PRABHAVAA.COM

ಸಿಎಂ ಕುರ್ಚಿ ನನ್ನದಲ್ಲ, ಜನರದ್ದು: ಸಿಎಂ ಡಿ ಕೆ ಶಿವಕುಮಾರ್

Karnataka:

Font size:

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಸಿಎಂ ಡಿ.ಕೆ. ಶಿವಕುಮಾರ್

ಸಿಎಂ ಕುರ್ಚಿ ನನ್ನದಲ್ಲ, ಜನರದ್ದು: ಸಿಎಂ ಡಿ ಕೆ ಶಿವಕುಮಾರ್

ಜನರು ಕೊಟ್ಟಿರುವ ಅಧಿಕಾರ ಜನರ ಸೇವೆಗೆ ಮುಡಿಪು

ಎಲ್ಲಾ ಗೊಂದಲಗಳಿಗೆ ಹೈಕಮಾಂಡ್ ನಾಯಕರಿಂದ ತೆರೆ

ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ

ಮಾನವ ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ

ಬೆಂಗಳೂರು, ಜೂ.03:

“ಸಿಎಂ ಕುರ್ಚಿ ಈ ಡಿ ಕೆ ಶಿವಕುಮಾರನದ್ದಲ್ಲ, ಇದು ಜನರ ಕುರ್ಚಿ. ಜನರು ಕೊಟ್ಟಿರುವ ಅಧಿಕಾರವನ್ನು ಜನರ ಸೇವೆಗೆ ಮುಡಿಪಾಗಿಡುತ್ತೇನೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.

“ನನ್ನ ವೈಯಕ್ತಿಕ ವಿಚಾರ ಬದಿಗೊತ್ತಿ, ರಾಜ್ಯದ ಜನರ ಸೇವೆಗೆ ಸಂಕಲ್ಪ ಮಾಡಿ ಈ ಅಧಿಕಾರ ಸ್ವೀಕರಿಸಿದ್ದೇನೆ. 'ಹಿಂದಿನ ಹೆಜ್ಜೆಗಳನ್ನು ಮರೆತವನು ಮುಂದಿನ ಹೆಜ್ಜೆ ಇಡಲಾರ' ಎಂಬ ಮಾತನ್ನು ನಂಬಿರುವವನು ನಾನು. ನಾವು ನಮ್ಮ ಬೇರು ಮರೆತರೆ ಫಲ ಸಿಗುವುದಿಲ್ಲ ಎಂದು ಹೇಳುತ್ತಿರುತ್ತೇನೆ. ಇಂದು ಹೊಸ ದಿನ. ಹೊಸ ಕೆಲಸ ಮಾಡಿ, ಹೊಸ ಅವಕಾಶಗಳನ್ನು ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯದ ಜನತೆ ನೀಡಿದ್ದಾರೆ. ಬಾಕಿ ಇರುವ 2 ವರ್ಷಗಳಲ್ಲಿ ರಾಜ್ಯದ ಜನರ ಸೇವೆ ಮಾಡಲು ಏನೆಲ್ಲಾ ಸೇವೆ ಮಾಡಬಹುದು, ರಾಜ್ಯದ ಕಲ್ಯಾಣಕ್ಕೆ ನಾನು ಹೊಸ ಅವಕಾಶಗಳನ್ನು ಹುಡುಕುತ್ತಿದ್ದೇನೆ” ಎಂದು ತಿಳಿಸಿದರು.

