ನೈಸ್ ಬಗ್ಗೆ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ ಹೆಚ್.ಡಿ.ಕುಮಾರಸ್ವಾಮಿ ಮುಂದಿನ ವಾರ ದಾಖಲೆಗಳ ಸಮೇತ ಸಿಎಂ ನೈಸ್ ಲೂಟಿ ಬಹಿರಂಗ ಎಂದ ಕೇಂದ್ರ ಸಚಿವರು
ನೈಸ್ ಲೂಟಿ ಇಡೀ ಭಾರತದಲ್ಲಿಯೇ ಅತೀ ದೊಡ್ಡ ಭೂಹಗರಣ; ಈ ಮುಖ್ಯಮಂತ್ರಿಯೇ ಭೂ ಲೂಟಿಯ ಮಹಾನಾಯಕ ಎಂದು ಕಿಡಿ
ಅಕ್ರಮದ ವಿರುದ್ಧ ಹೋರಾಡಿ; ವಿದ್ಯಾರ್ಥಿ, ಯುವ ಸಮೂಹಕ್ಕೆ ಕರೆ ನೀಡಿದ ಸಚಿವರು
ಬೆಂಗಳೂರು ಉದ್ಯಾನವನಗಳನ್ನು ನುಂಗಲು ಸರಕಾರ ಸಂಚು📌
ಬೆಂಗಳೂರು 24 ಆಗಸ್ಟ್ 2026
ರಾಜ್ಯದ ಈಗಿನ ಮುಖ್ಯಮಂತ್ರಿಯೇ ನೈಸ್ ಕಂಪನಿಯನ್ನು ಖರೀದಿ (ಟೇಕ್ ಓವರ್) ಮಾಡಲು ಹೊರಟಿರುವ ವ್ಯಕ್ತಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಪೋಟಕ ಸಂಗತಿಯನ್ನು ಬಹಿರಂಗಪಡಿಸಿದರು.
ನನಗಿರುವ ಮಾಹಿತಿ ಪ್ರಕಾರ ಬೇನಾಮಿ ಕಂಪನಿಗಳ ಮೂಲಕ ಈ ಮುಖ್ಯಮಂತ್ರಿಯೇ ನೈಸ್ ಕಂಪನಿಯನ್ನು ಖರೀದಿ ಮಾಡಲು ಹೊರಟಿದ್ದಾರೆ. ರೈತರಿಗೊಂದು ಕಾನೂನು, ಮುಖ್ಯಮಂತ್ರಿಗೆ ಇನ್ನೊಂದು ಕಾನೂನು ಇದೆಯಾ ಈ ರಾಜ್ಯದಲ್ಲಿ? ಬಿಎಂಐಸಿ ಯೋಜನೆ ಹೆಸರಲ್ಲಿ ಸಾವಿರಾರು ಎಕರೆ ಭೂಮಿಯನ್ನು ಲೂಟಿ ಹೊಡೆಲು ಸಂಚು ರೂಪಿಸಿದ್ದಾರೆ. ನಾನಿಲ್ಲಿ ಕೂತು ಸಂತೆಭಾಷಣ ಮಾಡುತ್ತಿಲ್ಲ. ಮುಂದಿನ ವಾರ ದಾಖಲೆ ಸಮೇತ ಹೇಳುತ್ತೇನೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವ ಕುಮಾರಸ್ವಾಮಿ ಅವರು; ರಾಜ್ಯದ ಈಗಿನ ಮುಖ್ಯಮಂತ್ರಿ ನೈಸ್ ಅಕ್ರಮಗಳಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಈ ಮುಖ್ಯಮಂತ್ರಿಯೇ ರಾಷ್ಟ್ರದಲ್ಲಿಯೇ ಅತಿ ದೊಡ್ಡ ಭೂ ಲೂಟಿಯ ಮಹಾನಾಯಕ ಎಂದು ಅವರು ಗಂಭೀರ ಆರೋಪ ಮಾಡಿದರು.
