಗೊರಗುಂಟೆಪಾಳ್ಯದಲ್ಲಿ ಮರ ಬಿದ್ದು ಕಾರು ಜಖಂಗೊಂಡಿದೆ. ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆ ಆವರಣಕ್ಕೆ ಮಳೆ ನೀರು ನುಗ್ಗಿದೆ. ಮಲ್ಲೇಶ್ವರಂನಲ್ಲಿ ರಸ್ತೆ ಮೇಲೆ ಮರ ಉರುಳಿದ ಪರಿಣಾಮ ವಾಹನಗಳು ಜಖಂಗೊಂಡಿವು.
ಸಾರ್ವಜನಿಕರು ದುರ್ಬಲ ಗೋಡೆಗಳ ಕುರಿತು ಆಡಳಿತಕ್ಕೆ ಗೊತ್ತಿರಲಿಲ್ಲವೇ ಎಂಬ ಪ್ರಶ್ನೆ ಎತ್ತಿದ್ದಾರೆ. ರಸ್ತೆಗಳ ಮೇಲೆ ನೀರು ತುಂಬಿಕೊಂಡಿದ್ದು, ಚರಂಡಿ ದುರಸ್ತಿ ಕಾರ್ಯಗಳ ಕೊರತೆಯೇ ಕಾರಣ ಎಂದು ಜನರು ಆರೋಪಿಸಿದ್ದಾರೆ. ಅರ್ಧ ಗಂಟೆ ಸುರಿದ ಮಳೆಗೆ ಬೆಂಗಳೂರಿನ ಪರಿಸ್ಥಿತಿ ಸಂಪೂರ್ಣ ಹದೆಗೆಟ್ಟಿತ್ತು.
ಮುಂದಿನ 7 ದಿನಗಳ ಕಾಲ ಬೆಂಗಳೂರಿನಲ್ಲಿ ಹಾಗೂ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಏಪ್ರಿಲ್ 30ರಂದು ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಬೀಳುವ ಸಾಧ್ಯತೆಯಿದೆ. ಮೇ 1ರಿಂದ ಮೇ 5ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ. ರೈತರಿಗೆ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸಲು ಸಲಹೆ ನೀಡಲಾಗಿದೆ.
ಸಿಎಂ ಡಿಸಿಎಂ ಭೇಟಿ
ಬೆಂಗಳೂರು ನಗರದ ಶಿವಾಜಿನಗರದಲ್ಲಿ ಮಳೆಯಿಂದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು 8 ಮಂದಿ ಸಾವನ್ನಪ್ಪಿದ ದುರಂತದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳದಲ್ಲಿ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ವಿಚಾರಣೆ ನಡೆಸಿದರು. ವ್ಯಾಪಾರ ಮಾಡುತ್ತಿದ್ದವರ ಮೇಲೆ ಗೋಡೆ ಕುಸಿದ ಘಟನೆಗೆ ಆಕ್ರೋಶಗೊಂಡ ಸಿಎಂ ಸ್ಥಳದಲ್ಲೇ ತನಿಖೆ ಮಾಡಲು ಆದೇಶಿಸಿದರು.
ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ ಸಿಎಂ, ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು. ಬೌರಿಂಗ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಭೇಟಿ ನೀಡಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.
ಈ ದುರಂತಕ್ಕೆ ಆಘಾತಗೊಂಡ ಸಿಎಂ, ಜಿಬಿಎ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. “ಏನ್ ಕ್ರಮಕೈಗೊಂಡಿದ್ದೀರಿ? ಹಳೆ ಗೋಡೆ ನೋಡೋಕಾಗಲ್ವಾ? ನಿಮ್ಮ ಮಧ್ಯೆ ಸಮನ್ವಯ ಇರಲ್ವಾ? ಎಚ್ಚರವಹಿಸಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತು” ಎಂದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತರಾಟೆಗೆ ತೆಗೆದುಕೊಂಡರು.
ಬೆಂಗಳೂರು ನಗರದಲ್ಲಿ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ ದುರಂತದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಾಯಗೊಂಡವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು ನಂತರ ಅವರುಘಟನಾ ಸ್ಥಳಕ್ಕೆ ಸ್ವತಃ ತೆರಳಿ ಪರಿಶೀಲನೆ ನಡೆಸಿದ ಸಿಎಂ, ಸ್ಥಳೀಯರು ಹಾಗೂ ಜಿಬಿಎ ಅಧಿಕಾರಿಗಳಿಂದ ವಿವರಗಳನ್ನು ಪಡೆದುಕೊಂಡರು.
ಈ ದುರಂತದ ಬಗ್ಗೆ ತಿಳಿಯುತ್ತಿದ್ದಂತೆಯೇ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡುವುದಾಗಿ ಅವರು ತಿಳಿಸಿದರು.
ಇದೇ ವೇಳೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ, ಪ್ರಾಥಮಿಕ ಮಾಹಿತಿಯ ಪ್ರಕಾರ 8 ರಿಂದ 10 ಜನರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದು, ಅಕಾಲಿಕ ಮಳೆಯಿಂದ ಇಷ್ಟೊಂದು ಅವಾಂತರ ಸಂಭವಿಸಿದೆ. ಇದಕ್ಕೆ ಸರ್ಕಾರವನ್ನು ನೇರವಾಗಿ ದೂರುವುದಿಲ್ಲವಾದರೂ, ಜನರ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ಹೇಳಿದರು.






Comments
Leave a Comment