ಆಗಸ್ಟ್ 6ರಿಂದ 8ರವರೆಗೆ ಮಣ್ಣು-ನೀರು ಸತ್ಯಾಗ್ರಹ: ಎಐ ಪಾರ್ಕ್‌ಗಳ ವಿರುದ್ಧ ಚಳುವಳಿ
ಆಗಸ್ಟ್ 6ರಿಂದ 8ರವರೆಗೆ ಮಣ್ಣು-ನೀರು ಸತ್ಯಾಗ್ರಹ: ಎಐ ಪಾರ್ಕ್‌ಗಳ ವಿರುದ್ಧ ಚಳುವಳಿ
ಬೆಂಗಳೂರು , ಜು. 26-ಆಗಸ್ಟ್ 6ರಿಂದ 8ರವರೆಗೆ ನಡೆಯಲಿರುವ "ಮಣ್ಣು-ನೀರು ಸತ್ಯಾಗ್ರಹ"ವು ಭಾರತದ ಮಣ್ಣು, ನೀರು, ಜೀವನೋಪಾಯಗಳು ಮತ್ತು ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವ ಶಾಂತಿಯುತ ಜನಚಳುವಳಿ ಎಂದು ತುಮಕೂರು ಜಿಲ್ಲೆಯ ದೊಡ್ಡಹೊಸೂರು ಗ್ರಾಮ, ಗೂಳೂರು ಹೋಬಳಿಯಲ್ಲಿ ಗಾಂಧೀ ಸಹಜ ಬೇಸಾಯ ಆಶ್ರಮದ ಸಂಯೋಜಕ ರವೀಶ್ ಕುಮಾರ್ ಅವರು ಪ್ರಕಟಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರುಎಐ ಪಾರ್ಕ್‌ಗಳು ಮತ್ತು ಡೇಟಾ ಕೇಂದ್ರಗಳ ನಿರ್ಮಾಣದಿಂದ ಪರಿಸರ, ಸಮಾಜ ಮತ್ತು ಆರ್ಥಿಕ ಕ್ಷೇತ್ರಗಳಿಗೆ ಉಂಟಾಗುವ ಗಂಭೀರ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ಸತ್ಯಾಗ್ರಹದ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.
ಎಐ ಪಾರ್ಕ್‌ಗಳು ಕೇವಲ ಡೇಟಾ ಕೇಂದ್ರಗಳಲ್ಲ, ಅವು ಬಹುರಾಷ್ಟ್ರೀಯ ಕಂಪನಿಗಳ ನಗರ ಪ್ರದೇಶಗಳಾಗಿದ್ದು, ಅಪಾರ ಪ್ರಮಾಣದ ಭೂಮಿ, ವಿದ್ಯುತ್ ಮತ್ತು ನೀರನ್ನು ಬಳಸಿಕೊಳ್ಳುತ್ತವೆ. ಮುಂಬರುವ ದಿನಗಳಲ್ಲಿ ಜಾಗತಿಕವಾಗಿ ಲಭ್ಯವಿರುವ ವಿದ್ಯುತ್‌ನ ಮೂರನೇ ಒಂದು ಭಾಗವನ್ನು ಇವು ಬಳಸಿಕೊಳ್ಳಲಿವೆ ಎಂಬ ಅಂದಾಜು ಮಾಡಲಾಗಿದೆ. ಭಾರತದಲ್ಲಿ ಇದಕ್ಕಾಗಿ 44 ಹೊಸ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಯೋಜಿಸಲಾಗಿದೆ. ಬಿಡದಿ–ರಾಮನಗರ ಎಐ ಡೇಟಾ ಕೇಂದ್ರ ಯೋಜನೆ 7481 ಎಕರೆ ಕೃಷಿ ಭೂಮಿ ಮತ್ತು 7.5 ಲಕ್ಷ ಮರಗಳ ನಾಶಕ್ಕೆ ಕಾರಣವಾಗಲಿದ್ದು, ದಿನಕ್ಕೆ 2 ಕೋಟಿ ಲೀಟರ್ ಸಿಹಿ ನೀರನ್ನು ಬಳಸಿಕೊಳ್ಳಲಿದೆ ಎಂದು ಅವರು ಇದೇ ಸಂದರ್ಭದ್ದಲಿ ಅಂಕಿ ಆಂಶ ನೀಡಿದರು.
