PRABHAVAA.COM

ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಭೂಮಿ ಮಂಜೂರು ಮಾಡದ ರಾಜ್ಯ ಕಾಂಗ್ರೆಸ್ ಸರಕಾರ;ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ

Bengaluru Urban:

Font size:

EV ಟೆಸ್ಟಿಂಗ್ ಕೇಂದ್ರ ಮತ್ತು ನಿರ್ಮಾಣ ಮೂಲಸೌಕರ್ಯ ಉಪಕರಣಗಳ ಪರೀಕ್ಷೆ ಕೇಂದ್ರ ಸ್ಥಾಪನೆಗೆ ಕೇಂದ್ರದ ಒಲವು

ರಾಜ್ಯ ಮತ್ತು ಕೇಂದ್ರ ನಡುವೆ ನಡೆದಿರುವ ಪತ್ರ ವ್ಯವಹಾರ, ಸಭೆ ನಡಾವಳಿ ಸೇರಿದಂತೆ ಎಲ್ಲ ದಾಖಲೆಗಳನ್ನು ಪತ್ರದ ಸಹಿತ ಬಿಡುಗಡೆ ಮಾಡಿದ HDK

ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ತಲುಪಿದ ಕೇಂದ್ರ ಸಚಿವರ ಪತ್ರ

ಬೆಂಗಳೂರು 22 ಅಕ್ಟೋಬರ್ 2026

ಮಂಡ್ಯ ಜಿಲ್ಲೆಯಲ್ಲಿ 'ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ' (CIE Test Centre) ಹಾಗೂ 'ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ' (EV Test Centre) ಸ್ಥಾಪಿಸಲು ಕರ್ನಾಟಕ ಸರ್ಕಾರದಿಂದ ಕಳೆದ ಹತ್ತು ತಿಂಗಳಿನಿಂದ ಭೂಮಿ ಮಂಜೂರಾತಿಯಲ್ಲಿ ವಿಳಂಬವಾಗಿರುವ ಬಗ್ಗೆ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎ
ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿ ಅವರು ಗುರುವಾರ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದು, ಅದರಲ್ಲಿ ಈವರೆಗೆ ಕೈಗಾರಿಕೆ ಸ್ಥಾಪನೆ ಕುರಿತಂತೆ ನಡೆದಿರುವ ಸಭೆಗಳು, ರಾಜ್ಯ ಮತ್ತು ಕೇಂದ್ರ ನಡುವೆ ಆಗಿರುವ ಪತ್ರ ವ್ಯವಹಾರಗಳು, ವಿವಿಧ ಸಭೆಗಳ ನಡಾವಳಿಗಳು ಹಾಗೂ ಇನ್ನಿತರ ಮಹತ್ವದ ದಾಖಲೆಗಳನ್ನು ಲಗತ್ತಿಸಿ ಮುಖ್ಯಮಂತ್ರಿ ಕಚೇರಿಗೆ ಪತ್ರವನ್ನು ಕಳಿಸಿದ್ದಾರೆ. ಪತ್ರ ಜೊತೆಗೆ ಆ ಎಲ್ಲಾ ದಾಖಲೆಗಳನ್ನು ಸಚಿವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಅಲ್ಲದೆ ಮಂಡ್ಯದಲ್ಲಿ ARAI ಕೇಂದ್ರ ಸ್ಥಾಪನೆ ಕುರಿತುಂತೆ ಕೋರಲಾಗಿರುವ ಭೂ ಮಂಜೂರಾತಿಗೆ ಸಂಬಂಧಿಸಿದ ಮುಖ್ಯಮಂತ್ರಿ ಡಿಕೆಶಿ ಅವರು ನೀಡಿರುವ ಹೇಳಿಕೆಗಳ ಪತ್ರಿಕಾ ತುಣುಕುಗಳನ್ನು ಕೂಡ ಪತ್ರಕ್ಕೆ ಲಗತ್ತಿಸಿ ಕೇಂದ್ರ ಸಚಿವರು ರವಾನಿಸಿದ್ದಾರೆ.

