ಜಪಾನ್ ಪ್ರವಾಸದಲ್ಲಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ
ಜಪಾನ್ ಪ್ರವಾಸದಲ್ಲಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ
ಹಾರೋಹಳ್ಳಿಯಲ್ಲಿ ತಯಾರಿಕಾ ಸ್ಥಾವರ ಸ್ಥಾಪನೆಗೆ ನೆಚುರೇನ್ ಕಂಪನಿ ಆಸಕ್ತಿ
ಎರಡನೇ ದಿನ 6 ಕಂಪನಿಗಳ ಜತೆ ಹೂಡಿಕೆ ಮಾತುಕತೆ
ಬೆಂಗಳೂರು: ರಾಜ್ಯದ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಜಪಾನ್ ಪ್ರವಾಸ ಕೈಗೊಂಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಮಂಗಳವಾರ ನೆಚುರೇನ್, ಅಜಿನೋಮೋಟೋ ಮತ್ತು ಜೆಟ್ರೋ ಸೇರಿದಂತೆ ಒಟ್ಟು ಆರು ಕಂಪನಿಗಳ ಪ್ರಮುಖರೊಂದಿಗೆ ವಿಸ್ತೃತ ಮಾತುಕತೆ ನಡೆಸಿದ್ದಾರೆ. ಈ ಪೈಕಿ ನೆಚುರೇನ್ ಮತ್ತು ಜೆಎಕ್ಸ್ ಮೆಟಲ್ ಟ್ರೇಡಿಂಗ್ ಕಂಪನಿಗಳು ರಾಜ್ಯದಲ್ಲಿ ಅತ್ಯಾಧುನಿಕ ತಯಾರಿಕಾ ಸ್ಥಾವರಗಳನ್ನು ಹೊಂದಲು ಬಯಸಿವೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, `ಜಪಾನಿನ ಅಗ್ರಪಂಕ್ತಿಯ ಕಂಪನಿಗಳಲ್ಲಿ ಒಂದಾಗಿರುವ ನೆಚುರೇನ್, ರಾಜ್ಯದ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅತ್ಯಾಧುನಿಕ ತಯಾರಿಕಾ ಸ್ಥಾವರ ಸ್ಥಾಪಿಸಲು ಆಸಕ್ತಿ ತೋರಿಸಿದೆ ಕಂಪನಿಯು ವಿಶೇಷ ಇಂಡಕ್ಷನ್ ಹೀಟಿಂಗ್ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದೆ. ಇದನ್ನು ಬಳಿಸಿಕೊಂಡು ವಾಹನಗಳ ಸಸ್ಪೆನ್ಶನ್ ಸ್ಪ್ರಿಂಗುಗಳಿಗೆ ಅಗತ್ಯವಿರುವ ಅಧಿಕ ಸಾಮರ್ಥ್ಯದ ವೈರ್ ತಯಾರಿಸುವ ತಂತ್ರಜ್ಞಾನವು ಈ ಯೋಜನೆಯ ಪ್ರಮುಖ ಪ್ರಸ್ತಾವನೆಯಾಗಿದೆ’ ಎಂದಿದ್ದಾರೆ.
ಈ ಯೋಜನೆ ಕಾರ್ಯಗತವಾದರೆ ರಾಜ್ಯದ ಆಟೋಮೋಟೀವ್ ಮತ್ತು ಅಡ್ವಾನ್ಸ್ಡ್ ಎಂಜಿನಿಯರಿಂಗ್ ವಲಯಗಳ ಬಲವರ್ಧನೆಯಾಗಲಿದೆ. ಕಂಪನಿಗೆ ಅಗತ್ಯವಿರುವ ಭೂಮಿಯನ್ನು ಹಾರೋಹಳ್ಳಿಯಲ್ಲಿ ಒದಗಿಸಲು ನಾವು ಸಿದ್ಧವೆಂದು ತಿಳಿಸಿದ್ದೇವೆ. ಇದನ್ನು ಕಾಲಮಿತಿಯೊಳಗೆ ನೈಜರೂಪಕ್ಕೆ ಬರುವಂತೆ ಮಾಡಬೇಕಾದ ಜರೂರನ್ನು ಅರ್ಥ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಬೇಕಾಗುವ ವಿದ್ಯುನ್ಮಾನ ಬಿಡಿಭಾಗಗಳು ಮತ್ತಿತರ ಉತ್ಪನ್ನಗಳನ್ನು ತಯಾರಿಸುವ ಜೆಎಕ್ಸ್ ಮೆಟಲ್ ಟ್ರೇಡಿಂಗ್ ಕಂಪನಿ ನಮ್ಮಲ್ಲಿರುವ ಪೂರೈಕೆ ಸರಪಳಿಯಲ್ಲಿ ತನಗೆ ಸಿಗಬಹುದಾದ ಅತ್ಯುತ್ತಮ ಅವಕಾಶಗಳ ಬಗ್ಗೆ ಗಮನ ಹರಿಸಿದೆ. ಈ ಕಂಪನಿಯು ಮೂಲ ಸಾಧನಗಳನ್ನು ತಯಾರಿಸುವ ಕಂಪನಿಗಳು (ಒಇಎಂ) ಮತ್ತು ಬಿಡಿಭಾಗಗಳನ್ನು ತಯಾರಿಸುವ ಕಂಪನಿಗಳೊಂದಿಗೆ ವ್ಯವಹರಿಸುವ ಆಸಕ್ತಿ ತೋರಿಸಿದೆ. ಇದು ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ, ಎಲೆಕ್ಟ್ರಾನಿಕ್ ಸಾಧನಗಳ ತಯಾರಿಕೆಗೆ ಹೆಸರುವಾಸಿಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಜೆಟ್ರೋ ಕಂಪನಿಯೊಂದಿಗೆ ಜಪಾನ್ ಮತ್ತು ಕರ್ನಾಟಕ ನಡುವಿನ ಕೈಗಾರಿಕಾ ಸಹಭಾಗಿತ್ವಕ್ಕೆ ಇರುವ ಹೆಚ್ಚಿನ ಅವಕಾಶಗಳನ್ನು ಕುರಿತು ವಿಚಾರ ವಿನಿಮಯ ನಡೆಸಲಾಯಿತು. ಜತೆಗೆ ನಮ್ಮಲ್ಲಿರುವ ಜಪಾನ್ ಟೌನ್-ಶಿಪ್ ಪ್ರದೇಶದಲ್ಲಿ ಜಪಾನೀಸ್ ಶಾಲೆಯನ್ನು ತೆರೆಯುವ ಬಗ್ಗೆ ಚರ್ಚಿಸಲಾಗಿದೆ. ರಾಜ್ಯದಲ್ಲಿ ಹೂಡಿಕೆ ಮಾಡುವ ಜಪಾನಿನ ಕಂಪನಿಗಳಿಗೆ ನೆರವು ನೀಡುವುದು ಇದರ ಹಿಂದಿನ ಉದ್ದೇಶವಾಗಿದೆ. ಇದಕ್ಕಾಗಿ ರಾಜ್ಯ ಸರಕಾರದಿಂದ ಅವರಿಗೆ ಸಿ.ಎ. ನಿವೇಶನ ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಯುವಕರಿಗೆ ಜಪಾನಿ ಕಂಪನಿಗಳಲ್ಲಿ ಉದ್ಯೋಗಾವಕಾಶ ಸಿಗಬೇಕು. ಇದಕ್ಕಾಗಿ ನಮ್ಮ ಐಟಿಐ ವಿದ್ಯಾರ್ಥಿಗಳಿಗೆ ಜಪಾನಿ ಭಾಷೆಯನ್ನು ಕಲಿಸುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಇದರ ರೂಪುರೇಷೆ ಹೇಗಿರಬೇಕು ಎನ್ನುವುದನ್ನು ಮುಂದಿನ ದಿನಗಳಲ್ಲಿ ಚಿಂತಿಸಲಾಗುವುದು ಎಂದು ಅವರು ನುಡಿದಿದ್ದಾರೆ.
ರಾಜ್ಯದಲ್ಲಿ ಜೈವಿಕವಿಜ್ಞಾನ, ಬಯೋಫಾರ್ಮಾ ಮತ್ತು ಜೀವವಿಜ್ಞಾನ ಕ್ಷೇತ್ರಗಳು ಅಗಾಧವಾಗಿ ಬೆಳೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅಜಿನೋಮೋಟೋ ಕಂಪನಿಯು ಕರ್ನಾಟಕದಲ್ಲಿ ಬಂಡವಾಳ ತೊಡಗಿಸಲು ಉತ್ಸುಕವಾಗಿದೆ. ಇದಕ್ಕಾಗಿ ಅದು ಸೂಕ್ತ ಪ್ರತಿಭಾವಂತರು ತನಗೆ ಅಗತ್ಯ ಎಂದು ತಿಳಿಸಿದೆ. ಈ ನಿಟ್ಟಿನಲ್ಲಿ ನಾವು ಕಂಪನಿಗೂ ನಮ್ಮಲ್ಲಿರುವ ವಿಶ್ವವಿದ್ಯಾಲಯಗಳು, ಪ್ರಾಧ್ಯಾಪಕರು, ಶಿಕ್ಷಣ ಸಂಸ್ಥೆಗಳೊಂದಿಗೂ ಸಂಪರ್ಕ ಸಾಧಿಸಿ ಕೊಡುವ ಭರವಸೆ ಕೊಟ್ಟಿದ್ದೇವೆ. ಮಾತುಕತೆಯ ವೇಳೆ ಎಲ್ಲ ಕಂಪನಿಗಳನ್ನೂ ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನಿಸಲಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.
ಮಾತುಕತೆಯಲ್ಲಿ ನೆಚುರೇನ್ ಕಂಪನಿಯ ಪರವಾಗಿ ಅದರ ಕಾರ್ಯನಿರ್ವಾಹಕ ಅಧಿಕಾರಿ ಕ್ಯೋ ಹೊಸೋಡ, ವ್ಯವಸ್ಥಾಪಕ ನಿರ್ದೇಶಕ ಮಕೋಟೋ ನಕಹರ, ಜೆಎಕ್ಸ್ ಮೆಟಲ್ ಕಂಪನಿಯ ಅಧ್ಯಕ್ಷ ಅತ್ಸುಶಿ, ಹಿರಿಯ ನಿರ್ದೇಶಕ ಹಿರೋಯಸು ಆಂಡೋ, ಅಜಿನೋಮೋಟೋ ಕಂಪನಿಯ ಮುಖ್ಯಸ್ಥರಾದ ಟೋಮೋ ತಕಾಗಿ ಮತ್ತು ಯರೋನ್ ಆರ್ ಸಿಲ್ಬರ್ಬರ್ಗ್, ಜೆಟ್ರೋ ಕಂಪನಿಯ ಉಪಾಧ್ಯಕ್ಷ ಅಕಿಕೊ ಒಕುಮಾರ ಭಾಗವಹಿಸಿದ್ದರು.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತೆ ಖಷ್ಬೂ ಗೋಯಲ್ ಕೂಡ ಇದ್ದರು.







Comments
Leave a Comment