ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ವಾಗ್ದಾಳಿ: ನವೆಂಬರ್ ನಲ್ಲಿ ಅಭಿಯಾನ
ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ವಾಗ್ದಾಳಿ: ನವೆಂಬರ್ ನಲ್ಲಿ ಅಭಿಯಾನ
from : Jayaram Udupi
ಮಂಗಳೂರು,ಅ. 27-ಕಾಂಗ್ರೆಸ್ ಪಕ್ಷವು ರಾಜಕೀಯ ಲಾಭಕ್ಕಾಗಿ ಅವಕಾಶವಾದಿ ನಿಲುವು ಅನುಸರಿಸುತ್ತಿದೆ. ಪಕ್ಷದ ಕಾರ್ಯವೈಖರಿಯಲ್ಲಿ ‘ಹಾರ್ಡ್‌ವೇರ್ ಜಿಹಾದಿ’ ಮತ್ತು ‘ಸಾಫ್ಟ್‌ವೇರ್ ಅರ್ಬನ್ ನಕ್ಸಲ್’ ಮನಸ್ಥಿತಿ ಕಾಣಿಸುತ್ತಿದೆ ಎಂದು ಬಿಜೆಪಿ ನಾಯಕ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ.
ದ. ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌ನ ನಿಲುವನ್ನು ಪ್ರಶ್ನಿಸಿದರು.
ದೇಶದಲ್ಲಿ ಈ ಹಿಂದೆ ಎಂಟು ಬಾರಿ ಎಸ್‌ಐಆರ್ ಪ್ರಕ್ರಿಯೆ ನಡೆದಿದ್ದು, ಇದು ಸಂವಿಧಾನಬದ್ಧ ಹಾಗೂ ವಿಕೇಂದ್ರೀಕೃತ ವ್ಯವಸ್ಥೆಯಾಗಿದೆ ಎಂದ ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಎಸ್‌ಐಆರ್‌ಗೆ ಸಂಬಂಧಿಸಿದ ಅಧಿಸೂಚನೆ ಹೊರಡಿಸುತ್ತಾರೆ. ಆದರೆ ಮತದಾರರ ಪಟ್ಟಿಯ ಪರಿಷ್ಕರಣೆಯ ಬಹುಪಾಲು ಕೆಲಸವನ್ನು ದೇಶದಾದ್ಯಂತ ಕಾರ್ಯನಿರ್ವಹಿಸುವ ೧೧ ಲಕ್ಷಕ್ಕೂ ಅಧಿಕ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ನಿರ್ವಹಿಸುತ್ತಾರೆ. ಹೀಗಾಗಿ ಎಸ್‌ಐಆರ್ ಪ್ರಕ್ರಿಯೆಯ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ಪರೋಕ್ಷವಾಗಿ ಈ ಅಧಿಕಾರಿಗಳ ಕಾರ್ಯವೈಖರಿಯನ್ನೂ ಪ್ರಶ್ನಿಸಿದಂತಾಗಿದೆ ಎಂದರು.
ಮತದಾರರ ಪಟ್ಟಿಯನ್ನು ನವೀಕರಿಸುವುದು ಚುನಾವಣಾ ಪ್ರಕ್ರಿಯೆಯ ಪ್ರಮುಖ ಭಾಗವಾಗಿದ್ದು, ಈ ಪ್ರಕ್ರಿಯೆಯ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡುವ ಬದಲು ಲಭ್ಯವಿರುವ ದಾಖಲೆಗಳು ಮತ್ತು ಸಾಕ್ಷ್ಯಗಳ ಆಧಾರದಲ್ಲಿ ಚರ್ಚೆ ನಡೆಸಬೇಕು ಎಂದರು.
ಕೇರಳದ ಕಾಂಗ್ರೆಸ್ ನಾಯಕರಾದ ರಮೇಶ್ ಚೆನ್ನಿತ್ತಲ ಮತ್ತು ವಿ.ಡಿ. ಸತೀಶನ್ ಸೇರಿದಂತೆ ಕೆಲವು ನಾಯಕರು ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಉಲ್ಲೇಖಿಸಿದ ಅವರು, ತಮಿಳುನಾಡಿನ ಟಿವಿಕೆ ಪಕ್ಷದ ನಿಲುವನ್ನೂ ಪ್ರಸ್ತಾಪಿಸಿದ ಅವರು, ಬೇರೆ ರಾಜ್ಯಗಳಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಗಮನಿಸಿದಾಗ ಕರ್ನಾಟಕ ಕಾಂಗ್ರೆಸ್ ಮಾಡುತ್ತಿರುವ ಟೀಕೆಗಳಿಗೆ ಸಾಕಷ್ಟು ಆಧಾರವಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸುಳ್ಳು ವೇಗವಾಗಿ ಹರಡುತ್ತದೆ. ಸತ್ಯ ಜನರನ್ನು ತಲುಪಲು ಸಮಯ ತೆಗೆದುಕೊಳ್ಳಬಹುದು. ಆದರೆ ಅಂತಿಮವಾಗಿ ಸತ್ಯಕ್ಕೆ ಜಯ ಸಿಗುತ್ತದೆ ಎಂದರು.
‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಂತ್ಯಗೊಳಿಸಿ, ಸಂವಿಧಾನ ರಕ್ಷಿಸಿ’ ಎಂಬ ಘೋಷವಾಕ್ಯದಡಿ ನವೆಂಬರ್ ೧ರಿಂದ ೩೦ರವರೆಗೆ ದೇಶಾದ್ಯಂತ ಅಭಿಯಾನ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ಅಭಿಯಾನದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನದ ಆಶಯಗಳು ಹಾಗೂ ಚುನಾವಣಾ ಪ್ರಕ್ರಿಯೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಅಭಿಯಾನದ ಭಾಗವಾಗಿ ಜನರನ್ನು ತಲುಪುವ ಪಾದಯಾತ್ರೆಗಳು, ಸಾರ್ವಜನಿಕ ರ‍್ಯಾಲಿಗಳು ಮತ್ತು ಜನಜಾಗೃತಿ ಕಾರ್ಯಕ್ರಮಗಳು, ವಿದ್ಯಾರ್ಥಿಗಳೊಂದಿಗೆ ಸಂವಾದ, ಬುದ್ಧಿಜೀವಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಸಮಾವೇಶಗಳ ಮೂಲಕ ಪಕ್ಷದ ನಿಲುವುಗಳನ್ನು ಜನರಿಗೆ ತಲುಪಿಸಲಾಗುವುದು ಎಂದು ಅವರು ಹೇಳಿದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಭಗೀರಥಿ ಮುರುಳ್ಯ, ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಬೊಟ್ಯಾಡಿ ಕಿಶೋರ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಕುತ್ಯಾರ್ ನವೀನ್ ಶೆಟ್ಟಿ, ನಾಯಕರಾದ ಕ್ಯಾ. ಗಣೇಶ್ ಕಾರ್ಣಿಕ್, ಭಾರತೀಶ್, ಪ್ರೇಮಾನಂದ ಶೆಟ್ಟಿ, ಸಂಜಯ ಪ್ರಭು, ಮನೋಹರ ಶೆಟ್ಟಿ, ಯತೀಶ್ ಅರ್ವಾರ್, ಜಯಂತ್ ಕೋಟ್ಯಾನ್, ಮನೋಜ್ ಶೆಟ್ಟಿ ಉಪಸ್ಥಿತರಿದ್ದರು.







Comments
Leave a Comment