ಶೃಂಗೇರಿ ಮರು ಎಣಿಕೆ ವಿವಾದ: ಬಿಜೆಪಿ ಕ್ರಿಮಿನಲ್ ಸಂಚು ನಡೆಸಿದರೆಂದು ಸಿದ್ದರಾಮಯ್ಯ ಆರೋಪ
ಬೆಂಗಳೂರು, ಮೇ 5:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಎಣಿಕೆ ವಿವಾದ, ಬಿಜೆಪಿ ವಿರುದ್ಧದ ಆರೋಪಗಳು ಹಾಗೂ ಕಾಂಗ್ರೆಸ್ ಪಕ್ಷದ ಜಯಗಳ ಕುರಿತು ವಿವರವಾಗಿ ಮಾತನಾಡಿದರು.
ಅವರು ತಿಳಿಸಿದಂತೆ, ಶೃಂಗೇರಿ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರು 201 ಮತಗಳ ಅಂತರದಲ್ಲಿ ಗೆದ್ದಿದ್ದರು. ರಾಜೇಗೌಡರಿಗೆ ಒಟ್ಟು 59,171 ಮತಗಳು ಬಂದಿದ್ದು, ಅವರ ಎದುರಾಳಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರಿಗೆ 58,970 ಮತಗಳು ಬಂದಿದ್ದವು. ಇವಿಎಂ ಹಾಗೂ ಅಂಚೆ ಮತಗಳನ್ನು ಸೇರಿಸಿ ಚುನಾವಣಾಧಿಕಾರಿಗಳು ಹಾಗೂ ಏಜೆಂಟರು ಸಹಿ ಮಾಡಿ ಫಲಿತಾಂಶ ಘೋಷಿಸಿದ್ದರು.
ಆದರೆ ಜೀವರಾಜ್ ಅವರು ಅಕ್ರಮ ನಡೆದಿದೆ ಎಂದು ಹೈಕೋರ್ಟ್‌ನಲ್ಲಿ ಮರು ಎಣಿಕೆಗೆ ಅರ್ಜಿ ಸಲ್ಲಿಸಿದರು. ನ್ಯಾಯಾಲಯದ ನಿರ್ದೇಶನದಂತೆ ನಡೆದ ಮರು ಎಣಿಕೆಯಲ್ಲಿ ರಾಜೇಗೌಡರಿಗೆ 314 ಮತಗಳು ಮಾತ್ರ ಅರ್ಹವಾಗಿದ್ದು, 255 ಮತಗಳು ಅನರ್ಹವಾಗಿವೆ. ಜೀವರಾಜ್ ಅವರಿಗೆ 690 ಮತಗಳು ಲಭಿಸಿರುವುದರಿಂದ, ಬಿಜೆಪಿ ಕ್ರಿಮಿನಲ್ ಸಂಚು ಮಾಡಿ ಮತಪತ್ರಗಳನ್ನು ತಿದ್ದಿರುವುದು ಬಹಳ ಸ್ಪಷ್ಟವಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ರಾಜೇಗೌಡರಿಗೆ ಬಿದ್ದಿದ್ದ 250 ಮತಗಳನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ. ಇದು ವೋಟ್ ಡಕಾಯಿತಿಯಾಗಿದೆ ಎಂದು ಅವರು ಹೇಳಿದರು.
ಮೂರನೇ ಸುತ್ತಿನಲ್ಲಿ ರಾಜೇಗೌಡರಿಗೆ ಲಭಿಸಿದ್ದ 170 ಅಂಚೆ ಮತಗಳು ಈಗ ಅನರ್ಹವಾಗಿವೆ. 2023ರಲ್ಲಿ ಎಲ್ಲಾ ಏಜೆಂಟರು ಸಹಿ ಹಾಕಿದ್ದ ದಾಖಲೆಗಳಿದ್ದರೂ, ಆಗ ಯಾರೂ ಆಕ್ಷೇಪ ಎತ್ತದಿರುವುದನ್ನು ಅವರು ಪ್ರಶ್ನಿಸಿದರು. ಮರು ಎಣಿಕೆ ವೇಳೆ ಚುನಾವಣಾ ವೀಕ್ಷಕರು ಸಹ ಹಾಜರಿದ್ದು, ಗಂಭೀರ ಸ್ವರೂಪದ ಕ್ರಿಮಿನಲ್ ಸಂಚು ನಡೆದಿರುವುದಾಗಿ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದಾಗಿ ಮಾಹಿತಿ ನೀಡಿದರು.
ಚುನಾವಣಾಧಿಕಾರಿಗಳು ವೀಕ್ಷಕರ ಅನುಮತಿಯಿಲ್ಲದೇ ಆತುರಾತುರವಾಗಿ ಫಲಿತಾಂಶ ಘೋಷಿಸಿರುವುದನ್ನು ತಪ್ಪು ಎಂದು ಖಂಡಿಸಿದ ಸಿದ್ದರಾಮಯ್ಯ, ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು. ಅವರು ಬಿಜೆಪಿ ಪಕ್ಷದ ಹಿಂದಿನ ಚಿಲುಮೆ ಪ್ರಕರಣವನ್ನು ನೆನಪಿಸಿ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು ಎಂದು ಆರೋಪಿಸಿದರು.
ರಾಜೇಗೌಡ ಅವರ ದೂರಿನ ಮೇಲೆ ಎಫ್ಐಆರ್ ದಾಖಲಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಅವರು ಹೇಳಿದರು. ಬಾಗಲಕೋಟೆ ಹಾಗೂ ದಾವಣಗೆರೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿರುವುದನ್ನು ಅವರು ಉಲ್ಲೇಖಿಸಿ, ಇದು 2028ರ ಚುನಾವಣೆಗೆ ದಿಕ್ಸೂಚಿ ಎಂದು ಬಿಜೆಪಿ ಪ್ರಚಾರದಲ್ಲಿ ಹೇಳಿದ್ದನ್ನು ನೆನಪಿಸಿದರು.
*ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು...
• ಬಾಗಲಕೋಟೆ ಹಾಗೂ ದಾವಣಗೆರೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿಗಳು ಗೆದ್ದಿದ್ದಾರೆ.
ಇದು ಮುಂದಿನ2028ರ ಚುನಾವಣೆಗೆ ದಿಕ್ಸೂಚಿ ಎಂದು ಬಿಜೆಪಿಯವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳುತ್ತಿದ್ದರು. ಅವರ ಪ್ರಕಾರ 2028ರಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಾಯಿತು.
ಈ ಹಿಂದೆ ನಡೆದ ಮೂರು ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಜಯ ಗಳಿಸಿದೆ. ಇದರರ್ಥ ನಮ್ಮ ಕಾರ್ಯಕ್ರಮಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ನಮ್ಮ ಕಾರ್ಯಕ್ರಮಗಳು ಮತದಾರರನ್ನು ತಲುಪಿವೆ. ಜನರು ನಮ್ಮ ಮೇಲೆ ವಿಶ್ವಾಸ, ಅಭಿಮಾನ ಇರಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷನ ನುಡಿದಂತೆ ನಡೆಯುವ ಪಕ್ಷ. ಕೊಟ್ಟ ಮಾತಿನಂತೆ ನಡೆಯುವ ಪಕ್ಷ. ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿದಿದ್ದಾವೆ.

Comments
Leave a Comment