ನಾಡಗೀರ್ ಸಂಜೆ ಡಿಪ್ಲೊಮಾ ಕಾಲೇಜಿನ ಅಕ್ರಮ ಪ್ರವೇಶ – ಕಿರಿಯ ಅಭಿಯಂತರರ ನೇಮಕಾತಿ ಅಧಿಸೂಚನೆ ರದ್ದುಪಡಿಸುವಂತೆ ಜನಪರ ವೇದಿಕೆಯ ಆಗ್ರಹ
ಬೆಂಗಳೂರು ಜು. 29-ನಾಡಗೀರ್ ಸಂಜೆ ಡಿಪ್ಲೊಮಾ ಕಾಲೇಜಿನಲ್ಲಿ ನಡೆದಿರುವ ಅಕ್ರಮ ಪ್ರವೇಶ ಮತ್ತು ವಿದ್ಯಾರ್ಹತೆ ಸಂಬಂಧಿತ ಅವ್ಯವಹಾರಗಳ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಕೋಲಾರ ಜಿಲ್ಲಾ ಜನಪರ ವೇದಿಕೆಯ ಪ್ರಧಾನ ಕಾರ್ಯದರ್ಶಿ ರಮೇಶಬಾಬು.ವಿ, ಅಧ್ಯಕ್ಷರು ನಾಗರಾಜ.ಕೆ ಹಾಗೂ ಖಜಾಂಚಿ ಮತ್ತು ಕಾನೂನು ಸಲಹೆಗಾರರು ವೆಂಕಟಾಚಲಪತಿ.ಕೆ.ಪಿ ಅವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಮಾತನಾಡಿ ನಾಡಗೀರ್ ಸಂಜೆ ಡಿಪ್ಲೊಮಾ ಕಾಲೇಜಿನಲ್ಲಿ ನಡೆದಿರುವ ಅಕ್ರಮ ಪ್ರವೇಶ ಮತ್ತು ವಿದ್ಯಾರ್ಹತೆ ಸಂಬಂಧಿತ ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಿದರು.
ಇವರುಗಳ ಪ್ರಕಾರ , ಬೆಸ್ಕಾಂ ಮತ್ತು ಕವಿಪ್ರನಿನಿಯ ನೇಮಕಾತಿ ಪ್ರಾಧಿಕಾರಗಳಿಂದ ನಿಯಮಬಾಹಿರವಾಗಿ ನಿರಾಪೇಕ್ಷಣ ಪತ್ರ ಪಡೆದು ಸಂಜೆ ಕಾಲೇಜಿನಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಪಡೆದಿರುವ ನೌಕರರು ಶೇಕಡ 10ರ ಇನ್-ಸರ್ವಿಸ್ ನೇರ ನೇಮಕಾತಿ ಕೋಟಾದಡಿ ಕಿರಿಯ ಅಭಿಯಂತರರು (ವಿ) ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇದು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ ನ ನಿಯಮಗಳಿಗೆ ವಿರುದ್ಧವಾಗಿದ್ದು, 50 ಕಿಲೋಮೀಟರ್ ವ್ಯಾಪ್ತಿಯೊಳಗೆ ವಿದ್ಯಾಸಂಸ್ಥೆ ಇರಬೇಕೆಂಬ ನಿಯಮವನ್ನು ಮೀರಿ ಪ್ರವೇಶ ಪಡೆದಿರುವುದರಿಂದ ಈ ಪ್ರವೇಶವೇ ಕಾನೂನುಬಾಹಿರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅವರು ಇನ್ನಷ್ಟು ವಿವರಿಸಿದರು, ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಹಣ ಪಡೆದು ಹಾಜರಾತಿ ಮತ್ತು ಅಂಕ ನೀಡುತ್ತಿರುವುದಕ್ಕೆ ಸಾಕ್ಷಿಯಾಗಿ CD ದೃಶ್ಯಾವಳಿ ಸಲ್ಲಿಸಲಾಗಿದೆ. ವಿದ್ಯಾರ್ಥಿಗಳ ಖಾತೆಯಿಂದ ಕಛೇರಿ ಅಧೀಕ್ಷಕರ ಖಾತೆಗೆ ಹಣ ವರ್ಗಾವಣೆ ನಡೆದಿರುವುದೂ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ 2352/2026 ವಿಚಾರಣೆಯಲ್ಲಿದ್ದು, ವಿಜಯವಾಣಿ ಪತ್ರಿಕೆಯಲ್ಲಿ ಕೂಡ ‘ಬೆಸ್ಕಾಂ ನೌಕರರ ಡಿಪ್ಲೊಮಾ ಅವ್ಯವಹಾರ’ ಕುರಿತು ವರದಿ ಪ್ರಕಟವಾಗಿದೆ.
ಅವರು ಸರ್ಕಾರಕ್ಕೆ ಮನವಿ ಮಾಡಿದರು, ತನಿಖೆ ಪೂರ್ಣಗೊಳ್ಳುವವರೆಗೂ ಅಥವಾ ಉಚ್ಚ ನ್ಯಾಯಾಲಯದ ತೀರ್ಪು ಬರುವವರೆಗೂ ಕಿರಿಯ ಅಭಿಯಂತರರು (ವಿ) ಹುದ್ದೆಗೆ ಹೊರಡಿಸಿರುವ ಅಧಿಸೂಚನೆಯನ್ನು ಮುಂದೂಡಬೇಕು ಅಥವಾ ರದ್ದುಗೊಳಿಸಬೇಕು. ನಿಯಮಬಾಹಿರವಾಗಿ ನಿರಾಪೇಕ್ಷಣ ಪತ್ರ ನೀಡಿರುವ ಅಧಿಕಾರಿಗಳ ವಿರುದ್ಧ ಹಾಗೂ ಕಾನೂನುಬಾಹಿರವಾಗಿ ಡಿಪ್ಲೊಮಾ ಪಡೆದಿರುವ ಅಭ್ಯರ್ಥಿಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು. ಸಾಮಾಜಿಕ ನ್ಯಾಯವನ್ನು ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.




Comments
Leave a Comment