PRABHAVAA.COM

ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆ; ಪರಿಸ್ಥಿತಿಗೆ ಅನುಗುಣವಾಗಿ ಮತ್ತಷ್ಟು ತಾಲೂಕುಗಳ ಸೇರ್ಪಡೆ: ಡಾ. ಜಿ. ಪರಮೇಶ್ವರ

Bengaluru Urban:

Font size:

ಕಸ್ತೂರಿ ರಂಗನ್ ವರದಿ ಮತ್ತು ಬರ ಪರಿಸ್ಥಿತಿ: ರಾಜ್ಯದ ಹಿತಾಸಕ್ತಿಯ ವಿಚಾರದಲ್ಲಿ ರಾಜಕೀಯ ಬೇಡ, ಒಗ್ಗಟ್ಟು ಇರಲಿ

ಬೆಂಗಳೂರು, ಸೆಪ್ಟೆಂಬರ್‌ 22 (ಕರ್ನಾಟಕ ವಾರ್ತೆ) :
ಕಸ್ತೂರಿ ರಂಗನ್ ವರದಿ ಹಾಗೂ ರಾಜ್ಯದಲ್ಲಿ ಉಂಟಾಗಿರುವ ಗಂಭೀರ ಬರ ಪರಿಸ್ಥಿತಿಯ ಕುರಿತು ವಿಧಾನಮಂಡಲದಲ್ಲಿ ಪಕ್ಷಾತೀತವಾಗಿ ಸಮಗ್ರ ಚರ್ಚೆ ನಡೆಸಿ, ರಾಜ್ಯದ ಹಿತಾಸಕ್ತಿಗೆ ಪೂರಕವಾದ ಒಮ್ಮತದ ನಿರ್ಣಯ ಕೈಗೊಳ್ಳಬೇಕಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಹೇಳಿದರು.

ವಿಧಾನಪರಿಷತ್‌ನಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯ 7ನೇ ಕರಡು ಪ್ರತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನಿಗದಿತ ಅವಧಿಯೊಳಗೆ ತನ್ನ ಅಭಿಪ್ರಾಯವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಬೇಕಿದೆ. ಸರ್ಕಾರದ ಅಭಿಪ್ರಾಯವನ್ನಷ್ಟೇ ಏಕಪಕ್ಷೀಯವಾಗಿ ಸಲ್ಲಿಸುವ ಬದಲು, ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಮುಕ್ತವಾಗಿ ಚರ್ಚಿಸಿ, ರಾಜ್ಯದ ಹಿತದೃಷ್ಟಿಯಿಂದ ಒಮ್ಮತದ ನಿಲುವನ್ನು ಕೇಂದ್ರಕ್ಕೆ ತಿಳಿಸುವುದು ಸೂಕ್ತ ಎಂಬ ಉದ್ದೇಶದಿಂದ ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಗಂಭೀರ ಬರ ಪರಿಸ್ಥಿತಿ : ರಾಜ್ಯದಲ್ಲಿ ಈ ಬಾರಿ ಬರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಇದು ಕೆಲವೇ ತಾಲೂಕುಗಳಿಗೆ ಸೀಮಿತವಾಗಿಲ್ಲ. ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ತೀವ್ರ ಕೊರತೆ ಕಂಡುಬಂದಿದ್ದು, ಕೃಷಿ ಚಟುವಟಿಕೆ ಮತ್ತು ರೈತರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ವಿವರಿಸಿದರು.

ಹಿಂದಿನ ತೀವ್ರ ಬರ ಪರಿಸ್ಥಿತಿಗಳೊಂದಿಗೆ ಈ ವರ್ಷದ ಅಂಕಿ-ಅಂಶಗಳನ್ನು ಹೋಲಿಕೆ ಮಾಡಲಾಗುತ್ತಿದ್ದು, ಪ್ರಸ್ತುತ ಪರಿಸ್ಥಿತಿಯ ತೀವ್ರತೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪೆಸಿಫಿಕ್ ಸಾಗರದ ಮೇಲ್ಮೈ ನೀರಿನ ತಾಪಮಾನ ಹೆಚ್ಚಳದಿಂದ ಉಂಟಾಗುವ ಎಲ್ ನಿನೋ ಪ್ರಕ್ರಿಯೆಯೂ ಮಳೆ ಕೊರತೆಗೆ ಕಾರಣವಾಗಿದ್ದು, ಈ ಬಾರಿ ಅದರ ತೀವ್ರತೆ ಹೆಚ್ಚಿದೆ ಎಂದರು.

