ರೈತರೇ ನಿಮ್ಮ ಸರಕಾರವನ್ನು ಕಿತ್ತೊಗೆಯಲಿದ್ದಾರೆ. ಕೃಷಿ ಸಚಿವರು ಯಾರೆಂದು ಇನ್ನೂ ಗೊತ್ತಿಲ್ಲ ಮುಖ್ಯಮಂತ್ರಿಗಳೇ ರಿಯಲ್ ಎಸ್ಟೇಟ್ ಖಾತೆ ಸಚಿವ ಎಂದು ಘೋಷಿಸಿ ರೈತರ ಹಿತರಕ್ಷಣೆ ಮಾಡುವುದಾಗಿ ತಿಳಿಸಿದ ರಾಹುಲ್ ಗಾಂಧಿ ಎಲ್ಲಿದ್ದಾರೆ? ರಿಯಲ್ ಎಸ್ಟೇಟ್ ವಿಷಯದಲ್ಲಿ ಹೈಕಮಾಂಡ್ ಕೈ ಮಿಲಾಯಿಸಿದೆ
ಬೆಂಗಳೂರು, ಜು. 17-
ಬಿಡದಿ ಟೌನ್‌ಶಿಪ್ ಯೋಜನೆಗೆ ರೈತರ ಭೂಮಿ ಸ್ವಾದೀನ ಮಾಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ರಾಜ್ಯ ಬಿಜೆಪಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಸಿತು.
ಈ ಧರಣಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ಪ್ರಮುಖ ನಾಯಕರುಗಳು ಭಾಗವಹಿಸಿ, “ಬಿಡದಿ ಟೌನ್‌ಶಿಪ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು” ಎಂದು ಘೋಷಿಸಿದರು. ರೈತರ ಹಿತವನ್ನು ಕಡೆಗಣಿಸಿರುವ ಸರ್ಕಾರವನ್ನು “ರೈತರ ವಿರೋಧಿ ಸರ್ಕಾರ” ಎಂದು ಅವರು ಗುಡುಗಿದರು.
ಬಿಜೆಪಿ ನಾಯಕರು ಎಚ್ಚರಿಕೆ ನೀಡುತ್ತಾ, “ಈ ಯೋಜನೆ ಜಾರಿಗೆ ಬಂದರೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟವನ್ನು ನಡೆಸುತ್ತೇವೆ” ಎಂದು ಘೋಷಿಸಿದರು. ಪ್ರತಿಭಟನಾ ವೇದಿಕೆಯಲ್ಲಿ ರಣಕಹಳೆ ಮೊಳಗಿಸಿದ ಬಿಜೆಪಿ, ರೈತರ ಹಕ್ಕುಗಳನ್ನು ಕಾಪಾಡಲು ಹೋರಾಟವನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ
ಕಾಂಗ್ರೆಸ್ ಮುಖಂಡರು ಹಾಗೂ ಶಾಸಕರು ಬೇಕಾದರೆ ಸಾವಿರಾರು ಎಕರೆ ಜಮೀನು ಇಟ್ಟುಕೊಳ್ಳಬಹುದು. ಆದರೆ ದೇಶಕ್ಕೆ ಅನ್ನ ನೀಡುವ ತುತ್ತಿಗಾಗಿ ನಾಲ್ಕೈದು ಎಕರೆ ಜಮೀನು ಇಟ್ಟುಕೊಳ್ಳಬಾರದೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.
ಬಿಡದಿ ಟೌನ್ ಶಿಪ್ ನಿರ್ಮಾಣಕ್ಕಾಗಿ ರೈತರ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಲವಂತವಾಗಿ ಬಿಡದಿಯಲ್ಲಿ ಫಲವತ್ತಾದ ರೈತರ ಜಮೀನು ಕಸಿದುಕೊಳ್ಳಲು ಮುಂದಾಗಿದೆ. ಗೂಂಡಾಗಿರಿ ಮಾಡ್ತ ಡಿ.ಕೆ ಶಿವಕುಮಾರ್ ಅವರು, ತಮ್ಮ ಚಪಲ ತೀರಿಸಿಕೊಳ್ಳಲು ಸ್ಯಾಟಲೈಟ್ ಟೌನ್ ಮಾಡಲು ಹೋಗಿದ್ದಾರೆ ಎಂದರು.