ಮಹತ್ವದ ಈ ಪತ್ರವನ್ನು ಕೇಂದ್ರ ಸಚಿವರ ಆಪ್ತರು ವಿಧಾನಸೌಧಕ್ಕೆ ತೆರಳಿ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಹಸ್ತಾಂತರಿಸಿದ್ದಾರೆ. ಪತ್ರ ತಲುಪಿದ ನಂತರ ಸ್ವತಃ ಹೆಚ್.ಡಿ. ಕುಮಾರಸ್ವಾಮಿ ಅವರು ತುಷಾರ್ ಗಿರಿನಾಥ್ ಅವರೊಂದಿಗೆ ಚರ್ಚಿಸಿದರು.

ಸಚಿವರ ಪತ್ರದ ಸಾರಾಂಶ ಹೀಗಿದೆ;

'ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ' (ARAI) ವತಿಯಿಂದ ಪ್ರಸ್ತಾಪಿಸಲಾಗಿರುವ 'ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ' (CIE Test Centre) ಹಾಗೂ 'ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ' (EV Test Centre) ಸ್ಥಾಪನೆಗಾಗಿ ಮಂಡ್ಯ ಜಿಲ್ಲೆಯಲ್ಲಿ ಭೂಮಿ ಮಂಜೂರು ಮಾಡುವಲ್ಲಿ ರಾಜ್ಯ ಸರ್ಕಾರದಿಂದ ಕಳೆದ 10 ತಿಂಗಳಿನಿಂದ ಉಂಟಾಗಿರುವ ನಿರಂತರ ವಿಳಂಬದತ್ತ ನಾನು ತಮ್ಮ ಗಮನ ಸೆಳೆಯಲು ಬಯಸುತ್ತೇನೆ.

ಕಳೆದ 10 ತಿಂಗಳುಗಳಿಂದ ನಾವು ನಿರಂತರವಾಗಿ ಈ ಬಗ್ಗೆ ರಾಜ್ಯ ಸರ್ಕಾರದ ಸಕಾರಾತ್ಮಕ ನಿರ್ಧಾರದ ನಿರೀಕ್ಷೆಯಲ್ಲಿದ್ದೇವೆ. ಸ್ಥಳ ಪರಿಶೀಲನೆ, ತಾಂತ್ರಿಕ ಮೌಲ್ಯಮಾಪನ ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸುವ ಮೂಲಕ ಈ ಪ್ರಕ್ರಿಯೆಯನ್ನು ಸಕ್ರಿಯವಾಗಿ ಮುಂದುವರಿಸುತ್ತಿದ್ದೇವೆ. ಇಷ್ಟೆಲ್ಲಾ ನಿರಂತರ ಪ್ರಯತ್ನಗಳ ಹೊರತಾಗಿಯೂ, ಸೂಕ್ತ ಭೂಮಿಯನ್ನು ಮಂಜೂರು ಮಾಡುವ ವಿಷಯವು ಜಿಲ್ಲಾಡಳಿತ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (KIADB) ಇನ್ನೂ ಭೂಮಿ ಮಂಜೂರಾತಿ ಇತ್ಯರ್ಥಗೊಂಡಿಲ್ಲ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.

'ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ' (CIE Test Centre) ಹಾಗೂ 'ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ' (EV Test Centre) ಸ್ಥಾಪನೆಗಾಗಿ ಯೋಜನೆಗೆ ಜಾಗ ಗುರುತಿಸುವ ನಿಟ್ಟಿನಲ್ಲಿ ARAI (Automotive Research Association of India) ನಿರಂತರ ತ್ವರಿತಗತಿಯಲ್ಲಿ ಪ್ರಯತ್ನಗಳನ್ನು ನಡೆಸುತ್ತಿದೆ. ದಿನಾಂಕ: 16-03-2026ರಂದು ARAI ಸಂಸ್ಥೆಯ ತಂಡವು ಮಂಡ್ಯ ತಾಲೂಕಿನ ಬಸರಾಳು, ಮಂಡ್ಯ ಸಕ್ಕರೆ ಕಾರ್ಖಾನೆ ಮತ್ತು ಕೆ.ಆರ್.ಪೇಟೆ ಕೈಗಾರಿಕಾ ವಲಯದಲ್ಲಿನ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ತದನಂತರ ಭೂಮಿ ಮಂಜೂರಾತಿ ವಿಚಾರವಾಗಿ ಮಂಡ್ಯದ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಈ ವಿಷಯವಾಗಿ ದಿನಾಂಕ: 17-03-2026 ರಂದು ವಿಕಾಸಸೌಧದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಸಭೆ ನಡೆಸಲಾಗಿದೆ. ದಿನಾಂಕ: 20-03-2026 ರಂದು ARAI ಸಂಸ್ಥೆಗೆ ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ ವಿವರವಾದ ತಾಂತ್ರಿಕ ಅಗತ್ಯಗಳ ಮಾಹಿತಿಯನ್ನು ಕೂಡ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುತ್ತದೆ. ನಾನು ದಿನಾಂಕ: 13-04-2026 ರಂದು ವಿಧಾನಸೌಧದಲ್ಲಿ ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಶ್ರೀ ಎಂ.ಬಿ. ಪಾಟೀಲ್ ಅವರೊಂದಿಗೆ ಸಭೆಯನ್ನು ನಡೆಸಿ ಮಂಡ್ಯ ಜಿಲ್ಲೆಯಲ್ಲಿ 'ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ' (CIE Test Centre) ಹಾಗೂ 'ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ' (EV Test Centre) ಸ್ಥಾಪಿಸುವ ಯೋಜನೆಯ ವಿಸ್ತೃತ ವಿವರ ಹಾಗೂ ಭೂಮಿ ಅಗತ್ಯತೆಯ ಕುರಿತು ವಿವರವಾಗಿ ಚರ್ಚಿಸಲಾಗಿರುವುದು ತಮಗೆಲ್ಲಾ ತಿಳಿದಿರುವ ಸಂಗತಿಯಾಗಿರುತ್ತದೆ.

