ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಸುದ್ದಿ: ಸಮತಳ ಮೀಸಲಾತಿ ರೋಸ್ಟರ್ನಲ್ಲಿ ದೊಡ್ಡ ಬದಲಾವಣೆ
LInk for copy ;https://prabhavaa.com/orders/
ಬೆಂಗಳೂರು: ರಾಜ್ಯ ಸರ್ಕಾರಿ ಸೇವೆಗಳ ನೇರ ನೇಮಕಾತಿಗಳಲ್ಲಿ ಸಮತಳ ಮೀಸಲಾತಿ ಜಾರಿಯನ್ನು ಇನ್ನಷ್ಟು ಪಾರದರ್ಶಕ, ವ್ಯವಸ್ಥಿತ ಹಾಗೂ ಕಾನೂನುಬದ್ಧಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಪರಿಷ್ಕೃತ ರೋಸ್ಟರ್ ವ್ಯವಸ್ಥೆಯನ್ನು ಜಾರಿಗೆ ತರುವ ಸಂಬಂಧ ಗೆಜೆಟ್ ಹೊರಡಿಸಿದೆ.
ಮಹಿಳೆಯರು, ಮಾಜಿ ಸೈನಿಕರು, ಅಂಗವಿಕಲರು, ಗ್ರಾಮೀಣ ಅಭ್ಯರ್ಥಿಗಳು, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರು, ತೃತೀಯ ಲಿಂಗಿಗಳು ಹಾಗೂ ಯೋಜನೆಗಳಿಂದ ನಿರ್ವಸಿತರಾದವರಿಗೆ ಈಗಾಗಲೇ ಕಲ್ಪಿಸಲಾಗಿರುವ ಸಮತಳ ಮೀಸಲಾತಿ ವ್ಯವಸ್ಥೆಯ ಜೊತೆಗೆ ಕ್ರೀಡಾ ಸಾಧಕರಿಗೂ ಶೇಕಡಾ 2ರಷ್ಟು ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ 100 ಬಿಂದುಗಳ ರೋಸ್ಟರ್ನ್ನು ಪರಿಷ್ಕರಿಸಲಾಗಿದೆ. ಪ್ರತಿಯೊಂದು ಲಂಬ ಮೀಸಲಾತಿ ವರ್ಗದ ಒಳಗೇ ಸಮತಳ ಮೀಸಲಾತಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವ ಮೂಲಕ ಮೀಸಲಾತಿಯ ನೈಜ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಸರ್ಕಾರ ಕ್ರಮ ಕೈಗೊಂಡಿದ್ದು, ಮುಂದಿನ ಎಲ್ಲ ನೇರ ನೇಮಕಾತಿಗಳಲ್ಲಿ ಇದೇ ಪರಿಷ್ಕೃತ ರೋಸ್ಟರ್ ಅನ್ವಯವಾಗಲಿದೆ. ಈ ನಿರ್ಧಾರದಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ಏಕರೂಪತೆ, ಪಾರದರ್ಶಕತೆ ಮತ್ತು ವಿವಿಧ ಸಾಮಾಜಿಕ ವರ್ಗಗಳ ಪ್ರತಿನಿಧಿತ್ವವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಮೂಡಿದೆ.
ರಾಜ್ಯ ಸಿವಿಲ್ ಸೇವೆಗಳಲ್ಲಿ ನೇರ ನೇಮಕಾತಿಗೆ ಸಂಬಂಧಿಸಿದಂತೆ ಸಮತಳ ಮೀಸಲಾತಿ (Horizontal Reservation) ಜಾರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಕ್ರೀಡಾ ಸಾಧಕರಿಗೆ ಶೇಕಡಾ 2ರಷ್ಟು ಮೀಸಲಾತಿಯನ್ನು ಜಾರಿಗೊಳಿಸುವ ಉದ್ದೇಶದಿಂದ ಈಗಾಗಲೇ ಅಸ್ತಿತ್ವದಲ್ಲಿದ್ದ 100 ಬಿಂದುಗಳ ಸಮತಳ ಮೀಸಲಾತಿ ರೋಸ್ಟರ್ನ್ನು ಪರಿಷ್ಕರಿಸಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1) ವತಿಯಿಂದ ಅಕ್ಟೋಬರ್ 13ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ.
