PRABHAVAA.COM

ಬಿಡದಿ ಟೌನ್ ಶಿಪ್: ಬಲವಂತವಾಗಿ ಒಬ್ಬೇ ಒಬ್ಬರ ಜಮೀನನ್ನೂ ಪಡೆದುಕೊಳ್ಳುವುದಿಲ್ಲ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಚಿತ ನುಡಿ

Bengaluru Urban:

Font size:

ಅಪಾರ್ಟ್ ಮೆಂಟ್ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ ಡಿ ಕೆ ಶಿವಕುಮಾರ್ /

ಬಿಡದಿ ಟೌನ್ ಶಿಪ್: ಬಲವಂತವಾಗಿ ಒಬ್ಬೇ ಒಬ್ಬರ ಜಮೀನನ್ನೂ ಪಡೆದುಕೊಳ್ಳುವುದಿಲ್ಲ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಖಚಿತ ನುಡಿ

ಜಮೀನು ಕೊಡಲು ಇಷ್ಟವಿಲ್ಲದವರು ಕೃಷಿ ಮುಂದುವರೆಸಬಹುದು

ಇಷ್ಟವಿದ್ದವರು ಸರ್ಕಾರಕ್ಕೆ ಜಮೀನು ಕೊಡಬಹುದು

ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗ ಬಿಡದಿ ಟೌನ್ ಶಿಪ್ ಗಾಗಿ ಮಾಡಿದ್ದೆಲ್ಲವನ್ನೂ ದಾಖಲೆ ಸಮೇತ ಮುಂದಿಟ್ಟ ಮುಖ್ಯಮಂತ್ರಿಗಳು

ನಾನು ಮುಖ್ಯಮಂತ್ರಿ ಆಗಿದ್ದನ್ನು ಸಹಿಸಲಾಗದೆ ನನ್ನಣ್ಣ ಹೆಚ್.ಡಿ.ಕುಮಾರಸ್ವಾಮಿ ಅವರು ಎಚ್ಚರಗೊಂಡಿದ್ದಾರೆ

•ಬಿಡದಿ ಟೌನ್ ಶಿಪ್‌ ಅನುಷ್ಠಾನ ಬಗ್ಗೆ ಪರಿಶೀಲಿಸಲು ಒಂದು ಸಮಿತಿಯನ್ನು ರಚನೆ: ಸಮಿತಿಯ ವರದಿಯ ಆಧಾರದಲ್ಲಿ ಯೋಜನೆಯ ಬಗ್ಗೆ ಮುಂದಿನ ತೀರ್ಮಾನ*

ಬೆಂಗಳೂರು ಜು 15: ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ, ರೈತ ತಾಯಂದಿರ ಜಮೀನನ್ನೂ ಪಡೆದುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಖಚಿತವಾಗಿ ನುಡಿದರು.

ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳ ಸಮೇತ ಸತ್ಯ ಸಂಗತಿಗಳನ್ನು ವಿವರಿಸಿದರು.

ಜಮೀನು ಕೊಡಲು ಇಷ್ಟವಿಲ್ಲದವರು ಕೃಷಿ ಮುಂದುವರೆಸಬಹುದು. ಇಷ್ಟವಿದ್ದವರು ಸರ್ಕಾರಕ್ಕೆ ಜಮೀನು ಕೊಡಬಹುದು. ಆದರೆ, ಬಲವಂತವಾಗಿ ಒಂದು ಗುಂಟೆ ಜಮೀನನ್ನೂ ಪಡೆದುಕೊಳ್ಳುವುದಿಲ್ಲ ಎಂದರು.

ಸುದ್ದಿಗೋಷ್ಟಿಯ ಇತರೆ ಹೈಲೈಟ್ಸ್ ಗಳು...

•ನಿನ್ನೆ ಬಿಡದಿಯಲ್ಲಿ ನಡೆದ ಘಟನೆ ಮನಸ್ಸಿಗೆ ನೋವಾಗಿದೆ. ರಾಜಕೀಯ ಪ್ರೇರಿತ ಕುಮ್ಮಕ್ಕಿನಿಂದ ಅಧಿಕಾರಿಗಳಿಗೆ ತೊಂದರೆ ನೀಡಿದ್ದಾರೆ. ರೈತರನ್ನು ತಪ್ಪು ದಾರಿಗೆ ಎಳೆಯುವ ಸಂಚು ನಡೆಯುತ್ತಿದೆ. ಎಲ್ಲರ ಮನಸ್ಸಿಗೆ ನೋವುಂಟು ಮಾಡುವುದು ನನಗೆ ಇಷ್ಟವಿಲ್ಲ.