ಎಲ್ಲಾ ಗೊಂದಲಗಳಿಗೆ ಹೈಕಮಾಂಡ್ ನಾಯಕರು ತೆರೆ ಎಳೆದಿದ್ದಾರೆ

“ಮಾಧ್ಯಮಗಳು ಇಷ್ಟು ದಿನ ಅಧಿಕಾರ ಹಸ್ತಾಂತರ, ನಾಯಕತ್ವ ಬದಲಾವಣೆ ವಿಚಾರವಾಗಿ ಅನೇಕ ಸುದ್ದಿ, ಹೇಳಿಕೆಗಳನ್ನು ಪ್ರಸಾರ ಮಾಡುತ್ತಿದ್ದವು. ಮಲಗಿದ್ದವರನ್ನು ಎಬ್ಬಿಸಿ, ಎದ್ದಿದ್ದವರನ್ನು ಮಲಗಿಸುತ್ತಿದ್ದರು. ನಮ್ಮ ಪಕ್ಷದ ವರಿಷ್ಠರು ಇದಕ್ಕೆಲ್ಲ ಈಗ ತೆರೆ ಎಳೆದಿದ್ದಾರೆ. ಶುಭ ಗಳಿಗೆ, ಶುಭ ಮುಹೂರ್ತ ಬರುತ್ತದೆ. ಸ್ವಲ್ಪ ತಾಳ್ಮೆಯಿಂದ ಕಾಯಿರಿ ಎಂದು ಹೇಳುತ್ತಲೇ ಇದ್ದೆ. ಇಂದು ಸಂಜೆ 4.15ಕ್ಕೆ ಶುಭ ಗಳಿಗೆ, ಶುಭ ಮುಹೂರ್ತಕ್ಕೆ ಮಾಧ್ಯಮಗಳು ಹಾಗೂ ರಾಜ್ಯದ ಜನತೆ ಸಾಕ್ಷಿಯಾಗಿದ್ದಾರೆ” ಎಂದು ತಿಳಿಸಿದರು.

ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ

“ರಾಜ್ಯದ ಜನತೆಗೆ ನನ್ನ ಮೇಲೆ ಅಪಾರ ವಿಶ್ವಾಸ ಇದೆ. ಹಿಂದೆ ಅನೇಕ ಟೀಕೆ, ಹೊಗಳಿಕೆ ವ್ಯಕ್ತವಾಗಿರಬಹುದು. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ನಾನು ಹೇಳಿದ್ದೆ. ರಾಜ್ಯದ ಆಡಳಿತದಲ್ಲಿ ಹೊಸ ಬೆಳಕು ಮೂಡಿಸಲು ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಪ್ರಯತ್ನ ಮಾಡುತ್ತೇನೆ. 1985ರಿಂದ ಇಲ್ಲೆಯವರೆಗೂ ಕಷ್ಟ ನೋಡಿದ್ದೇನೆ, ಸುಖ ನೋಡಿದ್ದೇನೆ. ಚಿಕ್ಕ ವಯಸ್ಸಿನಲ್ಲೇ ಅಧಿಕಾರ ನೋಡಿದ್ದೇನೆ. ಅನೇಕ ರಾಜಕೀಯ ತಂತ್ರಗಳ ಬಲೆಗೆ ಬಿದ್ದಿದ್ದೇನೆ. ತಿಹಾರ್ ಜೈಲಿಗೆ ಹೋಗುವ ಪರಿಸ್ಥಿತಿ ಬಂತು. ನಾನು ಎಂದಿಗೂ ಎದೆಗುಂದಲಿಲ್ಲ. ನಾನು ಭರವಸೆಗಳ ಮೇಲೆ ಬದುಕಿದೆ. ಇದೇ ವಿಶ್ವಾಸ ಮತ್ತೆ ರಾಜ್ಯದ ಜನರ ಸೇವೆ ಮಾಡಿ, ಸಾಕ್ಷಿಗುಡ್ಡೆ ಬಿಟ್ಟು ಹೋಗಲು ಅವಕಾಶ ಸಿಕ್ಕಿದೆ” ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದಿದ್ದಾರೆ

ಕಾಂಗ್ರೆಸ್ ಕಾರ್ಯಕರ್ತರು, ಜನರು ಬಹಳ ನಂಬಿಕೆಯಿಂದ ಕೊಟ್ಟಿರುವ ಅವಕಾಶ. ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಈ ತೀರ್ಮಾನ ಮಾಡಿದ್ದಾರೆ. ಇದು ಸ್ವಲ್ಪ ತಡವಾಗಿದೆ. ಆದರೂ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದಿದ್ದಾರೆ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಿರುವುದಾಗಿ ಅವರು ಹೇಳುತ್ತಲೇ ಇದ್ದರು. ನಮ್ಮ ವರಿಷ್ಠರು ನಮ್ಮಿಬ್ಬರನ್ನು ಕರೆಸಿ ಈ ತೀರ್ಮಾನ ಮಾಡಿದಾಗ, ಸಿದ್ದರಾಮಯ್ಯ ಅವರು ಬಹಳ ಸಂತೋಷದಿಂದ ನನಗೆ ಜಾಗ ಮಾಡಿಕೊಟ್ಟಿದ್ದಾರೆ. ನಮ್ಮ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಬೆಂಬಲ ನೀಡಿ ಜವಾಬ್ದಾರಿ ನೀಡಿದ್ದಾರೆ.