ಸರ್ಕಾರವು 2023ರ ಮಾರ್ಚ್ 8ರಂದು ಹೊರಡಿಸಿದ್ದ ಆದೇಶದಲ್ಲಿ ಮಹಿಳೆಯರು, ಮಾಜಿ ಸೈನಿಕರು, ಅಂಗವಿಕಲರು, ಯೋಜನೆಗಳಿಂದ ನಿರ್ವಸಿತರಾದವರು, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳು, ಗ್ರಾಮೀಣ ಅಭ್ಯರ್ಥಿಗಳು ಹಾಗೂ ತೃತೀಯ ಲಿಂಗಿಗಳಿಗಾಗಿ ಸಮತಳ ಮೀಸಲಾತಿಯನ್ನು ಜಾರಿಗೊಳಿಸಲು 20 ಬಿಂದುಗಳ ರೋಸ್ಟರ್ ಬದಲಿಗೆ 100 ಬಿಂದುಗಳ ರೋಸ್ಟರ್ ಅನ್ನು ಜಾರಿಗೆ ತಂದಿತ್ತು. ನಂತರ 2026ರ ಮೇ 13ರಂದು ನೇರ ನೇಮಕಾತಿಗಾಗಿ 400 ಬಿಂದುಗಳ ಲಂಬ ಮೀಸಲಾತಿ ರೋಸ್ಟರ್ ಹಾಗೂ ಪರಿಶಿಷ್ಟ ಜಾತಿಯ ವಿವಿಧ ಉಪವರ್ಗಗಳಿಗೆ ಪ್ರತ್ಯೇಕ 60 ಬಿಂದುಗಳ ರೋಸ್ಟರ್ ನಿಗದಿಪಡಿಸಲಾಗಿತ್ತು. ಇದೀಗ ಅಕ್ಟೋಬರ್ 3ರಂದು ಜಾರಿಯಾದ ಕರ್ನಾಟಕ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳ ಅನ್ವಯ ಕ್ರೀಡಾ ಸಾಧಕರಿಗೂ ಮೀಸಲಾತಿ ಕಲ್ಪಿಸಿರುವ ಹಿನ್ನೆಲೆಯಲ್ಲಿ ಹೊಸ ಪರಿಷ್ಕರಣೆ ಕೈಗೊಳ್ಳಲಾಗಿದೆ.
ಪರಿಷ್ಕೃತ ಆದೇಶದ ಪ್ರಕಾರ, 100 ಬಿಂದುಗಳ ಸಮತಳ ಮೀಸಲಾತಿ ರೋಸ್ಟರ್ನಲ್ಲಿ 21ನೇ ಹಾಗೂ 61ನೇ ಬಿಂದುಗಳನ್ನು ಕ್ರೀಡಾ ಸಾಧಕರಿಗೆ ಮೀಸಲಿರಿಸಲಾಗಿದೆ. ಇದರ ಮೂಲಕ ಸಾಮಾನ್ಯ ಅರ್ಹತೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಪ್ರತಿಯೊಂದು ಲಂಬ ಮೀಸಲಾತಿ ವಿಭಾಗದಲ್ಲಿಯೂ ಶೇಕಡಾ 2ರಷ್ಟು ಸ್ಥಾನಗಳನ್ನು ಕ್ರೀಡಾ ಸಾಧಕರಿಂದ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಆದೇಶದ ಪ್ರಕಾರ, ಭವಿಷ್ಯದಲ್ಲಿ ನಡೆಯುವ ಪ್ರತಿಯೊಂದು ನೇರ ನೇಮಕಾತಿಯಲ್ಲೂ ಮೊದಲು 400 ಬಿಂದುಗಳ ಲಂಬ ಮೀಸಲಾತಿ ರೋಸ್ಟರ್ ಆಧಾರದ ಮೇಲೆ ಹುದ್ದೆಗಳನ್ನು ವಿವಿಧ ವರ್ಗಗಳಿಗೆ ಹಂಚಿಕೆ ಮಾಡಬೇಕು. ನಂತರ ಪ್ರತಿ ವರ್ಗದೊಳಗೆ 100 