ಈ ಕೇಂದ್ರಗಳಿಂದ 1.89 ಮಿಲಿಯನ್ ಟನ್ ಇಂಗಾಲ ಮತ್ತು 2.5 ಮಿಲಿಯನ್ ಟನ್ ಇ-ತ್ಯಾಜ್ಯ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಉದ್ಯೋಗದ ಭರವಸೆ ನೀಡಲಾಗುತ್ತಿದ್ದರೂ, ವಾಸ್ತವದಲ್ಲಿ ಕೈಗಾರಿಕಾ ರೋಬೋಟ್‌ಗಳು ಮಾನವ ಉದ್ಯೋಗಗಳನ್ನು ಬದಲಾಯಿಸುತ್ತಿವೆ. ವಿಶ್ವ ಬ್ಯಾಂಕ್ ಅಂದಾಜಿನ ಪ್ರಕಾರ 2030ರ ಹೊತ್ತಿಗೆ ಭಾರತದ 63% ಉದ್ಯೋಗಗಳು ಸ್ವಯಂಚಾಲಿತ ತಂತ್ರಜ್ಞಾನದ ಪ್ರಭಾವಕ್ಕೆ ಒಳಗಾಗಲಿವೆ.
ಸತ್ಯಾಗ್ರಹದ ಉದ್ದೇಶಗಳು ಫಲವತ್ತಾದ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವುದು, ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದು, ಸಮಗ್ರ ಭೂಮಿ ಬಳಕೆ ಕಾಯ್ದೆಗೆ ಒತ್ತಾಯಿಸುವುದು, ಎಐ ಮತ್ತು ಸ್ವಯಂಚಾಲಿತ ತಂತ್ರಜ್ಞಾನಗಳಿಂದ ಉಂಟಾಗುವ ನಿರುದ್ಯೋಗದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವುದು, ಮತ್ತು ಕುಡಿಯುವ ನೀರು, ಆಹಾರ, ಆರೋಗ್ಯ, ಶಿಕ್ಷಣ ಹಾಗೂ ಸಮಾನತೆಯ ಹಕ್ಕುಗಳನ್ನು ಖಾತರಿಪಡಿಸುವ ಸಂವಿಧಾನದ ವಿಧಿಗಳನ್ನು ಎತ್ತಿಹಿಡಿಯುವುದಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಕಾರ್ಯಕ್ರಮದ ವೇಳಾಪಟ್ಟಿಯಂತೆ ಆಗಸ್ಟ್ 6ರಂದು ರಾಷ್ಟ್ರಮಟ್ಟದ ಸಮಾಲೋಚನೆ, 7ರಂದು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಶಾಂತಿಯುತ ಪಾದಯಾತ್ರೆ ಮತ್ತು ಮನವಿ ಪತ್ರ ಸಲ್ಲಿಕೆ, 8ರಂದು ನೀರಿನ ಹಾಗು ಭೂಮಿಯ ಬಳಕೆಯ ನೀತಿಯ ಕುರಿತು ಚರ್ಚೆ ನಡೆಯಲಿದೆ.
"ನೀರೆಂಬುದು ಕೇವಲ ಬಳಕೆ ಮಾಡಬಹುದಾದ ಸಂಪನ್ಮೂಲವಲ್ಲ, ಅದು ನಾಗರಿಕತೆಯ ತಳಪಾಯ. ಮಣ್ಣೆಂಬುದು ಆಕ್ರಮಿಸಿಕೊಳ್ಳಬಹುದಾದ ಭೂಮಿಯಷ್ಟೇ ಅಲ್ಲ, ಅದು ಹಲವು ಪೀಳಿಗೆಗಳ ಜೀವಂತ ಆಸ್ತಿ. ಈ ತಳಪಾಯಗಳನ್ನು ನಾಶ ಮಾಡುವ ಅಭಿವೃದ್ಧಿಯನ್ನು ನೈಜ ಏಳಿಗೆಯೆಂದು ಕರೆಯಲಾಗದು." ಸತ್ಯಾಗ್ರಹದ ಸಂದೇಶವನ್ನು ರವೀಶ್ ಕುಮಾರ್ ಅಂಶವನ್ನು ವಿವರಿಸಿದರು





Comments
Leave a Comment