*ಈ ಯೋಜನೆ ನನ್ನ ಕನಸಿನ ಪ್ರಾಜೆಕ್ಟ್ ಅಲ್ಲ. ಇದು ನನ್ನ ಕನಸಿನ ಯೋಜನೆ ಎಂದು ಯಾವತ್ತೂ ಹೇಳಿಲ್ಲ. ನಾನು ಅದಕ್ಕೆ ಶಂಕುಸ್ಥಾಪನೆ ಸಹ ನೆರವೇರಿಸಿಲ್ಲ. ಈ ಯೋಜನೆಯ ಪಿತಾಮಹ ಆಗಲು ಸಹ ನನಗೆ ಇಷ್ಟವಿಲ್ಲ. ಹಿರಿಯರು ನೀಡಿದ ಮಾರ್ಗದರ್ಶನದ ಪ್ರಕಾರ ಮುನ್ನಡೆಯುವ ಕೆಲಸ ಮಾತ್ರ ಮಾಡುತ್ತಿದ್ದೇನೆ.

*ಹಿಂದಿನ ಯೋಜನೆಯನ್ನು ಮುಂದುವರೆಸಿಕೊಂಡು ಹೋಗಿ ಎಂದು ಹೇಳಿದ್ದೇನೆ.

•ನಾನು ಹುಟ್ಟಾ ರೈತನ ಮಗ. ರೈತನ ಶ್ರಮದ ಬಗ್ಗೆ ನನಗೆ ವೈಯಕ್ತಿಕ ಅನುಭವಿದೆ.

•ನಾನು ಸಿಎಂ ಅಗಿರುವುದು ಕೆಲವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಅವರಿಗೆ ನಿದ್ರೆ ಬರುತ್ತಿಲ್ಲ. ನನ್ನನ್ನು ಜೈಲಿಗೆ ಕಳುಹಿಸಲು ಎಷ್ಟು ವರ್ಷದಿಂದ ಸಂಚು ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ.

*ಡಿಕೆಶಿ ಜೈಲಿಗೆ ಹೋಗುವ ದಿನ ಬಂದೇ ಬರುತ್ತದೆ ಎಂದು ಕುಮಾರಣ್ಣ ಅವರು ಇಂದೂ ಹೇಳಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ನನಗೆ ಜೈಲು ಹೊಸದೇನಲ್ಲ.

•ಬೆಂಗಳೂರಿನ ಸುತ್ತಮುತ್ತಲು ಹಲವಾರು ಸಾವಿರ ಎಕ್ರೆ ಜಮೀನು ಹಲವು ಯೋಜನೆಗಳಿಗೆ ಸ್ವಾಧೀನ ಆಗಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಸಾವಿರಾರು ಎಕ್ರೆ ಸ್ವಾಧೀನ ಮಾಡಲಾಗಿದೆ. ಇಂದು ಸುತ್ತಮುತ್ತಲಿನ ಜಮೀನಿನ ಬೆಲೆ ಏನೆಂದು ಎಲ್ಲರಿಗೂ ಗೊತ್ತು.

•23-09-2006 ರಂದು ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಐದು ಉಪನಗರಗಳ ಸಮಗ್ರ ಅಭಿವೃದ್ಧಿಗೆ ಯೋಜನೆಗೆ ತೀರ್ಮಾನಿಸಿದ್ದರು. ಅಲ್ಲಿಂದ ಇದು ಆರಂಭವಾಗಿದೆ. ಇದನ್ನು ಬಳಿಕ ಬಿಎಂಆರ್ಡಿ ಯಿಂದ ಪಿಪಿಪಿ ಮಾದರಿಯಲ್ಲಿ ಸಮಗ್ರ ಉಪ ನಗರ ಅಭಿವೃದ್ಧಿ ಪಡಿಸಲು ಅಧಿಕೃತ ಪಾಲುದಾರರನ್ನು ಗುರುತಿಸಲು ಜಾಗತಿಕ ಟೆಂಡರ್ ಕರೆಯಲು ತೀರ್ಮಾನ ಕೈಗೊಂಡಿದ್ದರು.

*ಅಶೋಕ್ ಅವರು ಸಹ ಅಂದು ಸಚಿವ ಸಂಪುಟದಲ್ಲಿದ್ದರು. 2007ರಲ್ಲಿ ಮತ್ತೆ ಹೆಚ್ಚುವರಿಯಾಗಿ ಮಾರಂಡಹಳ್ಳಿ, ಒಡೆಯರಳ್ಳಿ ಸೇರಿದಂತೆ ಹೊಸದಾಗಿ ಗ್ರಾಮಗಳನ್ನು ಟೌನ್ಶಿಪ್ ನಲ್ಲಿ ಸೇರಿಸಲು ನಿರ್ಧರಿಸಿದ್ದರು.