ಬಿಂದುಗಳ ಪರಿಷ್ಕೃತ ಸಮತಳ ಮೀಸಲಾತಿ ರೋಸ್ಟರ್ ಅನ್ವಯಿಸಿ ಮಹಿಳೆಯರು, ಅಂಗವಿಕಲರು, ಮಾಜಿ ಸೈನಿಕರು, ಗ್ರಾಮೀಣ ಅಭ್ಯರ್ಥಿಗಳು, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರು, ತೃತೀಯ ಲಿಂಗಿಗಳು, ಯೋಜನೆಗಳಿಂದ ನಿರ್ವಸಿತರು ಹಾಗೂ ಕ್ರೀಡಾ ಸಾಧಕರಿಗೆ ಮೀಸಲಾತಿ ಅನ್ವಯಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಅಂಗವಿಕಲ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ವಿಶೇಷ ಮಾರ್ಗಸೂಚಿಯನ್ನೂ ಸರ್ಕಾರ ನೀಡಿದೆ. ಅಧಿಸೂಚಿತ ಅಂಗವೈಕಲ್ಯ ಹೊಂದಿದ ಅಭ್ಯರ್ಥಿಗಳು ಸಿಗದಿದ್ದರೆ ಆ ಹುದ್ದೆಯನ್ನು ಮುಂದಿನ ನೇಮಕಾತಿಗೆ ಕಾಯ್ದಿರಿಸಬೇಕು. ಮುಂದಿನ ನೇಮಕಾತಿಯಲ್ಲಿಯೂ ಅಂತಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ ಇತರ ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಂದ ಭರ್ತಿ ಮಾಡಬೇಕು. ಕೊನೆಯ ಹಂತದಲ್ಲಿಯೂ ಅಂಗವಿಕಲ ಅಭ್ಯರ್ಥಿಗಳು ಲಭ್ಯವಾಗದಿದ್ದರೆ ಮಾತ್ರ ಸಾಮಾನ್ಯ ಅರ್ಹ ಅಭ್ಯರ್ಥಿಗಳಿಂದ ನೇಮಕಾತಿ ಮಾಡಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇನ್ನು ಮಾಜಿ ಸೈನಿಕರು, ಯೋಜನೆಗಳಿಂದ ನಿರ್ವಸಿತರು, ಮಹಿಳೆಯರು, ಕನ್ನಡ ಮಾಧ್ಯಮ ಅಭ್ಯರ್ಥಿಗಳು, ತೃತೀಯ ಲಿಂಗಿಗಳು, ಗ್ರಾಮೀಣ ಅಭ್ಯರ್ಥಿಗಳು ಹಾಗೂ ಕ್ರೀಡಾ ಸಾಧಕರಿಗೆ ಮೀಸಲಾದ ಸ್ಥಾನಗಳಿಗೆ ಮೊದಲ ಆದ್ಯತೆಯಲ್ಲಿ ಅದೇ ವರ್ಗದ ಅಭ್ಯರ್ಥಿಗಳನ್ನು ನೇಮಕ ಮಾಡಬೇಕು. ನಿಗದಿತ ವರ್ಗದ ಅಭ್ಯರ್ಥಿಗಳು ಲಭ್ಯವಿಲ್ಲದ ಸಂದರ್ಭಗಳಲ್ಲಿ ಮಾತ್ರ ಸಂಬಂಧಿತ ಲಂಬ ಮೀಸಲಾತಿ ವರ್ಗದ ಇತರ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಲು ಅವಕಾಶ ನೀಡಲಾಗಿದೆ.