ವಿಧಾನಸೌಧದ ಮೂರನೇ ಮಾಡಿಯಲ್ಲಿ ಕೂತು ಈ ಮುಖ್ಯಮಂತ್ರಿ ನೇರ ವ್ಯವಹಾರಕ್ಕೆ ಇಳಿದಿದ್ದಾರೆ. ನೈಸ್ ಕಂಪನಿಯನ್ನು ಯಾರು ಟೇಕ್ ಓವರ್ ಮಾಡುತ್ತಿದ್ದಾರೆ ಎಂಬುದನ್ನು ತಾಕತ್ತಿದ್ದರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜನತೆಯ ಮುಂದೆ ಹೇಳಲಿ. ಯೋಜನೆಯನ್ನು ಯಾರು ಸ್ವಾಧೀನ ಮಾಡಿಕೊಳ್ಳುತ್ತಿದ್ದಾರೆ?ಬೇನಾಮಿ ಕಂಪನಿಗಳ ಮೂಲಕ ಯಾರು ಯಾರು ಈ ವ್ಯವಹಾರಕ್ಕೆ ಇಳಿದಿದ್ದಾರೆ ಎಂಬ ಮಾಹಿತಿ ನನಗಿದೆ. ಈ ಮುಖ್ಯಮಂತ್ರಿ ಎದೆ ಮುಟ್ಟಿಕೊಂಡು ಮಾತನಾಡಲಿ. ಈ ಬಗ್ಗೆ ರಾಜ್ಯದ ಜನತೆಯ ಮುಂದೆ ಸತ್ಯವನ್ನು ಬಾಯಿ ಬಿಡಲಿ ಎಂದು ಕುಮಾರಸ್ವಾಮಿ ಅವರು ನೇರ ಸವಾಲು ಹಾಕಿದರು.
ವಿದ್ಯಾರ್ಥಿ, ಯುವ ಸಮೂಹಕ್ಕೆ ಕರೆ ನೀಡಿದ ಕೇಂದ್ರ ಸಚಿವರು:
ನೈಸ್ ಯೋಜನೆ ಇಡೀ ದೇಶದಲ್ಲಿಯೇ ಅತೀ ದೊಡ್ಡ ಭೂ ಹಗರಣ. ಇದು ಸ್ಕ್ಯಾಮ್ ಫಾರ್ ಸ್ಕಿಮ್ ಎನ್ನುವ ರೀತಿಯಲ್ಲಿದೆ. ಈ ಅಕ್ರಮದ ವಿರುದ್ಧ ಇಡೀ ರಾಜ್ಯವೇ ತಿರುಗಿ ಬೀಳಬೇಕಿದೆ. ಯುವಕರು, ವಿದ್ಯಾರ್ಥಿಗಳು ಇದನ್ನು ಪ್ರಶ್ನೆ ಮಾಡಬೇಕಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಕರೆ ನೀಡಿದರು.
ಈ ಮುಖ್ಯಮಂತ್ರಿಗೂ ನೈಸ್ ಯೋಜನೆಗೂ ಇರುವ ಸಂಬಂಧವೇನು? ನೈಸ್ ಜೊತೆ ಸಿಎಂ ಒಡಂಬಡಿಕೆ ಏನು? ಈ ಕಂಪನಿಯ ಮಾಲೀಕರ ಜೊತೆ ಈ ವ್ಯಕ್ತಿಗೆ ಇರುವ ಸಂಬಂಧಗಳು ಮತ್ತು ವ್ಯವಹಾರಗಳು ಏನು? ಧೈರ್ಯವಿದ್ದರೆ ಜನರ ಮುಂದೆ ಈ ಬಗ್ಗೆ ಮಾತನಾಡಲಿ. ನಾನು ಸತ್ಯ ಹೇಳುವುದಕ್ಕೆ ಅಂಜುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ನೈಸ್ ರಸ್ತೆ ಅಕ್ರಮದ ಬಗ್ಗೆ ರಾಜ್ಯ ಸರಕಾರ ಮೌನಕ್ಕೆ ಶರಣಾಗಿದೆ. ಯೋಜನಾ ಚೌಕಟ್ಟು ಒಪ್ಪಂದ ಸಂಪೂರ್ಣವಾಗಿ ಉಲ್ಲಂಘನೆ ಆಗಿದೆ. ಈ ಸರ್ಕಾರ ನೈಸ್ ಕಂಪನಿ ಜತೆ ನೇರವಾಗಿ ಕುಮ್ಮಕ್ಕಾಗಿದೆ ಎಂದು ಅವರು ದೂರಿದರು.
