ಉಡುಪಿ-ದಕ್ಷಿಣ ಕನ್ನಡಕ್ಕೆ ಮಾತ್ರ ಸೀಮಿತವಾಗಿ ತುಳುಗೆ ಹೆಚ್ಚುವರಿ ಭಾಷೆಯ ಮಾನ್ಯತೆ: ರಾಜ್ಯ ಸರ್ಕಾರದ ಐತಿಹಾಸಿಕ ಆದೇಶ
ಉಡುಪಿ-ದಕ್ಷಿಣ ಕನ್ನಡಕ್ಕೆ ಮಾತ್ರ ಸೀಮಿತವಾಗಿ ತುಳುಗೆ ಹೆಚ್ಚುವರಿ ಭಾಷೆಯ ಮಾನ್ಯತೆ: ರಾಜ್ಯ ಸರ್ಕಾರದ ಐತಿಹಾಸಿಕ ಆದೇಶ
ಬೆಂಗಳೂರು, ನವೆಂಬರ್ 25: ಕರಾವಳಿ ಕರ್ನಾಟಕದ ಪ್ರಮುಖ ಭಾಷೆಯಾಗಿರುವ ತುಳು ಭಾಷೆಗೆ ರಾಜ್ಯ ಸರ್ಕಾರ ಮಹತ್ವದ ಮಾನ್ಯತೆ ನೀಡಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಡಳಿತಾತ್ಮಕ ಉದ್ದೇಶಗಳಿಗಾಗಿ ಕನ್ನಡದ ಜೊತೆಗೆ ತುಳು ಭಾಷೆಯನ್ನು ಹೆಚ್ಚುವರಿ ಭಾಷೆಯಾಗಿ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಆದೇಶವನ್ನು ಪ್ರಕಟಿಸಿದ್ದು, ತುಳು ಭಾಷೆಯ ಅಭಿವೃದ್ಧಿ ಹಾಗೂ ತುಳು ಭಾಷಿಕರಿಗೆ ಸರ್ಕಾರಿ ಸೇವೆಗಳ ಲಭ್ಯತೆಯನ್ನು ಇನ್ನಷ್ಟು ಸುಗಮಗೊಳಿಸುವ ಉದ್ದೇಶ ಹೊಂದಿದೆ.
ಕರ್ನಾಟಕ ರಾಜ್ಯಭಾಷಾ ಅಧಿನಿಯಮ-1963ರ ಪ್ರಕಾರ ಕನ್ನಡವು ರಾಜ್ಯದ ಅಧಿಕೃತ ಭಾಷೆಯಾಗಿದ್ದು, ಹಲವು ವರ್ಷಗಳಿಂದ ತುಳು ಭಾಷೆಯನ್ನು ಹೆಚ್ಚುವರಿ ಭಾಷೆಯಾಗಿ ಗುರುತಿಸುವಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಮತ್ತು ಸಾರ್ವಜನಿಕ ವಲಯದಿಂದ ಸರ್ಕಾರಕ್ಕೆ ಮನವಿಗಳು ಸಲ್ಲಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರವು 2023ರಲ್ಲಿ ವಿಶೇಷ ಅಧ್ಯಯನ ಸಮಿತಿಯನ್ನು ರಚಿಸಿತ್ತು. ಸಮಿತಿಯು ತುಳು ಭಾಷೆಯ ಇತಿಹಾಸ, ಸಾಹಿತ್ಯ ಪರಂಪರೆ, ಲಿಪಿ, ಸಂಸ್ಕೃತಿ, ಶಾಸನಗಳು, ಪ್ರಾಚೀನ ಮತ್ತು ಆಧುನಿಕ ಸಾಹಿತ್ಯ ಸೇರಿದಂತೆ ವಿವಿಧ ಆಯಾಮಗಳ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಿತ್ತು.
ಸಮಿತಿಯ ವರದಿಯಲ್ಲಿ ತುಳು ಭಾಷೆಯು ಭಾಷಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸಮೃದ್ಧ ಭಾಷೆಯಾಗಿದ್ದು, ಅದರ ಬೆಳವಣಿಗೆ ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿತ್ತು. ನಂತರ ಸರ್ಕಾರವು ಅನುಷ್ಠಾನದ ಸಾಧ್ಯತೆಗಳ ಕುರಿತು ಮತ್ತೊಂದು ಅಧ್ಯಯನ ತಂಡವನ್ನು ರಚಿಸಿತ್ತು. ಈ ತಂಡವು ಹೆಚ್ಚುವರಿ ಭಾಷೆಗಳನ್ನು ಜಾರಿಗೊಳಿಸಿರುವ ಇತರ ರಾಜ್ಯಗಳ ಅನುಭವವನ್ನು ಪರಿಶೀಲಿಸಿದ್ದು, ಆಂಧ್ರಪ್ರದೇಶದಲ್ಲಿ ಉರ್ದು ಭಾಷೆಯ ಬಳಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ಅನುಸರಿಸಲಾಗಿರುವ ಮಾದರಿಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಿತ್ತು.
ಈ ವರದಿಗಳನ್ನು ಪರಿಗಣಿಸಿ ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ವಿಷಯವನ್ನು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಾತ್ರ ತುಳು ಭಾಷೆಯನ್ನು ಕನ್ನಡದ ಜೊತೆಗೆ ಹೆಚ್ಚುವರಿ ಭಾಷೆಯಾಗಿ ಬಳಸಲು ಅನುಮೋದನೆ ನೀಡಲಾಗಿದೆ.