*ದಿನಾಂಕ 20-11-2006 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಎಲ್ಲಾ ಖಾಸಗಿ ಜಮೀನಿನಲ್ಲಿ , ಯಾವುದೇ ಪ್ರಾಧಿಕಾರವಾಗಲಿ, ವ್ಯಕ್ತಿಯಾಗಲಿ, ಬಿಡಿಎ ವತಿಯಿಂದ ಪೂರ್ವಾನುಮತಿ ಪಡೆಯದೆ ಅಭಿವೃದ್ಧಿಗೆ ಅನುಮತಿ ನೀಡತಕ್ಕದಲ್ಲ ಎಂದು ಗೆಜೆಟ್ ನೋಟಿಫಿಕೇಶನ್ ಹೊರಡಿಸಿ ರೆಡ್ ಝೋನ್ ಎಂದು ಗುರುತಿಸಿದ್ದರು ಎಂದು ದಾಖಲೆಗಳನ್ನು ತೋರಿಸಿದರು.

•ಇಷ್ಟು ಮಾತ್ರವಲ್ಲದೆ, ಗ್ರಾಮಠಾಣಾದಲ್ಲಿರುವ ಆಸ್ತಿ, ಮನೆಗಳು ಸೇರಿದಂತೆ ಒಕ್ಕಲೆಬ್ಬಿಸಲು, ಪರಿಹಾರ ಮೊತ್ತ ಘೋಷಿಸಿ ಆದೇಶ ಹೊರಡಿಸಿದ್ದರು. ಖಾಸಗಿ ಡೆವಲಪರ್ ಡಿಎಲ್ಎಫ್ ಗೆ ಪತ್ರ ಬರೆದು ರೂ. 400 ಕೋಟಿ ಸೆಕ್ಯುರಿಟಿ ಡೆಪಾಸಿಟಿ ದುಡ್ಡು ಕಟ್ಟಿಸಿಕೊಂಡು ರಿಯಲ್ ಎಸ್ಟೇಟ್ಗೆ ಅವಕಾಶ ಕೊಟ್ಟಿದ್ದರು.

*ಈಗ ಹೇಳಿ ಕುಮಾರಣ್ಣಾ, ರಿಯಲ್ ಎಸ್ಟೇಟ್ ದಂಧೆ ಯಾರು ಮಾಡಿದ್ದು, ನಾನು ಮಾಡಿದ್ದಾ? ಎಂದು ಸಿಎಂ ಪ್ರಶ್ನಿಸಿದರು.

• 2010 ರಲ್ಲಿ ಯಡಿಯೂರಪ್ಪ ಅವರು ಸಮಗ್ರವಾದ ಉಪನಗರ ಯೋಜನೆ ಮುಂದುವರೆಸಲು ಎರಡನೇ ಬಾರಿ ಜಾಗತಿಕ ಟೆಂಡರ್ ಕರೆದು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಕ್ಕೆ ಮುಂದಾದರು. ಆಗ ಸಹ ಅಶೋಕ್ ಅವರು ಸಚಿವರಾಗಿದ್ದರು.

•ರೈತರ ಆಸ್ತಿಯನ್ನು ಕಬಳಿಸಲು ನೀವು ನಡೆಸಿರುವ ಸಂಚನ್ನು ಎಷ್ಟು ದಿನ ಮುಚ್ಚಿಕೊಳ್ಳಲು ನಿಮಗೆ ಸಾಧ್ಯವಿದೆ?

•ರೈತ ಮಹಿಳೆಯರ ಬದುಕನ್ನು ಕಸಿದುಕೊಳ್ಳುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಿಲ್ಲ. ಬಲವಂತವಾಗಿ ನಿಮ್ಮ ಜಮೀನು ತೆಗೆದುಕೊಳ್ಳುವ ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ. ಇದರಲ್ಲಿ ಯಾರಿಗೂ ಬಲವಂತವಿಲ್ಲ. ಇಷ್ಟವಿದ್ದರೆ ರೈತರು ಪರಿಹಾರ ಪಡೆದು ತಮ್ಮ ಜಮೀನು ನೀಡಬಹುದಾಗಿದೆ.

*ಕುಮಾರಸ್ವಾಮಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರಾರಂಭಿಸಿದ್ದ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಅಷ್ಟೆ.

•ಬಿಡದಿ ಟೌನ್ ಶಿಪ್‌ ಅನುಷ್ಠಾನ ಬಗ್ಗೆ ಪರಿಶೀಲಿಸಲು ಒಂದು ಸಮಿತಿಯನ್ನು ರಚಿಸುವ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಈ ಸಮಿತಿಯ ವರದಿಯ ಆಧಾರದಲ್ಲಿ ಯೋಜನೆಯ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.