ಮಾನವ ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ

“ಗ್ರಾಮೀಣ ಭಾಗದ ರೈತರ ಪರಿಸ್ಥಿತಿ ಹಾಗೂ ನಗರ ಪ್ರದೇಶ ಜನರ ಸಮಸ್ಯೆ ನಾನು ಅರಿತಿದ್ದೇನೆ. 42% ಜನ ನಗರದಲ್ಲಿದ್ದಾರೆ. ಜನ ಉದ್ಯೋಗಕ್ಕಾಗಿ ನಗರಗಳತ್ತ ವಲಸೆ ಬರುತ್ತಿದ್ದಾರೆ. ಬೀದಿ ವ್ಯಾಪಾರ ಮಾಡಿಕೊಂಡಾದರೂ ಒಳ್ಳೆಯ ಬದುಕು, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ವ್ಯವಸಾಯ ತೊರೆದು ನಗರಗಳತ್ತ ಬರುತ್ತಿದ್ದಾರೆ. ಈ ಸರ್ಕಾರದ ಪ್ರತಿ ತೀರ್ಮಾನ ಕೇವಲ ಶಿವಕುಮಾರ್ ತೀರ್ಮಾನ ಮಾತ್ರವಲ್ಲ. ಸಾಮೂಹಿಕ ತೀರ್ಮಾನವಾಗಿರುತ್ತದೆ. ನನಗೆ ಜಾತಿ ಮೇಲೆ, ಧರ್ಮದ ಮೇಲೆ ನಂಬಿಕೆ ಇಲ್ಲ. ನನಗೆ ನಮ್ಮದೇ ಆದ ನಂಬಿಕೆ ಇರಬಹುದು. ಆದರೆ ಮಾನವ ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡಿರುವವನು” ಎಂದು ತಿಳಿಸಿದರು.

“ನಾನು 7ನೇ ತರಗತಿಯಲ್ಲಿ ಶಾಲಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ನಾನು ಪ್ರಜಾಸತಾತ್ಮಕ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿದ್ದೇನೆ. ಈ ನಾಡು ಸರ್ವಜನಾಂಗದ ಶಾಂತಿಯ ತೋಟ ಎಂಬುದನ್ನು ನಮ್ಮ ಸಚಿವ ಸಂಪುಟ ಪ್ರತಿಬಿಂಬಿಸುತ್ತಿದೆ. ಮಾಧ್ಯಮಗಳು ಟೀಕೆ ಮಾಡಲಿ, ನಮ್ಮ ಸರ್ಕಾರದ ತಪ್ಪನ್ನು ತಿದ್ದಿ. ಆದರೆ ಇಲ್ಲಸಲ್ಲದ ರಾಜಕೀಯ ಸುದ್ದಿಗಳನ್ನು ಮಾಡಬೇಡಿ. ನೀವು ನನ್ನನ್ನು ಟೀಕೆ ಮಾಡಿದಾಗ ನಾನು ಪ್ರಶ್ನೆ ಮಾಡಿಲ್ಲ. ನಿಮ್ಮ ಕ್ಯಾಮೆರಾ ಕಣ್ಣಲ್ಲಿ ತೋರಿಸುವುದನ್ನು ಜನ ನೋಡುತ್ತಾರೆ. ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ನೀವು ವರದಿ ಮಾಡಿ” ಎಂದು ಮನವಿ ಮಾಡಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ಸಿಎಂ ಡಿ.ಕೆ. ಶಿವಕುಮಾರ್

ಸರ್ಕಾರಿ ಹುದ್ದೆ ಭರ್ತಿ ಜೊತೆಗೆ ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ ಜಾರಿ