ಪ್ರಸ್ತುತ ಜಾರಿಯಲ್ಲಿರುವ ಸಮತಳ ಮೀಸಲಾತಿ ಪ್ರಮಾಣಗಳ ಪ್ರಕಾರ ಮಾಜಿ ಸೈನಿಕರಿಗೆ ಶೇಕಡಾ 10, ಅಂಗವಿಕಲರಿಗೆ ಗ್ರೂಪ್-ಸಿ ಮತ್ತು ಡಿ ಹುದ್ದೆಗಳಲ್ಲಿ ಶೇಕಡಾ 5 ಹಾಗೂ ಗ್ರೂಪ್-ಎ ಮತ್ತು ಬಿ ಹುದ್ದೆಗಳಲ್ಲಿ ಶೇಕಡಾ 4, ಯೋಜನೆಗಳಿಂದ ನಿರ್ವಸಿತರಿಗೆ ಶೇಕಡಾ 5, ಮಹಿಳೆಯರಿಗೆ ಶೇಕಡಾ 33, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಶೇಕಡಾ 5, ತೃತೀಯ ಲಿಂಗಿಗಳಿಗೆ ಶೇಕಡಾ 1, ಗ್ರಾಮೀಣ ಅಭ್ಯರ್ಥಿಗಳಿಗೆ ಶೇಕಡಾ 25 ಹಾಗೂ ಕ್ರೀಡಾ ಸಾಧಕರಿಗೆ ಶೇಕಡಾ 2ರಷ್ಟು ಮೀಸಲಾತಿ ಮುಂದುವರಿಯಲಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಹೊಸ ಆದೇಶವು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಈ ಆದೇಶದ ನಂತರ ಆರಂಭಗೊಳ್ಳುವ ಎಲ್ಲ ನೇರ ನೇಮಕಾತಿ ಪ್ರಕ್ರಿಯೆಗಳಲ್ಲಿ ಪರಿಷ್ಕೃತ ರೋಸ್ಟರ್ನ್ನೇ ಅನುಸರಿಸಬೇಕು ಎಂದು ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ. ಇದರಿಂದ ಸಮತಳ ಮೀಸಲಾತಿಯ ಅನುಷ್ಠಾನದಲ್ಲಿ ಏಕರೂಪತೆ ಬರಲಿದ್ದು, ವಿವಿಧ ವರ್ಗಗಳಿಗೆ ಕಲ್ಪಿಸಲಾಗಿರುವ ಮೀಸಲಾತಿ ಸೌಲಭ್ಯಗಳು ಹೆಚ್ಚು ವ್ಯವಸ್ಥಿತವಾಗಿ ಜಾರಿಯಾಗಲಿವೆ ಎಂದು ಆಡಳಿತ ವಲಯಗಳು ಅಭಿಪ್ರಾಯಪಟ್ಟಿವೆ.
ಸರ್ಕಾರಿ ಆದೇಶದ ಪ್ರಮುಖ ಅಂಶಗಳು:
ರಾಜ್ಯ ಸಿವಿಲ್ ಸೇವೆಗಳ ನೇರ ನೇಮಕಾತಿಯಲ್ಲಿ ಜಾರಿಯಲ್ಲಿರುವ 100 ಬಿಂದುಗಳ ಸಮತಳ ಮೀಸಲಾತಿ ರೋಸ್ಟರ್ನ್ನು ಸರ್ಕಾರ ಪರಿಷ್ಕರಿಸಿದೆ.
ಕ್ರೀಡಾ ಸಾಧಕರಿಗೆ (Sports Persons) ಶೇಕಡಾ 2ರಷ್ಟು ಮೀಸಲಾತಿ ಜಾರಿಗೊಳಿಸಲು ರೋಸ್ಟರ್ನಲ್ಲಿ ಹೊಸ ಬಿಂದುಗಳನ್ನು ಸೇರಿಸಲಾಗಿದೆ.
ಪರಿಷ್ಕೃತ ರೋಸ್ಟರ್ನಲ್ಲಿ 21ನೇ ಮತ್ತು 61ನೇ ಬಿಂದುಗಳನ್ನು ಕ್ರೀಡಾ ಸಾಧಕರಿಗೆ ಮೀಸಲಿರಿಸಲಾಗಿದೆ.
ಸಮತಳ ಮೀಸಲಾತಿಯನ್ನು ಪ್ರತಿಯೊಂದು ಲಂಬ ಮೀಸಲಾತಿ (Vertical Reservation) ವರ್ಗಗಳಾದ ಸಾಮಾನ್ಯ, ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳೊಳಗೆ ಪ್ರತ್ಯೇಕವಾಗಿ ಜಾರಿಗೊಳಿಸಬೇಕು.
ನೇರ ನೇಮಕಾತಿಯ ವೇಳೆ ಮೊದಲು 400 ಬಿಂದುಗಳ ಲಂಬ ಮೀಸಲಾತಿ ರೋಸ್ಟರ್ ಅನ್ವಯಿಸಿ, ನಂತರ 100 ಬಿಂದುಗಳ ಸಮತಳ ಮೀಸಲಾತಿ ರೋಸ್ಟರ್ ಜಾರಿಗೊಳಿಸಬೇಕು.
