ವಿವೇಕ ಸ್ಮಾರಕವು ಸಾಧಕರು ಮತ್ತು ಶ್ರದ್ಧಾಳುಗಳ ಕೇಂದ್ರ ಆಗಲಿ: ನರೇಂದ್ರ ಮೋದಿ ಆಶಯ
ಭಾರತದ ಯುವಜನರ ಸಾಧನೆಗೆ ಪ್ರಧಾನಿ ಶ್ಲಾಘನೆ
ವಿವೇಕ ಸ್ಮಾರಕವು ಸಾಧಕರು ಮತ್ತು ಶ್ರದ್ಧಾಳುಗಳ
ಕೇಂದ್ರ ಆಗಲಿ: ನರೇಂದ್ರ ಮೋದಿ ಆಶಯ
ಮೈಸೂರು: ಮೈಸೂರು ಪ್ರಮುಖ ಸಾಂಸ್ಕøತಿಕ ಕೇಂದ್ರ ಎಂದು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜೀ ಅವರು ತಿಳಿಸಿದರು. ವಿವೇಕ ಸ್ಮಾರಕವು ಸಾಧಕರು ಮತ್ತು ಶ್ರದ್ಧಾಳುಗಳ ಕೇಂದ್ರ ಆಗಲಿ ಎಂದು ಆಶಿಸಿದರು.
ಶ್ರೀ ರಾಮಕೃಷ್ಣ ಮಠದಿಂದ ನಿರ್ಮಿಸಿದ ವಿವೇಕ ಸ್ಮಾರಕವನ್ನು ಇಂದು ಉದ್ಘಾಟಿಸಿದ ಬಳಿಕ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. 7 ಸಂಪುಟಗಳ ರಾಮಾಯಣ, ಬದುಕು ಬೆಳಕು ಪುಸ್ತಕಗಳನ್ನು ಅವರು ಇದೇವೇಳೆ ಬಿಡುಗಡೆ ಮಾಡಿದರು. ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‍ನ ಸ್ವಾಮೀಜಿಗಳು ಸಂತರು, ಗುರುಬಂಧುಗಳನ್ನು ಭೇಟಿ ಮಾಡುವ ಅವಕಾಶ ಮತ್ತೆ ನನಗಿಂದು ಲಭಿಸಿದೆ ಎಂದು ತಿಳಿಸಿದರು.
ದಸರಾ, ಸಂಗೀತ-ಸಾಹಿತ್ಯ ಸೇರಿ ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ಕೊಡುಗೆಗಳನ್ನು ಈ ನಗರ ನೀಡಿದೆ ಎಂದು ತಿಳಿಸಿದರು. ರಾಮಕೃಷ್ಣ ಆಶ್ರಮವೂ ಇಲ್ಲಿನ ಸಮೃದ್ಧತೆಯ ಭಾಗ ಎಂದು ಮೆಚ್ಚುಗೆ ಸೂಚಿಸಿದರು. ರಾಷ್ಟ್ರಕವಿ ಕುವೆಂಪು ಅವರು ಮೈಸೂರಿನಲ್ಲಿದ್ದಾಗ ಅವರು ಈ ಆಶ್ರಮದಲ್ಲಿದ್ದರು ಎಂದು ನೆನಪಿಸಿದರು.
ಸಾಧನೆಯೆಡೆ ಸಾಗುವಾಗ ತಪಸ್ಸು ಅನಿವಾರ್ಯ ಎಂದ ಅವರು, ಸ್ವಾಮಿ ವಿವೇಕಾನಂದರ ಜೀವನದಲ್ಲಿ ಮೈಸೂರಿನ ಯೋಗದಾನವು ದೊಡ್ಡದು ಎಂದರು. ಇಲ್ಲಿಗೆ ಆಗಮಿಸಿದ್ದ ಅವರು ಆಗ ಪ್ರಸಿದ್ಧರಾಗಿರಲಿಲ್ಲ. ಸ್ವಾಮಿ ವಿವೇಕಾನಂದರು ಅಮೆರಿಕದಿಂದ ಇಲ್ಲಿನ ಮಹಾರಾಜರಿಗೆ ಪತ್ರವನ್ನೂ ಬರೆದಿದ್ದರು ಎಂದರು.
ಪರೋಪಕಾರದ ಮಹತ್ವವನ್ನು ಅವರು ತಿಳಿಸಿದ್ದರು. ರಾಮಕೃಷ್ಣ ಆಶ್ರಮವು 100 ವರ್ಷ ಪೂರೈಸಿದೆ. ವಿವೇಕ ಸ್ಮಾರಕವು ಸಾಧಕರು ಮತ್ತು ಶ್ರದ್ಧಾಳುಗಳ ಕೇಂದ್ರ ಆಗಲಿ ಎಂದು ಆಶಿಸಿದರು. ಭಾರತದ ಯುವಜನತೆ ಇದೀಗ ವಿಶ್ವದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಾರೆ ಎಂದು ತಿಳಿಸಿದರು.