•ಸಚಿವರಾದ ಎಂ.ಬಿ.ಪಾಟೀಲ್, ಶಾಸಕ ಬಾಲಕೃಷ್ಣ, ರಾಜಕೀಯ ಸಲಹೆಗಾರ ಜಿ.ಸಿ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

0000000000000000

ಆಗಸ್ಟ್ 6 ರವರೆಗೆ ಸಲಹೆ ಸೂಚನೆಗಳನ್ನು ‌ನೀಡಲು ಅವಕಾಶ

ನನ್ನ ಹೆಸರನ್ನೇ ನೋಟಿಸ್ ಬೋರ್ಡ್ ನಲ್ಲಿ ಹಾಕಿದ್ದರು

ಎಸ್ ಟಿಪಿ, ಕುಡಿಯುವ ನೀರಿನ ಬಗ್ಗೆ ಗಮನ ಹರಿಸಿ

ಹೈ ರೈಸ್ ಕಟ್ಟಡಗಳ ನಿರ್ಮಾಣಕ್ಕೆ ಒತ್ತು

ಬೆಂಗಳೂರು ಭಾರತದ ಹೃದಯ

ಬೆಂಗಳೂರು, ಜು.15:

"ಅಪಾರ್ಟ್ ಮೆಂಟ್ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಸಮಸ್ಯೆಗಳ ಮುಕ್ತಿಗೆ ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ. ಏಕಪಕ್ಷೀಯ ನಿರ್ಧಾರ ನಮ್ಮ ಧೋರಣೆಯಲ್ಲ. ಆಸ್ತಿಯನ್ನು ನೀವು ಕೊಂಡುಕೊಂಡ ಮೇಲೆ ನೀವೇ ಅದರ ಮಾಲೀಕರು. ಈ ವಿಚಾರದಲ್ಲಿ ಅನುಮಾನವಿಲ್ಲ‌" ಎಂದು ಸಿಎಂ‌ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) 2026 ಕುರಿತು ಅಪಾರ್ಟ್ ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ನೆಹರು ತಾರಾಲಯ ಸಭಾಂಗಣದಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

"ಆಗಸ್ಟ್ 6 ರವರೆಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು, ಸಲಹೆಗಳನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ನನಗೆ ಬರೆಯಬಹುದು. ಇದನ್ನು ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಆಸ್ತಿ ಕೊಂಡವರಿಗೆ ಅನುಕೂಲವಾಗುವಂತೆ ಈ ವಿಧೇಯಕವನ್ನು ಜಾರಿಗೆ ತರಲಾಗುತ್ತಿದೆ. ಎಲ್ಲಾ ಪಕ್ಷದ ನಾಯಕರಿಗೂ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ನೀಡಲಾಗಿದೆ. ಶಾಸಕರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ಏಕಪಕ್ಷೀಯವಾಗಿ ನಾನು ನಿರ್ಧಾರ ಮಾಡಲು ಸಾಧ್ಯವಿಲ್ಲ" ಎಂದರು.

"ನಿಮ್ಮ ಯಾವುದೇ ಸಲಹೆ ಸೂಚನೆಗಳಿದ್ದರೂ ನನಗೆ ಹಾಗೂ ಕೃಷ್ಣ ಬೈರೇಗೌಡರಿಗೆ ನೀಡಿ. ನನ್ನ ಮೊಬೈಲ್ ಸಂಖ್ಯೆ ನೀಡಲು ತಿಳಿಸುತ್ತೇನೆ. ಅದಕ್ಕೆ ನಿಮ್ಮ ಸಲಹೆಗಳನ್ನು ಕಳುಹಿಸಬಹುದು. ಜೊತೆಗೆ ಡೆವಲಪರ್ ಗಳನ್ನು ಕರೆಸಿ ಅವರ ಜೊತೆಯೂ ಮಾತನಾಡಿ ಕಾನೂನು ಏನಿದೆ ಎಂದು ಮನವರಿಕೆ ಮಾಡಲಾಗುವುದು" ಎಂದರು.

"ಬೆಂಗಳೂರಿನಲ್ಲಿ 40 ಲಕ್ಷ ಆಸ್ತಿಗಳಿದ್ದು ಈಗಾಗಲೇ 26 ಲಕ್ಷ ಆಸ್ತಿಗಳಿಗೆ ಖಾತೆ ನೀಡಲಾಗಿದೆ. ಒಂದಷ್ಟು ಜನ ಕಾನೂನುಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಮೂರು ಮಹಡಿಗಳಿಗೆ ಅನುಮತಿ ಪಡೆದು ಐದು ಮಹಡಿಗಳನ್ನು ನಿರ್ಮಾಣ‌ ಮಾಡಿದ್ದಾರೆ. ಹೆಚ್ಚಿನವರು ಪ್ರಾಮಾಣಿಕರಿದ್ದು ಅವರು ಕಾನೂನಿನ ಅಡಿ ಕೆಲಸ ಮಾಡಿದ್ದಾರೆ" ಎಂದರು.

"ದೊಡ್ಡ, ದೊಡ್ದ ಬಿಲ್ಡರ್ ಗಳ ವಿಚಾರಕ್ಕಿಂತ ಸಣ್ಣ ಪುಟ್ಟ ಬಿಲ್ಡರ್ ಗಳು 60/80 ಅಥವಾ ಕಂದಾಯ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡಿ ಕಾನೂನು ಮುರಿಯುತ್ತಾರೆ. ಅದರ ಗುಣಮಟ್ಟ ಕೂಡ ಸರಿಯಾಗಿರುವುದಿಲ್ಲ" ಎಂದರು.

