ದಿವಂಗತ ಮಾಜಿ ಸಚಿವ ವೀರಣ್ಣನವರ ಜನಪರ ಸೇವೆಗೆ ತುಮಕೂರಿನಲ್ಲಿ ನುಡಿ ನಮನ
ತುಮಕೂರು, ಆ. 30 – ಸಮಾಜದ ಹಿಂದುಳಿದ ಹಾಗೂ ಶೋಷಿತ ವರ್ಗಗಳ ಧ್ವನಿಯಾಗಿ, ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಶ್ರಮಿಸಿದ ದಿವಂಗತ ಮಾಜಿ ಸಚಿವ ಶ್ರೀ ವೀರಣ್ಣನವರ ಜನಪರ ಚಿಂತನೆ ಹಾಗೂ ಸೇವಾ ಕೊಡುಗೆ ಸದಾ ಸ್ಮರಣೀಯವಾಗಲಿದೆ. ಅವರ ಆದರ್ಶಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂಬ ಆಶಯವನ್ನು ಮಾಜಿ ಸಚಿವ ಕೆ.ಎನ್. ರಾಜಣ್ಣ ವ್ಯಕ್ತಪಡಿಸಿದರು.
ತುಮಕೂರು ನಗರದ ಗ್ರಂಥಾಲಯ ಸಭಾಂಗಣದಲ್ಲಿ, ಶ್ರೀ ವೀರಣ್ಣನವರ ಅಭಿಮಾನಿ ಬಳಗ–ಕರ್ನಾಟಕ ಹಾಗೂ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ "ಶ್ರೀ ವೀರಣ್ಣನವರ ನುಡಿ ನಮನ" ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ರಾಜಣ್ಣ ಅವರು ಮಾತನಾಡಿ, ವೀರಣ್ಣನವರ ಸರಳತೆ, ಸಾಮಾಜಿಕ ಕಳಕಳಿ ಹಾಗೂ ಜನಪರ ಸೇವೆಯನ್ನು ಸ್ಮರಿಸಿದರು.
ಈ ನಮನ ಕಾರ್ಯಕ್ರಮದಲ್ಲಿ, ವೀರಣ್ಣನವರ ಜೀವನದ ಹಾದಿ, ಅವರ ಜನಪರ ಚಿಂತನೆ, ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಹೋರಾಟ, ಹಾಗೂ ಸಮಾಜಮುಖಿ ಸೇವೆಗಳನ್ನು ನೆನಪಿಸಿಕೊಂಡು, ಅವರ ತ್ಯಾಗಮಯ ಜೀವನವನ್ನು ಮುಂದಿನ ಪೀಳಿಗೆಗೆ ಮಾದರಿಯಾಗಿ ತೋರಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ನಾಡೋಜ ಹಾಗೂ ಸಾಹಿತ್ಯಕಾರ ಬರಗೂರು ರಾಮಚಂದ್ರಪ್ಪ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರು ಅಶೋಕ ಪಟ್ಟಣ್ ಹಾಗೂ ಡಾ. ಶ್ರೀನಿವಾಸ್, ಮಾಜಿ ಸಂಸದರು ವಿ.ಎಸ್. ಉಗ್ರಪ್ಪ ಮತ್ತು ಜಿ.ಎಸ್. ಬಸವರಾಜು, ಮಾಜಿ ಸಚಿವರು ಪಿ.ಜಿ.ಆರ್. ಸಿಂಧ್ಯಾ ಹಾಗೂ ಶಿವಣ್ಣ, ಮುಖಂಡರು ಹುಲಿನಾಯ್ಕರ್ ಹಾಗೂ ಮೂರ್ತಿ, ಸಂಪಾದಕ ನಾಗಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ವಾಲ್ಮೀಕಿ ಸಮಾಜದ ವೇದಿಕೆ ಅಧ್ಯಕ್ಷ ನರಸಿಂಹಯ್ಯ ಸೇರಿದಂತೆ ವೀರಣ್ಣನವರ ಕುಟುಂಬದವರು, ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.







Comments
Leave a Comment