PRABHAVAA.COM

ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಎಳೆದ ಕಾಂಗ್ರೆಸ್ ಸರ್ಕಾರ: ಬಿ.ವೈ. ವಿಜಯೇಂದ್ರ ಹಾಲು, ಮೊಸರು ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

Davanagere:

Font size:

ಹಾಲು, ಮೊಸರು ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ದಾವಣಗೆರೆ, ಅ.31:

ರಾಜ್ಯದ ಜನತೆಗೆ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಉಡುಗೊರೆಯಾಗಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ಮಾಡುವ ಮೂಲಕ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾಲಿನ ಬೆಲೆಯನ್ನು ಲೀಟರ್‌ಗೆ 8 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರ ನೈಜ ಹೊರೆ ಗ್ರಾಹಕರಿಗೆ ಇನ್ನಷ್ಟು ಹೆಚ್ಚಾಗಲಿದೆ. ಮೊಸರಿನ ದರವನ್ನೂ ಏರಿಕೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಬಸ್ ಪ್ರಯಾಣ ದರ ಹೆಚ್ಚಳಕ್ಕೂ ಸರ್ಕಾರ ಮುಂದಾಗಿದೆ. ಬರಗಾಲದ ಸಂಕಷ್ಟದಲ್ಲಿರುವ ಜನರ ಮೇಲೆ ಇಂತಹ ಹೊರೆ ಹಾಕುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಹಾಲಿನ ದರ ಹೆಚ್ಚಳದಿಂದ ರೈತರಿಗೆ ಅನುಕೂಲವಾಗುತ್ತದೆ ಎಂಬುದನ್ನು ಒಪ್ಪುತ್ತೇವೆ. ಆದರೆ ರೈತರಿಗೆ ಅನುಕೂಲ ಕಲ್ಪಿಸುವ ಹೆಸರಿನಲ್ಲಿ ಗ್ರಾಹಕರ ಮೇಲೆ ಹೊರೆ ಹಾಕುವುದು ಸರಿಯಲ್ಲ. ಹಾಲಿನ ಮೇಲಿನ ಸಹಾಯಧನವನ್ನು ಹೆಚ್ಚಿಸುವ ಮೂಲಕ ಸರ್ಕಾರವೇ ಹೆಚ್ಚುವರಿ ಹೊರೆ ಭರಿಸಬೇಕಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಎರಡು ಬಾರಿ ತಲಾ ಎರಡು ಹಾಗೂ ನಾಲ್ಕು ರೂಪಾಯಿ ಸಹಾಯಧನ ನೀಡಲಾಗಿತ್ತು. ದೇಶದಲ್ಲೇ ಮಾದರಿಯಾಗಿದ್ದ ಆ ಕ್ರಮವನ್ನು ಈಗಿನ ಸರ್ಕಾರ ಏಕೆ ಮುಂದುವರಿಸುತ್ತಿಲ್ಲ? ಜನಸಾಮಾನ್ಯರ ಹಿತದೃಷ್ಟಿಯಿಂದ ಸರ್ಕಾರವೇ ಹೊರೆ ಹೊರಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪೆಟ್ರೋಲ್, ಮದ್ಯ, ಸ್ಟಾಂಪ್ ಡ್ಯೂಟಿ, ಹಾಲು ಸೇರಿದಂತೆ ಒಂದರ ಹಿಂದೆ ಒಂದರಂತೆ ಬೆಲೆ ಏರಿಕೆ ಮಾಡಲಾಗುತ್ತಿದೆ. ಆಸ್ಪತ್ರೆಗಳಿಗೆ ಹೋದರೂ ಜನರಿಗೆ ಹೊರೆ, ಬೈಕ್ ಟ್ಯಾಕ್ಸಿ, ಪಾರ್ಕಿಂಗ್ ಎಲ್ಲದರಲ್ಲೂ ಹೆಚ್ಚುವರಿ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗಾಳಿ ಒಂದನ್ನು ಬಿಟ್ಟು ಉಳಿದೆಲ್ಲದರ ಮೇಲೂ ಹೊರೆ ಹಾಕುವ ಪರಿಸ್ಥಿತಿ ಬಂದಿದೆ. ಮದುವೆಯಾದ ದಂಪತಿಗಳು ಮಕ್ಕಳನ್ನು ಹೊಂದುವ ಬಗ್ಗೆಯೂ ಯೋಚಿಸುವಷ್ಟು ದುಬಾರಿ ಬದುಕು ಸೃಷ್ಟಿಯಾಗಿದೆ ಎಂದು ಟೀಕಿಸಿದರು.

ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಹಾಗೂ ಗ್ರಾಹಕರ ಮೇಲಿನ ಹೊರೆ ತಪ್ಪಿಸಿ ಸರ್ಕಾರವೇ ಹೆಚ್ಚುವರಿ ವೆಚ್ಚ ಭರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ವಾಲ್ಮೀಕಿ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ಕಪಟ ನಾಟಕ

ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಸಂವಿಧಾನದ ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ನಾಯಕ ಉಗ್ರಪ್ಪ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ ಅವರು, ಬಿಜೆಪಿ ತಪ್ಪು ಮಾಡಿದೆ ಎಂದು ಯಾರು ಹೇಳಿದ್ದಾರೆ? ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಬೇಕಿತ್ತು. ನ್ಯಾಯಾಲಯದ ಮುಂದೆ ಸರಿಯಾಗಿ ಹಾಜರಾಗದೆ ಈಗ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜವಾಬ್ದಾರಿ ಹೊರಿಸುವುದು ಸರಿಯಲ್ಲ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ನಾಯಕರು ಕಪಟ ನಾಟಕವಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ವಿಫಲ

ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆ ಹಾಸ್ಯಾಸ್ಪದವಾಗಿದೆ. ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ ಮುಖ್ಯಮಂತ್ರಿಗಳು ರೈತರಿಗೆ ಸಿಹಿಸುದ್ದಿ ನೀಡುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಕೊನೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದು ಹೇಳಿ ವಾಪಸ್ಸಾಗಿದ್ದಾರೆ. ಇಷ್ಟೊಂದು ವೇಗವಾಗಿ ದೆಹಲಿಗೆ ತೆರಳಿದವರು ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಕೇಂದ್ರದತ್ತ ಬೆರಳು ತೋರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಹರಿಯಾಣದಲ್ಲಿ ರೈತರಿಗೆ ವಿಶೇಷ ಪ್ಯಾಕೇಜ್ ನೀಡಲಾಗುತ್ತಿದೆ. ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.

ಖಜಾನೆ ಖಾಲಿಯಾಗಿರುವುದಕ್ಕೆ ಬಸ್‌ಗಳಿಗೆ ಡೀಸೆಲ್ ಇಲ್ಲ ಎಂಬ ಹೇಳಿಕೆಯೇ ಸಾಕ್ಷಿ

ಬಸ್‌ಗಳಿಗೆ ಡೀಸೆಲ್ ಹಾಕಿಸಲು ಹಣವಿಲ್ಲ ಎಂಬ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಆರು ತಿಂಗಳಿನಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸುವಂತೆ ನಾವು ಒತ್ತಾಯಿಸುತ್ತಿದ್ದೇವೆ. ಅದಕ್ಕೆ ಉತ್ತರವಾಗಿ ಜೇಬು ತೋರಿಸಿದ್ದಾರೆ. ಅದಕ್ಕಿಂತಲೂ ದೊಡ್ಡ ಸಾಕ್ಷಿ ಬೇಕೇ? ಹಾಲು ಉತ್ಪಾದಕರಿಗೆ ನೀಡಬೇಕಾದ ಸುಮಾರು 1,700 ಕೋಟಿ ರೂಪಾಯಿ ಸಹಾಯಧನವೂ ಬಾಕಿ ಇದೆ. ಬಸ್‌ಗಳಿಗೆ ಡೀಸೆಲ್ ಖರೀದಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿರುವುದು ರಾಜ್ಯದ ಖಜಾನೆ ಖಾಲಿಯಾಗುತ್ತಿರುವುದರ ಮುನ್ಸೂಚನೆ ಎಂದು ಹೇಳಿದರು.

ನಾಲ್ಕು ಎಂಎಲ್‌ಸಿ ಸ್ಥಾನಗಳ ಗೆಲುವು ಕಾಂಗ್ರೆಸ್‌ಗೆ ಜನರ ತೀರ್ಪು

ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಜನರು ನೀಡಿರುವ ತಕ್ಕ ಉತ್ತರವಾಗಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಬೆಳಗಾವಿಯಲ್ಲಿ ಸಿಹಿಸುದ್ದಿ ನೀಡುತ್ತೇವೆ ಎಂದು ಹೇಳುವ ಕಾಂಗ್ರೆಸ್ ನಾಯಕರು ರಾಜ್ಯದ ಜನರ ಸಮಸ್ಯೆಗಳಿಗೆ ಯಾವ ಪರಿಹಾರ ನೀಡಿದ್ದಾರೆ? ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾ ಆಡಳಿತದ ಮೂಲಭೂತ ಜವಾಬ್ದಾರಿಗಳನ್ನು ಮರೆತಿದ್ದಾರೆ ಎಂದು ಟೀಕಿಸಿದರು.

