ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕರ್ನಾಟಕದ ಉಮ್ರಾ ಯಾತ್ರಿಕರ ನೆರವಿಗೆ ರಾಜ್ಯ ಸರ್ಕಾರದಿಂದ ತುರ್ತು ಸಹಾಯವಾಣಿ ಆರಂಭ
ಯಾತ್ರಿಕರು ದಿಕ್ಕು ತೋಚದಂತಾಗಿದ್ದಾರೆ
ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಸಿದ್ಧ
ಬೆಂಗಳೂರು, ಅ.23:
ಮಧ್ಯಪ್ರಾಚ್ಯ ದೇಶಗಳ ಭದ್ರತಾ ಬಿಕ್ಕಟ್ಟು ಹಾಗೂ ಅದರಿಂದ ಉಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾ ನಗರಗಳಲ್ಲಿ ಸಿಲುಕಿರುವ ಕರ್ನಾಟಕದ 600ಕ್ಕೂ ಅಧಿಕ ಉಮ್ರಾ ಯಾತ್ರಿಕರನ್ನು ಸುರಕ್ಷಿತವಾಗಿ ಶೀಘ್ರವೇ ರಾಜ್ಯಕ್ಕೆ ಕರೆತರಲು ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರಿಗೆ ಶಿವಕುಮಾರ್ ಅವರು ಶುಕ್ರವಾರ ಪತ್ರ ಬರೆದಿದ್ದಾರೆ.
ಯಾತ್ರಿಕರು ದಿಕ್ಕು ತೋಚದಂತಾಗಿದ್ದಾರೆ
"ಅಲ್ಲಿನ ಸರ್ಕಾರವು ಬೆಂಗಳೂರು ಹಾಗೂ ಭಾರತದ ಇತರ ಭಾಗಗಳಿಗೆ ಹಿಂದಿರುಗಬೇಕಿದ್ದ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ, ಕರ್ನಾಟಕದ ಉಮ್ರಾ ಯಾತ್ರೆ ಕೈಗೊಂಡಿದ್ದ 600ಕ್ಕೂ ಹೆಚ್ಚು ಯಾತ್ರಿಕರು ಮೆಕ್ಕಾ ಹಾಗೂ ಮದೀನಾದಲ್ಲಿ ಅತಂತ್ರರಾಗಿದ್ದಾರೆ" ಎಂದು ತಿಳಿಸಿದ್ದಾರೆ.
"ಇತ್ತೀಚೆಗೆ ಪವಿತ್ರ ಸ್ಥಳಗಳಿಗೆ ಭೇಟಿ ನೀಡಿದ್ದ ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷರು ಹಾಗೂ ಅವರ ತಂಡವು ವಸ್ತುಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದು, ಯಾತ್ರಿಕರು ವಿಮಾನ ಸೇವೆಗಳ ವ್ಯತ್ಯಯದಿಂದ ತೀವ್ರ ಸಂಕಷ್ಟ ಎದುರಿಸುತ್ತಿರುವುದ್ದಲ್ಲದೇ, ಅನೇಕರ ಬಳಿ ಹಣವೂ ಖಾಲಿಯಾಗಿದೆ. ಆಹಾರ ಮತ್ತು ವಸತಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ" ಎಂದು ವಿವರಿಸಿದ್ದಾರೆ.
"ಹೋಟೆಲ್ ಮಾಲೀಕರು ಯಾತ್ರಿಕರಿಗೆ ಕೊಠಡಿಗಳನ್ನು ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದು, ವೃದ್ಧರು, ಮಹಿಳೆಯರು ಮತ್ತು ಮಕ್ಕಳಿಗೆ ದಿಕ್ಕು ತೋಚದಂತಾಗಿದೆ. ಸ್ಥಳೀಯ ಭಾರತೀಯ ಹಾಗೂ ಕರ್ನಾಟಕದ ಸ್ವಯಂಸೇವಾ ಸಂಸ್ಥೆಗಳು ನಿರಾಶ್ರಿತರಿಗೆ ತಾತ್ಕಾಲಿಕ ನೆರವು ನೀಡುತ್ತಿದೆ. ಆದರೆ ಅವು ಎಲ್ಲರ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ" ಎಂದು ಹೇಳಿದ್ದಾರೆ.