ರಾಜ್ಯದಲ್ಲಿ ವಾಡಿಕೆಯಂತೆ ಸುಮಾರು 852 ಮಿ.ಮೀ. ಮಳೆಯಾಗಬೇಕಿತ್ತು, ಆದರೆ 642 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ. ಜೂನ್‌ನಿಂದ ಸೆಪ್ಟೆಂಬರ್ 26ರವರೆಗಿನ ಅವಧಿಯಲ್ಲಿ ವಿವಿಧ ಪ್ರದೇಶಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ ಎಂದು ಸದನದ ಗಮನಕ್ಕೆ ತಂದರು.

ರಾಜ್ಯದ ಸರಾಸರಿ ಮಳೆ ಕೊರತೆ ಶೇ.36ರಷ್ಟಿದ್ದು, ದಕ್ಷಿಣ ಒಳನಾಡಿನಲ್ಲಿ ಶೇ.46, ಉತ್ತರ ಒಳನಾಡಿನಲ್ಲಿ ಶೇ.44, ಮಲೆನಾಡಿನಲ್ಲಿ ಶೇ.38 ಹಾಗೂ ಕರಾವಳಿ ಭಾಗದಲ್ಲಿ ಶೇ.28ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ವಿವರಿಸಿದರು.

ಮಳೆ ಆರಂಭವಾದ ಸಂದರ್ಭದಲ್ಲಿ ರೈತರು ಬಿತ್ತನೆ ಕೈಗೊಂಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಮಳೆ ಕೈಕೊಟ್ಟ ಪರಿಣಾಮ ಮೊಳಕೆಯೊಡೆದ ಬೆಳೆಗಳು ಒಣಗಿವೆ. ನಂತರ ಮಳೆಯಾದಾಗ ಎರಡನೇ ಬಾರಿ ಬಿತ್ತನೆ ಮಾಡಿದ ಬೆಳೆಗಳಿಗೂ ಹಾನಿಯಾಗಿದೆ. ಹಲವು ಪ್ರದೇಶಗಳಲ್ಲಿ ಬೆಳೆ ಹಾನಿ ತೀವ್ರವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

177 ತಾಲೂಕುಗಳು ಬರಪೀಡಿತ ಪಟ್ಟಿಗೆ : ಕೇಂದ್ರ ಸರ್ಕಾರವು 2020ರಲ್ಲಿ ರೂಪಿಸಿರುವ ಬರ ಘೋಷಣೆಯ ಮಾರ್ಗಸೂಚಿಗಳ ಪ್ರಕಾರವೇ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕಾಗುತ್ತದೆ. ಆ ಮಾನದಂಡಗಳನ್ನು ಅನುಸರಿಸಿ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ನಿರಂತರ ಪರಿಶೀಲನೆಯ ಬಳಿಕ ಮತ್ತೂ 23 ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿದ್ದು, ಇದೀಗ ಮತ್ತೆ 53 ತಾಲೂಕುಗಳನ್ನು ಪಟ್ಟಿಗೆ ಸೇರಿಸಲಾಗುತ್ತಿದೆ. ಇದರೊಂದಿಗೆ ಒಟ್ಟು 177 ತಾಲೂಕುಗಳು ಬರಪೀಡಿತ ಪ್ರದೇಶಗಳಾಗಿ ಘೋಷಣೆಯಾಗಲಿವೆ ಎಂದು ತಿಳಿಸಿದರು.

ಇಷ್ಟಕ್ಕೇ ಪ್ರಕ್ರಿಯೆ ಮುಗಿಯುವುದಿಲ್ಲ. ನೆಲಮಟ್ಟದ ಪರಿಸ್ಥಿತಿ, ಮಳೆ ಕೊರತೆ, ಬೆಳೆ ಹಾನಿ ಸೇರಿದಂತೆ ನಿಗದಿತ ಮಾನದಂಡಗಳ ಆಧಾರದಲ್ಲಿ ನಿರಂತರ ಮೌಲ್ಯಮಾಪನ ನಡೆಸಲಾಗುವುದು. ಮುಂದಿನ ಹಂತದಲ್ಲಿ ಮತ್ತಷ್ಟು ತಾಲೂಕುಗಳು ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಿದ್ದು, ಬರಪೀಡಿತ ತಾಲೂಕುಗಳ ಸಂಖ್ಯೆ ಸುಮಾರು 200ರವರೆಗೆ ತಲುಪಬಹುದು ಎಂದು ಹೇಳಿದರು.

