PRABHAVAA.COM

ವಿಶ್ವ ದರ್ಜೆಯ ಬಹುಪಯೋಗಿ ವಸ್ತು ಪ್ರದರ್ಶನ ಸಭಾಂಗಣ, ಕನ್ವೆನ್ಷನ್ ಸೆಂಟರ್ ಅಭಿವೃದ್ಧಿ: ಎಂ ಬಿ ಪಾಟೀಲ

Bengaluru Urban:

Font size:

ಅಪ್ಲೈಡ್ ಮೆಟೀರಿಯಲ್ಸ್ ನಿಂದ ₹3,600 ಕೋಟಿ ಹೂಡಿಕೆ: ಎಂ ಬಿ ಪಾಟೀಲ

ವೈಟ್ ಫೀಲ್ಡ್ ನಲ್ಲಿನ ಕೆಟಿಪಿಒ ಜಾಗದ ಸಮಗ್ರ ಅಭಿವೃದ್ಧಿಗೆ ತೀರ್ಮಾನ

ವಿಶ್ವ ದರ್ಜೆಯ ಬಹುಪಯೋಗಿ ವಸ್ತು ಪ್ರದರ್ಶನ ಸಭಾಂಗಣ, ಕನ್ವೆನ್ಷನ್ ಸೆಂಟರ್ ಅಭಿವೃದ್ಧಿ: ಎಂ ಬಿ ಪಾಟೀಲ

ವ್ಯಾಪಾರ, ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ

ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಕೈಗಾರಿಕಾ ನಗರಗಳಲ್ಲಿ ಒಂದಾಗಿರುವ ವೈಟ್ ಫೀಲ್ಡ್ ನಲ್ಲಿ ಕರ್ನಾಟಕ ವ್ಯಾಪಾರ ಉತ್ತೇಜನಾ ಸಂಸ್ಥೆ (ಕೆಟಿಪಿಒ) ಹೊಂದಿರುವ 48.35 ಎಕರೆ ಪ್ರದೇಶದಲ್ಲಿ ವಿಶ್ವ ದರ್ಜೆಯ ಕನ್ವೆನ್ಷನ್ ಸೆಂಟರ್, ಸಭಾಂಗಣ, ಪ್ರದರ್ಶನಾಂಗಣ ಇತ್ಯಾದಿಗಳಿರುವ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ. ಇದರಿಂದ ನಗರದಲ್ಲಿ ವಾಣಿಜ್ಯ ಮತ್ತು ವ್ಯಾಪಾರ ವಹಿವಾಟುಗಳಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಮಂಗಳವಾರ ಕೇಂದ್ರ ಸರ್ಕಾರದ ಭಾರತೀಯ ವ್ಯಾಪಾರ ಉತ್ತೇಜನಾ ಸಂಸ್ಥೆ (ಐಟಿಪಿಒ) ಅಧ್ಯಕ್ಷ ಜಾವೆದ್ ಅಶ್ರಫ್ ಅವರ ಜತೆ ಕೆಟಿಪಿಒ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿ ಹಾಲಿ ಇರುವ ವ್ಯವಸ್ಥೆಯ ಪರಿಶೀಲನೆ ಮತ್ತು ಖಾಲಿ ಇರುವ ಜಾಗದಲ್ಲಿ ಮಾಡಬಹುದಾದ ಹೊಸ ವ್ಯವಸ್ಥೆಗಳ ಸಾಧ್ಯತೆ ಕುರಿತು ಮಹತ್ತ್ವದ ಚರ್ಚೆ ನಡೆಸಿದರು.

ಕೆಟಿಪಿಒ ದಲ್ಲಿ ಶೇ‌ 51ರಷ್ಟು ಷೇರು ಐಟಿಪಿಒ ಹೊಂದಿದೆ. ರಾಜ್ಯ ಸರ್ಕಾರ ಶೇ 49ರಷ್ಟು ಷೇರು ಹೊಂದಿದ್ದು ಏನೇ ಅಭಿವೃದ್ಧಿಪಡಿಸಬೇಕೆಂದರೂ ಸಮನ್ವಯದಿಂದ ಕೆಲಸ ಮಾಡಬೇಕಾಗುತ್ತದೆ. ಈ ಕಾರಣಕ್ಕೆ ಇಂದು ಮಹತ್ವದ ಸಭೆ ನಡೆಯಿತು.