ಮುಂದುವರೆದು, ದಿನಾಂಕ: 06-05-2026 ರಂದು ತಾಂತ್ರಿಕ ಮೌಲ್ಯಮಾಪನಕ್ಕಾಗಿ ಬಸರಾಳು ಮತ್ತು ಹೆಗ್ಗಡತಿಹಳ್ಳಿಯಲ್ಲಿ ಗುರುತಿಸಲಾದ ಭೂಮಿಯ ವಿವರಗಳನ್ನು ಮಂಡ್ಯ ಜಿಲ್ಲಾಡಳಿತವು ARAI ಸಂಸ್ಥೆಗೆ ಒದಗಿಸಲಾಗಿರುತ್ತದೆ. ತದನಂತರ ARAI ತಾಂತ್ರಿಕ ತಂಡವು ದಿನಾಂಕ: 18-05-2026 ರಂದು ಯಲೆಚಾಕನಹಳ್ಳಿ ಗ್ರಾಮ ಸೇರಿದಂತೆ ಜಿಲ್ಲಾಡಳಿತವು ಗುರುತಿಸಲಾದ ಭೂಮಿಯ ಸ್ಥಳಗಳಿಗೆ ಮತ್ತೊಮ್ಮೆ ಭೇಟಿ ನೀಡಿ, ನಂತರ ದಿನಾಂಕ: 16-09-2026 ರಂದು ವಿಕಾಸಸೌಧದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವರ ಅಧ್ಯಕ್ಷತೆಯಲ್ಲಿ ARAI ಸಂಸ್ಥೆಯು, ಮಂಡ್ಯ ಜಿಲ್ಲಾಡಳಿತ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB) ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಯಿತು. ಸದರಿ ಸಭೆಯಲ್ಲಿ ಬಸರಾಳು ಮತ್ತು ಯಲೆಚಾಕನಹಳ್ಳಿಯ ಜಾಗಗಳ ಸೂಕ್ತತೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ಬಸರಾಳುನಲ್ಲಿರುವ ಸುಮಾರು 100 ಎಕರೆ ಜಾಗವು ರಸ್ತೆ ಸಂಪರ್ಕ ಸುಧಾರಣೆಗೆ ಒಳಪಟ್ಟು CIE ಪರೀಕ್ಷಾ ಕೇಂದ್ರಕ್ಕೆ ಸೂಕ್ತವಾಗಬಹುದು ಎಂದು ಸಭೆಯನಲ್ಲಿ ತೀರ್ಮಾನಿಸಲಾಯಿತು. ಆದರೆ 'ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ' ಕ್ಕೆ ಹೆಚ್ಚುವರಿಯಾಗಿ 60 ಎಕರೆ ಭೂಮಿಯು ಅಗತ್ಯವಿರುತ್ತದೆ. ಎರಡೂ ಸೌಲಭ್ಯಗಳನ್ನು ಒಟ್ಟಾಗಿ ಸ್ಥಾಪಿಸಲು ಯಲೆಚಾಕನಹಳ್ಳಿ ಭೂಮಿಯನ್ನು ಸಹ ಪರ್ಯಾಯ ಸ್ಥಳವಾಗಿ ಪರಿಶೀಲಿಸಲಾಯಿತು. ಇಲ್ಲಿ ದೀರ್ಘವಾದ ಪರೀಕ್ಷಾ ಹಾದಿ (Test track) ಮತ್ತು ಪಕ್ಕದಲ್ಲೇ ಕೈಗಾರಿಕಾ ಕೇಂದ್ರವನ್ನು ಅಭಿವೃದ್ಧಿಪಡಿಸುವ ಅವಕಾಶವಿತ್ತು. ಆದಾಗ್ಯೂ ಈ ಆಯ್ಕೆಯು ಮುಖ್ಯವಾಗಿ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು ರಸ್ತೆ ಸಂಪರ್ಕವನ್ನು ಅಭಿವೃದ್ಧಿಪಡಿಸುವುದು (ಮೈಸೂರು-ಬೆಂಗಳೂರು ಹೆದ್ದಾರಿಯಿಂದ ಸಂಪರ್ಕ ಮತ್ತು ರೈಲ್ವೆ ಮೇಲುಸೇತುವೆ ನಿರ್ಮಾಣ) ಮುಂತಾದ ಸವಾಲುಗಳನ್ನು ಹಾಗೂ ಅಡಚಣೆಗಳನ್ನು ಒಳಗೊಂಡಿರುವುದು ತಿಳಿದು ಬಂದಿದೆ. ತದನಂತರ ಪರಾಮರ್ಶೆ ಸಭೆಯ ನಂತರ, ARAI ಸಂಸ್ಥೆಯು ದಿನಾಂಕ: 17-09-2026 ರಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಕ್ರಮವಾಗಿ ಯಲೆಚಾಕನಹಳ್ಳಿ ಮತ್ತು ಬಸರಾಳುನಲ್ಲಿ ಭೂಮಿಯನ್ನು ಮಂಜೂರು ಮಾಡುವಂತೆ ARAI ಸಂಸ್ಥೆಯು ಕೋರಲಾಗಿರುತ್ತದೆ. ದಿನಾಂಕ: 25-09-2026 ರಂದು ಸಭೆಯ ನಡಾವಳಿಗಳು ಲಭ್ಯವಾಗಿದ್ದು, ದಿನಾಂಕ: 28-09-2026 ರಂದು ARAI ಸಂಸ್ಥೆಯು ತನ್ನ ಮನವಿಯನ್ನು ಪರಿಷ್ಕರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿರುತ್ತದೆ (ಪ್ರತಿಯನ್ನು ಇದರೊಂದಿಗೆ ಲಗತ್ತಿಸಿದೆ). ಸದರಿ ಪತ್ರದಲ್ಲಿ ಬಸರಾಳುವಿನಲ್ಲಿ CIE ಸೌಲಭ್ಯಕ್ಕಾಗಿ ಸುಮಾರು 100 ಎಕರೆ ಭೂಮಿ ಮತ್ತು 'ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ' ಸೌಲಭ್ಯಕ್ಕಾಗಿ ಹೆಚ್ಚುವರಿಯಾಗಿ 60 ಎಕರೆ ಭೂಮಿಯನ್ನು (ಆದ್ಯತೆಯ ಮೇರೆಗೆ ಮೊದಲ ಭೂಮಿಗೆ ಹೊಂದಿಕೊಂಡಿರುವಂತೆ) ಜಾಗವನ್ನು ಗುರುತಿಸುವಂತೆ ಕೋರಲಾಯಿತು. ಈ ಪರಿಷ್ಕೃತ ಪ್ರಸ್ತಾವನೆಯು ಪ್ರಾಯೋಗಿಕ ಮಾರ್ಗವನ್ನು ಒಳಗೊಂಡಿರುತ್ತದೆ. ಏಕೆಂದರೆ ಇದು 'ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ'ಕ್ಕೆ ಅಗತ್ಯವಿರುವ ಹೆಚ್ಚುವರಿ ಭೂಮಿಯ ವಿಷಯವನ್ನು ಬಗೆಹರಿಸಿಕೊಳ್ಳುವಾಗಲೇ CIE ಸೌಲಭ್ಯದ ಕೆಲಸವನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಇಷ್ಟೆಲ್ಲಾ ಪ್ರಯತ್ನಗಳು ಮತ್ತು ಕಾರ್ಯಸಾಧ್ಯವಾದ ಕ್ರಮಗಳ ಗುರುತಿಸುವಿಕೆ ಹೊರತಾಗಿಯೂ ರಾಜ್ಯ ಸರ್ಕಾರ ಹಾಗೂ ಮಂಡ್ಯ ಜಿಲ್ಲಾಡಳಿತದಿಂದ ಭೂಮಿ ಮಂಜೂರಾತಿ ಆಗದೇ ಇನ್ನೂ ಬಾಕಿ ಉಳಿದಿದೆ.