ನನ್ನ ಹೆಸರನ್ನೇ ನೋಟಿಸ್ ಬೋರ್ಡ್ ನಲ್ಲಿ ಹಾಕಿದ್ದರು

"ಒಮ್ಮೆ ಅಪಾರ್ಟ್ ಮೆಂಟ್ ನಿವಾಸಿಗಳಾದ ಮೇಲೆ ಒಪ್ಪಂದ ಮಾಡಿಕೊಳ್ಳುವಾಗಲೇ ಒಂದು ರೀತಿ, ನೋಂದಣಿ ಮಾಡಿಕೊಳ್ಳುವಾಗಲೇ ಇನ್ನೊಂದು ರೀತಿ, ಮನೆ ಸಿಕ್ಕ ಮೇಲೆಯೇ ಮತ್ತೊಂದು ರೀತಿಯಾಗಿ ಬದಲಾವಣೆ ಆಗುವುದು ನೋಡಿ ನನಗೆ ಬೇಸರವಾಗಿದೆ. ಅಪಾರ್‌ಮೆಂಟ್ ಅಸೋಸಿಯೇಷನ್ ಅಲ್ಲಿ ಒಂದಿಬ್ಬರು ತಕರಾರು ಗಿರಾಕಿಗಳು ಸೇರಿಕೊಂಡು ತೊಂದರೆ ತೊಡಕುಗಳನ್ನು ನೀಡುವುದೇ ಅವರ ಕೆಲಸವಾಗುತ್ತದೆ. ಉದಾಹರಣೆಗೆ ನನ್ನ ಅಪಾರ್ಟ್ ಮೆಂಟ್ ಅಲ್ಲಿ ನನ್ನ ಹೆಸರಿಗೆ ನೋಂದಣಿ ಮಾಡಿಕೊಳ್ಳುವ ಮೊದಲೇ ನನ್ನ ಹೆಸರನ್ನೇ ನೋಟಿಸ್ ಬೋರ್ಡ್ ಅಲ್ಲಿ ಹಾಕಿದ್ದರು. ಬೆನ್ನಿಗಾನಹಳ್ಳಿಯಲ್ಲೂ ಇದೇ ರೀತಿ ನನಗೆ ಮಾಡಿದ್ದರು. ಒಳಗೆ ನನ್ನನ್ನ ಬಿಡುವುದಿಲ್ಲ ಎಂದು ಹೇಳಿದ್ದರು. ಇಂತಹ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಗಳು ಇಲ್ಲಿವೆ” ಎಂದರು.

"ಪ್ರೀತಿ, ವಿಶ್ವಾಸ, ನಂಬಿಕೆಯಿಂದ ನಮ್ಮ ಮೇಲಿನ ಅಭಿಮಾನದಿಂದ ಜನರು ಸೇರಿದ್ದಾರೆ. ಕಳೆದ ಬಾರಿ ಒಬ್ಬರು ನನಗೆ ಹೇಳಿದ್ದರು. ನೀವು ಒಂದಷ್ಟು ನಿಯಮಗಳನ್ನು ನೀವು ಮಾಡದೇ ಇದ್ದರೇ ಮುಂದಿನ ಚುನಾವಣೆಯಲ್ಲಿ ನಿಮಗೆ ಬುದ್ದಿ ಕಲಿಸುತ್ತೇವೆ ಎಂದಿದ್ದರು. ಬುದ್ದಿ ಕಲಿಸೋದು ಎಂದರೆ ಏನು? ಜನರಿಗೆ ಸಹಾಯ ಮಾಡಬೇಕು ಎಂದು ಭಗವಂತ ನಮಗೆ ಈ ಅವಕಾಶ ನೀಡಿದ್ದಾನೆ. ನಮ್ಮ ಪಕ್ಷ ಅವಕಾಶ ನೀಡಿದೆ.‌ ಅದಕ್ಕೆ ನಾನು ಎಂದಿಗೂ ನಕಾರಾತ್ಮಕ ಅಂಶಗಳ ಬಗ್ಗೆ ಗಮನವನ್ನೇ ನೀಡುವುದಿಲ್ಲ. ಧನಾತ್ಮಕ ಚಿಂತನೆಗಳೇ ನನ್ನ ಶಕ್ತಿ" ಎಂದರು.

