ಟ್ಯುಟೋರಿಯಲ್, ಕೋಚಿಂಗ್ ಸೆಂಟರ್ಗಳಿಗೆ ಕಟ್ಟುನಿಟ್ಟಿನ ನಿಯಮ: ಕರ್ನಾಟಕ ಸರ್ಕಾರದಿಂದ ಕರಡು ಅಧಿಸೂಚನೆ
ಟ್ಯುಟೋರಿಯಲ್, ಕೋಚಿಂಗ್ ಸೆಂಟರ್ಗಳಿಗೆ ಕಟ್ಟುನಿಟ್ಟಿನ ನಿಯಮ: ಕರ್ನಾಟಕ ಸರ್ಕಾರದಿಂದ ಕರಡು ಅಧಿಸೂಚನೆ
#KarnatakaEducation #CoachingCenters #TutorialInstitutions #EducationRules2026 #KarnatakaGovernment #HigherEducation #CoachingCenterRegulation #StudentWelfare #EducationPolicy #MentalHealth #CounsellingSupport #AcademicSupport #EducationReform #SchoolEducation #CompetitiveExams #StudentSafety #CoachingInstitute #LearningEnvironment #KarnatakaNews #EducationNews #PublicNotice #OfficialGazette #EducationSector #TutorialClasses #StudentProtection
link : https://prabhavaa.com/media/documents/tutions.pdf
ಬೆಂಗಳೂರು, ಅ.28- ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಟ್ಯುಟೋರಿಯಲ್ ಸಂಸ್ಥೆಗಳು, ಟ್ಯೂಷನ್ ಕೇಂದ್ರಗಳು ಮತ್ತು ಕೋಚಿಂಗ್ ಸೆಂಟರ್ಗಳ ಕಾರ್ಯವೈಖರಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಕರ್ನಾಟಕ ಶಿಕ್ಷಣ ಕಾಯ್ದೆ, 1983ರ ಅಡಿಯಲ್ಲಿ “ಕರ್ನಾಟಕ ಟ್ಯುಟೋರಿಯಲ್ ಸಂಸ್ಥೆಗಳು ಅಥವಾ ತರಬೇತಿ ಕೇಂದ್ರಗಳ ನೋಂದಣಿ ಮತ್ತು ನಿಯಂತ್ರಣ ನಿಯಮಗಳು-2026” ಕರಡನ್ನು ಅಧಿಕೃತ ಗೆಜೆಟ್ನಲ್ಲಿ ಪ್ರಕಟಿಸಿದೆ. ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಕರಡು ನಿಯಮಗಳ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದ್ದು, ಅಧಿಕೃತ ಗೆಜೆಟ್ನಲ್ಲಿ ಪ್ರಕಟವಾದ ದಿನಾಂಕದಿಂದ 15 ದಿನಗಳ ಬಳಿಕ ಅಂತಿಮ ನಿಯಮ ರೂಪಿಸುವ ಬಗ್ಗೆ ಪರಿಗಣನೆ ನಡೆಸಲಾಗುವುದು.
ಹೊಸ ನಿಯಮಗಳ ಪ್ರಕಾರ ರಾಜ್ಯದಲ್ಲಿನ ಎಲ್ಲ ಕೋಚಿಂಗ್ ಸೆಂಟರ್ಗಳು ಮತ್ತು ಟ್ಯುಟೋರಿಯಲ್ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿ ಪಡೆಯಬೇಕಾಗುತ್ತದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬೇಕಾಗಿದ್ದು, ಪ್ರತಿ ಸಂಸ್ಥೆಗೆ ರೂ.15 ಸಾವಿರ ನೋಂದಣಿ ಶುಲ್ಕ ಹಾಗೂ ಪ್ರತಿ ಕೋರ್ಸ್ಗೆ ಹೆಚ್ಚುವರಿಯಾಗಿ ರೂ.5 ಸಾವಿರ ಪಾವತಿಸಬೇಕಾಗಿದೆ. ನೋಂದಣಿಯಿಲ್ಲದೆ ಯಾವುದೇ ತರಬೇತಿ ಕೇಂದ್ರ ಕಾರ್ಯನಿರ್ವಹಿಸಲು ಅವಕಾಶ ಇರುವುದಿಲ್ಲ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ನಿಯಮ ಜಾರಿಗೆ ಬಂದ ಮೂರು ತಿಂಗಳೊಳಗೆ ನೋಂದಣಿಗೆ ಅರ್ಜಿ ಸಲ್ಲಿಸಬೇಕಾಗಿದೆ.
ಕರಡು ನಿಯಮಗಳಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದ್ದು, ಪ್ರೌಢಶಾಲಾ ಶಿಕ್ಷಣ ಪೂರ್ಣಗೊಳಿಸಿದ ಬಳಿಕವೇ ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳಿಗೆ ದಾಖಲಾಗಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಕೋಚಿಂಗ್ ಕೇಂದ್ರಗಳು ರ್ಯಾಂಕ್ ಅಥವಾ ಹೆಚ್ಚಿನ ಅಂಕಗಳ ಭರವಸೆ ನೀಡುವ ರೀತಿಯ ಜಾಹೀರಾತುಗಳನ್ನು ಪ್ರಕಟಿಸುವಂತಿಲ್ಲ. ಸುಳ್ಳು ಪ್ರಚಾರ, ತಪ್ಪುದಾರಿಗೆಳೆಯುವ ಜಾಹೀರಾತುಗಳು ಹಾಗೂ ಆಕರ್ಷಕ ಆಮಿಷಗಳನ್ನು ನೀಡುವುದಕ್ಕೂ ನಿರ್ಬಂಧ ಹೇರಲಾಗಿದೆ.
ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಪ್ರತಿಯೊಂದು ಕೋಚಿಂಗ್ ಕೇಂದ್ರದಲ್ಲೂ ಸಮಾಲೋಚನಾ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ. ತರಬೇತಿ ಸಂಸ್ಥೆಗಳು ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು, ಕೌನ್ಸೆಲಿಂಗ್ ಸೇವೆಗಳು ಮತ್ತು ಒತ್ತಡ ನಿರ್ವಹಣಾ ವ್ಯವಸ್ಥೆಗಳನ್ನು ಒದಗಿಸಬೇಕಾಗಿದೆ. ಆತಂಕ, ಖಿನ್ನತೆ ಅಥವಾ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿರುವ ವಿದ್ಯಾರ್ಥಿಗಳಿಗೆ ತಜ್ಞರ ನೆರವು ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಕರಡು ನಿಯಮಗಳು ಸೂಚಿಸಿವೆ.
ಕ್ಲಾಸ್ಗಳ ಅವಧಿಗೂ ಮಿತಿ ನಿಗದಿಪಡಿಸಲಾಗಿದ್ದು, ಪರೀಕ್ಷೆಗಳು, ಪುನರಾವರ್ತನಾ ತರಗತಿಗಳು ಮತ್ತು ಸಂದೇಹ ನಿವಾರಣಾ ಅವಧಿ ಸೇರಿ ದಿನಕ್ಕೆ ಗರಿಷ್ಠ ಐದು ಗಂಟೆಗಳಿಗಷ್ಟೇ ತರಬೇತಿ ನೀಡಲು ಅವಕಾಶ ಇರಲಿದೆ. ಕೋಚಿಂಗ್ ಕೇಂದ್ರಗಳ ಕಾರ್ಯನಿರ್ವಹಣಾ ಸಮಯವನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ನಿಗದಿಪಡಿಸಲಾಗಿದೆ. ಶಾಲಾ ಅಥವಾ ಕಾಲೇಜು ಸಮಯದಲ್ಲಿ ತರಗತಿಗಳನ್ನು ನಡೆಸುವುದಕ್ಕೆ ಅವಕಾಶ ಇರದು.
