ತಮಿಳುನಾಡು ನಿಯೋಗ ಬಂದರೆ ಯೋಜನೆಯ ಅನುಕೂಲ ವಿವರಿಸುವೆ
ಸುಪ್ರೀಂ ಕೋರ್ಟ್ ತೀರ್ಪಿನಂತೆ ನೀರಿನ ಹಕ್ಕು ರಕ್ಷಿಸುವುದು ನಮ್ಮ ಕರ್ತವ್ಯ
ರಾಜಕಾರಣದಲ್ಲಿ ಸ್ಪರ್ಧೆ, ಅಭಿವೃದ್ಧಿಯಲ್ಲಿ ಸಹಕಾರ
ಡಬಲ್ ಡೆಕ್ಕರ್ ಫ್ಲೈಓವರ್ಗೆ ಮನವರಿಕೆ
ರೈತರ ವಿದ್ಯುತ್ ಬಿಲ್ ಹೊರೆ ₹30 ಸಾವಿರ ಕೋಟಿಗೆ ಏರಿಕೆ
ಮೆಟ್ರೋ ಸಂಪರ್ಕ 500 ಕಿ.ಮೀ ವಿಸ್ತರಣೆ ಗುರಿ
ಮೊಬೈಲ್ಗಿಂತ ಶಿಕ್ಷಣ ಮುಖ್ಯ: ಮಕ್ಕಳಿಗೆ ಸಿಎಂ ಕಿವಿಮಾತು
ಬೆಂಗಳೂರು, ನ.14:
“ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು. ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಯೋಜನೆ ಅನುಷ್ಠಾನಗೊಳಿಸುವುದು ನಮ್ಮ ಕರ್ತವ್ಯ. ತಮಿಳುನಾಡಿನವರು ವಿರೋಧ ವ್ಯಕ್ತಪಡಿಸುವ ಬದಲು ನಿಯೋಗದೊಂದಿಗೆ ಬರಲಿ. ಯೋಜನೆಯಿಂದ ಅವರಿಗೆ ಆಗುವ ಅನುಕೂಲ ವಿವರಿಸುತ್ತೇನೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಯಾವುದೇ ಹಂತದಲ್ಲೂ ಹಿಂದೆ ಸರಿಯುವುದಿಲ್ಲ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.
ವಿಧಾನಸೌಧದ ಆವರಣ ಹಾಗೂ ಪಿಂಕ್ ಮೆಟ್ರೋನಲ್ಲಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು.
ತಮಿಳುನಾಡಿನವರು ನಿಯೋಗದೊಂದಿಗೆ ಬರಲಿ
ಮೇಕೆದಾಟು ಯೋಜನೆ ಹಾಗೂ ನಿಮ್ಮ ಹೇಳಿಕೆಯನ್ನು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಿಕಂ ಟ್ಯಾಗೋರ್ ಹಾಗೂ ತಮಿಳುನಾಡಿನ ಇತರ ನಾಯಕರು ವಿರೋಧಿಸುತ್ತಿರುವ ಕುರಿತು ಕೇಲಿದಾಗ, "ಯಾರಾದರೂ ವಿರೋಧ ವ್ಯಕ್ತಪಡಿಸಲಿ ಇದು ನಮ್ಮ ರಾಜ್ಯ, ನಮ್ಮ ಹಕ್ಕು ಎಂಬುದನ್ನು ತಮಿಳುನಾಡಿನವರೂ ಅರ್ಥಮಾಡಿಕೊಳ್ಳಬೇಕು. ಅವರು ಬೇಕಾದರೆ ತಮ್ಮ ನಿಯೋಗದೊಂದಿಗೆ ಬರಲಿ. ಅವರನ್ನು ಅಣೆಕಟ್ಟು ನಿರ್ಮಾಣದ ಜಾಗಕ್ಕೆ ಕರೆದುಕೊಂಡು ಹೋಗಿ, ಯೋಜನೆ ಬಗ್ಗೆಮವಿವರಿಸಲು ಸಿದ್ಧನಿದ್ದೇನೆ. ಅಲ್ಲಿ ರಾಜಕೀಯ ನಡೆಯುತ್ತಿದೆ. ಕಾಂಗ್ರೆಸ್ ವಿರೋಧಿಸದಿದ್ದರೆ ಡಿಎಂಕೆ ವಿರೋಧಿಸುತ್ತಾರೆ, ಡಿಎಂಕೆ ವಿರೋಧಿಸದಿದ್ದರೆ ಎಐಎಡಿಎಂಕೆ ವಿರೋಧಿಸುತ್ತಾರೆ. ಆದರೆ ಇದು ರಾಜಕೀಯ ವಿಚಾರವಲ್ಲ. ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು. ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ತಮಿಳುನಾಡು 177 ಟಿಎಂಸಿ ನೀರನ್ನು ಪಡೆಯುವುದು ಅವರ ಹಕ್ಕು. ಅದನ್ನು ನಾವು ಪಾಲಿಸುತ್ತೇವೆ. ನಮ್ಮ ಹಕ್ಕುಗಳನ್ನು ರಕ್ಷಿಸುವುದರ ಜತೆಗೆ ಅವರ ಹಕ್ಕುಗಳನ್ನೂ ಗೌರವಿಸುತ್ತೇವೆ. ಅಣೆಕಟ್ಟು ನಿರ್ಮಿಸಿ ನೀರು ಒದಗಿಸುವುದು ನಮ್ಮ ಹಕ್ಕು ಮತ್ತು ಕರ್ತವ್ಯ. ಕೇಂದ್ರ ಸರ್ಕಾರ ಈ ಯೋಜನೆಯಲ್ಲಿ ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಬದಲಿ ಜಾಗ ನೀಡಬೇಕು ಎಂದು ತಿಳಿಸಿದ್ದು ಅದರ ಹೊರತಾಗಿ ಇದು ನಮ್ಮ ಜಾಗದಲ್ಲಿ ನಿರ್ಮಾಣವಾಗುವ ನಮ್ಮ ಯೋಜನೆಯಾಗಿದೆ" ಎಂದು ವಿವರಿಸಿದರು.
ತಮಿಳುನಾಡಿನ ಹಿತವನ್ನೂ ಕಾಪಾಡುತ್ತೇವೆ
“ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ನೀರಿನ ವಿಚಾರದಲ್ಲಿ ತೊಂದರೆಯಾಗಲಿದೆ ಎಂಬ ಆತಂಕಕ್ಕೆ ಪ್ರತಿಕ್ರಿಯಿಸಿದ ಅವರು, ತಮಿಳುನಾಡಿಗೆ ಸಲ್ಲಬೇಕಾದ ನೀರಿನ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅದೇ ಸಮಯದಲ್ಲಿ ಕರ್ನಾಟಕದ ಹಕ್ಕನ್ನೂ ರಕ್ಷಿಸಬೇಕಿದೆ” ಎಂದು ಹೇಳಿದರು.
"ಸುಪ್ರೀಂ ಕೋರ್ಟ್ 177 ಟಿಎಂಸಿ ನೀರಿನ ಹಕ್ಕಿನ ಕುರಿತು ಸ್ಪಷ್ಟಪಡಿಸಿದೆ. ಅವರಿಗೆ ಸಲ್ಲಬೇಕಾದ ನೀರನ್ನು ಒದಗಿಸುವುದು ನಮ್ಮ ಕರ್ತವ್ಯ. ಅಣೆಕಟ್ಟು ನಿರ್ಮಿಸಿ ಅವರಿಗೂ ನೀರು ಕೊಡುತ್ತೇವೆ. ತಮಿಳುನಾಡಿನವರು ಬಂದು ಚರ್ಚೆ ನಡೆಸಲಿ. ಯೋಜನೆಯ ವಾಸ್ತವಾಂಶಗಳನ್ನು ವಿವರಿಸಲು ನಾನು ಸಿದ್ಧನಿದ್ದೇನೆ. ಈ ಕುರಿತು ಸಂಪೂರ್ಣ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ" ಎಂದರು.