"ಜನರು ಕಷ್ಟಪಟ್ಟು ತಮ್ಮ ಉಳಿತಾಯ ಸೇರಿಸಿ ತಲೆ ಮೇಲೆ ಸೂರು ಮಾಡಿಕೊಂಡಿರುತ್ತಾರೆ. ಜೀವನದಲ್ಲಿ ಎಷ್ಟೋ ಜನಕ್ಕೆ ಈ ಅವಕಾಶ ಸಿಗುವುದಿಲ್ಲ. ಬೇರೆ, ಬೇರೆ ನಗರಗಳಲ್ಲಿ ಇರುವ ಜನ ತಮ್ಮ ಆಸ್ತಿಗಳನ್ನು ಮಾರಿಕೊಂಡು ಬೆಂಗಳೂರಿಗೆ ಬರುತ್ತಿದ್ದಾರೆ. ಅಪಾರ್ಟ್ ಮೆಂಟ್ ನಿವಾಸಿಗಳು ರಾಜಕೀಯವಾಗಿ ಒಂದಷ್ಟು ವಿರೋಧಾಭಾಸ ಉಂಟಾಗಿ ಆಗಾಗ್ಗೆ ಹೆಚ್ಚು‌ ಕಡಿಮೆ ಮಾಡುತ್ತೀರಿ. ಆದರೂ ನಿಮ್ಮ ಬಗ್ಗೆ ನನಗೆ ನಂಬಿಕೆಯಿದೆ. ಜನರ ತೊಂದರೆಗಳನ್ನು ನಿವಾರಿಸಲು ನಾವು ಅಧಿಕಾರಕ್ಕೆ ಬಂದಿದ್ದೇವೆ ಹೊರತು ವೈಯಕ್ತಿಕ ಅಭಿಲಾಷೆಗಳಿಗಾಗಿ ಅಲ್ಲ" ಎಂದು ಹೇಳಿದರು.

"ಕಷ್ಟಪಟ್ಟು ನೀವು ಗಳಿಸಿದ ಆಸ್ತಿ ನಿಮಗೇ ಸೇರಬೇಕು ಎಂದು ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡಿದ್ದೇವೆ. ಒಂದೇ ಒಂದು ರೂಪಾಯಿ ಲಂಚ ಪಡೆಯದೇ ನಿಮ್ಮ ಹಾಗೂ ಆಸ್ತಿಯ ಪೋಟೋ ಸಮೇತ ಇ ಖಾತೆ ನೀಡುವ ಅತ್ಯುತ್ತಮ ಯೋಜನೆಯನ್ನು ನಾವು ನೀಡಿದ್ದೇವೆ. ಇಡೀ ದೇಶದಲ್ಲಿಯೇ ಅತ್ಯುತ್ತಮ ಯೋಜನೆ ಇದಾಗಿದೆ. ದೇಶದ ಯಾವುದೇ ನಗರದಲ್ಲಿ ಇಂತಹ ಯೋಜನೆ ಇದೆಯೇ ಎಂದು ನಿಮ್ಮ ಸ್ನೇಹಿತರನ್ನು ಕೇಳಿನೋಡಿ" ಎಂದರು.

ಎಸ್ ಟಿಪಿ, ಕುಡಿಯುವ ನೀರಿನ ಬಗ್ಗೆ ಗಮನ ಹರಿಸಿ

"ಎಲ್ಲಾ ಅಸೋಸಿಯೇಷನ್ ಗಳು ಎಸ್ ಟಿಪಿ ಬಗ್ಗೆ ಗಮನ ಹರಿಸಬೇಕು. ಅಪಾರ್ಟ್ ಮೆಂಟ್ ಗಲ್ಲಿ STP, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲು ಸರ್ಕಾರ ಸುಧಾರಣೆಗಳನ್ನು ತಂದಿದೆ. ಅಂತರ್ಜಲ ವೃದ್ಧಿ, ಕಾವೇರಿ 5 ನೇ ಹಂತಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ತರಲು ಸಾಕಷ್ಟು ಶ್ರಮವಹಿಸಿದೆ. ಅನೇಕರಿಗೆ ಕಂತುಗಳ ಮೂಲಕ ಹಣ ನೀಡಿ ನೀರಿನ ಸಂಪರ್ಕ ಪಡೆಯಲು ಅವಕಾಶ ನೀಡಲಾಗಿದೆ. ಕೆಲವು ಡೆವಲಪರ್ ಗಳು ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಅವರೊಂದಿಗೂ ಮಾತನಾಡಿ ದಾಖಲಾತಿಗಳ ವರ್ಗಾವಣೆ ಸರಾಗವಾಗಿ ಆಗಬೇಕೆಂದು ಸೂಚಿಸಲಾಗುವುದು. ಸಮಸ್ಯೆಗಳನ್ನು ಆದಷ್ಟು ಶೀಘ್ರವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ" ಎಂದರು.

"ಒಂದಷ್ಟು ಡೆವಲಪರ್ ಗಳು ದಾರಿ ತಪ್ಪಿಸುತ್ತಾರೆ, ಸರಿಯಾದ ದಾಖಲೆ ನೀಡುವುದಿಲ್ಲ. ಇಡೀ ಆಸ್ತಿಯನ್ನು ಅಡವಿಟ್ಟು ಸಾಲ ಮಾಡಿರುತ್ತಾರೆ. ಆಗ ಬ್ಯಾಂಕ್ ನವರು ನಿಮ್ಮ ಸುಪರ್ದಿಗೆ ಮನೆ ಫ್ಲಾಟ್ ನೀಡುವುದಿಲ್ಲ‌" ಎಂದರು.