'"ಸಂಕಷ್ಟದಲ್ಲಿ ಸಿಲುಕಿರುವ ಕರ್ನಾಟಕದ ಜನರ ಬಗ್ಗೆ ಮಾನವೀಯತೆ ದೃಷ್ಟಿಯಿಂದ ರಿಯಾಧ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ (Indian Embassy) ಹಾಗೂ ಜೆಡ್ಡಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿ ಸೌದಿ ಅರೇಬಿಯಾ ಅಧಿಕಾರಿಗಳು, ವಿಮಾನಯಾನ ಸಂಸ್ಥೆಗಳು ಮತ್ತು ಇತರ ಸಂಬಂಧಿತ ಏಜೆನ್ಸಿಗಳೊಂದಿಗೆ ಸಮನ್ವಯ ಸಾಧಿಸಿ ಯಾತ್ರಿಕರ ಸುರಕ್ಷಿತ ವಾಪಸಾತಿಗೆ ತಾವು ತುರ್ತು ವ್ಯವಸ್ಥೆ ಕಲ್ಪಿಸಬೇಕು" ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಸಿದ್ಧ
"ಅಗತ್ಯವಿರುವ ಕಡೆಗಳಲ್ಲಿ ಸಚಿವಾಲಯವು ವಿಶೇಷ ವಿಮಾನಗಳ ಓಡಾಟಕ್ಕೆ ವ್ಯವಸ್ಥೆ ಮಾಡಬೇಕು. ಯಾತ್ರಿಕರು ಸುರಕ್ಷಿತವಾಗಿ ಹಿಂತಿರುಗುವವರೆಗೂ ಅವರಿಗೆ ಅಗತ್ಯವಿರುವ ಎಲ್ಲರೀತಿಯ ನೆರವನ್ನು ನೀಡಬೇಕು" ಎಂದು ಕೋರಿದ್ದಾರೆ.
'"ಇದು ಅತ್ಯಂತ ಗಂಭೀರ ವಿಷಯವಾಗಿರುವುದರಿಂದ ಇದಕ್ಕೆ ಆದ್ಯತೆಯ ಮೇರೆಗೆ ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾತ್ರಿಕರ ಸುರಕ್ಷಿತ ಮತ್ತು ಶೀಘ್ರ ವಾಪಸಾತಿಗೆ ಕರ್ನಾಟಕ ಸರ್ಕಾರ ಸಂಪೂರ್ಣ ಸಹಕಾರ ನೀಡಲು ಸಿದ್ಧವಿದೆ" ಎಂದು ತಿಳಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕರ್ನಾಟಕದ ಉಮ್ರಾ ಯಾತ್ರಿಕರ ನೆರವಿಗೆ ರಾಜ್ಯ ಸರ್ಕಾರದಿಂದ ತುರ್ತು ಸಹಾಯವಾಣಿ ಆರಂಭ
ಬೆಂಗಳೂರು, ಅ. 23 -
ಸೌದಿ ಅರೇಬಿಯಾದಲ್ಲಿ ವಿಮಾನ ಸೇವೆಗಳಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಕರ್ನಾಟಕದ ಸುಮಾರು 600 ಉಮ್ರಾ ಯಾತ್ರಿಕರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಭಾರತೀಯ ವಿದೇಶಾಂಗ ಸಚಿವಾಲಯ ಹಾಗೂ ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕ ಸಾಧಿಸಿದ್ದು, ಸಿಲುಕಿರುವ ಯಾತ್ರಿಕರ ನೆರವಿಗಾಗಿ ತುರ್ತು ಸಹಾಯವಾಣಿಗಳನ್ನು ಆರಂಭಿಸಿದೆ.
ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯು ನೀಡಿರುವ ಮಾಹಿತಿಯಂತೆ, ರಾಜ್ಯದಿಂದ ಉಮ್ರಾ ಯಾತ್ರೆಗೆ ತೆರಳಿದ್ದ ಸುಮಾರು 600 ಯಾತ್ರಿಕರು ವಿಮಾನಗಳ ರದ್ದು ಹಾಗೂ ವೇಳಾಪಟ್ಟಿ ವ್ಯತ್ಯಯದಿಂದಾಗಿ ತಾಯ್ನಾಡಿಗೆ ಮರಳಲಾಗದೆ ಸಂಕಷ್ಟದಲ್ಲಿದ್ದಾರೆ. ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜಿದ್ದಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಗಳು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳು ಹಾಗೂ ಟೂರ್ ಆಪರೇಟರ್‌ಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಯಾತ್ರಿಕರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನಗಳನ್ನು ನಡೆಸುತಿವೆ.
ಸಹಾಯವಾಣಿ ಸಂಪರ್ಕ ವಿವರಗಳು:
ಸಿಲುಕಿರುವ ಕನ್ನಡಿಗ ಯಾತ್ರಿಕರು ಮತ್ತು ಅವರ ಕುಟುಂಬದವರ ನೆರವಿಗಾಗಿ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಮತ್ತು ರಾಜ್ಯ ಹಜ್ ಇಲಾಖೆಯು ಸಹಾಯವಾಣಿಗಳನ್ನು ಸಕ್ರಿಯಗೊಳಿಸಿವೆ.
ರಾಜ್ಯ ಹಜ್ ಇಲಾಖೆ ಸಹಾಯವಾಣಿ ಸಂಖ್ಯೆಗಳು: 9483503132, 7899707775
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC): 1070 ಅಥವಾ 080-22253707
ಅಲ್ಲದೆ, ಸೌದಿ ಅರೇಬಿಯಾದಲ್ಲಿರುವ ಭಾರತೀಯ ಮಿಷನ್‌ಗಳು ಕೂಡ 24x7 ನಿಯಂತ್ರಣ ಕೊಠಡಿಗಳನ್ನು ತೆರೆದಿವೆ:
ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ:
ದೂರವಾಣಿ ಸಂಖ್ಯೆಗಳು: +966-554412016, +966-542126784. ಉಚಿತ ದೂರವಾಣಿ (ಸೌದಿ ಅರೇಬಿಯಾದ ಒಳಗಿನ ಕರೆಗಳಿಗೆ ಮಾತ್ರ): 8002471234. ವಾಟ್ಸಾಪ್ (ಸಂದೇಶಗಳಿಗೆ ಮಾತ್ರ): +966-536216082.
ಜಿದ್ದಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿ:
ದೂರವಾಣಿ ಸಂಖ್ಯೆಗಳು: +966-12-2614093, +966-556122301. ವಾಟ್ಸಾಪ್: +966-536209704.
ಇಮೇಲ್: pbskcgi@gmail.com.
ಸಾರ್ವಜನಿಕರು ಮತ್ತು ಯಾತ್ರಿಕರಿಗೆ ಸಲಹೆ:
ಪ್ರಸ್ತುತ ಪರಿಸ್ಥಿತಿಯು ಬದಲಾಗುತ್ತಿರುವುದರಿಂದ, ಉಮ್ರಾ ಯಾತ್ರಿಕರು ಹಾಗೂ ಅವರ ಕುಟುಂಬಸ್ಥರು ವಿಮಾನ ನಿಲ್ದಾಣಗಳಿಗೆ ತೆರಳುವ ಮುನ್ನ ತಮ್ಮ ವಿಮಾನಯಾನ ಸಂಸ್ಥೆಗಳು ಮತ್ತು ಟೂರ್ ಆಪರೇಟರ್‌ಗಳನ್ನು ಸಂಪರ್ಕಿಸಿ ವಿಮಾನಗಳ ವಿವರಗಳನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.
ಯಾತ್ರಿಕರು ಧೈರ್ಯದಿಂದಿರಲು ಹಾಗೂ ರಾಯಭಾರ ಕಚೇರಿ ಮತ್ತು ಸ್ಥಳೀಯ ಆಡಳಿತ ನೀಡುವ ಅಧಿಕೃತ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಮತ್ತು ಪರಿಹಾರ ಆಯುಕ್ತರಾದ ಮನೋಜ್ ಕುಮಾರ್ ಮೀನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ






Comments
Leave a Comment