ರೈತರ ಭೂಸ್ವಾಧೀನವಾಗಿ 20 ವರ್ಷಗಳೇ ಆಗಿದೆ. ರೈತರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಆದರೆ, ರೈತರಿಂದ ಕಿತ್ತುಕೊಂಡ ಭೂಮಿಯನ್ನು ಮನಸೋಇಚ್ಛೆ ಮಾರಾಟ ಮಾಡಿಕೊಂಡಿದೆ. ಅಲ್ಲದೆ ಒಪ್ಪಂದದಂತೆ 111 ಕಿ.ಮೀ. ರಸ್ತೆಯನ್ನು ನೈಸ್ ನಿರ್ಮಾಣ ಮಾಡಬೇಕಿತ್ತು. ಆದರೆ ಕೇವಲ 5 ಕಿಲೋಮೀಟರ್ ರಸ್ತೆಯನ್ನಷ್ಟೇ ನಿರ್ಮಿಸಿದೆ. ಹೀಗೆ ಯೋಜನಾ ಚೌಕಟ್ಟು ಒಪ್ಪಂದದ ಎಲ್ಲ ಅಂಶಗಳನ್ನು ಸಾರಾಸಗಟ್ಟಾಗಿ ಉಲ್ಲಂಘನೆ ಮಾಡಿದ ಮೇಲೆಯೂ ಅನೇಕ ವರ್ಷಗಳಿಂದ ನೈಸ್ ಕಂಪನಿ ತನ್ನ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರಿಂದ ಅಕ್ರಮವಾಗಿ ಹಣ ಸುಲಿಗೆ ಮಾಡುತ್ತಿದೆ ಎಂದು ಕೇಂದ್ರ ಸಚಿವರು ಆರೋಪಿಸಿದರು.
ಇಷ್ಟೆಲ್ಲಾ ಅಕ್ರಮಗಳನ್ನು ಎಸಿಗಿರುವ ಕಾರಣದಿಂದಲೇ ರಾಜ ಹೈಕೋರ್ಟ್ ನೈಸ್ ಯೋಜನೆಯ ಬಗ್ಗೆ ಕಠಿಣವಾದ ಶಬ್ದಗಳ ಮೂಲಕ ತನ್ನ ಅಭಿಪ್ರಾಯವನ್ನು ದಾಖಲಿಸಿದೆ. ನ್ಯಾಯಾಲಯದ ಅಭಿಪ್ರಾಯವನ್ನು ಈಗಾಗಲೇ ಗಣನೆಗೆ ತೆಗೆದುಕೊಂಡು ಸರ್ಕಾರ ನೈಸ್ ವಿರುದ್ಧ ಕ್ರಮ ಜರುಗಿಸಬೇಕಿತ್ತು. ದುರಂತವೆಂದರೆ ರಾಜ್ಯದ ಮುಖ್ಯಮಂತ್ರಿಯೇ ನೇರವಾಗಿ ನೈಸ್ ಕಂಪನಿ ಜೊತೆ ಶಾಮೀಲಾಗಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಸಾರ್ವಜನಿಕವಾಗಿ ಇಷ್ಟೆಲ್ಲ ವಿರೋಧ ಮತ್ತು ಆಕ್ರೋಶ ವ್ಯಕ್ತವಾಗುತ್ತಿದ್ದರು ನೈಸ್ ರಸ್ತೆಗಳಲ್ಲಿ ಟೋಲ್ ಸಂಗ್ರಹ ನಿಲ್ಲುತ್ತಿಲ್ಲ. ಟೋಲ್ ಸಂಗ್ರಹಕ್ಕೆ ಈ ಸರ್ಕಾರವೇ ಒತ್ತಾಸೆಯಾಗಿ ನಿಂತಿದೆ. ಅಲ್ಲಿ ಸುಲಿಗೆ ಮಾಡುವ ಹಣವನ್ನು ಇವರೆಲ್ಲರೂ ಹಂಚಿಕೊಳ್ಳುತ್ತಿದ್ದಾರೆ. ಬಡವಾನ ಸವಾರರ ರಕ್ತವನ್ನು ಹೀರುವ ಕೆಲಸ ನಡೆಯುತ್ತಿದೆ. ರಾಜ್ಯದ ಯುವಜನರು ಈ ಅಕ್ರಮವನ್ನು ನೋಡುತ್ತಾ ಸುಮ್ಮನೆ ಕುಳಿತುಕೊಳ್ಳಬಾರದು ಎಂದು ಕುಮಾರಸ್ವಾಮಿ ಅವರು ಹೇಳಿದರು.