ಅನುಮತಿಗಾಗಿ ಕೇಂದ್ರದ ಮೇಲೆ ಒತ್ತಡ
“ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿಗಳನ್ನು ನೀಡುವಂತೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೇನೆ. ಎಲ್ಲ ಪಕ್ಷಗಳೂ ಯೋಜನೆ ವಿಚಾರದಲ್ಲಿ ಒಪ್ಪಿಗೆ ಸೂಚಿಸಿವೆ. ಅಗತ್ಯ ದಾಖಲೆಗಳನ್ನು ಸಲ್ಲಿಸುವ ಕೆಲಸ ನಡೆಯುತ್ತಿದೆ. ಅನುಮತಿಗಳು ದೊರೆತರೆ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ಸಿದ್ಧವಿದೆ” ಎಂದು ತಿಳಿಸಿದರು.
ರಾಜಕಾರಣದಲ್ಲಿ ಸ್ಪರ್ಧೆ, ಅಭಿವೃದ್ಧಿಯಲ್ಲಿ ಸಹಕಾರ
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅವರೊಂದಿಗಿನ ಒಡನಾಟದ ಬಗ್ಗೆ ಕೇಳಿದಾಗ, "ರಾಜಕಾರಣ ಮಾಡುವಾಗ ಸ್ಪರ್ಧೆ ಮಾಡೋಣ. ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡೋಣ. ರಾಜಕಾರಣದಲ್ಲಿ ನಾವು ರಾಜಕೀಯ ಮಾಡುತ್ತೇವೆ. ಆದರೆ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರದ ಸಹಕಾರ ಪಡೆಯುವುದು ನಮ್ಮ ಜವಾಬ್ದಾರಿ. ದೇಶದ ಹಿತಾಸಕ್ತಿ ವಿಚಾರದಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬೇಕು. ಕರ್ನಾಟಕ ಹೊರತಾಗಿ ದೇಶದ ಪ್ರಗತಿ ಅಸಾಧ್ಯ. ದೇಶದಲ್ಲಿ ಜಿಎಸ್ ಟಿ ಹಾಗೂ ತೆರಿಗೆ ಸಂಗ್ರಹದಲ್ಲಿ 2ನೇ ಸ್ಥಾನ, ನಮ್ಮ ರಾಜ್ಯ ಪ್ರತಿ ವರ್ಷ ಒಂದೂವರೆ ಲಕ್ಷ ಇಂಜಿನಿಯರ್ ಗಳನ್ನು ಸೃಷ್ಟಿಸುತ್ತಿದೆ. 13,900 ವೈದ್ಯರನ್ನು ತಯಾರು ಮಾಡುತ್ತಿದ್ದೇವೆ. ಕರ್ನಾಟಕ ಪ್ರಗತಿ ಸಾಧಿಸಿದರೆ ದೇಶ ಪ್ರಗತಿ ಸಾಧಿಸಲು ಸಾಧ್ಯ" ಎಂದರು.
“ಮೇಕೆದಾಟು ಯೋಜನೆಯಷ್ಟೇ ಅಲ್ಲದೆ, ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಬೇಕು ಎಂಬ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿದ್ದೇನೆ. ಮೆಟ್ರೊ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮಾನ ಪಾಲುದಾರಿಕೆ ಇರಬೇಕು ಎಂದು ಒತ್ತಾಯಿಸಿದ್ದೇನೆ. ಇದಕ್ಕಾಗಿ ತಾಂತ್ರಿಕ ಸಮಿತಿ ರಚಿಸುವಂತೆಯೂ ಮನವಿ ಮಾಡಿದ್ದೇನೆ. ಮೆಟ್ರೋ ಸಂಪರ್ಕವನ್ನು ಮುಂದಿನ ಹಂತಗಳಲ್ಲಿ 500 ಕಿ.ಮೀ.ವರೆಗೆ ವಿಸ್ತರಿಸುವ ಗುರಿ ಇದ್ದು, ಬಾಕಿ ಇರುವ ಪ್ರಸ್ತಾವನೆಗಳಿಗೂ ತ್ವರಿತ ಅನುಮೋದನೆ ನೀಡುವಂತೆ ಕೇಳಿದ್ದೇನೆ ಎಂದು ತಿಳಿಸಿದರು.
ಡಬಲ್ ಡೆಕ್ಕರ್ ಫ್ಲೈಓವರ್ಗೆ ಮನವರಿಕೆ
“ಬೆಂಗಳೂರಿನ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆಗೆ ಕೇಂದ್ರದ ವಿರೋಧ ವ್ಯಕ್ತಪಡಿಸುತ್ತಿದ್ದು, ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಪ್ರಧಾನಿಯವರಿಗೆ ಯೋಜನೆಯ ಅಗತ್ಯವನ್ನು ವಿವರಿಸಿದ್ದೇನೆ. ಬೆಂಗಳೂರಿನಲ್ಲಿ ರಸ್ತೆಗಳ ಪ್ರಮಾಣ ಕೇವಲ ಶೇ.8ರಷ್ಟಿದೆ. ಇತರ ನಗರಗಳಲ್ಲಿ ಇದು ಶೇ.18ರಿಂದ 20ರಷ್ಟಿದೆ. ಬೆಂಗಳೂರಿನಲ್ಲಿ ಪ್ರತಿ ಚದರ ಅಡಿಗೆ ಸುಮಾರು 50 ಸಾವಿರ ರೂ. ಪರಿಹಾರ ನೀಡಬೇಕಾದ ಪರಿಸ್ಥಿತಿ ಇದೆ. ಇದನ್ನು ಸರ್ಕಾರವೊಂದರಿಂದಲೇ ಭರಿಸುವುದು ಕಷ್ಟ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ವೆಚ್ಚ ಹಂಚಿಕೊಳ್ಳುವ ಮೂಲಕ ಡಬಲ್ ಡೆಕ್ಕರ್ ಯೋಜನೆ ಜಾರಿಗೊಳಿಸಬೇಕಿದೆ ಎಂದು ಮನವರಿಕೆ ಮಾಡಿದ್ದೇನೆ. ಈ ಸಂಬಂಧ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಬರುವುದಾಗಿಯೂ ತಿಳಿಸಿದ್ದೇನೆ. ಅದಕ್ಕೆ ಅವರು ಒಪ್ಪಿದ್ದಾರೆ. ನಾನು ರಾಜ್ಯದ ಪ್ರತಿನಿಧಿಯಾಗಿ ರಾಜ್ಯದ ಹಿತಕ್ಕಾಗಿ ನನ್ನ ಕೆಲಸ ಮಾಡುತ್ತಿರುವೆ ಯಾರು ಏನು ಬೇಕಾದರೂ ಊಹಿಸಿಕೊಳ್ಳಲಿ” ಎಂದರು.
ರೈತರ ವಿದ್ಯುತ್ ಬಿಲ್ ಹೊರೆ ₹30 ಸಾವಿರ ಕೋಟಿಗೆ ಏರಿಕೆ
ಸುವರ್ಣಸೌಧದ ಅಧಿವೇಶನದಲ್ಲಿ ವಿದ್ಯುತ್ ಬಿಲ್ ಪಾವತಿ ಬಾಕಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ಇದು ಕೇವಲ ಸುವರ್ಣಸೌಧಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ರೈತರ ಪಂಪ್ಸೆಟ್ಗಳ ವಿದ್ಯುತ್ ಬಿಲ್ ಹೊರೆ ಹಿಂದೆ ಸುಮಾರು ₹20 ಸಾವಿರ ಕೋಟಿ ಇದ್ದದ್ದು, ಈಗ ₹30 ಸಾವಿರ ಕೋಟಿಗೆ ಏರಿಕೆಯಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದೆ. ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ಪೂರೈಕೆ ಸೇರಿದಂತೆ ಹಲವು ಕಾರಣಗಳಿಂದ ಬಿಲ್ ಮೊತ್ತ ಹೆಚ್ಚಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಸರ್ಕಾರ ಸರಿಪಡಿಸಲಿದೆ” ಎಂದು ತಿಳಿಸಿದರು.