ಕೇಂದ್ರ ಸರ್ಕಾರವೇ ಬರ ಘೋಷಣೆ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಮಾನದಂಡಗಳನ್ನು ರೂಪಿಸಿರುವುದರಿಂದ, ರಾಜ್ಯ ಸರ್ಕಾರವು ಆ ನಿಯಮಗಳ ಚೌಕಟ್ಟಿನಲ್ಲಿಯೇ ಕ್ರಮ ಕೈಗೊಳ್ಳಬೇಕಾಗಿದೆ. ಮಾನದಂಡಗಳನ್ನು ಮೀರಿ ರಾಜ್ಯದ ಎಲ್ಲ ತಾಲೂಕುಗಳನ್ನು ಏಕಾಏಕಿ ಬರಪೀಡಿತ ಎಂದು ಘೋಷಿಸಿದರೆ ಕೇಂದ್ರದಿಂದ ಪರಿಹಾರ ಪಡೆಯುವ ಪ್ರಕ್ರಿಯೆಗೆ ತೊಡಕು ಉಂಟಾಗಬಹುದು ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ರೂಪಿಸಿರುವ ನಿಯಮಗಳ ಪ್ರಕಾರವೇ ನಾವು ನಡೆದುಕೊಳ್ಳುತ್ತಿದ್ದೇವೆ. ಆ ನಿಯಮಗಳಡಿ ರಾಜ್ಯಕ್ಕೆ ದೊರೆಯಬೇಕಾದ ಬರ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಬೇಕು. ಅದೇ ವೇಳೆ ರಾಜ್ಯ ಸರ್ಕಾರವೂ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯದೆ, ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಿ ರೈತರಿಗೆ ಪರಿಹಾರ ತಲುಪಿಸುವ ಕೆಲಸ ಮಾಡಲಿದೆ ಎಂದು ಹೇಳಿದರು.

ಕಸ್ತೂರಿ ರಂಗನ್ ವರದಿ ಮತ್ತು ಬರಗಾಲ ಎರಡೂ ರಾಜ್ಯದ ಹಿತಾಸಕ್ತಿಗೆ ಸಂಬಂಧಿಸಿದ ಮಹತ್ವದ ವಿಷಯಗಳಾಗಿವೆ. ಹೀಗಾಗಿ ಆಡಳಿತ ಮತ್ತು ವಿರೋಧ ಪಕ್ಷಗಳು ಪಕ್ಷಭೇದ ಮರೆತು ಸದನದಲ್ಲಿ ಸಮಗ್ರವಾಗಿ ಚರ್ಚಿಸಿ, ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಒಗ್ಗಟ್ಟಿನ ನಿಲುವನ್ನು ಕೇಂದ್ರ ಸರ್ಕಾರದ ಮುಂದೆ ಮಂಡಿಸಬೇಕಿದೆ ಎಂದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಸದನಕ್ಕೆ ಮನವಿ ಮಾಡಿದರು.

Comments

Leave a Comment

Prev Post ಹಳ್ಳಿ ಮಕ್ಕಳಿಗೆ ತಂತ್ರಜ್ಞಾನ ತಲುಪಿಸಿ, ಭವಿಷ್ಯದ ಪೀಳಿಗೆಯನ್ನು ತಯಾರು ಮಾಡುವ ಕಿಯೋನಿಕ್ಸ್ ಪ್ರಯತ್ನ ಸ್ವಾಗತಾರ್ಹ: ಸಿಎಂ ಡಿ ಕೆ ಶಿವಕುಮಾರ್
Next Post ಸೆ.28 ರಿಂದ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ 'ರೈತ ಸ್ವಾಭಿಮಾನ ಯಾತ್ರೆ' - ಪ್ರತಿ ಜಿಲ್ಲೆಗೂ ಪ್ರವಾಸ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News