ಪಂಚಾಯಿತಿಗೆ ಒಂದರಂತೆ ರಾಜ್ಯದಲ್ಲಿ 10 ಸಾವಿರ ಯುವಕರ ಸಂಘ ಸ್ಥಾಪನೆ ಹಾಗೂ 10 ಲಕ್ಷ ಅನುದಾನ

ಒಸಿ- ಸಿಸಿ ಸಮಸ್ಯೆಗೆ ಪರಿಹಾರ

ರಾಜ್ಯದೆಲ್ಲೆಡೆ ಬಿ ಖಾತಾಯಿಂದ ಎ ಖಾತಾ ಪರಿವರ್ತನೆ

ಬೆಂಗಳೂರು ನಗರದ ರಸ್ತೆಗಳ ಡಾಂಬರೀಕರಣಕ್ಕೆ 2 ಸಾವಿರ ಕೋಟಿ ಅನುದಾನ

ಯುವ ಯುಗ ಆರಂಭಕ್ಕೆ ಶಿವಕುಮಾರ್ ನೇತೃತ್ವದ ಸರ್ಕಾರದ ಷಪ್ಟದಿ

ರೈತರ ಸಮಸ್ಯೆ ನಿವಾರಣೆಗೆ ತಜ್ಞರ ಜತೆ ಚರ್ಚಿಸಿ ಶೀಘ್ರ ಕಾರ್ಯಕ್ರಮ

ಬೆಂಗಳೂರು, ಜೂ.03:

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಸರ್ಕಾರಿ ಹುದ್ದೆ ಭರ್ತಿ ಜೊತೆಗೆ ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ, ಪಂಚಾಯಿತಿಗೆ ಒಂದರಂತೆ ರಾಜ್ಯದಲ್ಲಿ 10 ಸಾವಿರ ಯುವಕರ ಸಂಘ ಸ್ಥಾಪನೆ ಹಾಗೂ 10 ಲಕ್ಷ ಅನುದಾನ, ಒಸಿ ಸಿಸಿ ಸಮಸ್ಯೆಗೆ ಪರಿಹಾರ, ರಾಜ್ಯದೆಲ್ಲೆಡೆ ಬಿ ಖಾತಾಯಿಂದ ಎ ಖಾತಾ ಪರಿವರ್ತನೆ, ಬೆಂಗಳೂರು ನಗರದ ರಸ್ತೆಗಳ ಡಾಂಬರೀಕರಣಕ್ಕೆ 2 ಸಾವಿರ ಕೋಟಿ ಅನುದಾನ... ಇವಿಷ್ಟು ಕರ್ನಾಟಕ ರಾಜ್ಯದಲ್ಲಿ ಯುವ ಯುಗ ಆರಂಭಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನೂತನ ಸರ್ಕಾರ ಕೈಗೊಂಡಿರುವ ಷಟ್ಪದಿಗಳು.

ವಿಧಾನಸೌಧದಲ್ಲಿ ಬುಧವಾರ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.

“ರಾಜ್ಯದ ರೈತರು ನಮ್ಮ ಬೆನ್ನೆಲುಬು, ಕೂಲಿ ಕಾರ್ಮಿಕರು ಹಾಗೂ ಎಲ್ಲಾ ವರ್ಗದ ಜನರಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲು ಕಳೆದ ಆರು ತಿಂಗಳಿಂದ ಸಿದ್ಧತೆ ನಡೆಯುತ್ತಿತ್ತು. ಇಂದಿನ ಸಚಿವ ಸಂಪುಟ ಸಭೆಯಲ್ಲಿ 2 ಗಂಟೆಗಳ ಕಾಲ ಚರ್ಚೆ ಮಾಡಿ 6 ವರ್ಗದ ಜನರಿಗೆ ಇರುವ ಸಮಸ್ಯೆಗಳನ್ನು ಬಗೆಹರಿಸಿ ಹೊಸ ಯುವ ಯುಗ ಆರಂಭಕ್ಕೆ ತೀರ್ಮಾನಿಸಲಾಗಿದೆ” ಎಂದರು.