ಮೆಟ್ರೋ ಸಂಪರ್ಕ 500 ಕಿ.ಮೀ ವಿಸ್ತರಣೆ ಗುರಿ
ನಂತರ ಪಿಂಕ್ ಮೆಟ್ರೋದಲ್ಲಿ ಮಾಧ್ಯಮಗಳು ಕೆಂಪು ಮಾರ್ಗದ ಮೆಟ್ರೋ ರೈಲಿಗೆ ಸಾಕಷ್ಟು ಬೇಡಿಕೆ ಇದೆ ಎಂದು ಕೇಳಿದಾಗ, “ಹೇಗಾದರೂ ಮಾಡಿ 2028ರ ವೇಳೆಗೆ ಮೆಟ್ರೋ ಸಂಪರ್ಕವನ್ನು 500 ಕಿ.ಮೀ ವಿಸ್ತರಣೆಗೆ ಮುಂದಾಗಬೇಕು” ಎಂದರು.
ಮೆಟ್ರೋ ಅಭಿವೃದ್ಧಿಗೆ ಏನೆಲ್ಲಾ ಯೋಜನೆ ರೂಪಿಸಲಾಗಿದೆ ಎಂದು ಕೇಳಿದಾಗ, “ಕೇಂದ್ರ ಮತ್ತು ರಾಜ್ಯದ ನಡುವೆ ಇರುವ 50:50 ವೆಚ್ಚ ಹಂಚಿಕೆ ನಿಯಮವನ್ನು ಸರಿಯಾಗಿ ಪಾಲಿಸಿದರೆ ಸಾಕು. ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡಬೇಕು. ಅನುಮತಿಗಾಗಿ ಹೆಚ್ಚು ಸಮಯ ಕಾಯುವಂತಾಗಬಾರದು. ವಿದೇಶಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಕೇಂದ್ರ ಸರಕಾರದ ಬ್ಯಾಂಕ್ಗಳಿಂದ ಸಾಲ ಸಿಗುವಂತಾಗಬೇಕು ಎಂದು ಮನವಿ ಮಾಡಿದ್ದೇನೆ” ಎಂದರು.
ಮೋದಿ ಅವರು ನಿಮ್ಮೊಂದಿಗೆ ಆತ್ಮೀಯರಾಗಿದ್ದು, ಪ್ರಧಾನಿ ಮೋದಿ ಅವರೊಂದಿಗೆ ಹೆಲಿಕಾಪ್ಟರ್ನಲ್ಲಿ ಮೈಸೂರಿನವರೆಗೆ ಪ್ರಯಾಣಿಸುವಾಗ ಏನೆಲ್ಲ ಚರ್ಚೆ ನಡೆಸಿದ್ದೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ, "ಅದೆಲ್ಲವನ್ನೂ ಹೇಳಲು ಆಗುವುದಿಲ್ಲ" ಎಂದು ಉತ್ತರಿಸಿದರು.
