ರಾಜ್ಯದಾದ್ಯಂತ ಮೇ ೨೮ರಂದು ಶಾಲಾ ಪ್ರಾರಂಭೋತ್ಸವ
ಬೆಂಗಳೂರು, ಮೇ 25 –
ಮಕ್ಕಳ ನಗುವಿನಿಂದ, ಪೋಷಕರ ನಿರೀಕ್ಷೆಯಿಂದ, ಶಿಕ್ಷಕರ ಹೊಣೆಗಾರಿಕೆಯಿಂದ ಕರ್ನಾಟಕದ ಶಾಲೆಗಳು ಹೊಸ ಶೈಕ್ಷಣಿಕ ವರ್ಷಕ್ಕೆ ಮೇ ೨೮ರಂದು ಬಾಗಿಲು ತೆರೆಯುತ್ತಿವೆ , ಶಾಲಾ ಪ್ರಾರಂಭೋತ್ಸವವು ಕೇವಲ ಒಂದು ಕಾರ್ಯಕ್ರಮವಲ್ಲ, ಅದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ದಾರಿ ತೋರಿಸುವ ಉತ್ಸವವಾಗಿದೆ.
ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಯೂನಿಫಾರ್ಮ್ ಹಾಗೂ ಬೂಟುಗಳನ್ನು ವಿತರಿಸುವ ಮೂಲಕ ಸರ್ಕಾರವು ಶಿಕ್ಷಣದ ಹಕ್ಕನ್ನು ಪ್ರತಿಯೊಬ್ಬರಿಗೂ ತಲುಪಿಸುವ ಭರವಸೆ ನೀಡಿದೆ. ಶಾಲಾ ಕಟ್ಟಡಗಳ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ಸುಧಾರಣೆ ಅಲ್ಲದೆ ಈ ಬಾರಿ ಶಿಕ್ಷಣ ಇಲಾಖೆಯು ಹೊಸ ಪಠ್ಯಕ್ರಮವನ್ನು ಜಾರಿಗೆ ತರುವ ಮೂಲಕ ದ್ವಿಭಾಷಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಕನ್ನಡದ ಜೊತೆಗೆ ಇಂಗ್ಲಿಷ್ ಬೋಧನೆಗೆ ವಿಶೇಷ ಗಮನ ಹರಿಸಲಾಗಿದ್ದು, ವಿದ್ಯಾರ್ಥಿಗಳು ಜಾಗತಿಕ ಸ್ಪರ್ಧೆಗೆ ಸಜ್ಜಾಗುವಂತೆ ಕ್ರಮ ಕೈಗೊಳ್ಳಲಾಗಿದೆ.
ತಂತ್ರಜ್ಞಾನವನ್ನು ಶಿಕ್ಷಣದ ಹೃದಯಕ್ಕೆ ತರುವ ಪ್ರಯತ್ನದಲ್ಲಿ, AI ಆಧಾರಿತ ಮುಖ ಗುರುತಿಸುವ ಹಾಜರಾತಿ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಇದು ವಿದ್ಯಾರ್ಥಿಗಳ ಹಾಜರಾತಿಯನ್ನು ನಿಖರವಾಗಿ ದಾಖಲಿಸುವುದಲ್ಲದೆ, ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ.
ಜೂನ್ ೬ರಿಂದ ಜೂನ್ ೧೩ರವರೆಗೆ ನಡೆಯಲಿರುವ ಸತತ ಬೋಧನ ಶಿಬಿರವು ವಿದ್ಯಾರ್ಥಿಗಳಿಗೆ FA-1 ಪರೀಕ್ಷೆಗೆ ಪೂರ್ವಭಾವಿ ತಯಾರಿ ನೀಡಲಿದೆ. FA-1, FA-2, FA-3, FA-4 ಹಾಗೂ SA-1, SA-2 ಪರೀಕ್ಷೆಗಳ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದ್ದು, ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ನಿರಂತರ ಕಲಿಕೆಯ ಮನೋಭಾವ ಮೂಡಿಸಲು ಉದ್ದೇಶಿಸಲಾಗಿದೆ.
ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಶಾಲೆಗಳ ಪರಿಶೀಲನೆ ನಡೆಸಿ, ಶಿಕ್ಷಣದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ಅಚಾನಕ್ ಭೇಟಿ (Flying Visit) ಮೂಲಕ ಶಾಲೆಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸುವ ಕ್ರಮವು ಶಿಕ್ಷಕರಲ್ಲಿ ಹೊಣೆಗಾರಿಕೆಯನ್ನು ಹೆಚ್ಚಿಸಿದೆ.
ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆ ಮಟ್ಟವನ್ನು ನಿರಂತರವಾಗಿ ಪರಿಶೀಲಿಸಿ, ತಿದ್ದುಪಡಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಇದಕ್ಕಾಗಿ “Inspection App” ಎಂಬ ಮೊಬೈಲ್ ಅಪ್ಲಿಕೇಶನ್ ಬಳಸಲಾಗುತ್ತಿದೆ.
ವಿದ್ಯಾರ್ಥಿ ಕಲಿಕೆ ಫಲಿತಾಂಶಗಳನ್ನು ಅಳೆಯಲು KAAMS ವ್ಯವಸ್ಥೆಯನ್ನು ಬಳಸಲಾಗುತ್ತಿದ್ದು, ಇದು ಶಿಕ್ಷಣದ ಗುಣಮಟ್ಟವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತರುವ ಪ್ರಯತ್ನವಾಗಿದೆ.
ಸರ್ಕಾರದ ಕಲ್ಯಾಣ ಯೋಜನೆಗಳ ಕುರಿತು ವಿದ್ಯಾರ್ಥಿ–ಪೋಷಕರಿಗೆ ಅರಿವು ಮೂಡಿಸಲು ಶಾಲಾ ಮಟ್ಟದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳ ಮಾಹಿತಿ ವಿದ್ಯಾರ್ಥಿ ಸಮುದಾಯಕ್ಕೆ ತಲುಪುವಂತೆ ಕ್ರಮ ಕೈಗೊಳ್ಳಲಾಗಿದೆ.
ಶಾಲಾ ಹಬ್ಬ, ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಹೊರಹಾಕಲು ಅವಕಾಶ ಕಲ್ಪಿಸಲಾಗುತ್ತಿದೆ. ಪೋಷಕರೊಂದಿಗೆ ನಿಯಮಿತ ಸಭೆ ನಡೆಸಿ, ಶಾಲಾ ನಿರ್ವಹಣೆಯಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಕಾರ್ಯಕ್ರಮಗಳು ಕಡ್ಡಾಯವಾಗಿ ನಡೆಯಲಿವೆ.
ವಿಶೇಷ ಅಗತ್ಯವಿರುವ ಮಕ್ಕಳಿಗೆ ಸಮಗ್ರ ಶಿಕ್ಷಣ ನೀಡಲು ವಿಶೇಷ ಶಿಕ್ಷಕರನ್ನು ನಿಯೋಜಿಸಲಾಗಿದೆ. ಶಾಲಾ ಆವರಣದಲ್ಲಿ CCTV ಕ್ಯಾಮೆರಾ, ಅಗ್ನಿಶಾಮಕ ಸಾಧನ ಹಾಗೂ ತುರ್ತು ನಿರ್ಗಮನ ಮಾರ್ಗಗಳನ್ನು ಸಿದ್ಧಪಡಿಸಲಾಗಿದೆ.
ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗಾಗಿ ಜಿಲ್ಲಾ ಆರೋಗ್ಯ ಇಲಾಖೆಯೊಂದಿಗೆ ಸಂಯೋಜನೆ ಮಾಡಲಾಗಿದೆ. ಶಾಲಾ ನಿರ್ವಹಣಾ ಸಮಿತಿಗಳ ಸಭೆಗಳನ್ನು ನಿಯಮಿತವಾಗಿ ನಡೆಸಿ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಶಾಲಾ ಪ್ರಾರಂಭೋತ್ಸವದ ದಿನವೇ ವಿದ್ಯಾರ್ಥಿಗಳಿಗೆ ಉಚಿತ ಮಧ್ಯಾಹ್ನ ಊಟ ಯೋಜನೆ (ಅಕ್ಷರ ದಾಸೋಹ) ಪುನರಾರಂಭವಾಗಿದ್ದು, ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುವಂತೆ ನೋಡಿಕೊಳ್ಳಲಾಗಿದೆ.
ಶಾಲಾ ಆವರಣದಲ್ಲಿ ಸ್ವಚ್ಛತಾ ಅಭಿಯಾನಗಳನ್ನು ನಡೆಸಿ, ಪರಿಸರ ಸ್ನೇಹಿ ವಾತಾವರಣವನ್ನು ನಿರ್ಮಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಲಾಗುತ್ತಿದೆ.
ಹೊಸ ಶೈಕ್ಷಣಿಕ ವರ್ಷದಲ್ಲಿ ತಂತ್ರಜ್ಞಾನ ಆಧಾರಿತ ಹಾಜರಾತಿ, ದ್ವಿಭಾಷಾ ಶಿಕ್ಷಣ, ನಿರಂತರ ಬೋಧನ ಶಿಬಿರ ಹಾಗೂ ಸಮಗ್ರ ಕಲಿಕೆ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ರಾಜ್ಯದ ಶಾಲೆಗಳು ಸಜ್ಜಾಗಿವೆ.






Comments
Leave a Comment