ಈ ಬಗ್ಗೆ ಮಾತನಾಡಿದ ಸಚಿವರು, 'ಇದೊಂದು ವಿವಿಧೋದ್ದೇಶ ಯೋಜನೆಯಾಗಿದೆ. ಇಲ್ಲಿ ಕೆಟಿಪಿಒ 50 ಎಕರೆ ಭೂಮಿ ಹೊಂದಿತ್ತು. ಮೆಟ್ರೋ ರೈಲು ನಿಗಮಕ್ಕೆ 1.65 ಎಕರೆ ಹೋದ ಮೇಲೆ 48.35 ಎಕರೆ ಉಳಿದಿದೆ. ಇಲ್ಲಿ ಖಾಲಿ ಇರುವ ಜಾಗದಲ್ಲಿ ವಿವಿಧ ಉದ್ದೇಶಗಳಿಗೆ ಬಳಸಬಹುದಾದ ಭವಿಷ್ಯದ ಆಧುನಿಕ ಪ್ರದರ್ಶನ ಸಭಾಂಗಣಗಳು, ಮೆಗಾ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಅನುಕೂಲ ಆಗುವ ಸಭಾಂಗಣಗಳು, ವಾಹನ‌ ನಿಲುಗಡೆ ಸೇರಿದಂತೆ ಇತರ ಅಗತ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದಿದ್ದಾರೆ.

ಕೆಟಿಪಿಒ ದಲ್ಲಿ ಖಾಲಿ ಇರುವ ಜಾಗದ ಪೈಕಿ 5 ಎಕರೆ ವಿಸ್ತೀರ್ಣದಲ್ಲಿ ಉದ್ದೇಶಿತ ಜಾಗತಿಕ ಮಟ್ಟದ ವ್ಯಾಪಾರ, ಪ್ರದರ್ಶನ ಮತ್ತು ಸಮಾವೇಶ ತಾಣ ಅಭಿವೃದ್ಧಿಪಡಿಸಲಾಗುವುದು.‌ ಇದಕ್ಕಾಗಿ ಆರ್.ಎಸ್.ಪಿ.‌ ಕಂಪನಿ ವಿನ್ಯಾಸ ಸಿದ್ಧಪಡಿಸಿದೆ. ನಮ್ಮ ಯೋಜನೆಯು ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಗಿಂತ ಚೆನ್ನಾಗಿರಬೇಕು.‌ ಹೀಗಾಗಿ ಆರ್.ಎಸ್.ಪಿ.‌ ಕಂಪನಿಗೆ ಮುಂಬೈಗೆ ಭೇಟಿ ನೀಡಿ, ಇಡೀ ಯೋಜನೆಯನ್ನು ಮರುವಿನ್ಯಾಸ ಮಾಡುವಂತೆ ಸೂಚಿಸಲಾಗಿದೆ. ಜತೆಗೆ ದೆಹಲಿಯ ಭಾರತ ಮಂಟಪಂ ಮತ್ತು ಯಶೋಭೂಮಿ ಯೋಜನೆಗಳಲ್ಲಿ ಇರುವ ದೋಷಗಳ‌ ಕಡೆಗೆ ಗಮನ‌ಹರಿಸಿ, ಅದು ನಮ್ಮಲ್ಲಿ ಮರುಕಳಿಸದಂತೆ ನೋಡಿಕೊಳ್ಳಲು ಹೇಳಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಈ ಜಾಗದಲ್ಲಿ 2002ರಲ್ಲಿ ಕಟ್ಟಿರುವ ಒಂದು ವಸ್ತು ಪ್ರದರ್ಶನ ಸಭಾಂಗಣ ಮತ್ತು 2024ರಲ್ಲಿ ನಿರ್ಮಿಸಿರುವ ಇನ್ನೊಂದು ವಸ್ತು ಪ್ರದರ್ಶನ ಸಭಾಂಗಣವಿದೆ. ಆದರೆ ಇವು ಇಂದಿನ ಅಗತ್ಯಗಳಿಗೆ ಸಾಲುತ್ತಿಲ್ಲ. ಆದ್ದರಿಂದ ನೆಲಮಹಡಿ ಮತ್ತು ಮೇಲ್ಮಹಡಿಯಲ್ಲಿ ತಲಾ 10 ಸಾವಿರ ಚದರ ಮೀಟರ್ ವಿಸ್ತೀರ್ಣದ (ಒಟ್ಟು 20 ಸಾವಿರ ಚದರ ಮೀಟರ್) ಅತ್ಯಾಧುನಿಕ ವಸ್ತು ಪ್ರದರ್ಶನಾಲಯ ಮತ್ತು ಕನ್ವೆನ್ಷನ್ ಸೆಂಟರ್ ಹಾಗೂ ಸಭಾಂಗಣಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಇಲ್ಲಿ 500 ಕಾರುಗಳ ನಿಲುಗಡೆಗೆ ವ್ಯವಸ್ಥೆ ಇರಲಿದೆ ಎಂದು ಅವರು‌ ನುಡಿದಿದ್ದಾರೆ.