ಬಿಜೆಪಿ ನಾಯಕರಿಗೂ ಸಿಗದ ಸಮಯ ಮೋದಿ ಅವರೊಂದಿನಿಮಗೆ ಸಿಗುತ್ತದೆ ಎಂದು ಕೇಳಿದಾಗ, "ಇದು ಮಾನವೀಯ ಸಂಬಂಧ ಮತ್ತು ಪರಸ್ಪರ ಗೌರವದ ವಿಚಾರ. ನಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರೂ ನನ್ನನ್ನು ಪ್ರೀತಿ ಮತ್ತು ಗೌರವದಿಂದ ಕಾಣುತ್ತಾರೆ. ಎಲ್ಲರಲ್ಲೂ ನಾಯಕತ್ವದ ಗುಣ ಇರುವುದಿಲ್ಲ. ನಾನು ಯಾರೊಂದಿಗೂ ಮಾತನಾಡಲು ಹಿಂದೇಟು ಹಾಕುವುದಿಲ್ಲ. ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿರಬೇಕು" ಎಂದರು.
ನಿನ್ನೆ ಮೆಟ್ರೋ ಟಿಕೆಟ್ ಖರೀದಿ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಹಾಸ್ಯಮಯ ಸನ್ನಿವೇಶ ಏನಾಗಿತ್ತು ಎಂದು ಕೇಳಿದಾಗ, “ಮೆಟ್ರೋ ಟಿಕೆಟ್ ಖರೀದಿಸಲು ಹಣವಿಲ್ಲದ ಕಾರಣ, ನನ್ನ ಟಿಕೆಟ್ ಅನ್ನು ನೀವೇ ಖರೀದಿಸಿ ಎಂದು ಹೇಳಿದೆ. ಮೋದಿ ಅವರು ತಮ್ಮದೇ ಕಾರ್ಡ್ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆದರು” ಎಂದು ತಿಳಿಸಿದರು.
ಬೆಂಗಳೂರಿನ ಜನ ಖಾಸಗಿ ವಾಹನ ಮಾತ್ರವಲ್ಲದೇ ಸಾರ್ವಜನಿಕ ಸಾರಿಗೆ ಬಳಸುವಂತೆ ಮಾಡಬೇಕು ಎಂದು ಕೇಳಿದಾಗ, “ಇಡೀ ದೇಶದಲ್ಲಿ ಅತಿ ಹೆಚ್ಚು ಸಾರ್ವಜನಿಕ ಸಾರಿಗೆಗಾಗಿ ಬಸ್ ಇರುವುದು ನಮ್ಮಲ್ಲೇ. ರಸ್ತೆ ಪ್ರಮಾಣ ಕಡಿಮೆ ಇದ್ದರೂ ಹೆಚ್ಚು ಬಸ್ ಹೊಂದಿದ್ದೇವೆ. ಅದರ ಜತೆಗೂ ಮೆಟ್ರೋ ಕೂಡ ಬಹಳ ಮುಖ್ಯ” ಎಂದರು.
ಮೆಟ್ರೋ ನಿಲ್ದಾಣಗಳಲ್ಲಿ ರಾಜ್ಯದ ಗ್ರಾನೈಟ್ ಕಲ್ಲು ಬಳಸಲು ಸೂಚನೆ
"ನಮ್ಮ ರಾಜ್ಯದಲ್ಲೇ ಉತ್ತಮ ಗುಣಮಟ್ಟದ ಕಲ್ಲುಗಳು ಲಭ್ಯವಿರುವಾಗ ಹೊರಗಡೆಯಿಂದ ಕಲ್ಲು ತರಿಸುವ ಅಗತ್ಯವೇನಿದೆ? ಸ್ಥಳೀಯ ಕಲ್ಲು ಬಳಸಿದರೆ ಇಲ್ಲಿನ ಉದ್ಯಮಕ್ಕೂ ಕೆಲಸ ಸಿಗುತ್ತದೆ. ಕಲ್ಲು ಕತ್ತರಿಸುವುದರಿಂದ ಹಿಡಿದು ಸಂಸ್ಕರಣೆಯವರೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಹೊರಗಡೆಯಿಂದ ಕಲ್ಲು ತಂದು ನಮ್ಮ ಉದ್ಯಮಕ್ಕೆ ಧಕ್ಕೆ ತರಬೇಡಿ ಎಂದು ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಿಗೆ ಹೇಳಿದ್ದೆ" ಎಂದರು.
