ಕೈಗಾರಿಕೆ ಸೌಲಭ್ಯ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಮಂಡಲ ಅಸ್ತು: ಎಂ ಬಿ ಪಾಟೀಲ
ಕೈಗಾರಿಕೆ ಸೌಲಭ್ಯ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಮಂಡಲ ಅಸ್ತು: ಎಂ ಬಿ ಪಾಟೀಲ
ಬೆಂಗಳೂರು: ಕೈಗಾರಿಕೆಗಳಿಗೆ ಒಟ್ಟು 20 ಸೇವೆಗಳನ್ನು ಅಫಿಡವಿಟ್ ಆಧರಿತ ಅನುಮೋದನೆ (ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್- ಎಬಿಸಿ) ವಿಧಾನದಲ್ಲಿ ಒದಗಿಸಲು ಅವಕಾಶ ಕೊಡಲಿರುವ ಮತ್ತು ಏಕಗವಾಕ್ಷಿ ಪದ್ಧತಿಗೆ ಕಾನೂನಿನ ಮಾನ್ಯತೆ ತಂದುಕೊಡಲಿರುವ ಕರ್ನಾಟಕ ಕೈಗಾರಿಕಾ ಸೌಲಭ್ಯ (ತಿದ್ದುಪಡಿ) ವಿಧೇಯಕ-2026 ಅನ್ನು ವಿಧಾನ ಮಂಡಲದ ಉಭಯ ಸದನಗಳು ಸೋಮವಾರ ಅಂಗೀಕರಿಸಿದವು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಈ ವಿಧೇಯಕವನ್ನು ವಿಧಾನಸಭೆ ಮತ್ತು ವಿಧಾನಪರಿಷತ್ ಎರಡರಲ್ಲೂ ಮಂಡಿಸಿದರು.
ಬಳಿಕ ಮಸೂದೆ ಬಗ್ಗೆ ಮಾತನಾಡಿದ ಸಚಿವರು, ರಾಜ್ಯವು 2002ರಲ್ಲೇ ಕೈಗಾರಿಕಾ ಸೌಲಭ್ಯ ಕಾಯಿದೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದ ಖ್ಯಾತಿ ಹೊಂದಿದೆ. 2020ರಲ್ಲಿ ಇದಕ್ಕೆ ತಿದ್ದುಪಡಿ ತಂದು ಎಬಿಸಿ ಪದ್ಧತಿಯಡಿ 15 ಸೇವೆಗಳನ್ನು ಕೊಡಲಾಗುತ್ತಿತ್ತು. ಈಗ ಇನ್ನೂ 5 ಸೇವೆಗಳನ್ನು ಸೇರಿಸಲಾಗುತ್ತಿದೆ. ಜತೆಗೆ ಏಕಗವಾಕ್ಷಿ ವ್ಯವಸ್ಥೆಗೆ ಕಾನೂನಿನ ಮನ್ನಣೆ ನೀಡಿ, ಕೈಗಾರಿಕೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಅದರ ಮೂಲಕವೇ ಸಲ್ಲಿಸುವ ಮತ್ತು ಮುಂದಿನ ಪ್ರಕ್ರಿಯೆಗಳನ್ನು ತ್ವರಿತವಾಗಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಇದು ಸುಗಮ ವಾಣಿಜ್ಯ ಸಂಸ್ಕೃತಿ ಪ್ರಕ್ರಿಯೆಯ ಭಾಗವಾಗಿದೆ ಎಂದಿದ್ದಾರೆ.
ಹೀಗಾಗಿ ಇನ್ನು ಮುಂದೆ ಏಕಗವಾಕ್ಷಿ ವ್ಯವಸ್ಥೆಯಡಿ ಬರುವ ಕೆವೈಎ, ಕೆವೈಸಿ, ಸಿಂಗಲ್ ಸೈನ್-ಆನ್, ಡ್ಯಾಶ್ ಬೋರ್ಡ್, ಆಡಿಟ್ ಟ್ರಯಲ್, ಟಿಎಟಿ ಮಾನಿಟರಿಂಗ್, ಎಪಿಐ ಇಂಟಿಗ್ರೇಶನ್ ಮತ್ತು ಒನ್ಸ್-ಓನ್ಲಿ ಸಬ್ಮಿಶನ್ ಮುಂತಾದ ಸೌಲಭ್ಯಗಳಿಗೆ ಕಾನೂನಿನ ಬಲ ಬರಲಿದೆ. ಜತೆಗೆ ರಾಜ್ಯ ಮಟ್ಟದ ನೋಡಲ್ ಏಜೆನ್ಸಿ, ಸಮನ್ವಯ ಸಮಿತಿ ಮತ್ತು ಕೇಂದ್ರ ತಪಾಸಣಾ ವ್ಯವಸ್ಥೆಗೆ ಬಲ ಬರಲಿದೆ. ಒಟ್ಟಾರೆಯಾಗಿ ಕೈಗಾರಿಕೆಗಳು ತಮ್ಮ ಕಾಮಗಾರಿ ಇತ್ಯಾದಿ ಆರಂಭಿಸಿ, ಬಳಿಕ ಅನುಮೋದನೆ ಪಡೆದುಕೊಳ್ಳಬಹುದು ಎಂದು ಅವರು ವಿವರಿಸಿದ್ದಾರೆ.
ಸರಕಾರದ ಮಟ್ಟದಲ್ಲಿ ಕೈಗಾರಿಕೆಗಳಿಗೆ ಬೇಕಾಗುವ ಒಪ್ಪಿಗೆ ಇತ್ಯಾದಿಗಳು ಸರಳವಾಗಿದ್ದು, ಪಾರದರ್ಶಕವಾಗಿರಬೇಕು. ಈ ಮೂಲಕ ಬಂಡವಾಳಸ್ನೇಹಿ ವ್ಯವಸ್ಥೆಯನ್ನು ನಿರ್ಮಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.