ಅಧಿಕಾರ ವಿಕೇಂದ್ರೀಕರಣ ನಮ್ಮ ಸರ್ಕಾರದ ಉದ್ದೇಶ

"ಈಸ್ ಆಫ್ ಬಿಸಿನೆಸ್ ಗಾಗಿ ನಗರದಲ್ಲಿ ಐದು ಕಾರ್ಪೊರೇಷನ್ ಗಳನ್ನು ರಚಿಸಲಾಗಿದ್ದು, ವಿಮಾನ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ ಬಳಿ, ಅಕ್ಕಪಕ್ಕದ ಅಪಾರ್ಟ್ ಮೆಂಟ್ ಗಳ ಸಮಸ್ಯೆಗಳನ್ನೂ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಅಧಿಕಾರ ವಿಕೇಂದ್ರೀಕರಣ ನಮ್ಮ ಸರ್ಕಾರದ ಉದ್ದೇಶ. ವ್ಯಾಜ್ಯಗಳಿಗೆ ಹೋಗದೆ ಬಗೆಹರಿಸಿಕೊಳ್ಳಲು ಒತ್ತು ನೀಡಲಾಗುತ್ತಿದೆ ಎಂದರು. ಜನರ ಧ್ವನಿಯೇ ಸರ್ಕಾರದ ಧ್ವನಿಯಾಗಬೇಕು. ಟೀಂ ಕರ್ನಾಟಕವಾಗಿ ನಾವೆಲ್ಲ ಕೆಲಸ ಮಾಡಬೇಕೆಂದು" ಕರೆ ನೀಡಿದರು.

ಬಡವರೂ ಕೂಡ ಮನೆ ಕಟ್ಟಲು ಅಗತ್ಯ ನೆರವಿಗೆ ಸರ್ಕಾರ ಬದ್ಧ

"ಬಡವರೂ ಕೂಡ ಮನೆ ಕಟ್ಟಲು ಅಗತ್ಯ ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ. ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ದಾಖಲಾತಿಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ನಿಮ್ಮ ದನಿಯೇ ಸರ್ಕಾರದ ದನಿ" ಎಂದು ಹೇಳಿದರು.

ಹೈ ರೈಸ್ ಕಟ್ಟಡಗಳ ನಿರ್ಮಾಣಕ್ಕೆ ಒತ್ತು

“ನಗರದಲ್ಲಿ ಹೈ ರೈಸ್ ಕಟ್ಟಡಗಳ ಬಗ್ಗೆ ಗಮನಹರಿಸಿ, ರಸ್ತೆಗಳನ್ನು ವಿಸ್ತರಿಸುವ ಬಗ್ಗೆ ಒತ್ತು ನೀಡಲಾಗುತ್ತಿದೆ . ನಗರದಲ್ಲಿ 132 ಕಿಮೀ ಪೆರಿಫೆರಲ್ ವರ್ತುಲ ರಸ್ತೆ,(ಬೆಂಗಳೂರು ಬ್ಯುಸಿನೆಸ್ ಕಾರಿಡಾರ್) ನಿರ್ಮಾಣವಾಗುತ್ತಿದೆ ಎಂದರು. ದೇಶದ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಭೂ ಸ್ವಾಧೀನಕ್ಕೆ ರಾಜ್ಯದಲ್ಲಿ ರೈತರಿಗೆ ಗರಿಷ್ಠ ಮೊತ್ತದ ಪರಿಹಾರವನ್ನು ನೀಡಲಾಗುತ್ತಿದೆ” ಎಂದು ಹೇಳಿದರು.