“ಚಾಮರಾಜನಗರ, ತುಮಕೂರು, ಸಿರಾ, ಬಾದಾಮಿ, ಇಳಕಲ್, ಕನಕಪುರ, ಮಾಗಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗ್ರಾನೈಟ್ ಲಭ್ಯವಿದೆ. ಹಾಸನ ಗ್ರೀನ್, ತುಮಕೂರು ಬಾರ್ಪರಿ, ಬೆಂಗಳೂರು ಬ್ಲೂ, ಮಲ್ಟಿ ಕಲರ್, ಜುಬ್ರಾನಿ, ಕೊಳ್ಳೇಗಾಲ ಬ್ಲ್ಯಾಕ್, ಇಳಕಲ್ ರೆಡ್ ಸೇರಿದಂತೆ ವಿವಿಧ ಬಣ್ಣಗಳ ಕಲ್ಲುಗಳು ರಾಜ್ಯದಲ್ಲಿವೆ. ಇವುಗಳ ಗುಣಮಟ್ಟವೂ ಉತ್ತಮವಾಗಿದೆ” ಎಂದು ವಿವರಿಸಿದರು.
"ನಿನ್ನೆ ಮೆಟ್ರೋದಲ್ಲಿ ಪ್ರಯಾಣಿಸುವಾಗಲೂ ಈ ಬಗ್ಗೆ ಗಮನಿಸಿದ್ದೇನೆ. ಕೆಲವು ಕಡೆ ನಮ್ಮ ಸ್ಥಳೀಯ ಗ್ರಾನೈಟ್ ಬಳಕೆಯಾಗಿರುವುದು ಕಂಡುಬಂದಿದೆ. ಹೊರಗಡೆಯ ಕಲ್ಲಿಗೂ ನಮ್ಮ ಕಲ್ಲಿಗೂ ಗುಣಮಟ್ಟದಲ್ಲಿ ವ್ಯತ್ಯಾಸವಿಲ್ಲ. ನಮ್ಮ ಕಲ್ಲುಗಳೂ ಚೆನ್ನಾಗಿವೆ. ಸ್ಥಳೀಯ ಸಂಪನ್ಮೂಲ ಬಳಸುವುದರಿಂದ ರಾಜ್ಯದ ಉದ್ಯಮಕ್ಕೆ ಉತ್ತೇಜನ ಸಿಗುತ್ತದೆ" ಎಂದು ಹೇಳಿದರು.
ಮೊಬೈಲ್ಗಿಂತ ಶಿಕ್ಷಣ ಮುಖ್ಯ: ಮಕ್ಕಳಿಗೆ ಸಿಎಂ ಕಿವಿಮಾತು
ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಮಕ್ಕಳಿಗೆ ಯಾವ ಸಂದೇಶ ನೀಡುತ್ತೀರಿ ಎಂದು ಕೇಳಿದಾಗ, “ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿ. ಗೂಗಲ್, ಚಾಟ್ಜಿಪಿಟಿ ಸೇರಿದಂತೆ ತಂತ್ರಜ್ಞಾನವನ್ನು ಮಾಹಿತಿ ಪಡೆಯಲು ಬಳಸಿ. ಆದರೆ, ಅನಗತ್ಯವಾಗಿ ಮೊಬೈಲ್ನಲ್ಲಿ ಸಮಯ ಕಳೆಯಬೇಡಿ. ನಿಮ್ಮ ವಯಸ್ಸಿನಲ್ಲಿ ಓದಿಗೆ ಮೀಸಲಿಡಬೇಕಾದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ. ನಾವು ಸಾಕಷ್ಟು ಕಷ್ಟಪಟ್ಟಿದ್ದೇವೆ, ಸಮಯವನ್ನೂ ಕಳೆದುಕೊಂಡಿದ್ದೇವೆ. ನೀವು ಹಾಗೆ ಮಾಡಬೇಡಿ. ಶಿಕ್ಷಣಕ್ಕೆ ಆದ್ಯತೆ ನೀಡಿ. ಪೋಷಕರು ಮತ್ತು ಶಿಕ್ಷಕರಿಗೆ ಗೌರವ ಕೊಡಿ" ಎಂದು ಕಿವಿಮಾತು ಹೇಳಿದರು.
