ಪ್ರವಾಸೋದ್ಯಮ ಕ್ಷೇತ್ರಗಳಲ್ಲಿನ ಪಿಪಿಪಿ ಹಾಗೂ ಹೂಡಿಕೆ ಅವಕಾಶಗಳನ್ನು ಪರಿಚಯಿಸಿದ ಪ್ರವಾಸೋದ್ಯಮ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್
ಕರ್ನಾಟಕ ಪ್ರವಾಸೋದ್ಯಮದಲ್ಲಿ ಹೂಡಿಕೆಗೆ ಯುಎಇ ಕನ್ನಡಿಗ ಉದ್ಯಮಿಗಳಿಗೆ ಸಚಿವ ಕೆ.ಜೆ. ಜಾರ್ಜ್ ಆಹ್ವಾನ
* ಕರ್ನಾಟಕದ ವೈವಿಧ್ಯಮಯ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿನ ಪಿಪಿಪಿ ಹಾಗೂ ಹೂಡಿಕೆ ಅವಕಾಶಗಳನ್ನು ಪರಿಚಯಿಸಿದ ಪ್ರವಾಸೋದ್ಯಮ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್
ದುಬೈ, ಸೆಪ್ಟೆಂಬರ್ 15: ಕರ್ನಾಟಕದ ಪ್ರವಾಸೋದ್ಯಮ, ಮೂಲಸೌಕರ್ಯ ಹಾಗೂ ಆರ್ಥಿಕ ಬೆಳವಣಿಗೆಯ ಮುಂದಿನ ಹಂತದಲ್ಲಿ ಸಕ್ರಿಯ ಪಾಲುದಾರರಾಗುವಂತೆ ಯುಎಇಯಲ್ಲಿರುವ ಕನ್ನಡಿಗ ಉದ್ಯಮಿಗಳು ಮತ್ತು ಹೂಡಿಕೆದಾರರಿಗೆ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಆಹ್ವಾನ ನೀಡಿದರು.
‘ಇನ್ವೆಸ್ಟ್ ಇನ್ ಕರ್ನಾಟಕ – ಎನ್‌ಆರ್‌ಐ ಬಿಸಿನೆಸ್ ಕಮ್ಯುನಿಟಿ ಮೀಟ್, ದುಬೈ 2026’ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವ 65 ಪ್ರಮುಖ ಕನ್ನಡಿಗ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕದಲ್ಲಿ ಸಾಕಷ್ಟು ಅವಕಾಶಗಳಿದ್ದು, ಗಂಭೀರ ಹೂಡಿಕೆ ಪ್ರಸ್ತಾವನೆಗಳಿಗೆ ಸರ್ಕಾರ ಅಗತ್ಯ ಸಹಕಾರ ಮತ್ತು ನೆರವು ನೀಡಲಿದೆ ಎಂದು ಭರವಸೆ ನೀಡಿದರು.
ಕರ್ನಾಟಕ ಎನ್‌ಆರ್‌ಐ ಫೋರಂ ಯುಎಇ ಆಯೋಜಿಸಿದ್ದ ಈ ಸಂವಾದದಲ್ಲಿ ಉದ್ಯಮಿಗಳು, ಹೂಡಿಕೆದಾರರು ಹಾಗೂ ಕರ್ನಾಟಕ ಸರ್ಕಾರದ ಹಿರಿಯ ಪ್ರತಿನಿಧಿಗಳು ಭಾಗವಹಿಸಿ ಪ್ರವಾಸೋದ್ಯಮ, ವ್ಯಾಪಾರ, ಮೂಲಸೌಕರ್ಯ, ಸಂಪರ್ಕ ವ್ಯವಸ್ಥೆ ಹಾಗೂ ವ್ಯವಹಾರಿಕ ಸಹಭಾಗಿತ್ವದ ಅವಕಾಶಗಳ ಕುರಿತು ಚರ್ಚಿಸಿದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್ ಅವರು ಕರ್ನಾಟಕದ ಪ್ರವಾಸೋದ್ಯಮ ಸಾಮರ್ಥ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಕುರಿತು ಸಮಗ್ರ ಮಾಹಿತಿ ನೀಡಿದರು. leisure ಪ್ರವಾಸೋದ್ಯಮ, ಬಿಸಿನೆಸ್ ಟೂರಿಸಂ, ವೈದ್ಯಕೀಯ, ವೆಲ್‌ನೆಸ್, ಆಧ್ಯಾತ್ಮಿಕ, ಕರಾವಳಿ ಹಾಗೂ ಅನುಭವಾಧಾರಿತ ಪ್ರವಾಸೋದ್ಯಮ* ಕ್ಷೇತ್ರಗಳಲ್ಲಿ ಖಾಸಗಿ ಹೂಡಿಕೆ ಮತ್ತು ಸಾರ್ವಜನಿಕ–ಖಾಸಗಿ ಸಹಭಾಗಿತ್ವಕ್ಕೆ (PPP) ಇರುವ ಅವಕಾಶಗಳನ್ನು ವಿವರಿಸಿದರು.