ಐಟಿ-ಬಿಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದರೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ ಎಷ್ಟು ಹುದ್ದೆಗಳನ್ನು ಭರ್ತಿ ಮಾಡಿದ್ದಾರೆ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.

ಬಿಜೆಪಿಯಲ್ಲಿನ ಆಂತರಿಕ ಸಮಸ್ಯೆಗಳು ಶೀಘ್ರದಲ್ಲೇ ಬಗೆಹರಿಯಲಿವೆ

ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಮಸ್ಯೆಗಳು ಎದುರಾದಷ್ಟೂ ನನಗೆ ಇನ್ನಷ್ಟು ಉತ್ಸಾಹ ಬರುತ್ತದೆ. ಸವಾಲುಗಳನ್ನು ಎದುರಿಸಿಯೇ ನಾವು ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ. ಪಕ್ಷದೊಳಗಿನ ಗೊಂದಲಗಳು ಶೀಘ್ರದಲ್ಲೇ ಬಗೆಹರಿಯಲಿವೆ. ದಾವಣಗೆರೆಯಲ್ಲಿನ ಸಮಸ್ಯೆಯೂ ಸರಿಯಾಗಲಿದೆ. ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರ ಶಕ್ತಿಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದರು.

ಹಿರಿಯೂರು ಉಪಚುನಾವಣೆಯ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭೇಟಿಯಾಗಿರುವ ಕುರಿತು ಪ್ರತಿಕ್ರಿಯಿಸಿ, ಆ ಭೇಟಿಯಲ್ಲಿ ಏನು ಚರ್ಚೆಯಾಗಿದೆ ಎಂಬುದು ನನಗೆ ತಿಳಿದಿಲ್ಲ. ಜೆಡಿಎಸ್ ಸಹಕಾರದೊಂದಿಗೆ ಬಿಜೆಪಿ ಸ್ಪರ್ಧಿಸುವ ಸಾಧ್ಯತೆಗಳ ಬಗ್ಗೆಯೂ ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ ಎಂದರು.

ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನ

ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿರುವ ವಿಚಾರವಾಗಿ ಮಾತನಾಡಿದ ವಿಜಯೇಂದ್ರ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಕಂಡು ರಾಹುಲ್ ಗಾಂಧಿ ಹತಾಶರಾಗಿದ್ದಾರೆ. ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸಿ, ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ನಡೆಸುತ್ತಿದೆ. ಕಮ್ಯುನಿಸ್ಟ್ ಸಂಘಟನೆಗಳ ಸಹಕಾರದೊಂದಿಗೆ ದೇಶದಲ್ಲಿ ಗೊಂದಲ ಮತ್ತು ಅಸ್ಥಿರತೆ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಯಾಗಿ ಬಿಜೆಪಿಯಿಂದ ದೇಶಾದ್ಯಂತ 'ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ' ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕರ್ನಾಟಕದಲ್ಲಿಯೂ ಈ ಅಭಿಯಾನದಡಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಚಿತ್ರದುರ್ಗ ವಿಭಾಗದಲ್ಲಿ ಪಾದಯಾತ್ರೆ ನಡೆಸಲಾಗುತ್ತಿದ್ದು, ಸುಮಾರು 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಪಾದಯಾತ್ರೆ, ಸಾರ್ವಜನಿಕ ಸಂವಾದ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಕೇಂದ್ರದ ಎನ್‌ಡಿಎ ಸರ್ಕಾರದ ಸಾಧನೆಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

Comments

Leave a Comment

Prev Post ಕಾಂಗ್ರೆಸ್ ಕಾರ್ಯಕರ್ತರ ಬೆವರಿನ ಕಾಣಿಕೆಯಿಂದಲೇ ಇಂದಿರಾ ಭವನ ನಿರ್ಮಾಣವಾಗಲಿ: ಸಿಎಂ ಡಿ ಕೆ ಶಿವಕುಮಾರ್
Next Post KAS trasnfers 31st oct 2026

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News