ತಮ್ಮ ಮೊಮ್ಮಗನೊಂದಿಗೆ ಸಮಯ ಕಳೆಯುವ ಕುರಿತು ಕೇಳಿದಾಗ, "ನಿನ್ನೆ ರಾತ್ರಿ ಸ್ವಲ್ಪ ಸಮಯ ಕಳೆದಿದ್ದೇನೆ. ಇಂದು ಮತ್ತೆ ನೋಡುತ್ತೇನೆ" ಎಂದರು.
ಸರ್ಕಾರಿ ಶಾಲೆಗಳಿಗೆ ಖಾಸಗಿ ಶಾಲೆಗಳ ಆಸರೆ
ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ಕೇಳಿದಾಗ, “ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೆ ನೆರವಾಗಬೇಕು ಎಂದು ಮನವಿ ಮಾಡಿದ್ದೇನೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿ ಬಳಸುವ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿದ್ದೇನೆ. ಸರ್ಕಾರಿ ಶಾಲೆಗಳಿಗೆ ಸಿಎಸ್ಆರ್ ನೆರವು ಒದಗಿಸಲು ಸೂಕ್ತ ಮಾರ್ಗಸೂಚಿ ರೂಪಿಸುವಂತೆ ಮನವಿ ಮಾಡಿದ್ದೇನೆ" ಎಂದರು.
“ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಶೇ.7.5ರಷ್ಟು ಮೀಸಲಾತಿ ನೀಡುವ ನಿರ್ಧಾರ ಕೈಗೊಂಡಿದೆ. ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಖಾಸಗಿ ಶಾಲೆಗಳ ಮಟ್ಟಕ್ಕೆ ಸುಧಾರಿಸುವುದು ಸರಕಾರದ ಉದ್ದೇಶ. ಇದಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದೆ ಬರಬೇಕು. ಆದರೆ, ಸರ್ಕಾರಿ ಶಾಲೆಗಳ ಮಾಲೀಕತ್ವವನ್ನು ಖಾಸಗಿ ಕಂಪನಿಗಳಿಗಾಗಲಿ, ಖಾಸಗಿ ಶಾಲೆಗಳಿಗೆ ಹಸ್ತಾಂತರಿಸುವುದಿಲ್ಲ. ಕಟ್ಟಡಗಳ ಮೇಲಿನ ನಿಯಂತ್ರಣವನ್ನೂ ಬಿಟ್ಟುಕೊಡುವುದಿಲ್ಲ. ಶಾಲೆಗಳು ಸರಕಾರದ ಅಧೀನದಲ್ಲಿಯೇ ಇರುತ್ತವೆ. ಖಾಸಗಿ ಸಂಸ್ಥೆಗಳಿಂದ ಅಭಿವೃದ್ಧಿಗೆ ಅಗತ್ಯವಾದ ಸಹಕಾರವನ್ನು ಮಾತ್ರ ಪಡೆಯಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
ಫೋನ್ ಕದ್ದಾಲಿಕೆ ಆರೋಪ: ಮಾಹಿತಿ ಪಡೆದು ಮಾತನಾಡುವೆ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ಫೋನ್ ಕದ್ದಾಲಿಕೆ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, "ಈ ಬಗ್ಗೆ ಇನ್ನೂ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಸಂಪೂರ್ಣ ಮಾಹಿತಿ ತಿಳಿದುಕೊಂಡ ಬಳಿಕ ಮಾತನಾಡುತ್ತೇನೆ" ಎಂದು ಹೇಳಿದರು.







Comments
Leave a Comment