“ಮೊದಲ ಸಚಿವ ಸಂಪುಟದಲ್ಲಿ ಜನತೆಗೆ ಹೊಸ ಕೊಡುಗೆ ನೀಡಲು ತೀರ್ಮಾನ ಮಾಡಿದ್ದೆವು. ಇದು ಯುವ ಯುಗ. ಹೀಗಾಗಿ ಹೊಸ ಆಲೋಚನೆ ಮಾಡಿದೆವು. ರೈತರ ವಿಚಾರದಲ್ಲಿ ಎಲ್ಲ ತಜ್ಞರ ಜೊತೆ ಚರ್ಚೆ ಮಾಡಿ ನೀತಿ ರೂಪಿಸಬೇಕಿದೆ. ಕೇವಲ ಮಾತು ಕೊಡುವುದಲ್ಲ, ಅದನ್ನು ಜಾರಿಗೆ ತರಬೇಕು. ನಾನೇ ಬೆಂಗಳೂರಿನಲ್ಲಿ ಕಸ ಎತ್ತುವ ವಿಚಾರವಾಗಿ 3 ವರ್ಷಗಳಲ್ಲಿ ನಮ್ಮ ಮುಂದೆ ಎಷ್ಟು ಸವಾಲುಗಳು ಎದುರಾಗಿವೆ ಎಂದು ಅನುಭವಿಸಿದ್ದೇನೆ. ಅದೇ ರೀತಿ ದೊಡ್ಡ ಸವಾಲು ಎದುರಿಸಬೇಕಾಗಿದೆ. ರೈತರ ಸಮಸ್ಯೆ ಬಗೆಹರಿಸುವುದು ನಮ್ಮ ಆದ್ಯತೆಯಾಗಿದೆ. ಉದ್ಯೋಗ, ಶಿಕ್ಷಣಕ್ಕಾಗಿ ಹಳ್ಳಿಯಿಂದ ನಗರಕ್ಕೆ ವಲಸೆ ಹೋಗುವುದನ್ನು ತಪ್ಪಿಸಬೇಕಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಬಗ್ಗೆ ಸಂಕುಚಿತ ಮನೋಭಾವ ನಿರ್ಮೂಲನೆ ಮಾಡಬೇಕಿದೆ” ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್:

“ನಮ್ಮ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಗಳಲ್ಲಿ ಮೊದಲನೆಯದು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ. ನಾನು ಬೇರೆ ಭಾಗಗಳಿಗೆ ಹೋದಾಗೆಲ್ಲಾ ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದೀರಿ ನಮಗೆ ಇಲ್ಲ ಎಂದು ಬಾಲಕರು ಕೇಳುತ್ತಿದ್ದರು. ಹೀಗಾಗಿ ವಿದ್ಯಾರ್ಥಇಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡಲು ತೀರ್ಮಾನಿಸಿದ್ದೇವೆ. ಈ ಸೌಲಭ್ಯ ಪಡೆಯಲು ಅರ್ಜಿ ಹಾಕಬೇಕಿದೆ” ಎಂದು ತಿಳಿಸಿದರು.

ಸರ್ಕಾರಿ ಹುದ್ದೆ ಭರ್ತಿ ಜೊತೆಗೆ ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ

“ಎರಡನೆಯದಾಗಿ ಉದ್ಯೋಗದ ಸಮಸ್ಯೆಗೆ ನಿವಾರಣೆ ನೀಡಲು, ನಮ್ಮ ಸರ್ಕಾರ 56 ಸಾವಿರ ಹುದ್ದೆಗಳ ನೇಮಕಕ್ಕೆ ಮುಂದಾಗಿದೆ. ಈ ನೇಮಕಾತಿ ವೇಳಾಪಟ್ಟಿ ಬಿಡುಗಡೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಈ ಮಧ್ಯೆ ಈ ರಾಜ್ಯ ಮಾನವ ಸಂಪನ್ಮೂಲದಲ್ಲಿ ಶಕ್ತಿಶಾಲಿ ರಾಜ್ಯ. ಇಡೀ ದೇಶದಲ್ಲೇ ನಮ್ಮಲ್ಲಿರುವ ಮಾನವ ಸಂಪನ್ಮೂಲ ಬೇರೆ ಎಲ್ಲೂ ಇಲ್ಲ. ಇಲ್ಲಿ ಸರ್ಕಾರವೇ ಖಾಸಗಿ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಲು ಉದ್ಯೋಗ ವಿನಿಮಯ ಸೌಲಭ್ಯ ಕಲ್ಪಿಸಲಾಗುವುದು. ಖಾಸಗಿ ಸಂಸ್ಥೆಗೆ ಯಾವ ರೀತಿ ಉದ್ಯೋಗಿಗಳು ಬೇಕು ಅದಕ್ಕೆ ತಕ್ಕಂತೆ ಯುವಕರನ್ನು ತರಬೇತಿ ನೀಡಿ ನೇಮಕಾತಿ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ಇಲ್ಲಿ ಕನ್ನಡಿಗರಿಗೆ ಹೆಚ್ಚಿನ ಪಾಲು ನೀಡಲಾಗುವುದು. ಈ ಕುರಿತ ಶೇಕಡಾವಾರು ಪ್ರಮಾಣವನ್ನು ಎಲ್ಲರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು. ಇದಕ್ಕೆ ಒಂದು ತಿಂಗಳ ಕಾಲಾವಧಿಯಲ್ಲಿ ರೂಪುರೇಷೆ ಸಿದ್ಧಪಡಿಸಲು ಸಂಪುಟ ಸಹೋದ್ಯೋಗಿಗಳಿಗೆ ಸೂಚಿಸಲಾಗುವುದು” ಎಂದು ವಿವರಿಸಿದರು.