ಬಿಜೆಪಿ ರಣಕಹಳೆ ಊದಿದೆ...
ರಾಜ್ಯದ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಣಕಹಳೆ ಊದಿದೆ. ರೈತರ ಪರವಾಗಿ ಆಲೋಚನೆ ಮಾಡದೆ ರಿಯಲ್ ಎಸ್ಟೇಟ್ ಬಗ್ಗೆಯೇ ಆಲೋಚನೆ ಮಾಡುವ ಸಿಎಂ ಅಧಿಕಾರದ ಚುಕ್ಕಾಣಿ ಹಿಡಿದರೆ ಇದೇ ಆಗೋದು ಎಂದರು.
ರೈತರ ಜಮೀನನ್ನು ಬಲವಂತವಾಗಿ ಕಸಿದುಕೊಳ್ಳುವುದಿಲ್ಲ ಎಂದು ಹೇಳುವ ಸಿಎಂ ಮತ್ತೊಂದು ಕಡೆ ರಾತ್ರೋರಾತ್ರಿ ರೈತರ ಮನೆಗಳಿಗೆ ಗೂಂಡಾಗಳನ್ನು ಕಳುಹಿಸಿ ರೈತ ಕುಟುಂಬಗಳಿಗೆ ಬೆದರಿಕೆ ಹಾಕ್ತ ಇದ್ದಾರೆ. ಜಮೀನು ನೀಡದಿದ್ದರೆ ಉಳಿಗಾಲ ಇಲ್ಲ ಎಂದು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.
ದುರಾಸೆ ಬಂದರೆ ಯಾವುದೂ ಸಾಕಾಗೋದಿಲ್ಲ...
ಮುಖ್ಯಮಂತ್ರಿ ಆಗಬೇಕು ಎಂಬ ಡಿ ಕೆ ಶಿವಕುಮಾರ್ ಅವರ ದಶಕಗಳ ಕನಸು ಈಡೇರಿದೆ. ಆದರೆ ದುರಾಸೆ ಬಂದರೆ ಯಾವುದೂ ಸಾಕಾಗೋದಿಲ್ಲ ಎಂಬುದು ಸಾಬೀತಾಗಿದೆ. ಸಿಎಂ ಆದ ತಕ್ಷಣ ನಿಮ್ಮ ಆದ್ಯತೆ ಉತ್ತರ ಕರ್ನಾಟಕದ ಅಭಿವೃದ್ಧಿ ಆಗಿರಲಿಲ್ಲ. ಅವರ ಸಂಕಷ್ಟಕ್ಕೆ ಮಿಡಿಯಲಿಲ್ಲ. ಬದಲು ಬಿಡದಿ ಟೌನ್‍ಶಿಪ್, ಕನಕಪುರದಲ್ಲಿ ವಿಮಾನ ನಿಲ್ದಾಣ ಮಾಡಲು ಮುಂದಾದ್ರಿ. ಇದರಲ್ಲಿ ರಿಯಲ್ ಎಸ್ಟೇಟ್ ಬಿಟ್ಟರೆ ಬೇರೆ ಹಿತಾಸಕ್ತಿ ಇಲ್ಲ ಎಂದರು.
ಪ್ರಿಯಾಂಕಾ ಗಾಂಧಿ ಮಾತು...