ಆದೇಶದ ಪ್ರಕಾರ ತುಳು ಭಾಷೆಯನ್ನು ಕನ್ನಡ ಲಿಪಿಯಲ್ಲಿಯೇ ಬಳಸಲಾಗುವುದು. ಈ ಕಾರ್ಯದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿಶೇಷ ಅನುಷ್ಠಾನ ಘಟಕವನ್ನು ಸ್ಥಾಪಿಸಲಾಗುತ್ತದೆ. ಜೊತೆಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ತಲಾ ಇಬ್ಬರು ಭಾಷಾಂತರಕಾರರನ್ನು ನೇಮಿಸಲಾಗುವುದು. ಒಟ್ಟು ನಾಲ್ವರು ಭಾಷಾಂತರಕಾರರಿಗೆ ಪ್ರತಿ ತಿಂಗಳು ರೂ.30,000 ಗೌರವ ಸಂಭಾವನೆ ನೀಡಲಾಗುತ್ತದೆ.
ಇದಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ 9 ತಾಲ್ಲೂಕುಗಳು ಹಾಗೂ ಉಡುಪಿ ಜಿಲ್ಲೆಯ 7 ತಾಲ್ಲೂಕುಗಳನ್ನು ಸೇರಿ ಒಟ್ಟು 16 ತಾಲ್ಲೂಕು ಕಚೇರಿಗಳಲ್ಲಿ ತಲಾ ಒಬ್ಬರಂತೆ 16 ಭಾಷಾಂತರಕಾರರನ್ನು ನೇಮಕ ಮಾಡಲಾಗುತ್ತದೆ. ಇವರಿಗೂ ಪ್ರತಿ ತಿಂಗಳು ರೂ.30,000 ಗೌರವ ಸಂಭಾವನೆ ನೀಡಲು ಸರ್ಕಾರ ಅನುಮೋದನೆ ನೀಡಿದೆ.
ಮುಂದಿನ ದಿನಗಳಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿನ ಸಾರ್ವಜನಿಕ ಕಚೇರಿಗಳು ತುಳು ಭಾಷೆಯಲ್ಲಿ ಸಲ್ಲಿಕೆಯಾಗುವ ಮನವಿಗಳು ಮತ್ತು ಅರ್ಜಿಗಳನ್ನು ಸ್ವೀಕರಿಸಲಿವೆ. ಅಲ್ಲದೆ ನಾಗರಿಕರಿಗೆ ನೀಡುವ ಮಾಹಿತಿ ಹಾಗೂ ಉತ್ತರಗಳನ್ನು ಕನ್ನಡದ ಜೊತೆಗೆ ತುಳು ಭಾಷೆಯಲ್ಲಿಯೂ ಒದಗಿಸಲಾಗುತ್ತದೆ. ಸಾರ್ವಜನಿಕರೊಂದಿಗೆ ಆಡಳಿತಾತ್ಮಕ ಸಂಪರ್ಕವನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಇದೇ ವೇಳೆ ಜಿಲ್ಲಾಧಿಕಾರಿಗಳ ಕಚೇರಿಗಳಿಂದ ಹೊರಡಿಸಲಾಗುವ ಪ್ರಮುಖ ಆದೇಶಗಳು, ಪ್ರಕಟಣೆಗಳು ಹಾಗೂ ಸಾರ್ವಜನಿಕರಿಗಾಗಿ ಪ್ರದರ್ಶಿಸಲಾಗುವ ಪ್ರಮುಖ ಸೂಚನಾ ಫಲಕಗಳನ್ನು ಕನ್ನಡದ ಜೊತೆಗೆ ತುಳು ಭಾಷೆಯಲ್ಲಿಯೂ ಪ್ರಕಟಿಸುವುದು ಕಡ್ಡಾಯವಾಗಲಿದೆ. ಇದರಿಂದ ತುಳು ಭಾಷಿಕರಿಗೆ ಸರ್ಕಾರದ ಮಾಹಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಸರ್ಕಾರಿ ಸೇವೆಗಳನ್ನು ಪಡೆಯಲು ಹೆಚ್ಚಿನ ಅನುಕೂಲವಾಗಲಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಕರ್ನಾಟಕದಲ್ಲಿ ತುಳು ಭಾಷೆಗೆ ಸೀಮಿತ ಆಡಳಿತಾತ್ಮಕ ಮಾನ್ಯತೆ ನೀಡಿರುವ ಈ ನಿರ್ಧಾರವನ್ನು ಕರಾವಳಿ ಭಾಗದ ತುಳು ಭಾಷಿಕರು ಸ್ವಾಗತಿಸಿದ್ದು, ಭಾಷೆಯ ಸಂರಕ್ಷಣೆ, ಬೆಳವಣಿಗೆ ಹಾಗೂ ಮುಂದಿನ ಪೀಳಿಗೆಗಳಿಗೆ ಅದರ ವರ್ಗಾವಣೆಗೆ ಇದು ಹೊಸ ಉತ್ತೇಜನ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ರಾಜ್ಯದ ಬಹುಭಾಷಾ ಮತ್ತು ಬಹುಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಆದೇಶ ಮಹತ್ವದ ಹೆಜ್ಜೆಯಾಗಿದೆ ಎಂದು ಪರಿಗಣಿಸಲಾಗಿದೆ.







Comments
Leave a Comment