ಐದು ಎಕರೆ ಜಾಗದಲ್ಲಿ ಮೈದಾಳಲಿರುವ ಉದ್ದೇಶಿತ ಸಭಾಂಗಣದಲ್ಲಿ ಸಮಾವೇಶ, ಉತ್ಪನ್ನಗಳ ಬಿಡುಗಡೆ, ಸಭಾಂಗಣಗಳು, ವಾಣಿಜ್ಯ ಪ್ರದರ್ಶನ, ವ್ಯಾಪಾರ ಸಂಬಂಧಿ ಕಾರ್ಯಕ್ರಮಗಳು, ಮೆಗಾ ಸಂಗೀತ ಕಛೇರಿಗಳಿಗೆ ಅವಕಾಶ ಕೊಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಮಾಸ್ಟರ್ ಪ್ಲ್ಯಾನ್ ಕುರಿತೂ‌ ಚರ್ಚಿಸಲಾಯಿತು. ಜತೆಗೆ ಹಾಲಿ ಇರುವ ಎರಡು ಸಭಾಂಗಣಗಳಲ್ಲಿ ಒಂದು ಹಳೆಯದಾಗಿದೆ. ಇದನ್ನು ಹಾಗೆಯೇ ಉಳಿಸಿಕೊಳ್ಳಬೇಕೇ ಅಥವಾ ಬೇರೇನು ಮಾಡಬೇಕು ಎನ್ನುವ ಚಿಂತನೆಯೂ ಇದೆ. ಒಟ್ಟಿನಲ್ಲಿ ಈ ಸ್ಥಳದಲ್ಲಿ ಜಿಯೋಗಿಂತ ಒಳ್ಳೆಯ ಸೌಕರ್ಯ ಬರಬೇಕು ಎನ್ನುವುದು ಸರಕಾರದ ಬಯಕೆಯಾಗಿದೆ ಎಂದು ಅವರು ನುಡಿದಿದ್ದಾರೆ.

ಇದಲ್ಲದೆ ಕುಂದಲಹಳ್ಳಿ ಮೆಟ್ರೋ ನಿಲ್ದಾಣ ಹಾಗೂ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ 14 ಎಕರೆ ಖಾಲಿ ಜಾಗವನ್ನು ಮಾನಿಟೈಸ್ ಮಾಡುವ ಬಗ್ಗೆಯೂ ಚರ್ಚಿಸಲಾಯಿತು. ಈ ಸಂಬಂಧ ಸೂಕ್ತ ಸಲಹೆ ನೀಡಲು ವಹಿವಾಟು ಸಲಹೆಗಾರರನ್ನು ನೇಮಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಐಟಿಪಿಒ ಅಧ್ಯಕ್ಷ ಜಾವೆದ್ ಅಶ್ರಫ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಐಟಿಪಿಒ ವ್ಯವಸ್ಥಾಪಕ ನಿರ್ದೇಶಕ ನೀರಜ್ ಕರ್ವಾಲ್ , ಕೆಟಿಪಿಒ ವ್ಯವಸ್ಥಾಪಕ ನಿರ್ದೇಶಕ ಬಿ ಕೆ ಶಿವಕುಮಾರ್ ಭಾಗವಹಿಸಿದ್ದರು.