ಡಿಕೆಶಿ ನುಡಿದಂತೆ ನಡೆಯುವವರು. ಸಿದ್ದರಾಮಯ್ಯ ಅವರನ್ನು ಇಳಿಸಿ ನನ್ನನ್ನು ಸಿಎಂ ಮಾಡಿದರೆ ಬಿಡದಿ ಟೌನ್‍ಶಿಪ್ ಮಾಡಲು ಡಿಎಲ್‍ಎಫ್‍ಗೆ ಅವಕಾಶ ಮಾಡಿಕೊಡ್ತೇನೆ ಎಂದು ಪ್ರಿಯಾಂಕಾ ಗಾಂಧಿ ಅವರಿಗೆ ಭರವಸೆ ನೀಡಿದ್ದಾರೆ. ಅದರ ಈಡೇರಿಕೆಗೆ ಹೊರಟಿದ್ದಾರೆ ಎಂದರು. ಕೋಟ್ಯಧಿಪತಿಗಳ ತಾಳಕ್ಕೆ ಕುಣಿಯಲು, ಹೈಕಮಾಂಡ್ ಹೊಟ್ಟೆ ತುಂಬಿಸಲು ಬಿಡದಿ ಭಾಗದ ರೈತರ ಹೊಟ್ಟೆ ಮೇಲೆ ಹೊಡೆಯಲು ಸಿಎಂ ಮುಂದಾಗಿದ್ದಾರೆ. ರೈತನ ಕೋಪಕ್ಕೆ ತುತ್ತಾದ ಯಾವುದೇ ಸರ್ಕಾರ ಉಳಿದಿಲ್ಲ. ಅಧಿಕಾರದ ಮದ ಹಾಗೂ ದರ್ಪ ಇದನ್ನೆಲ್ಲ ಮಾಡಿಸುತ್ತಿದೆ. ಪ್ರತಿಭಟನೆ ಮಾಡುವ ರೈತರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಹಾಕ್ತಾ ಇದ್ದಾರೆ ಎಂದು ಆರೋಪಿಸಿದರು.
ಪಾಪದ ಕೊಡ ತುಂಬಿದೆ....
ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ರೈತರ ಜೀವದ ಜೊತೆ ಚೆಲ್ಲಾಟವಾಡುವ ಕೈ ಹಾಕಿದ್ದು, ರೈತರ ಶಾಪ ಸರ್ಕಾರವನ್ನು ಕಿತ್ತು ಹಾಕಲಿದೆ. ರೈತರು ಬೀದಿಗಿಳಿದು ಸರ್ಕಾರ ಕಿತ್ತೊಗೆಯಲಿದ್ದಾರೆ ಎಂದರು.
ಕೃಷಿ ಸಚಿವರು ಯಾರು?
ಸರ್ಕಾರ ಅಸ್ತಿತ್ವಕ್ಕೆ ಬಂದು ಇಷ್ಟು ದಿನವಾದರೂ ಕೃಷಿ ಸಚಿವರು ಯಾರು ಎಂದು ಪತ್ತೆ ಇಲ್ಲ. ಅವರ ನೇಮಕ ಆಗಿಲ್ಲ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಎಲ್ಲಾ ಖಾತೆ ಬದಿಗಿಟ್ಟು ರಿಯಲ್ ಎಸ್ಟೇಟ್ ಖಾತೆ ಸಚಿವರು ಎಂದು ಹೇಳಿಕೊಳ್ಳಲಿ. ಆಗ ನೀವು ನ್ಯಾಯ ಕೊಡಬಹುದು. ಲಜ್ಜೆಗೆಟ್ಟ ರಾಜ್ಯದ ಮುಖ್ಯಮಂತ್ರಿಗಳು ರೈತರನ್ನು ರಕ್ಷಿಸುವ ಬದಲು ರಿಯಲ್ ಎಸ್ಟೇಟ್ ಮಾಫಿಯಾ ಮಾಡ್ತ ಇದ್ದಾರೆ ಎಂದು ಹೇಳಿದರು.
ಎಲ್ಲಿದ್ದಾರೆ ರಾಹುಲ್ ಗಾಂಧಿ...