ಭಾರತವು ಸ್ಟಾರ್ಟಪ್ ಕ್ಷೇತ್ರದಲ್ಲೂ ಪ್ರಮುಖ ಸ್ಥಾನ ಪಡೆದಿದೆ. ಮೊಬೈಲ್ ಫೋನ್ ನಿರ್ಮಾಣದಲ್ಲೂ ಅದು ದೊಡ್ಡ ಸಾಧನೆ ಮಾಡಿದೆ. ಡಿಜಿಟಲ್ ಸೊಲ್ಯೂಷನ್ ವಿಚಾರದಲ್ಲೂ ಅದು ಸಾಧಕ ದೇಶವಾಗಿದೆ. ಸೆಮಿ ಕಂಡಕ್ಟರ್ ಕ್ಷೇತ್ರದಲ್ಲೂ ಅದು ಸಾಧನೆ ಮಾಡುತ್ತಿದೆ. ಇದೆಲ್ಲದಕ್ಕೂ ಯುವಜನರೇ ಕಾರಣ ಎಂದು ಶ್ಲಾಘಿಸಿದರು. ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯ ಸಾಧನೆಯಲ್ಲೂ ಭಾರತದ ಯುವಜನರ ಕೊಡುಗೆ ದೊಡ್ಡದು ಎಂದರು.
ವಿದ್ಯಾರ್ಥಿಗಳು, ಯುವಜನರ ಹರ್ಷೋದ್ಘಾರಗಳ ನಡುವೆ ಮಾತನಾಡಿದ ಅವರು, ಎಲ್ಲರಿಗೂ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ತಿಳಿಸಿದರು. ಚಾಮುಂಡೇಶ್ವರಿ ದೇವಿಗೆ ಪ್ರಣಾಮ ಸಲ್ಲಿಸಿ ಭಾಷಣ ಆರಂಭಿಸಿದರು. ನನ್ನ ಸಾಧನೆಯಲ್ಲಿ ರಾಮಕೃಷ್ಣ ಮಿಷನ್‍ನ ಕೊಡುಗೆ ದೊಡ್ಡದು ಎಂದರು. ಯುವಜನರಿಗೆ ಸರಿಯಾದ ದಾರಿ ತೋರಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಪ್ರಮುಖವಾದುದು ಎಂದ ಅವರು, ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಸರಕಾರ ನೀಡಿದ ಕೊಡುಗೆಯನ್ನು ಉಲ್ಲೇಖಿಸಿದರು. ಶಿಕ್ಷಣ ಕ್ಷೇತ್ರದ ಮೂಲಸೌಕರ್ಯವನ್ನು ಆಧುನೀಕರಣ ಮಾಡಲಾಗುತ್ತಿದೆ ಎಂದು ವಿವರಿಸಿದರು. ಅಟಲ್ ಟಿಂಕರಿಂಗ್ ಲ್ಯಾಬ್‍ಗಳ ಸ್ಥಾಪನೆಯ ಮಾಹಿತಿ ಕೊಟ್ಟರು.
ಮಾತೃಭಾಷೆಯಲ್ಲೇ ಮೆಡಿಕಲ್- ಎಂಜಿನಿಯರಿಂಗ್ ಶಿಕ್ಷಣ ಕೊಡಲಾಗುತ್ತಿದೆ. ಕ್ರೀಡಾ ಕ್ಷೇತ್ರಕ್ಕೂ ಉತ್ತೇಜನ ಕೊಡಲಾಗಿದೆ ಎಂದ ಅವರು, ಖೇಲೋ ಇಂಡಿಯ ಮೂಲಕ ಯುವಜನರಿಗೆ ವೇದಿಕೆ ಕಲ್ಪಿಸಿದ್ದನ್ನು ವಿವರಿಸಿದರು. ರಾಜ್ಯವು ಕನ್ನಡ ಭಾಷೆಯಲ್ಲಿ ಮಹಾನ್ ಲೇಖಕರ ಮತ್ತು ಸಾಹಿತಿಗಳನ್ನು ನೀಡಿದೆ ಎಂದರು. ಪ್ರಧಾನಿಯವರು ವಿದ್ಯಾರ್ಥಿಗಳತ್ತ ಕೈಬೀಸಿದಾಗ ‘ಮೋದಿ, ಮೋದಿ’ ಎಂದು ಉದ್ಘಾರ ಕೇಳಿಸಿತು.
ಶ್ರೀ ರಾಮಕೃಷ್ಣ ಮಠ ಆಶ್ರಮದ ಸ್ವಾಮೀಜಿಗಳು ಯುವಜನತೆಗೆ ಸಂದೇಶ ನೀಡಿದರು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಜೀವನ- ಸಂದೇಶಗಳ ಕುರಿತು ಮಾತನಾಡಿದರು. ಆಶ್ರಮದ ಕುರಿತ ಕಿರುಚಿತ್ರವನ್ನೂ ಪ್ರದರ್ಶನ ಮಾಡಲಾಯಿತು. ಇದಕ್ಕೂ ಮೊದಲು ಅವರು ಬಳಿಕ ಸ್ವಾಮಿ ವಿವೇಕಾನಂದರ ಪುತ್ಥಳಿಗೆ ನಮಿಸಿದರು. ಕೆಲಕ್ಷಣ ಧ್ಯಾನ ಮಾಡಿದರು. ದೇವರಿಗೆ ಪೂಜೆ ಸಲ್ಲಿಸಿ ನಮಿಸಿದರು. ವಿವೇಕ ಸ್ಮಾರಕದಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿದರು. ಆಶ್ರಮದ ಆವರಣದಲ್ಲಿ ಸಸಿಯೊಂದನ್ನು ನೆಟ್ಟು ನೀರೆರೆದರು.
ಮಾನ್ಯ ರಾಜ್ಯಪಾಲರಾದ ಥಾವರ್‍ಚಂದ್ ಗೆಹಲೋತ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರಮುಖರು, ಶಾಸಕರು, ಸ್ಥಳೀಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





Comments
Leave a Comment