10 ಸಾವಿರ ಯುವಕರ ಸಂಘ ಸ್ಥಾಪನೆ

“ಮೂರನೆಯದು ನನ್ನ ಕನಸಿನ ಚಿಂತನೆಯಾಗಿದೆ. 10 ಸಾವಿರ ಭಾರತ ಜೋಡೋ ಯುವಕರ ಸಂಘ ರಚಿಸಲು ತೀರ್ಮಾನ ಮಾಡಲಾಗಿದೆ. ಪ್ರತಿ ಪಂಚಾಯ್ತಿಯಲ್ಲಿ ಯುವಕರ ಸಂಘ ರಚಿಸಬೇಕು. ಈ ಸಂಘದಲ್ಲಿ ಕನಿಷ್ಠ 150-200 ಯುವಕರಿರುತ್ತಾರೆ. ನಗರ ಪ್ರದೇಶಗಳಲ್ಲಿ ವಾರ್ಡ್ ಮಟ್ಟದಲ್ಲಿ ಸಂಘ ರೂಪಿಸಲಾಗುವುದು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ನಾಯಕತ್ವ ಬೆಳೆಸಿಕೊಳ್ಳಲು, ಸಾಮಾಜಿಕ ಸಾಮರಸ್ಯಕ್ಕೆ, ಯುವಕರ ಪ್ರತಿಭೆ ಅವರಣಕ್ಕೆ ವೇದಿಕೆ ಕಲ್ಪಿಸಲಾಗುವುದು. ಈ ಸಂಘಕ್ಕೆ ಸರ್ಕಾರ 10 ಲಕ್ಷ ಅನುದಾನ ನೀಡಲಿದೆ. ಇದನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂದು ಮುಂದಿನ ದಿನಗಳಲ್ಲಿ ರೂಪುರೇಷೆ ತೀರ್ಮಾನಿಸಲಾಗುವುದು” ಎಂದು ಹೇಳಿದರು.

ಒಸಿ ಸಿಸಿ ಸಮಸ್ಯೆಗೆ ಪರಿಹಾರ:

“ನಾಲ್ಕನೆಯದಾಗಿ ಇನ್ನು ನಮ್ಮನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಮನೆ ಕಟ್ಟುವವರಿಗೆ ಒಸಿ ಹಾಗೂ ಸಿಸಿ ನೀಡುವ ವಿಚಾರ. ಈ ಸಮಸ್ಯೆ ಬಗೆಹರಿಸಲು ಚರ್ಚೆ ಮಾಡಿ 2500 ಅಡಿವರೆಗೂ 20% ಹೆಚ್ಚುಕಮ್ಮಿ ಇದ್ದರೂ ಒನ್ ಟೈಮ್ ಕಳೆದ ತಿಂಗಳು 31ರವರೆಗೂ ಅರ್ಜಿ ಹಾಕಿ ಮನೆ ಕಟ್ಟಿರುವವರಿಗೆ ಅವಕಾಶ ನೀಡಲು ತೀರ್ಮಾನಿಸಿದ್ದೇವೆ. ಮನೆಕಟ್ಟುವವರಿಗೆ ನೀರು ನೀಡುವುದು ನಮ್ಮ ಕರ್ತವ್ಯ” ಎಂದು ತಿಳಿಸಿದರು.