ರೈತರ ಹಿತ ರಕ್ಷಿಸುತ್ತೇನೆ ಎಂದು ಹೇಳಿಕೊಂಡು ಭಾರತ್ ಜೋಡೊ ಯಾತ್ರೆ ಮಾಡಿದ ರಾಹುಲ್ ಗಾಂಧಿ ಅವರು ನಾಪತ್ತೆಯಾಗಿದ್ದಾರೆ. ರಾಹುಲ್ ಗಾಂಧಿ ಅವರ ಪರಮಾಪ್ತ ಡಿ ಕೆ ಶಿವಕುಮಾರ್ ಅವರ ಸರ್ಕಾರವೇ ಇಲ್ಲಿದೆ. ರೈತರ ಬದುಕಿಗೆ ಬೆಂಕಿ ಇಡುವ ಬದಲು ಅವರನ್ನು ಉಳಿಸುವ ಮಹತ್ವದ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ನೆನಪಿಸಿದರು.
ಟೌನ್‍ಶಿಪ್‍ನಿಂದ ಸರ್ಕಾರ ಹಿಂದೆ ಸರಿಯಲಿ...
ಬಿಡದಿ ಟೌನ್ ಶಿಪ್‍ನಿಂದ ಸರ್ಕಾರ ಹಿಂದೆ ಸರಿಯಲೇ ಬೇಕು. ರೈತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಬೇಕು. ಕಾಂಗ್ರೆಸ್ ಹೈಕಮಾಂಡ್ ಸರ್ಕಾರದ ಜೊತೆ ಕೈ ಜೋಡಿಸುವುದನ್ನು ಬಿಡಲಿ. ರೈತರಿಗೆ ನ್ಯಾಯ ಸಿಗುವವರೆಗೆ ಬಿಜೆಪಿ ವಿರಮಿಸುವುದಿಲ್ಲ. ಸದನದ ಹೊರಗೆ ಮತ್ತು ಒಳಗೆ ಹೋರಾಟ ಮಾಡೇ ಮಾಡ್ತೇವೆ. ಜಯ ಸಿಗುವವರೆಗೆ ಹೋರಾಟ ನಡೆದೇ ನಡೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ರೈತಪರ ಹೋರಾಟಗಾರ ಬಿ.ಎಸ್.ಯಡಿಯೂರಪ್ಪ, ಕೋರ್ ಕಮಿಟಿ ಸದಸ್ಯರು, ಕೇಂದ್ರ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಕೇಂದ್ರದ ಮಾಜಿ ಸಚಿವರು, ಮಾಜಿ ಸಂಸದರು, ರಾಜ್ಯದ ಮಾಜಿ ಸಚಿವರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಬಿಡದಿ ಸ್ಯಾಟಲೈಟ್ ಟೌನ್‌ಶಿಪ್ ನೆಪದಲ್ಲಿ ರೈತರ ಜಮೀನು ಲೂಟಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ರಣಕಹಳೆ ಊದಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ
ಬೆಂಗಳೂರು:"ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಬಿಡದಿ ಭಾಗದಲ್ಲಿ ಸ್ಯಾಟಲೈಟ್ ಟೌನ್‌ಶಿಪ್ ಹೆಸರಿನಲ್ಲಿ ರೈತರ ಫಲವತ್ತಾದ ಜಮೀನುಗಳನ್ನು ಬಲವಂತವಾಗಿ ಕಸಿದುಕೊಳ್ಳುತ್ತಿದ್ದು, ಹೈಕಮಾಂಡ್ ಹೊಟ್ಟೆ ತುಂಬಿಸಲು ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದ್ದಾರೆ," ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಡದಿ ಭಾಗದ ರೈತರ ಪರವಾಗಿ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ರೈತರ ಜಮೀನು ಕಸಿಯುವ ಕಾಂಗ್ರೆಸ್‌ನ ಹುಚ್ಚಾಟಿಕೆ ಮತ್ತು ದ್ವಂದ್ವ ನೀತಿ