ಪ್ರಸ್ತಾವಿತ ಸೌಲಭ್ಯಗಳು ಭಾರತದ ವಾಹನ ಮತ್ತು ವಿದ್ಯುತ್ ಚಾಲಿತ ವಾಹನ (electric mobility) ಪೂರಕ ವ್ಯವಸ್ಥೆಯನ್ನು ಬಲಪಡಿಸುತ್ತವೆ, ಸ್ಥಳೀಯ ತಂತ್ರಜ್ಞಾನ ಅಭಿವೃದ್ಧಿಗೆ ಬೆಂಬಲ ನೀಡುತ್ತವೆ ಹಾಗೂ ಈ ಪ್ರದೇಶದಲ್ಲಿ ಪೂರಕ ಕೈಗಾರಿಕೆಗಳು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತದೆ. ಇವು ಕರ್ನಾಟಕದಲ್ಲಿ ಸುಧಾರಿತ ಪರೀಕ್ಷೆ, ಮೌಲ್ಯಮಾಪನ ಮತ್ತು ಉತ್ಪಾದನೆಗೆ ಸಂಬಂಧಿಸಿದ ಸಂಶೋಧನೆಗಾಗಿ ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುತ್ತವೆ. ರಾಜ್ಯ ಸರ್ಕಾರದೊಂದಿಗೆ ಸುಮಾರು 10 ತಿಂಗಳುಗಳ ಕಾಲ ಅನೇಕ ಸಭೆಗಳನ್ನು ನಡೆಸಿ, ಚರ್ಚಿಸಿ ಹಾಗೂ ಪತ್ರ ವ್ಯವಹಾರಗಳನ್ನು ನಡೆಸಿದರೂ ಸಹ ಸಾರ್ವಜನಿಕ ಉಪಯೋಗದ ಯೋಜನೆಗಳಿಗೆ ಮೂಲಭೂತ ಅಗತ್ಯವಾದ ಭೂಮಿಯನ್ನು ಮಂಜೂರು ಮಾಡುವ ರಾಜ್ಯ ಸರ್ಕಾರದ ಹಾಗೂ ಮಂಡ್ಯ ಜಿಲ್ಲಾಡಳಿತದ ನಿರ್ಧಾರಕ್ಕಾಗಿ ಇಂತಹ ಪ್ರಮುಖ ಯೋಜನೆಯು ಕಾಯುತ್ತಿರುವುದು ದುರದೃಷ್ಟಕರ ಸಂಗತಿ ಎಂದು ನಾನು ಭಾವಿಸಿದ್ದೇನೆ.