ಗುಣಮಟ್ಟದ ವಸತಿ ಸೌಲಭ್ಯ, ಪ್ರವಾಸಿ ತಾಣಗಳ ಮೂಲಸೌಕರ್ಯ, ಪ್ರವಾಸಿಗರ ಅನುಭವ ಹಾಗೂ ಹೊಸ ಪ್ರವಾಸೋದ್ಯಮ ಉತ್ಪನ್ನಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು, ಖಾಸಗಿ ವಲಯಕ್ಕೆ ಹೂಡಿಕೆ ಯೋಗ್ಯ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯದ ನಿಯೋಗದಲ್ಲಿ ಕೆಎಸ್‌ಟಿಡಿಸಿ ಅಧ್ಯಕ್ಷ ಶ್ರೀನಿವಾಸ್ ಎಂ., ವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಹಾಗೂ ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್ ಪಿ.ಆರ್. ಉಪಸ್ಥಿತರಿದ್ದರು.
ಯುಎಇಯ ಪ್ರಮುಖ ಉದ್ಯಮಿಗಳಾದ ಡಾ. ರೊನಾಲ್ಡ್ ಕೊಲಾಸೊ, ಡಾ. ಮೊಯ್ದೀನ್ ತುಂಬೆ ಹಾಗೂ ಕರ್ನಾಟಕ ಎನ್‌ಆರ್‌ಐ ಫೋರಂ ಯುಎಇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸಂವಾದದಲ್ಲಿ ಭಾಗವಹಿಸಿದ್ದರು. ವಿಮಾನ, ರಸ್ತೆ ಮತ್ತು ಕರಾವಳಿ ಸಂಪರ್ಕ ಸುಧಾರಣೆ, ಹೂಡಿಕೆ ಸೌಲಭ್ಯ ಹಾಗೂ ಕರ್ನಾಟಕವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಪರಿಚಯಿಸುವ ಕುರಿತು ಚರ್ಚಿಸಲಾಯಿತು.
ಕರ್ನಾಟಕದಲ್ಲಿನ ನಿರ್ದಿಷ್ಟ ಪ್ರವಾಸೋದ್ಯಮ ಹಾಗೂ ಹೂಡಿಕೆ ಅವಕಾಶಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಉದ್ಯಮಿಗಳು ಆಸಕ್ತಿ ವ್ಯಕ್ತಪಡಿಸಿದರು.
ಕೋಟ್:
“ವಿಶ್ವದ ವಿವಿಧ ಭಾಗಗಳಲ್ಲಿ ಕನ್ನಡಿಗರು ಯಶಸ್ವಿ ಉದ್ಯಮಗಳು ಮತ್ತು ಬಲಿಷ್ಠ ಜಾಗತಿಕ ವ್ಯವಹಾರಗಳನ್ನು ನಿರ್ಮಿಸಿದ್ದಾರೆ. ಆ ಉದ್ಯಮಶೀಲ ಶಕ್ತಿ ಕರ್ನಾಟಕದೊಂದಿಗೆ ಇನ್ನಷ್ಟು ನಿಕಟವಾಗಿ ಸಂಪರ್ಕಿಸಬೇಕು ಎಂಬುದು ನಮ್ಮ ಆಶಯ. ಹೂಡಿಕೆದಾರರಿಗೆ ಸರ್ಕಾರ ಅಗತ್ಯ ಸಹಕಾರ ನೀಡುವುದರ ಜೊತೆಗೆ ಉತ್ತಮ ಪ್ರಸ್ತಾವನೆಗಳನ್ನು ಯೋಜನೆಗಳಾಗಿ ರೂಪಿಸಲು ನೆರವಾಗಲಿದೆ.”