ನನಗೆ ತಿಳಿದ ಮಟ್ಟಿಗೆ ರಾಷ್ಟ್ರದ ಇತಿಹಾಸದಲ್ಲಿಯೇ ಬೃಹತ್ತಾದ ಭೂಹಾಗರಣ ನೈಸ್ ಅಕ್ರಮವಾಗಿದೆ. ನ್ಯಾಯಾಲವೂ ಕೂಡ ಇದೊಂದು ಹಗರಣದಂತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿದೆ. ಆಡಳಿತ ನಡೆಸುವ ರಾಜಕಾರಣಿಗಳೇ ಶಾಮೀಳಾಗಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ನ್ಯಾಯಾಲಯಗಳಿಗೆ ತಪ್ಪು ಮಾಹಿತಿಗಳನ್ನು ಕೊಟ್ಟು ಸರ್ಕಾರಕ್ಕೆ ಛೀಮಾರಿ ಹಾಕಿಸುವ ದುಷ್ಕೃತ್ಯ ನಡೆದಿದೆ. ಸ್ಕೀಂ ಫಾರ್ ಸ್ಕ್ಯಾಮ್ ಯೋಜನೆ ಇದು. ಇದೆಲ್ಲವನ್ನು ನೋಡಿಕೊಂಡು ನಾವು ಮೌನಕ್ಕೆ ಶರಣಾಗಲು ಸಾಧ್ಯವೇ ಇಲ್ಲ ಎಂದು ಕುಮಾರಸ್ವಾಮಿ ಅವರು ಗುಡುಗಿದರು.
ನಾವೆಲ್ಲರೂ ಒಗ್ಗಟ್ಟಾಗಿ ಸೇರಿ ಈ ಅಕ್ರಮದ ವಿರುದ್ಧ ಹೋರಾಟ ನಡೆಸಬೇಕಿದೆ. ಹೋರಾಟ ಎಂದರೆ ನಾವೆಲ್ಲರೂ ಹೋಗಿ ಟೋಲ್ ಪ್ಲಾಝಗಳಾಗೆ ಆ ಗಳಿಗೆ ನುಗ್ಗಬೇಕು ಎಂದಲ್ಲ. ಆ ರೀತಿ ಮಾಡುವುದಿದ್ದರೆ ಯಾವತ್ತೂ ನೈಸ್ ಟೋಲ್ ಕೇಂದ್ರಗಳಿಗೆ ಜನರನ್ನು ನುಗ್ಗಿಸಿಬಿಡುತ್ತಿದ್ದೆ. ಶಾಂತಿಯುತ ಹೋರಾಟ ನಡೆಸುವುದು ನಮ್ಮ ಉದ್ದೇಶ. ನೀವು ಕೂತಿರುವ ಈ ಕಚೇರಿಯ ಹೆಸರು ಜೆಪಿ ಭವನ. ಲೋಕ ನಾಯಕ ಜಯಪ್ರಕಾಶನಾರಾಯಣ ಅವರ ಸ್ಪೂರ್ತಿ ಮತ್ತು ಆದರ್ಶದ ನೆಲೆಗಟ್ಟಿನ ಮೇಲೆ ನಮ್ಮ ಪಕ್ಷ ನಿಂತಿದೆ. ಇಂದಿರಾ ಗಾಂಧಿ ಅವರು ಈ ರಾಷ್ಟ್ರದ ಮೇಲೆ ಹೇರಿದ ತುರ್ತು ಪರಿಸ್ಥಿತಿಯ ವಿರುದ್ಧ ಇಡೀ ರಾಷ್ಟ್ರವನ್ನೇ ಸಂಘಟಿಸಿ ಹೋರಾಟ ನಡೆಸಿದ ಮಹಾನ್ ನಾಯಕರು ಅವರು. ಹೀಗಾಗಿ ನಮ್ಮ ಹೋರಾಟ ಶಾಂತಿ ಮಾರ್ಗದಲ್ಲಿ ನಡೆಯಬೇಕಾಗಿದೆ ಎಂದು ಕೇಂದ್ರ ಸಚಿವರು ಯುವಕರು ಮತ್ತು ವಿದ್ಯಾರ್ಥಿ ಸಮೂಹಕ್ಕೆ ಕಿವಿಮಾತು ಹೇಳಿದರು.
ಟೋಲ್ ಸಂಗ್ರಹ ಮಾಡುತ್ತಿರುವುದೇ ಮಹಾನ್ ಅಕ್ರಮ ಎಂದ ಸಚಿವ ಕುಮಾರಸ್ವಾಮಿ ಅವರು; ಇದರ ಬಗ್ಗೆ ತನಿಖೆ ಮಾಡಿದರೆ ಬಹುದೊಡ್ಡ ಅಕ್ರಮ ಬೈಲಿಗೆ ಬರುತ್ತದೆ. ಸಂಘಟಿತವಾಗಿ ಸರ್ಕಾರವನ್ನು ಶಾಮೀಲು ಮಾಡಿಸಿಕೊಂಡು ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ಅಕ್ರಮ ವಯಸ್ಸಿದ್ದರೆ ಎಂತಹ ಕುಖ್ಯಾತ ಹಗರಣ ಸೃಷ್ಟಿಯಾಗುತ್ತದೆ ಎಂಬುದಕ್ಕೆ ನೈಸ್ ಹಗರಣ ಜಲಂತ ಸಾಕ್ಷಿ ಎಂದು ಸಚಿವರು ಒತ್ತಿ ಹೇಳಿದರು.
ಬೆಂಗಳೂರು ಜನರಷ್ಟೇ ಅಲ್ಲ ರಾಜ್ಯದ ಎಲ್ಲ ಭಾಗದ ಜನರು ನೈಸ್ ಅಕ್ರಮದಿಂದ ನೋವು ಅನುಭವಿಸುತ್ತಿದ್ದಾರೆ. ಯುವ ಸಮುದಾಯ ನೈಸಕ್ರಮಗಳ ಬಗ್ಗೆ ಮನೆ ಮನೆಗೂ ಮಾಹಿತಿ ಕೊಡಬೇಕು. ಬೀದಿ ಬೀದಿಗಳಲ್ಲಿ ಹೋರಾಟ ನಡೆಸಬೇಕು. ಯಾರೂ ಕೂಡ ಟೋಲ್ ಕಟ್ಟದಿರಲು ಜಾಗೃತಿ ಮೂಡಿಸಬೇಕು ಎಂದು ಸಚಿವರು ಕರೆ ನೀಡಿದರು.