ರಾಜ್ಯದ ಕಾಂಗ್ರೆಸ್ ಸರ್ಕಾರ ಬಿಡದಿ ಭಾಗದಲ್ಲಿ ರೈತರ ಜಮೀನುಗಳನ್ನು ಒತ್ತಾಯಪೂರ್ವಕವಾಗಿ ಹಾಗೂ ಬಲವಂತವಾಗಿ ಕಸಿದುಕೊಳ್ಳುವ ಮೂಲಕ ಹುಚ್ಚಾಟಿಕೆ ನಡೆಸುತ್ತಿದೆ. ಈ ನಾಡಿಗೆ ಅನ್ನ ನೀಡುವ ರೈತರ ಹಿತ ಕಾಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೃಷಿ ಚಟುವಟಿಕೆಯನ್ನೇ ನೆಚ್ಚಿಕೊಂಡಿರುವ ಬಡ ರೈತ ಕುಟುಂಬಗಳ ನಾಲ್ಕೈದು ಎಕರೆ ಜಮೀನನ್ನು ಕಿತ್ತುಕೊಂಡು ಅವರನ್ನು ಬೀದಿಗೆ ತಳ್ಳಲಾಗುತ್ತಿದೆ. ಆದರೆ, ಇದೇ ಕಾಂಗ್ರೆಸ್ ನಾಯಕರು ಹಾಗೂ ಶಾಸಕರು ಬಿಡದಿ ಭಾಗದಲ್ಲಿ ನೂರಾರು, ಸಾವಿರಾರು ಎಕರೆ ಜಮೀನು ಹೊಂದಲು ಯಾವುದೇ ಅಡ್ಡಿಯಿಲ್ಲದಿರುವುದು ಇವರ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ.
ಉತ್ತರ ಕರ್ನಾಟಕದ ರೈತರ ಸಂಕಷ್ಟ ಕಡೆಗಣಿಸಿ ರಿಯಲ್ ಎಸ್ಟೇಟ್ ದಂಧೆಗೆ ಆದ್ಯತೆ
ಮುಖ್ಯಮಂತ್ರಿಗಳಿಗೆ ಉತ್ತರ ಕರ್ನಾಟಕದ ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಅಥವಾ ಅವರ ಸಂಕಷ್ಟಗಳಿಗೆ ಸ್ಪಂದಿಸಲು ಪುರುಸೊತ್ತಿಲ್ಲ. ಆದರೆ ಬಿಡದಿ ಟೌನ್‌ಶಿಪ್ ಮತ್ತು ಕನಕಪುರ ಏರ್‌ಪೋರ್ಟ್‌ನಂತಹ ರಿಯಲ್ ಎಸ್ಟೇಟ್ ಆಧಾರಿತ ಯೋಜನೆಗಳ ಮೇಲೆ ಮಾತ್ರ ತೀವ್ರ ಆಸಕ್ತಿ ವಹಿಸುತ್ತಿದ್ದಾರೆ. ಡಿ. ಕೆ. ಶಿವಕುಮಾರ್ ಅವರು "ನನ್ನನ್ನು ಮುಖ್ಯಮಂತ್ರಿ ಮಾಡಿದರೆ ಬಿಡದಿ ಟೌನ್‌ಶಿಪ್ ಮಾಡುತ್ತೇನೆ ಮತ್ತು ಡಿಎಲ್‌ಎಫ್ (DLF) ಸಂಸ್ಥೆಗೆ ಅವಕಾಶ ಮಾಡಿಕೊಡುತ್ತೇನೆ" ಎಂದು ಕಾಂಗ್ರೆಸ್ ಹೈಕಮಾಂಡ್ ನಾಯಕಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಇವತ್ತು ರೈತರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ.
