ಇದು ಕರ್ನಾಟಕದ 1.26 ಕೋಟಿ ತಾಯಂದಿರಿಗೆ ಎಸಗಿದ ದೊಡ್ಡ ದ್ರೋಹ ಎಂದು ನಿಖಿಲ್ ಕಿಡಿ
ಗೃಹಲಕ್ಷ್ಮಿ ಯೋಜನೆಯ ₹5,000 ಕೋಟಿ ಬಾಕಿ ಹಣದ ಹಗರಣ
ಹೈಕೋರ್ಟ್ ನೋಟಿಸ್‌ಗೆ ಉತ್ತರಿಸಲು ವಿಫಲವಾದ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ
ಇದು ಕರ್ನಾಟಕದ 1.26 ಕೋಟಿ ತಾಯಂದಿರಿಗೆ ಎಸಗಿದ ದೊಡ್ಡ ದ್ರೋಹ ಎಂದು ನಿಖಿಲ್ ಕಿಡಿ
ಬೆಂಗಳೂರು, ಜೂನ್ 04
ಗೃಹಲಕ್ಷ್ಮಿ ಯೋಜನೆಯ ₹5,000 ಕೋಟಿ ಬಾಕಿ ಹಣದ ಹಗರಣಕ್ಕೆ ಸಂಬಂಧಿಸಿದಂತೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಇಂದು ಆಕ್ಷೇಪಣೆ ಸಲ್ಲಿಸಲು ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಆಡಳಿತಾತ್ಮಕ ಮತ್ತು ರಾಜಕೀಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಶ್ರೀ ನಿಖಿಲ್ ಕುಮಾರಸ್ವಾಮಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಾನ್ಯ ನ್ಯಾಯಾಲಯದ ತುರ್ತು ನೋಟಿಸ್‌ಗೆ ನೇರವಾಗಿ ಉತ್ತರಿಸುವ ಧೈರ್ಯವಿಲ್ಲದೆ 4 ವಾರಗಳ ಕಾಲಾವಕಾಶ ಕೋರಿ ನುಣುಚಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ, ಯೋಜನೆಯಲ್ಲಿನ ಆರ್ಥಿಕ ಲೋಪವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ಕಲ್ಯಾಣದ ಹಣಕ್ಕೆ ಕಾನೂನಾತ್ಮಕವಾಗಿ ಹಾಗೂ ಹಣಕಾಸಿನ ರೂಪದಲ್ಲಿ ಲೆಕ್ಕ ಒಪ್ಪಿಸಲು ಸಾಧ್ಯವಾಗದ ಸರ್ಕಾರ, ನ್ಯಾಯಾಲಯದಲ್ಲಿ ಸಮಯ ಕೇಳುವ ಮೂಲಕ ತನ್ನ ವೈಫಲ್ಯವನ್ನು ಮುಚ್ಚಿಡಲು ಹರಸಾಹಸ ಪಡುತ್ತಿದೆ.
ಇದು ಕರ್ನಾಟಕದ 1.26 ಕೋಟಿ ತಾಯಂದಿರಿಗೆ ಎಸಗಿದ ದೊಡ್ಡ ದ್ರೋಹ. ಗೃಹಲಕ್ಷ್ಮಿ ಹಣವನ್ನು ನಂಬಿ ಜೀವನ ಸಾಗಿಸುತ್ತಿರುವ ಕೋಟ್ಯಂತರ ಕುಟುಂಬಗಳ ಬದುಕಿನ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ.
ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು ಈ ಆರ್ಥಿಕ ಅವ್ಯವಸ್ಥೆಯನ್ನು ಮರೆಮಾಚಲು ಬಿಡುವುದಿಲ್ಲ. ನ್ಯಾಯಾಂಗ ವ್ಯವಸ್ಥೆಯನ್ನು ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ.
ನಮ್ಮ ಆಗ್ರಹಗಳು:
1. ರಾಜ್ಯ ಸರ್ಕಾರ ತಕ್ಷಣವೇ ಮಾನ್ಯ ನ್ಯಾಯಾಲಯದ ಮುಂದೆ ಪಾರದರ್ಶಕವಾಗಿ ಸಂಪೂರ್ಣ ಲೆಕ್ಕ ನೀಡಬೇಕು.
2. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ತಾಯಂದಿರ ಬಾಕಿ ಹಣವನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಬಿಡುಗಡೆ ಮಾಡಬೇಕು.
3. ₹5,000 ಕೋಟಿ ಹಣ ಎಲ್ಲಿಗೆ ಹೋಯಿತು ಎಂಬುದರ ಶ್ವೇತಪತ್ರ ಹೊರಡಿಸಬೇಕು.
ಕರ್ನಾಟಕದ 1.26 ಕೋಟಿ ತಾಯಂದಿರಿಗೆ ನ್ಯಾಯ ಸಿಗುವವರೆಗೂ ಜೆಡಿಎಸ್ ಪಕ್ಷ ಹೋರಾಟ ಮುಂದುವರೆಸಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.




Comments
Leave a Comment