ಬಿ.ಸಿ.ರೋಡ್ ಯುವತಿ ಹತ್ಯೆ ಪ್ರಕರಣ: ಆರೋಪಿ ಚೇತನ್ ಮಂಗಳೂರು ಸಮೀಪ ಪೊಲೀಸರ ಬಲೆಗೆ!
From Jayram Udupi
ಮಂಗಳೂರು:
ಬಿ.ಸಿ.ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯಳನ್ನು ತಲ್ವಾರ್‌ನಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಪ್ರಕರಣದ ಆರೋಪಿ ಚೇತನ್‌ನನ್ನು ಪೊಲೀಸರು ಶುಕ್ರವಾರ ಬೆಳಿಗ್ಗೆ ಮಂಗಳೂರು ಸಮೀಪ ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಈ ವಿಷಯ ದೃಢಪಡಿಸಿದ್ದಾರೆ.
ಬಂಧಿತ ಆರೋಪಿ ಚೇತನ್ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ನಿವಾಸಿಯಾಗಿದ್ದು, ಮೃತ ಲಾವಣ್ಯ ಅವರನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಲಾವಣ್ಯ ಆತನ ಪ್ರೀತಿಯನ್ನು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಗುರುವಾರ ಸಂಜೆ ಬಿ.ಸಿ.ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಸ್‌ನಲ್ಲಿ ಕುಳಿತಿದ್ದ ಲಾವಣ್ಯಳನ್ನು ಬಲವಂತವಾಗಿ ಕೆಳಗಿಳಿಸಿ, ಸಾರ್ವಜನಿಕರ ಎದುರೇ ತಲ್ವಾರ್‌ನಿಂದ ಹಲ್ಲೆ ನಡೆಸಿ ಹತ್ಯೆಗೈದು ಆರೋಪಿ ಪರಾರಿಯಾಗಿದ್ದ. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು.
ಘಟನೆಗೆ ಸಂಬಂಧಿಸಿದಂತೆ ತಕ್ಷಣ ಕಾರ್ಯಾಚರಣೆ ಆರಂಭಿಸಿದ ಪೊಲೀಸರು, ವಿವಿಧ ತಂಡಗಳನ್ನು ರಚಿಸಿ ಶೋಧ ನಡೆಸಿ ಆರೋಪಿ ಚೇತನ್‌ನನ್ನು ಮಂಗಳೂರು ಸಮೀಪ ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.





Comments
Leave a Comment