ರೈತ ಕುಟುಂಬಗಳ ಮೇಲೆ ಗುಂಡಾಗಿರಿ ಮತ್ತು ಸರ್ಕಾರದ ದರ್ಪ
ಜಮೀನು ನೀಡಲು ಒಪ್ಪದ ಅಮಾಯಕ ರೈತ ಕುಟುಂಬಗಳ ಮನೆಗೆ ರಾತ್ರೋರಾತ್ರಿ ಗುಂಡಾಗಳನ್ನು ಕಳುಹಿಸಿ, "ನಿಮಗೆ ಉಳಿಗಾಲವಿಲ್ಲ" ಎಂದು ಪ್ರಾಣ ಬೆದರಿಕೆ ಹಾಕಲಾಗುತ್ತಿದೆ. ಒಂದೆಡೆ ರೈತರಿಂದ ಬಲವಂತವಾಗಿ ಜಮೀನು ಕಸಿದುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡುತ್ತಾ, ಮತ್ತೊಂದೆಡೆ ತಮಗಾಗಿ ಹೋರಾಡುತ್ತಿರುವ ರೈತರ ಮೇಲೆಯೇ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರನ್ನು ಜೈಲಿಗಟ್ಟುವ ಕುತಂತ್ರವನ್ನು ಸರ್ಕಾರ ಮಾಡುತ್ತಿದೆ. ಅಧಿಕಾರದ ಮದ ಮತ್ತು ದರ್ಪದಿಂದ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಯತ್ನಿಸುತ್ತಿದೆ.
ಅಸ್ತಿತ್ವದಲ್ಲೂ ಇಲ್ಲದ ಕೃಷಿ ಸಚಿವರು
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಇಷ್ಟು ತಿಂಗಳುಗಳಾದರೂ ರಾಜ್ಯಕ್ಕೆ ಒಬ್ಬ ಸಮರ್ಥ ಕೃಷಿ ಸಚಿವರು ಯಾರೆಂದೇ ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿರುವ ಮುಖ್ಯಮಂತ್ರಿಗಳು ತಮ್ಮ ಕೃಷಿ ಇಲಾಖೆಯನ್ನು ಸಂಪೂರ್ಣ ಬದಿಗಿಟ್ಟು, ತಮ್ಮ ಇಲಾಖೆಯ ಹೆಸರನ್ನು 'ರಿಯಲ್ ಎಸ್ಟೇಟ್ ಕಾಂಗ್ರೆಸ್ ಇಲಾಖೆ' ಎಂದು ಬದಲಾಯಿಸಿಕೊಂಡರೆ ಮಾತ್ರ ಇಲಾಖೆಗೆ ನ್ಯಾಯ ಒದಗಿಸಲು ಸಾಧ್ಯ ಎಂದು ವಿಜಯೇಂದ್ರ ಅವರು ತೀಕ್ಷ್ಣವಾಗಿ ಲೇವಡಿ ಮಾಡಿದ್ದಾರೆ.