--
ಐಪಿಸಿ ಕಂಪನಿಯಿಂದ 83 ಸಾವಿರ ಕೋಟಿ ರೂ. ಹೂಡಿಕೆಗೆ ಒಲವು: ಎಂ ಬಿ ಪಾಟೀಲ
ಬೆಂಗಳೂರು: ಡಿಜಿಟಲ್ ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ ಮತ್ತು ಗ್ರೀನ್ ಹೈಡ್ರೋಜನ್ ವಲಯಗಳಲ್ಲಿ ಹೆಸರಾಗಿರುವ ಲಕ್ಸಂಬರ್ಗ್ ಮೂಲದ ಇನ್ನೋವೇಶನ್ ಪ್ಲಾಟ್ ಫಾರಂ ಕ್ಯಾಪಿಟಲ್ (ಐಪಿಸಿ) ಕಂಪನಿಯು ರಾಜ್ಯದಲ್ಲಿ ಒಟ್ಟು ಮೂರು ಹಂತಗಳಲ್ಲಿ 83 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಆಸಕ್ತಿ ತೋರಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.
ಸೋಮವಾರ ತಮ್ಮನ್ನು ಇಲ್ಲಿ ಭೇಟಿಯಾದ ಕಂಪನಿಯ ಉನ್ನತ ಮಟ್ಟದ ನಿಯೋಗದ ಜತೆ ಅವರು ಮಾತುಕತೆ ನಡೆಸಿದರು. ಕಂಪನಿಯ ವ್ಯವಸ್ಥಾಪಕ ಪಾಲುದಾರ ಗುರುಶರಣ್ ಸಿಂಗ್ ಕುಂದನ್ ಈ ನಿಯೋಗದ ನೇತೃತ್ವ ವಹಿಸಿದ್ದರು.
ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು, ಐಪಿಸಿ ಕಂಪನಿಯು ಬೆಂಗಳೂರು-ತುಮಕೂರು ಇಂಟಿಗ್ರೇಟೆಡ್ ಗ್ರೀನ್ ಹೈಡ್ರೋಜನ್ ಮತ್ತು ಕ್ರಮವಾಗಿ 2,500 ಮೆಗಾವ್ಯಾಟ್ ಐಟಿ ಲೋಡ್ ಮತ್ತು 1,000 ಮೆಗಾವ್ಯಾಟ್ ಸಾಮರ್ಥ್ಯದ ಹೈಪರ್ ಸ್ಕೇಲ್ ಡೇಟಾ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿವೆ. ಇದಕ್ಕಾಗಿ ಕಂಪನಿಯು ಮೊದಲ ಹಂತದಲ್ಲಿ 17,114 ಕೋಟಿ ರೂ. ಹೂಡಿಕೆ ಮಾಡಲು ಬಯಸಿದೆ ಎಂದಿದ್ದಾರೆ.
ಕಂಪನಿಯು ಮೊದಲ ಹಂತದಲ್ಲಿ ತಲಾ 200 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಡೇಟಾ ಕೇಂದ್ರಗಳನ್ನು ಮತ್ತು 500 ಮೆಗಾವ್ಯಾಟ್ ಸಾಮರ್ಥ್ಯದ ಗ್ರೀನ್ ಹೈಡ್ರೋಜನ್ ಸ್ಥಾವರ ಮತ್ತು ಇಂಧನ ಸಂಕೀರ್ಣವನ್ನು ಸ್ಥಾಪಿಸಲಿದೆ. ಇದಕ್ಕಾಗಿ ಕಂಪನಿಯು 1,000 ಎಕರೆ ಜಾಗ ಕೇಳಿದೆ. ಇದರಲ್ಲಿ ಅದು ಎರಡೂ ಸೌಕರ್ಯಗಳಿಗೆ ತಲಾ 400 ಎಕರೆ ಬಳಸುವ ಉದ್ದೇಶ ಹೊಂದಿದೆ. ಉಳಿದ 200 ಎಕರೆಯು ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗಾಗಿ ಮೀಸಲಿರಲಿದೆ. ಜತೆಗೆ 13 ಎಂಎಲ್ ಡಿ ನೀರು ಅಗತ್ಯವಿದೆ ಎಂದು ಕಂಪನಿಯ ಪ್ರತಿನಿಧಿಗಳು ತಿಳಿಸಿದ್ದಾರೆ. ಇದರಲ್ಲಿ ಶೇಕಡ 85ರಷ್ಟನ್ನು ಸಂಸ್ಕರಿತ ಮೂಲಗಳಿಂದ ಕೊಡುವ ಚಿಂತನೆ ಇದೆ ಎಂದು ಅವರು ವಿವರಿಸಿದ್ದಾರೆ.
ನಿಯೋಗದಲ್ಲಿ ಕಂಪನಿಯ ಸಿಇಒ ಪ್ರದೀಪ್ ಕಾರಟಗಿ, ವ್ಯವಸ್ಥಾಪಕ ಪಾಲುದಾರರಾಗಿರುವ ಜೇಮ್ಸ್ ಕೋಲ್ಟರ್, ವ್ಯವಸ್ಥಾಪಕ ನಿರ್ದೇಶಕರಾಗಿರುವ ಎಡ್ಸಾ ಕ್ಯಾಬ್ರೆರ, ಕಾರ್ಪೊರೇಟ್ ವ್ಯವಹಾರಗಳ ಭಾರತೀಯ ಮುಖ್ಯಸ್ಥ ಡಿ ಕೆ ಅರ್ಜುನ್ ಮುಂತಾದವರಿದ್ದರು.






Comments
Leave a Comment