ಅಪ್ಲೈಡ್ ಮೆಟೀರಿಯಲ್ಸ್ ನಿಂದ ₹3,600 ಕೋಟಿ ಹೂಡಿಕೆ: ಎಂ ಬಿ ಪಾಟೀಲ

ಬೆಂಗಳೂರು: ಅಮೆರಿಕ ಮೂಲದ ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಕಂಪನಿಯಾಗಿರುವ ಅಪ್ಲೈಡ್ ಮೆಟೀರಿಯಲ್ಸ್, ರಾಜ್ಯದಲ್ಲಿ ಮುಂದಿನ 10 ವರ್ಷಗಳಲ್ಲಿ 3,600 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ. ಬೆಂಗಳೂರು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಈ ಯೋಜನೆಯಿಂದ 1,000 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಈ ಸಂಬಂಧದ ಒಡಂಬಡಿಕೆಗೆ ಕಂಪನಿ ಜತೆ ಸಹಿ ಮಾಡಲಾಗಿದೆ ಎಂದು‌ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವರು, ಅಪ್ಲೈಡ್ ಮೆಟೀರಿಯಲ್ಸ್ ಕಂಪನಿಯು ಈ ಹೂಡಿಕೆಯ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿ, ಅಗತ್ಯ ಸಾಧನಗಳ ತಯಾರಿಕೆ, ಸೆಮಿಕಂಡಕ್ಟರ್ ಚಿಪ್ ಉತ್ಪಾದನೆಗೆ ಬೇಕಾದ ಸಾಫ್ಟ್ ವೇರ್ ತಂತ್ರಜ್ಞಾನ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸಲಿದೆ. ಕೆಂಪೇಗೌಡ ವಿಮಾನ‌ ನಿಲ್ದಾಣ ಸಮೀಪದ ಬೆಂಗಳೂರು ಸಿಗ್ನೇಚರ್ ಬಿಝಿನೆಸ್ ಪಾರ್ಕ್ ಪ್ರದೇಶದಲ್ಲಿ ಜಾರಿಗೊಳ್ಳುತ್ತಿರುವ ಇಂತಹ ಪ್ರಪ್ರಥಮ ಕೈಗಾರಿಕಾ ಯೋಜನೆ ಇದಾಗಿದೆ. ಮೆಟೀರಿಯಲ್ಸ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕಂಪನಿಯ ಈ ಹೂಡಿಕೆಯಿಂದ ಈ ವಲಯಕ್ಕೆ ಬೇಕಾದ ಕಾರ್ಯಪರಿಸರ ಸಶಕ್ತವಾಗಲಿದೆ ಎಂದಿದ್ದಾರೆ.

ಕಂಪನಿಯ ಈ ಯೋಜನೆಗೆ ಸರಕಾರವು ಎಲ್ಲ ಹಂತಗಳಲ್ಲೂ ಸಂಪೂರ್ಣ ಸಹಕಾರ ನೀಡಲಿದೆ. ಈ ಸಂಸ್ಥೆಯು ಎರಡು ದಶಕಗಳಿಂದ ಭಾರತದಲ್ಲಿ ಸಕ್ರಿಯವಾಗಿದ್ದು, ಬೆಂಗಳೂರನ್ನು ತನ್ನ ಪ್ರಮುಖ ಕೇಂದ್ರವನ್ನಾಗಿ ಇಟ್ಟುಕೊಂಡಿದೆ. ತನ್ನ ಭವಿಷ್ಯದ ಹೂಡಿಕೆಗಳಿಗೂ ಕಂಪನಿಯು ರಾಜ್ಯವನ್ನೇ ಆಯ್ದುಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದು ಅವರು ತಿಳಿಸಿದ್ದಾರೆ.