ARAI ಬೆಳವಣಿಗೆಯು ಆಟೋಮೊಬೈಲ್ ಕ್ಷೇತ್ರದ ಮೇಲೆ ಅದು ಬೀರುವ ಸಕಾರಾತ್ಮಕ ಪ್ರಭಾವ ಮತ್ತು ಭಾರತದ ವಾಹನ ವಲಯದಲ್ಲಿ ಅದರ ವಿಸ್ತರಿಸುತ್ತಿರುವ ಪಾತ್ರದ ಹಿನ್ನೆಲೆಯನ್ನು ನೋಡಿದಾಗ ಈ ಪ್ರಸ್ತಾವನೆಯ ಮಹತ್ವವು ಇನ್ನಷ್ಟು ಸ್ಪಷ್ಟವಾಗುತ್ತದೆ. 1966ರಲ್ಲಿ ಸ್ಥಾಪಿತವಾದ ARAI ಸಂಸ್ಥೆಯು ಭಾರತ ಸರ್ಕಾರದ ಬೃಹತ್ ಕೈಗಾರಿಕೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ವಾಹನ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾಗಿದ್ದು, ಇದು ವಾಹನ ಮೌಲ್ಯಮಾಪನ, ಇಂಗಾಲ ಹೊರಸೂಸುವಿಕೆ (emissions), ವಾಹನ ಸುರಕ್ಷತೆ, ಎಂಜಿನ್ ಅಭಿವೃದ್ಧಿ, ರಚನಾತ್ಮಕ ಚಲನಶೀಲತೆ (Structural dynamics), ವಾಹನ ಎಲೆಕ್ಟ್ರಾನಿಕ್ಸ್, ಪ್ರಮಾಣೀಕರಣ ಮತ್ತು ಇತರ ವಿಶೇಷ ಕ್ಷೇತ್ರಗಳಲ್ಲಿ ವ್ಯಾಪಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿದೆ.

ರಾಷ್ಟ್ರದಲ್ಲಿ ಇಂತಹ ಕೇಂದ್ರಗಳು ಬೆರಳೆಣಿಕೆಯಷ್ಟು ಮಾತ್ರ ಇವೆ. ಮಹಾರಾಷ್ಟ್ರದ ಪುಣೆಯ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI), ಹರಿಯಾಣದ ಮಾನೇಸರ್'ನಲ್ಲಿರುವ ಅಂತಾರಾಷ್ಟ್ರೀಯ ಆಟೋಮೋಟಿವ್ ತಂತ್ರಜ್ಞಾನ ಕೇಂದ್ರ (ICAT), ಚೆನ್ನೈನಲ್ಲಿರುವ ಗ್ಲೋಬಲ್ ಆಟೋಮ್ಯಾಟಿವ್ ರಿಸರ್ಚ್ ಸೆಂಟರ್ (GARC), ಕಾಶ್ಮೀರದಲ್ಲಿರುವ ರಾಷ್ಟ್ರೀಯ ಆಟೋಮೋಟಿವ್ ಟೆಸ್ಟ್ ಟ್ರ್ಯಾಕ್ಸ್ (NATRAX) ಸಂಸ್ಥೆಗಳು ರಾಷ್ಟ್ರದಲ್ಲಿದ್ದು, ಈ ಕೇಂದ್ರಗಳ ಕೊಡುಗೆಯಿಂದ ಇಂದು ಹರಿಯಾಣ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳು ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿ ರಾಜ್ಯಗಳಾಗಿ ಬೆಳೆದಿವೆ. ಹೀಗಾಗಿ ಇಂತಹ ಪ್ರತಿಷ್ಠಿತ ಕೇಂದ್ರಗಳು ನಮ್ಮ ಕರ್ನಾಟಕ ರಾಜ್ಯಕ್ಕೆ ಅಗತ್ಯವಾಗಿ ಬೇಕಾಗಿದೆ. ಯಾವುದೇ ಕಾರಣಕ್ಕೂ ARAI ಪರೀಕ್ಷಾ ಕೇಂದ್ರವನ್ನು ಕರ್ನಾಟಕ ಕಳೆದುಕೊಳ್ಳಬಾರದು ಎಂಬುದು ನನ್ನ ಕಳಕಳಿಯಾಗಿದೆ ಹಾಗೂ ರಾಜಕೀಯವನ್ನು ಮೀರಿ ಸಾರ್ವಜನಿಕ ಪ್ರಾಮುಖ್ಯತೆ ಹೊಂದಿದ ಕೇಂದ್ರ ಸರ್ಕಾರಿ ಸ್ವಾಮ್ಯದ ಈ ಪ್ರತಿಷ್ಠಿತ ಸಂಸ್ಥೆಯನ್ನು ರಾಜ್ಯಕ್ಕೆ ಬರಮಾಡಿಕೊಳ್ಳಬೇಕಾಗಿರುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಆಯ-ವ್ಯಯದ ಭಾಷಣದ ಕಂಡಿಕೆ 350ರಲ್ಲಿ ಮಂಡ್ಯದಲ್ಲಿ 'ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ' (ARAI) ಸಂಸ್ಥೆಗೆ 'ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ' ಸ್ಥಾಪನೆಗಾಗಿ ಭೂಮಿಯನ್ನು ನೀಡಲಾಗುವುದೆಂದು ಘೋಷಣೆ ಮಾಡಿರುವುದನ್ನು ಹಾಗೂ ತಾವು ಹಲವಾರು ಸಂದರ್ಭಗಳಲ್ಲಿ ಕೈಗಾರಿಕಾ ಹೂಡಿಕೆಗಳಿಗೆ ಅಗತ್ಯವಿರುವ ಭೂಮಿಯನ್ನು ತಕ್ಷಣವೇ ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿಗಳಾಗಿ ತಾವು ಸಭೆ, ಸಮಾರಂಭಗಳಲ್ಲಿ ಹಾಗೂ ಸದನದಲ್ಲಿ ಹೇಳಿರುವುದನ್ನು ಸಹ ತಮ್ಮ ಗಮನಕ್ಕೆ ತರಬಯಸುತ್ತೇನೆ, ಹಾಗೂ ದಿನಾಂಕ: 28-09-2026 ರಂದು ಬೆಂಗಳೂರಿನ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೈಗಾರಿಕೆ ಸ್ಥಾಪನೆ ಮತ್ತು ಉದ್ಯೋಗ ಸೃಜಿಸಲು ಬೇಕಿದ್ದರೆ ಸಾವಿರಾರು ಎಕರೆ ಭೂಮಿ ನೀಡಲಾಗುವುದು ಎಂದು ತಾವು ಹೇಳಿರುತ್ತೀರಿ. ತಮ್ಮ ಈ ಹೇಳಿಕೆಯು ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗಿದೆ ಎಂದು ನಾನು ಭಾವಿಸಿದ್ದೇನೆ. ಅದಾಗ್ಯೂ ಪ್ರಸ್ತಾಪಿತ ಯೋಜನೆಗೆ ಇಲ್ಲಿಯವರೆಗೆ ರಾಜ್ಯ ಸರ್ಕಾರದಿಂದ ಭೂ ಮಂಜೂರಾತಿಯಲ್ಲಿ ವಿಳಂಬವಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.