ರಾಹುಲ್ ಗಾಂಧಿ ಅವರ ಮೌನಕ್ಕೆ ತೀವ್ರ ಪ್ರಶ್ನೆ
ದೇಶಾದ್ಯಂತ 'ಭಾರತ್ ಜೋಡೋ' ಯಾತ್ರೆ ನಡೆಸಿ ರೈತರ ರಕ್ಷಣೆ ಮಾಡುತ್ತೇನೆ ಎಂದಿದ್ದ ರಾಹುಲ್ ಗಾಂಧಿ ಅವರು ಕರ್ನಾಟಕದ ರೈತರ ಮೇಲಾಗುತ್ತಿರುವ ಇಷ್ಟೊಂದು ದೊಡ್ಡ ದೌರ್ಜನ್ಯದ ವಿರುದ್ಧ ಇವತ್ತು ಸಂಪೂರ್ಣ ಮೌನ ವಹಿಸಿ ನಾಪತ್ತೆಯಾಗಿದ್ದಾರೆ. ರಾಹುಲ್ ಗಾಂಧಿ ಅವರು ತಕ್ಷಣವೇ ತಮ್ಮ ಪರಮಾಪ್ತ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿ ರೈತರ ಮೇಲಿನ ಮೊಕದ್ದಮೆಗಳನ್ನು ಕೈಬಿಡಬೇಕು ಹಾಗೂ ಬಿಡದಿ ಟೌನ್‌ಶಿಪ್ ಯೋಜನೆಯಿಂದ ಸರ್ಕಾರ ಹಿಂದೆ ಸರಿಯುವಂತೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಅಂತಿಮ ಎಚ್ಚರಿಕೆ
ನ್ಯಾಯ ಸಿಗುವವರೆಗೂ ನಿರಂತರ ಹೋರಾಟ
ರೈತರ ಶಾಪಕ್ಕೆ ಒಳಗಾದ ಯಾವುದೇ ಸರ್ಕಾರಗಳು ಇತಿಹಾಸದಲ್ಲಿ ಬದುಕುಳಿದಿಲ್ಲ. ಬಿಡದಿ ಭಾಗದ ರೈತರಿಗೆ ನ್ಯಾಯ ಸಿಗುವವರೆಗೂ ಭಾರತೀಯ ಜನತಾ ಪಾರ್ಟಿ ವಿಶ್ರಮಿಸುವುದಿಲ್ಲ. ರೈತ ನಾಯಕ ಬಿ. ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ಇಡೀ ಬಿಜೆಪಿ ಒಗ್ಗಟ್ಟಾಗಿ ನಿಂತಿದ್ದು, ಸದನದ ಒಳಗೂ ಮತ್ತು ಹೊರಗೂ ಸರ್ಕಾರದ ವಿರುದ್ಧ ನಿರಂತರವಾಗಿ ಈ ಹೋರಾಟ ಮುಂದುವರಿಯಲಿದೆ ಎಂದು ಬಿ. ವೈ. ವಿಜಯೇಂದ್ರ ಅವರು ಸರ್ಕಾರಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಬಿಡದಿ ಟೌನ್‍ಶಿಪ್ ಬೇಡ- ಶೋಭಾ ಕರಂದ್ಲಾಜೆ
ಬೆಂಗಳೂರು: ಬಿಡದಿ ಟೌನ್‍ಶಿಪ್ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ ಅವರು ಎಚ್ಚರಿಸಿದ್ದಾರೆ.
ಈ ಯೋಜನೆಯ ವಿರುದ್ಧ ನಗರದಲ್ಲಿ ಇಂದು ಬಿಜೆಪಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈಗಾಗಲೇ ರಾಜ್ಯದ ರೈತರು ಬರಗಾಲದಿಂದ ಪರಿತಪಿಸುವ ಸ್ಥಿತಿ ಇದೆ. ಇನ್ನೊಂದೆಡೆ ಹೈನುಗಾರಿಕೆ, ರೇಷ್ಮೆ, ಮಾವು, ರಾಗಿಗೆ ಹೆಸರಾದ ಬಿಡದಿ ಪ್ರದೇಶವನ್ನು ಕಿತ್ತುಕೊಳ್ಳಲು ಸರಕಾರ ಹೊರಟಿದೆ. ಇದರ ವಿರುದ್ಧವಾಗಿ ನಾವಿದ್ದೇವೆ ಎಂದು ತಿಳಿಸಿದರು.
ಈ ಯೋಜನೆಗೆ ಅವಕಾಶ ಕೊಡುವುದಿಲ್ಲ ಎಂದರು. ಇದು ಲ್ಯಾಂಡ್ ಮಾಫಿಯ ಸರಕಾರ ಎಂದು ಟೀಕಿಸಿದರು. ಈ ಸರಕಾರ ಇಡೀ ಬೆಂಗಳೂರನ್ನು ಕಿತ್ತುಕೊಳ್ಳಲು ಮುಂದಾದೀತು ಎಂದು ತಿಳಿಸಿದರು. ಇದರ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿದರು.





Comments
Leave a Comment