Comments

Leave a Comment

Prev Post *ಪೊಲೀಸ್ ರೌಂಡಪ್ 10ನೇ ವಾರ್ಷಿಕೋತ್ಸವ: ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ*
Next Post ಮೋದಿಯವರ ನೇತೃತ್ವದಲ್ಲಿ ಪ್ರಮುಖ ಆರ್ಥಿಕ ಶಕ್ತಿಯಾದ ಭಾರತ: ಜೆ.ಪಿ. ನಡ್ಡಾ

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟಕ್ಕೆ ₹10.61 ಕೋಟಿ ಲಾಭ.

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟಕ್ಕೆ ₹10.61 ಕೋಟಿ ಲಾಭ.

ಬಾಗ್ಮನೆ ಸಾಧನೆ ದೇಶವೇ ಹೆಮ್ಮೆಪಡುವಂತದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

ಬಾಗ್ಮನೆ ಸಾಧನೆ ದೇಶವೇ ಹೆಮ್ಮೆಪಡುವಂತದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

₹6,000 ಕೋಟಿ ಹೂಡಿಕೆಗೆ ಆ್ಯಕ್ಸಿಸ್‌ಕೇಡ್ಸ್‌ ಏರೊಸ್ಪೇಸ್‌ ಒಲವು: ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ

* ಮೂರು ವರ್ಷಗಳಲ್ಲಿ ವೈಮಾಂತರಿಕ್ಷ, ರಕ್ಷಣೆ, ಎಂಆರ್‌ಒ, ತಯಾರಿಕಾ ಕ್ಲಸ್ಟರ್‌ ಅಭಿವೃದ್ಧಿ * 20 ಸಾವಿರ ಪ್ರತ್ಯಕ್ಷ ಹಾಗೂ 54 ಸಾವಿರ ಪರೋಕ್ಷ ಉದ್ಯೋಗ ಅವಕಾಶಗಳು ಸೃಷ್ಟಿ

ಎಂ.ಸಿ.ಸಿ.ಬ್ಯಾಂಕ್ ಕಾರ್ಯವ್ಯಾಪ್ತಿ ರಾಜ್ಯಕ್ಕೆ ವಿಸ್ತರಣೆ: ಅಧ್ಯಕ್ಷ ಅನಿಲ್ ಲೋಬೋ

ಎಂಸಿಸಿ ಬ್ಯಾಂಕ್: ದೇರಳಕಟ್ಟೆ ಮತ್ತು ಕಟಪಾಡಿಯಲ್ಲಿ ಹೊಸ ಶಾಖೆಗಳ ಉದ್ಘಾಟನೆ, 1,535 ಕೋಟಿ ರೂ. ವ್ಯವಹಾರ ಮೈಲಿಗಲ್ಲು

ಬ್ಯಾಂಕ್ ನೀಡುವ ಸಾಲದಿಂದ ಗ್ರಾಹಕರು ಆದಾಯ ಹೆಚ್ಚಿಸಿಕೊಳ್ಳಬೇಕು: ಬಸವರಾಜ ಬೊಮ್ಮಾಯಿ

ಬ್ಯಾಂಕ್ ನೀಡುವ ಸಾಲದಿಂದ ಗ್ರಾಹಕರು ಆದಾಯ ಹೆಚ್ಚಿಸಿಕೊಳ್ಳಬೇಕು: ಬಸವರಾಜ ಬೊಮ್ಮಾಯಿ

ಹೂಡಿಕೆ ಆಕರ್ಷಣೆಗೆ ಕೋಲ್ಕತ್ತಾದಲ್ಲಿ ರೋಡ್ ಶೋ ನಡೆಸಿದ ಸಚಿವ ಎಂ.ಬಿ.ಪಾಟೀಲ

ಹೂಡಿಕೆ ಆಕರ್ಷಣೆಗೆ ಕೋಲ್ಕತ್ತಾದಲ್ಲಿ ರೋಡ್ ಶೋ ನಡೆಸಿದ ಸಚಿವ ಎಂ.ಬಿ.ಪಾಟೀಲ

Read all News