ರೈತರ ಕಷ್ಟ ಆಲಿಸಬೇಕಾದ ಸಮಯದಲ್ಲಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಕಾಲಹರಣ
ವಿಜಯನಗರ ಜಿಲ್ಲೆಗೆ ವಿಶೇಷ ಪರಿಹಾರ ಪ್ಯಾಕೇಜ್ ನೀಡಿ, ರೈತರಿಗೆ ತುರ್ತು ಪರಿಹಾರ ನೀಡಲು ಕ್ರಮ ವಹಿಸಿ: ಪ್ರತಿಪಕ್ಷ ನಾಯಕ ಆರ್.ಅಶೋಕ
ರೈತರ ಕಷ್ಟ ಆಲಿಸಬೇಕಾದ ಸಮಯದಲ್ಲಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಕಾಲಹರಣ
ವಿಜಯನಗರ, ಜುಲೈ 30
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಭುವನಹಳ್ಳಿ ಗ್ರಾಮದಲ್ಲಿ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಪರಿಶೀಲಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ, ಜಿಲ್ಲೆಗೆ ವಿಶೇಷ ಪರಿಹಾರ ಪ್ಯಾಕೇಜ್ ನೀಡಲು ಆಗ್ರಹಿಸಿದ್ದಾರೆ.
ರೈತರನ್ನು ಭೇಟಿ ಮಾಡಿ ಬರ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಎರಡು ದಿನಗಳಿಂದ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿದ್ದೇನೆ. ಎಲ್ಲೆಡೆ ಹೊಲಗಳು ಒಣಗಿ ಬಿರುಕು ಬಿಟ್ಟಿದ್ದು, ಬೆಳೆಗಳು ಸಂಪೂರ್ಣ ಹಾನಿಯಾಗುವ ಹಂತಕ್ಕೆ ತಲುಪಿವೆ. ರೈತರು ಮಾಡಿದ ಬಿತ್ತನೆ ವೆಚ್ಚವೂ ವಾಪಸ್ ಬಾರದಂತಹ ಸಂಕಷ್ಟ ಎದುರಾಗಿದೆ. ಒಂದು ತಿಂಗಳ ಹಿಂದೆಯೇ ಸರ್ಕಾರ ಬರ ಘೋಷಣೆ ಮಾಡಿದ್ದರೆ ಬೆಳೆ ವಿಮೆ ಪ್ರಕ್ರಿಯೆ ಆರಂಭವಾಗುತ್ತಿತ್ತು. ಕೇಂದ್ರ ಸರ್ಕಾರವೂ ಎನ್‌ಡಿಆರ್‌ಎಫ್ ನಿಯಮದಡಿ ಸಮೀಕ್ಷೆ ನಡೆಸಿ ಪರಿಹಾರ ಬಿಡುಗಡೆ ಮಾಡುವ ಅವಕಾಶ ಇತ್ತು. ಆದರೆ ಸರ್ಕಾರ ರಾಜಕೀಯ ಬೆಳವಣಿಗೆಗಳಲ್ಲೇ ಕಾಲಹರಣ ಮಾಡಿದೆ ಎಂದು ದೂರಿದರು.
ರಾಜ್ಯದ 150 ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಮುಖ್ಯಮಂತ್ರಿ ಜಿಲ್ಲಾವಾರು ಸಭೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿಲ್ಲ. ಇನ್ನೂ ಬರ ಘೋಷಣೆಯಾಗದ ಕಾರಣ ಜಿಲ್ಲಾಡಳಿತಗಳು ಪರಿಹಾರ ಕಾರ್ಯ ಆರಂಭಿಸದೇ ತರಬೇತಿ ಹಂತದಲ್ಲೇ ಉಳಿದಿವೆ. ರೈತರು ಉದ್ಯೋಗಕ್ಕಾಗಿ ವಲಸೆ ಹೋಗುವ ಪರಿಸ್ಥಿತಿ ಎದುರಾಗಿದ್ದು, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆಯೂ ತೀವ್ರವಾಗಿದೆ. ಸರ್ಕಾರದ ಸಂಪೂರ್ಣ ಗಮನ ಆಡಳಿತಕ್ಕಿಂತ ರಾಜಕೀಯದ ಮೇಲಿದೆ. ರೈತರ ಸಂಕಷ್ಟ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳುವ ಬದಲು ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಜನರಲ್ಲಿ ಸರ್ಕಾರದ ಮೇಲಿನ ವಿಶ್ವಾಸ ಕುಸಿದಿದ್ದು, ರೈತರ ಪರವಾಗಿ ರಾಜ್ಯಾದ್ಯಂತ ಹೋರಾಟ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಆಗಸ್ಟ್ 13 ರಂದು ಆರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ಬರ ಪರಿಸ್ಥಿತಿ, ರೈತರಿಗೆ ಪರಿಹಾರ ಹಾಗೂ ಸರ್ಕಾರದ ವೈಫಲ್ಯವನ್ನು ಪ್ರಸ್ತಾಪಿಸಲಾಗುವುದು. ಅಷ್ಟರೊಳಗೆ ಬರ ಘೋಷಣೆ ಮಾಡದಿದ್ದರೆ ಸರ್ಕಾರ ಸುಗಮವಾಗಿ ಅಧಿವೇಶನ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ರಾಜ್ಯದಲ್ಲೇ ಅತ್ಯಂತ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗಕ್ಕೆ ವಿಶೇಷ ಪ್ಯಾಕೇಜ್ ನೀಡುವ ಬೇಡಿಕೆಗೆ ತಮ್ಮ ವಿರೋಧವಿಲ್ಲ. ಆದರೆ ಮೊದಲ ಹಂತದಲ್ಲಿ ಸರ್ಕಾರ ಕೂಡಲೇ ಬರಗಾಲ ಘೋಷಿಸಿ ನಂತರ ವಿಶೇಷ ಅನುದಾನದ ಕುರಿತು ನಿರ್ಧಾರ ಕೈಗೊಳ್ಳಬೇಕು. ಹವಾಮಾನ ಇಲಾಖೆಯ ಮಾಹಿತಿಯಂತೆ ಈ ಭಾಗದಲ್ಲಿ ಶೇ.64ರಷ್ಟು ಮಳೆ ಕೊರತೆಯಾಗಿದೆ. ಆಗಸ್ಟ್ 3 ರೊಳಗೆ ಬರ ಘೋಷಣೆ ಮಾಡದಿದ್ದರೆ ಬಳ್ಳಾರಿ ಹಾಗೂ ವಿಜಯನಗರ ಸೇರಿದಂತೆ ಎಲ್ಲ ಬರಪೀಡಿತ ಜಿಲ್ಲೆಗಳಲ್ಲಿ ರೈತರ ಹೊಲಗಳಲ್ಲೇ ಕುಳಿತು 'ಚಲೋ ಹೊಲ ಗದ್ದೆ' ಧರಣಿ ನಡೆಸಲು ಕರೆ ನೀಡಲಾಗುವುದು ಎಂದು ತಿಳಿಸಿದರು.
ಸಾವಿರಾರು ರೂಪಾಯಿ ಖರ್ಚು ಮಾಡಿ ಖರೀದಿಸಿದ ಬಿತ್ತನೆ ಬೀಜವನ್ನು ಬಳಸಲಾಗದೆ ರೈತರು ಮತ್ತೆ ಅಂಗಡಿಗಳಿಗೆ ವಾಪಸ್ ನೀಡುವ ಪರಿಸ್ಥಿತಿ ಬಂದಿದೆ. ರೈತರ ನಷ್ಟ ಭರಿಸುವ ಬದಲು ಸರ್ಕಾರ ಮೌನ ವಹಿಸಿದೆ. ರೈತರ ಸಂಕಷ್ಟದ ಬಗ್ಗೆ ಸರ್ಕಾರಕ್ಕೆ ಕನಿಷ್ಠ ಕಾಳಜಿಯೂ ಇಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಮುಖ್ಯಮಂತ್ರಿ ಸೇರಿದಂತೆ ಯಾವುದೇ ಸಚಿವರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸುವ ಕೆಲಸ ಮಾಡಿಲ್ಲ. ಅಧಿಕಾರಿಗಳನ್ನೂ ಚುರುಕುಗೊಳಿಸಿಲ್ಲ. ಜನರ ಸಮಸ್ಯೆಗಳಿಗಿಂತ ಅಧಿಕಾರದ ರಾಜಕೀಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸರ್ಕಾರದ ವಿರುದ್ಧ ಜನರಲ್ಲೇ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ರೈತರಿಗೆ ತುರ್ತು ಬೆಳೆ ಪರಿಹಾರ, ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಅಗತ್ಯವಿದ್ದಲ್ಲಿ ವಿಶೇಷ ಪ್ಯಾಕೇಜ್ ಹಾಗೂ ಸಾಲದ ಒತ್ತಡದಿಂದ ರಕ್ಷಿಸುವ ಕ್ರಮಗಳನ್ನು ಸರ್ಕಾರ ಕೂಡಲೇ ಕೈಗೊಳ್ಳಬೇಕು. ಈ ಎಲ್ಲ ವಿಚಾರಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ರೈತರಿಗೆ ನ್ಯಾಯ ದೊರಕುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದರು.





Comments
Leave a Comment