ಅಧಿಸೂಚಿತ ಅಂಗವೈಕಲ್ಯ ಹೊಂದಿದ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ ಹುದ್ದೆಗಳನ್ನು ಮುಂದಿನ ನೇಮಕಾತಿಗೆ ಮುಂದೂಡಬೇಕು.
ಮುಂದಿನ ನೇಮಕಾತಿಯಲ್ಲಿಯೂ ಅಂಗವಿಕಲ ಅಭ್ಯರ್ಥಿಗಳು ಸಿಗದಿದ್ದರೆ ಇತರ ಅಂಗವೈಕಲ್ಯ ಅಭ್ಯರ್ಥಿಗಳಿಂದ ಹುದ್ದೆ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಮಾಜಿ ಸೈನಿಕರು, ಮಹಿಳೆಯರು, ಗ್ರಾಮೀಣ ಅಭ್ಯರ್ಥಿಗಳು, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳು, ತೃತೀಯ ಲಿಂಗಿಗಳು, ಯೋಜನೆಗಳಿಂದ ನಿರ್ವಸಿತರು ಹಾಗೂ ಕ್ರೀಡಾ ಸಾಧಕರಿಗೆ ಮೀಸಲಾದ ಹುದ್ದೆಗಳನ್ನು ಮೊದಲು ಅವರ ವರ್ಗದ ಅಭ್ಯರ್ಥಿಗಳಿಂದಲೇ ಭರ್ತಿ ಮಾಡಬೇಕು.
ಮಹಿಳಾ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ, ಅದೇ ವರ್ಗದ ಪುರುಷ ಅಭ್ಯರ್ಥಿಗಳಿಂದ ಹುದ್ದೆ ಭರ್ತಿ ಮಾಡಬಹುದು.
ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಅಭ್ಯರ್ಥಿಗಳಿಗೆ ಮೀಸಲಾದ ಸ್ಥಾನಗಳನ್ನು ಆ ವರ್ಗದ ಅಭ್ಯರ್ಥಿಗಳಿಂದಲೇ ಭರ್ತಿ ಮಾಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಈ ಆದೇಶ ತಕ್ಷಣದಿಂದ ಜಾರಿಗೆ ಬಂದಿದ್ದು, ಮುಂದಿನ ಎಲ್ಲ ನೇರ ನೇಮಕಾತಿಗಳಿಗೆ ಅನ್ವಯವಾಗಲಿದೆ.
ಪ್ರಸ್ತುತ ಸಮತಳ ಮೀಸಲಾತಿ ಪ್ರಮಾಣ
ಮಹಿಳೆಯರು – 33%
ಗ್ರಾಮೀಣ ಅಭ್ಯರ್ಥಿಗಳು – 25%
ಮಾಜಿ ಸೈನಿಕರು – 10%
ಅಂಗವಿಕಲರು – 4% ರಿಂದ 5% (ಹುದ್ದೆ ವರ್ಗಕ್ಕೆ ಅನುಗುಣವಾಗಿ)
ಯೋಜನೆಗಳಿಂದ ನಿರ್ವಸಿತರು – 5%
ಕನ್ನಡ ಮಾಧ್ಯಮ ಅಭ್ಯರ್ಥಿಗಳು – 5%
ತೃತೀಯ ಲಿಂಗಿಗಳು – 1%
ಕ್ರೀಡಾ ಸಾಧಕರು – 2%
ರಾಜ್ಯ ಸರ್ಕಾರವು ನೇರ ನೇಮಕಾತಿಗಳಲ್ಲಿ ಕ್ರೀಡಾ ಸಾಧಕರಿಗೆ 2% ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು 100 ಬಿಂದುಗಳ ಸಮತಳ ಮೀಸಲಾತಿ ರೋಸ್ಟರ್ನ್ನು ಪರಿಷ್ಕರಿಸಿ 21 ಮತ್ತು 61ನೇ ಬಿಂದುಗಳನ್ನು ಕ್ರೀಡಾ ಸಾಧಕರಿಗೆ ಮೀಸಲಿರಿಸಿದೆ.






Comments
Leave a Comment