ಆದುದರಿಂದ, ಮೇಲ್ಕಂಡ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಕ್ಷೇತ್ರದ ಅಭಿವೃದ್ಧಿ ಹಾಗೂ ಯುವ ಸಮೂಹಕ್ಕೆ ಉದ್ಯೋಗ ಸೃಜಿಸುವ ದೃಷ್ಟಿಯಿಂದ, ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಆಶ್ವಾಸನೆ ನೀಡುವ ಬದಲು ತಾವು ರಾಜ್ಯ ಸರ್ಕಾರದಿಂದ ಮಂಡ್ಯ ಜಿಲ್ಲೆಯಲ್ಲಿ ARAI ಕೇಂದ್ರಕ್ಕೆ ಅಗತ್ಯವಿರುವ ಭೂಮಿಯನ್ನು ಕೂಡಲೇ ಮಂಜೂರು ಮಾಡಬೇಕೆಂದು ಮತ್ತೊಮ್ಮೆ ಈ ಪತ್ರದ ಮೂಲಕ ಕೋರುತ್ತೇನೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಪತ್ರದಲ್ಲಿ ಬರೆದಿದ್ದಾರೆ.

Ends

Comments

Leave a Comment

Prev Post ಪ್ರಧಾನಿ ಮೋದಿ, ಕೇಂದ್ರ ಗೃಹ ಹಾಗೂ ಕೃಷಿ ಸಚಿವರಿಗೆ ಡಾ. ಜಿ. ಪರಮೇಶ್ವರ ಪತ್ರ
Next Post ಲಕ್ನೋ ಐಐಎಂ ಅಧ್ಯಕ್ಷರೊಂದಿಗೆ ಶಿಕ್ಷಣ ಸಚಿವ ಜೋಶಿ ಸಮಾಲೋಚನೆ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News