ಸುರಕ್ಷತಾ ಮಾನದಂಡಗಳ ಕುರಿತು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗಿದ್ದು, ಅಗ್ನಿ ಸುರಕ್ಷತಾ ಪ್ರಮಾಣಪತ್ರ, ಕಟ್ಟಡ ಸುರಕ್ಷತಾ ಪ್ರಮಾಣಪತ್ರ ಮತ್ತು ಸ್ವಚ್ಛತಾ ಪ್ರಮಾಣಪತ್ರ ಕಡ್ಡಾಯವಾಗಿದೆ. ಸಿಸಿಟಿವಿ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಕಿಟ್, ಪ್ರತ್ಯೇಕ ಶೌಚಾಲಯಗಳು, ಸುರಕ್ಷಿತ ಕುಡಿಯುವ ನೀರು, ತುರ್ತು ನಿರ್ಗಮನ ಮಾರ್ಗಗಳು ಮತ್ತು ವಿಪತ್ತು ನಿರ್ವಹಣಾ ಯೋಜನೆಗಳನ್ನು ಹೊಂದಿರಬೇಕಾಗುತ್ತದೆ. ವಿದ್ಯಾರ್ಥಿಗಳ ಭದ್ರತೆಯನ್ನು ಖಚಿತಪಡಿಸಲು ಪ್ರವೇಶ ಮತ್ತು ನಿರ್ಗಮನ ದಾಖಲೆಗಳನ್ನು ನಿರ್ವಹಿಸಬೇಕೆಂಬ ನಿಯಮವೂ ಸೇರಿಸಲಾಗಿದೆ.
ಕೋಚಿಂಗ್ ಕೇಂದ್ರಗಳ ಮೇಲ್ವಿಚಾರಣೆಗೆ ಜಿಲ್ಲಾ ಮಟ್ಟದ ಮಾನಿಟರಿಂಗ್ ಸಮಿತಿಗಳನ್ನು ರಚಿಸುವ ಪ್ರಸ್ತಾವವೂ ಕರಡು ನಿಯಮದಲ್ಲಿದೆ. ಬೆಂಗಳೂರು ನಗರ ಜಿಲ್ಲೆಗೆ ಪ್ರತ್ಯೇಕ ಸಮಿತಿ ಮತ್ತು ಉಳಿದ ಜಿಲ್ಲೆಗಳಿಗೆ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗುತ್ತದೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಅಥವಾ ಸಿಬ್ಬಂದಿ ದೂರುಗಳನ್ನು ಸಲ್ಲಿಸಬಹುದಾಗಿದ್ದು, ಅವುಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕಾಗುತ್ತದೆ. ನಿಯಮ ಉಲ್ಲಂಘಿಸಿದ ಸಂಸ್ಥೆಗಳ ವಿರುದ್ಧ ನೋಂದಣಿ ರದ್ದುಪಡಿಸುವುದು ಸೇರಿದಂತೆ ಐದು ಲಕ್ಷ ರೂಪಾಯಿವರೆಗೆ ದಂಡ ವಿಧಿಸುವ ಅವಕಾಶ ಕಲ್ಪಿಸಲಾಗಿದೆ.
ನಿಯಮ ಜಾರಿಗೆ ಬಂದ ಬಳಿಕ ನೋಂದಣಿ ಪಡೆಯದೇ ಕಾರ್ಯನಿರ್ವಹಿಸುವ ಕೋಚಿಂಗ್ ಕೇಂದ್ರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆರು ತಿಂಗಳ ಅವಧಿಯ ಬಳಿಕವೂ ಮಾನ್ಯ ನೋಂದಣಿ ಪ್ರಮಾಣಪತ್ರ ಪಡೆಯದ ಸಂಸ್ಥೆಗಳನ್ನು ಸೀಲ್ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಇದರೊಂದಿಗೆ ರಾಜ್ಯದಲ್ಲಿನ ಟ್ಯುಟೋರಿಯಲ್ ಹಾಗೂ ಕೋಚಿಂಗ್ ಕ್ಷೇತ್ರವನ್ನು ವ್ಯವಸ್ಥಿತಗೊಳಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಮಾನಸಿಕ ಸುರಕ್ಷತೆಯನ್ನು ಖಚಿತಪಡಿಸುವ ಉದ್ದೇಶ ಸರ್ಕಾರದ್ದಾಗಿದೆ.







Comments
Leave a Comment