"ಕಾನೂನಾತ್ಮಕ ಸಲಹೆಗಳನ್ನು ನೀಡಿ ಅದರಂತೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಪ್ಲೋರ್ ವೈಜ್ ಪ್ರಿಮಿಯಂ ಎಫ್ ಎಆರ್ ನೀಡುವುದನ್ನು ಪ್ರಾರಂಭ ಮಾಡಿದೆ. ಟಿಡಿಆರ್ ಸಹ ನೀಡಲಾಯಿತು. ಯಾರೋ ಒಂದಿಬ್ಬರು ಬೋಗಸ್ ಪ್ರೀಮಿಯಂ ಎಫ್ ಎಆರ್ ಇಟ್ಟುಕೊಂಡು ಇದರ ವಿರುದ್ಧ ನ್ಯಾಯಾಲಯಕ್ಕೆ ತೆರಳಿ ಒಂದು ವರ್ಷ ನಿಲ್ಲಿಸಿಬಿಟ್ಟರು. ಕೆಲವರೆಲ್ಲಾ ಕಟ್ಟಡ ಕಟ್ಟಲು ಅಡಚಣೆ ಉಂಟಾಯಿತು. ಆನಂತರ ನ್ಯಾಯಾಲಯ‌ ಸರ್ಕಾರ ಉತ್ತಮ ಕೆಲಸ ಮಾಡಿದೆ ಎಂದು ನಮ್ಮ ಪರವಾಗಿ ತೀರ್ಪು ನೀಡಿತು‌. ಜೊತೆಗೆ ಅನುಮತಿ ನೀಡಿತು. ದೊಡ್ಡ ರಸ್ತೆ ಇರುವ ಕಡೆ ಎತ್ತರದ ಕಟ್ಟಡ ಕಟ್ಟಬಹುದು. ಸಣ್ಣ ರಸ್ತೆ ಇರುವ ಕಡೆ ಕಟ್ಟಲು ಆಗುವುದಿಲ್ಲ. ಭೂಮಿ ಬೆಲೆ ಕಡಿಮೆ ಆಗಬೇಕು ಎಂಬುದು ನನ್ನ ಆಸೆ" ಎಂದರು.

ಬೆಂಗಳೂರು ಭಾರತದ ಹೃದಯ

“ದಾವೋಸ್ ಗೆ ತೆರಳಿದಾಗ ಎಲ್ಲಾ ಉದ್ಯಮಿಗಳು ನನ್ನನ್ನೇ ಹುಡುಕಿಕೊಂಡು ಬಂದು ಮಾತನಾಡಿಸುತ್ತಿದ್ದರು. ಆಗ ಮಹಾರಾಷ್ಟ್ರದವರು ಏಕೆ ನಿಮ್ಮನ್ನೇ ಹುಡುಕಿಕೊಂಡು ಬರುತ್ತಿದ್ದಾರೆ ಎಂದು ಕೇಳಿದರು. ಆಗ ನಾನು ಬೇರೆ ದೇಶದವರನ್ನು ಏಕೆ ನಮ್ಮ ಬಗ್ಗೆ ನಿಮಗೆ ಆಸಕ್ತಿ ಎಂದು ಕೇಳಿದಾಗ, "ಬೆಂಗಳೂರಲ್ಲಿ 1 ಡಾಲರ್ ವೆಚ್ಚಕ್ಕೆ ಮುಂಬೈನಲ್ಲಿ ಮೂರುವರೆ ಡಾಲರ್ ಗೆ ಸಮ. ಅಷ್ಟು ವೆಚ್ಚ ಹೆಚ್ಚಳವಾಗಿದೆ ಅಲ್ಲಿ. ಬೆಂಗಳೂರಿನಲ್ಲಿ 2 ಕೋಟಿಗೆ ಒಂದು ಮನೆ ದೊರೆಯಲಿದೆ. ಆದೇ ಮುಂಬೈನಲ್ಲಿ 20 ಕೋಟಿ ವೆಚ್ಚ ಮಾಡಬೇಕಿದೆ. ಅದಕ್ಕೆ ಎಲ್ಲರೂ ಬೆಂಗಳೂರನ್ನು ಮೊದಲ ಆಯ್ಕೆಯನ್ನಾಗಿ ನೋಡುತ್ತಿದ್ದಾರೆ. ಅಂತರರಾಷ್ಟ್ರೀಯ ನಾಯಕರೂ ಬೆಂಗಳೂರನ್ನು ಮೆಚ್ಚುತ್ತಿದ್ದಾರೆ. ಇಲ್ಲಿನ ಶಿಕ್ಷಣ ಗುಣಮಟ್ಟವೂ ಚೆನ್ನಾಗಿದೆ" ಎಂದರು.

"ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಮ್ಮ‌‌ ಸರ್ಕಾರ ಮುಂದಾಗಿದೆ. ಅದಕ್ಕೆ ಸೂಕ್ತ ಸ್ಥಳ ಹುಡುಕಲಾಗುತ್ತಿದೆ. ಬೆಂಗಳೂರು ನಿಮ್ಮೆಲ್ಲರ ಹೃದಯದಂತಿದೆ. ಜೊತೆಗೆ ಭಾರತದ ಹೃದಯದಂತೆ ಕೆಲಸ ಮಾಡುತ್ತಿದೆ" ಎಂದು ತಿಳಿಸಿದರು.

Comments

Leave a Comment

Prev Post ಕಂದಾಯ_ಇಲಾಖೆ/ಶಿರಸ್ತೇದಾ‌ರ್/ಉಪತಹಶೀಲ್ದಾ‌ರ್ ವರ್ಗಾವಣೆ
Next Post ಪಿಆರ್‍ಸಿ ವಿರುದ್ಧ ರಾಜ್ಯಪಾಲರಿಗೆ ಮನವಿ: ಆರ್.ಅಶೋಕ್

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News