ರಾಜ್ಯದೆಲ್ಲೆಡೆ ಬಿ ಖಾತಾಯಿಂದ ಎ ಖಾತಾ ಪರಿವರ್ತನೆ:

“ಐದನೆಯದಾಗಿ ಬಿ ಖಾತಾಯಿಂದ ಎ ಖಾತಾ ಪರಿವರ್ತನೆಗೆಯನ್ನು ಬೆಂಗಳೂರು ಮಾತ್ರವಲ್ಲದೇ, ಇಡೀ ರಾಜ್ಯಕ್ಕೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ನಮ್ಮ ಸರ್ಕಾರದ ಆರನೇ ಗ್ಯಾರಂಟಿ ಭೂ ಗ್ಯಾರಂಟಿ ಆಗಿದೆ. ಜನರ ಆಸ್ತಿಗೆ ಸರಿಯಾದ ದಾಖಲೆ ಮಾಡಿಕೊಡಲು ಮುಂದಾಗಿದ್ದೇವೆ” ಎಂದು ತಿಳಿಸಿದರು.

ಬೆಂಗಳೂರು ನಗರದ ರಸ್ತೆಗಳ ಡಾಂಬರೀಕರಣ; 2 ಸಾವಿರ ಕೋಟಿ ಅನುದಾನ

“ಆರನೇ ತೀರ್ಮಾನ ಬೆಂಗಳೂರಿಗೆ ಸಂಬಂಧಿಸಿದ್ದು, ಬೆಂಗಳೂರಿನ ನಗರಗಳ ರಸ್ತೆಗಳಲ್ಲಿ ಹಾಲಿ ಯೋಜನೆಗಳನ್ನು ಹೊರತುಪಡಿಸಿ ಎಲ್ಲಾ ರಸ್ತೆಗಳ ಡಾಂಬರೀಕರಣಕ್ಕೆ 2 ಸಾವಿರ ಕೋಟಿ ಅನುದಾನ ನೀಡಲು ತೀರ್ಮಾನಿಸಲಾಗಿದೆ. 3-4 ತಿಂಗಳಲ್ಲಿ ಡಾಂಬರೀಕರಣ ಮಾಡಲು ತೀರ್ಮಾನಿಸಿದ್ದೇವೆ. ಉಳಿದ ವಿಚಾರಗಳನ್ನು ಬೇರೆ ದಿನಗಳಲ್ಲಿ ಚರ್ಚೆ ಮಾಡುತ್ತೇವೆ” ಎಂದು ಹೇಳಿದರು.

ಪ್ರಶ್ನೋತ್ತರ:

ಉಚಿತ ಬಸ್ ಪಾಸ್ ಗೆ ಎಷ್ಟು ವೆಚ್ಚವಾಗಲಿದೆ ಎಂದಾಗ, “ವಿದ್ಯಾರ್ಥಿಗಳು ನಮ್ಮ ಮಕ್ಕಳು. ಅವರಿಗೆ ಉಚಿತ ಪ್ರಯಾಣಕ್ಕೆ ಎಷ್ಟು ಸಾವಿರ ಕೋಟಿ ಆದರೂ ನೀಡುತ್ತೇವೆ” ಎಂದರು.

ಇನ್ನು ಯುವ ಸಂಘಗಳ ಅನುದಾನಕ್ಕೆ 1 ಸಾವಿರ ಕೋಟಿ ಆಗುತ್ತದೆ ಇದನ್ನು ಹೇಗೆ ನೀಡುತ್ತೀರಿ ಎಂದು ಕೇಳಿದಾಗ, “ಇದು ಡಿ.ಕೆ. ಶಿವಕುಮಾರ್ ಅವರ ಸರ್ಕಾರ” ಎಂದು ತಿಳಿಸಿದರು.

Comments

Leave a Comment

Prev Post ಡಿ.ಕೆ. ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ:13 ಮಂದಿ ಸಚಿವರೊಂದಿಗೆ ಹೊಸ ಸಂಪುಟ ರಚನೆ
Next Post ಗೃಹಲಕ್ಷ್ಮಿ ಯೋಜನೆಯ ₹5,000 ಕೋಟಿ ಬಾಕಿ ಹಣದ ಹಗರಣ ಹೈಕೋರ್ಟ್ ನೋಟಿಸ್‌ಗೆ ಉತ್ತರಿಸಲು ವಿಫಲವಾದ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News