- ಕೆ.ಜೆ. ಜಾರ್ಜ್, ಇಂಧನ ಮತ್ತು ಪ್ರವಾಸೋದ್ಯಮ ಸಚಿವರು:
***
“ಕರ್ನಾಟಕದ ದೊಡ್ಡ ಶಕ್ತಿ ಅದರ ವೈವಿಧ್ಯತೆ. ಕರಾವಳಿ ಮತ್ತು ವೆಲ್‌ನೆಸ್ ಪ್ರವಾಸೋದ್ಯಮದಿಂದ ವೈದ್ಯಕೀಯ, ಆಧ್ಯಾತ್ಮಿಕ ಹಾಗೂ ಬಿಸಿನೆಸ್ ಟೂರಿಸಂವರೆಗೆ ವಾಣಿಜ್ಯಾತ್ಮಕವಾಗಿ ಯಶಸ್ವಿಯಾಗಬಲ್ಲ ಅನೇಕ ಅವಕಾಶಗಳಿವೆ. ಹೂಡಿಕೆದಾರರಿಗೆ ಸ್ಪಷ್ಟ ಮತ್ತು ಅನುಷ್ಠಾನ ಯೋಗ್ಯ ಪ್ರವಾಸೋದ್ಯಮ ಯೋಜನೆಗಳ ಸರಣಿಯನ್ನು ರೂಪಿಸುವುದು ನಮ್ಮ ಆದ್ಯತೆಯಾಗಿದೆ.”
- ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್, ಪ್ರವಾಸೋದ್ಯಮ ಕಾರ್ಯದರ್ಶಿ:
***
“ಪ್ರವಾಸಿ ಕನ್ನಡಿಗರ ಸಂಪರ್ಕವು ಕೇವಲ ನೆಟ್‌ವರ್ಕಿಂಗ್‌ಗೆ ಸೀಮಿತವಾಗಬಾರದು. ಹೂಡಿಕೆದಾರರು ಮತ್ತು ಸರ್ಕಾರದ ನಡುವೆ ಸ್ಪಷ್ಟವಾದ ಸಾಂಸ್ಥಿಕ ಸಂಪರ್ಕ, ಗುರುತಿಸಲಾದ ಅವಕಾಶಗಳು ಹಾಗೂ ನಿರಂತರ ಅನುಸರಣೆ ಅಗತ್ಯ. ಈ ಸಭೆ ಅದಕ್ಕೆ ಮಹತ್ವದ ವೇದಿಕೆ ಒದಗಿಸಿದೆ.”
- ಪ್ರವೀಣ್ ಶೆಟ್ಟಿ, ಅಧ್ಯಕ್ಷರು, ಕರ್ನಾಟಕ ಎನ್‌ಆರ್‌ಐ ಫೋರಂ ಯುಎಇ:
**
“ಕರ್ನಾಟಕವು ಜಾಗತಿಕ ಹೂಡಿಕೆ ಮತ್ತು ಪ್ರವಾಸೋದ್ಯಮ ತಾಣವಾಗಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯುವ ಸಾಮರ್ಥ್ಯ ಹೊಂದಿದೆ. ಉತ್ತಮ ಸಂಪರ್ಕ, ಬಲಿಷ್ಠ ಮೂಲಸೌಕರ್ಯ ಮತ್ತು ಸಮಯಬದ್ಧ ಅನುಷ್ಠಾನದಿಂದ ಈ ಸಾಮರ್ಥ್ಯವನ್ನು ವೇಗವಾಗಿ ವಾಸ್ತವಕ್ಕೆ ತರಬಹುದು.”
- ಡಾ. ರೊನಾಲ್ಡ್ ಕೊಲಾಸೊ:
**
“ಉದ್ಯಮಿಗಳಿಗೆ ವಿಶ್ವಾಸ, ಸ್ಪಷ್ಟತೆ ಮತ್ತು ಸಮಯೋಚಿತ ಸಹಕಾರ ಅತ್ಯಂತ ಮುಖ್ಯ. ಕರ್ನಾಟಕದಲ್ಲಿ ಪ್ರತಿಭೆ ಮತ್ತು ಮಾರುಕಟ್ಟೆಯ ದೊಡ್ಡ ಸಾಮರ್ಥ್ಯವಿದ್ದು, ಉತ್ತಮ ಸರ್ಕಾರಿ ಸೌಲಭ್ಯಗಳಿಂದ ಇನ್ನಷ್ಟು ಜಾಗತಿಕ ಕನ್ನಡಿಗರನ್ನು ರಾಜ್ಯದಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸಬಹುದು.”
- ಡಾ. ಮೊಯ್ದೀನ್ ತುಂಬೆ:







Comments
Leave a Comment