ಉದ್ಯಾನವನಗಳನ್ನು ನುಂಗಲು ಸರಕಾರ ಸಂಚು:
ರಿಯಲ್ ಎಸ್ಟೇಟ್ ದಂಧೆಕೋರರಿಗೆ ಜೇಬು ತುಂಬಿಸಲು ಕಂಡಕಂಡ ಭೂಮಿಯನ್ನು ನೋಟಿಫಿಕೇಷನ್ ಮಾಡುತ್ತಿರುವ ಈ ರಾಜ್ಯ ಸರಕಾರ ಈಗ ಅಭಿವೃದ್ಧಿ ನೆಪ ಹೇಳಿ ಬೆಂಗಳೂರಿನ ಉದ್ಯಾನವನಗಳನ್ನು ನುಂಗಲು ಸಂಚು ರೂಪಿಸಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಆರೋಪಿಸಿದರು.
ಬೆಂಗಳೂರಿನಲ್ಲಿ ವಿಶಾಲವಾಗಿರುವ ಉದ್ಯಾನವನಗಳು, ಆಟದ ಮೈದಾನಗಳನ್ನು ಸ್ವಾಹಾ ಮಾಡಲು ಈ ಕೆಟ್ಟ ಸರಕಾರ ಹೊರಟಿದೆ. ಪಾರ್ಕ್ ಗಳ 5% ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಎಂದು ನೆಪ ಮಾಡಿಕೊಂಡು ಕೊಳ್ಳೆ ಹೊಡೆಯಲು ಸಂಚು ಹೂಡಿದೆ. ವಿಧಾನಸೌಧದಲ್ಲಿ ಸಚಿವ ನಾಗೇಂದ್ರ ರಾಜೀನಾಮೆಗೆ ಜೆಡಿಎಸ್ ಮತ್ತು ಬಿಜೆಪಿ ಹೋರಾಟ ಮಾಡುತ್ತಿದ್ದರೆ ಈ ಸರಕಾರ ಅದಕ್ಕೆ ಬೇಕಾದ ಬಿಲ್ ಪಾಸು ಮಾಡಿಕೊಂಡಿದೆ. ಈ ಮೂಲಕ ಬೆಂಗಳೂರಿನ ಲಂಗ್ ಸ್ಪೇಸ್ ಅನ್ನು ನಾಶ ಮಾಡಲು ಹೊರಟಿದೆ. ಅದರ ಜತೆಗೆ ಮನೆಯ ಮುಂದೆ ಕಾರು ನಿಲ್ಲಿಸಿದರೂ ವರ್ಷಕ್ಕೆ ₹25,000 ಕಟ್ಟಬೇಕಂತೆ! ದಿವಾಳಿ ಆಗಿರುವ ಈ ಸರಕಾರ ಜನರ ಜೇಬಿಗೆ ಕೈಹಾಕಿದೆ ಎಂದು ಎಂದು ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಬೇನಾಮಿ ಆಸ್ತಿ ಇದ್ದರೆ ತೋರಿಸಿ, ರಾಜಕೀಯ ನಿವೃತ್ತಿಯಾಗುತ್ತೇನೆ:
ಕುಮಾರಸ್ವಾಮಿ ಬೇನಾಮಿ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಯಾರೋ ಮಾತನಾಡಿರುವುದರನ್ನು ಗಮನಿಸಿದ್ದೇನೆ. ನನ್ನ ಬೇನಾಮಿ ಆಸ್ತಿ ಯಾವುದಾದರೂ ಇದ್ದರೆ ತೋರಿಸಲಿ. ಈ ಸರಕಾರಕ್ಕೆ ನಾನು ನೇರ ಸವಾಲು ಹಾಕುತ್ತೇನೆ. ಅಂತಹ ಯಾವುದಾದರೂ ಅಸ್ತಿ ಇದ್ದರೆ ರಾಜಕೀಯವಾಗಿ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದರು.
ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಗ್ರೇಟರ್ ಬೆಂಗಳೂರು ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಈ.ಕೃಷ್ಣಪ್ಪ, ಚೌಡರೆಡ್ಡಿ, ಮುಖಂಡರಾದ ಪ್ರಕಾಶ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.






Comments
Leave a Comment