ಬೆಂಗಳೂರು ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಗಂಭೀರ – 1,000ಕ್ಕೂ ಹೆಚ್ಚು ಹೊಸ ಶೌಚಾಲಯಗಳ ಅಗತ್ಯವಿದೆ ಎಂದ ಬಿ.ಪ್ಯಾಕ್ ವರದಿ
ಬೆಂಗಳೂರು ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿ ಗಂಭೀರ – 1,000ಕ್ಕೂ ಹೆಚ್ಚು ಹೊಸ ಶೌಚಾಲಯಗಳ ಅಗತ್ಯವಿದೆ ಎಂದ ಬಿ.ಪ್ಯಾಕ್ ವರದಿ
ಬೆಂಗಳೂರು,ಜು.22- ಪೊಲಿಟಿಕಲ್ ಅಕ್ಷನ್ ಕಮಿಟಿ (B.PAC) ಇಂದು ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ಕುರಿತು ಮಹತ್ವದ ಸಮೀಕ್ಷಾ ವರದಿ 2026 ಅನ್ನು ಬಿಡುಗಡೆ ಮಾಡಿದೆ.
ಈ ವರದಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ 142 ಸಾರ್ವಜನಿಕ ಶೌಚಾಲಯಗಳ ಪರಿಶೀಲನೆಯಿಂದ ಹೊರಬಂದಿದ್ದು, ನಗರದಲ್ಲಿ ಶೌಚಾಲಯಗಳ ಮೂಲಸೌಕರ್ಯದಲ್ಲಿ ಗಂಭೀರ ಕೊರತೆಗಳನ್ನು ಬಯಲಿಗೆಳೆದಿದೆ. ಕೇವಲ 4.2% ಶೌಚಾಲಯಗಳು ಅತ್ಯಂತ ಸ್ವಚ್ಛವೆಂದು ಗುರುತಿಸಲ್ಪಟ್ಟಿದ್ದು, 58% ಶೌಚಾಲಯಗಳು ದುರ್ವಾಸನೆಯಿಂದ ಬಳಕೆಗೆ ಅಸಮರ್ಪಕವಾಗಿವೆ. 94% ಶೌಚಾಲಯಗಳು ಅಂಗವಿಕಲರಿಗೆ ಅನುಕೂಲಕರವಾಗಿಲ್ಲ. ಯಾವುದೇ ಶೌಚಾಲಯದಲ್ಲಿ ಸಾಬೂನು ಅಥವಾ ಕಸದ ಬುಟ್ಟಿಗಳಿಲ್ಲ ಎಂಬುದು ವರದಿಯಲ್ಲಿನ ಗಂಭೀರ ಅಂಶ.
ಬಿ.ಪ್ಯಾಕ್ ಮುಖ್ಯಸ್ಥ ರಾಘವೇಂದ್ರ ಪೂಜಾರಿ ಹೆಚ್ ಎಸ್ ಅವರು, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬೆಂಗಳೂರಿಗೆ 1,000ಕ್ಕೂ ಹೆಚ್ಚು ಹೊಸ ಸಾರ್ವಜನಿಕ ಶೌಚಾಲಯಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಬಸ್ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು, ಮಾರುಕಟ್ಟೆಗಳು, ಉದ್ಯಾನಗಳು ಹಾಗೂ ಹೆಚ್ಚಿನ ಜನಸಂದಣಿ ಪ್ರದೇಶಗಳಿಗೆ ತಕ್ಷಣವೇ ಶೌಚಾಲಯಗಳನ್ನು ನಿರ್ಮಿಸಬೇಕೆಂದು ಅವರು ಮನವಿ ಮಾಡಿದರು. ಸಿಇಒ ರೇವತಿ ಅಶೋಕ್ ಅವರು, ಸಾರ್ವಜನಿಕ ಶೌಚಾಲಯಗಳು ಐಷಾರಾಮಿ ಸೌಲಭ್ಯಗಳಲ್ಲ, ಅವು ಸಾರ್ವಜನಿಕ ಆರೋಗ್ಯ, ಮಹಿಳೆಯರ ಸುರಕ್ಷತೆ, ಮಾನವ ಘನತೆ ಮತ್ತು ನಗರದ ಜೀವನಮಟ್ಟವನ್ನು ನಿರ್ಧರಿಸುವ ಮೂಲಸೌಕರ್ಯಗಳಾಗಿವೆ ಎಂದು ಸ್ಪಷ್ಟಪಡಿಸಿದರು.
ಬಿ.ಪ್ಯಾಕ್ ವರದಿ ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದೆ. ಕಾರ್ಯನಿರ್ವಹಿಸದ 37 ಶೌಚಾಲಯಗಳನ್ನು 30 ದಿನಗಳಲ್ಲಿ ದುರಸ್ತಿ ಮಾಡಬೇಕು, ಏಕೀಕೃತ ಸಾರ್ವಜನಿಕ ಶೌಚಾಲಯ ನಿರ್ವಹಣಾ ಘಟಕವನ್ನು ಸ್ಥಾಪಿಸಬೇಕು, RWAs, NGOs ಹಾಗೂ ನಾಗರಿಕ ಸಂಘಟನೆಗಳನ್ನು ಮೇಲ್ವಿಚಾರಣೆಯಲ್ಲಿ ಭಾಗಿಯಾಗಿಸಬೇಕು, ನಿರ್ವಹಣೆಯಲ್ಲಿ ವಿಫಲರಾದ ಗುತ್ತಿಗೆದಾರರ ಗುತ್ತಿಗೆಯನ್ನು ರದ್ದುಪಡಿಸಬೇಕು, She-Toilets ಹಾಗೂ Gender Inclusive Toilets ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ.
ಬಿ.ಕ್ಲಿಪ್ ಸಂಯೋಜಕರಾದ ಮಂಜುನಾಥ್ ಅವರು, ಈ ವರದಿ ಸರ್ಕಾರ, ನಾಗರಿಕ ಸಂಸ್ಥೆಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಕಾರ್ಯನಿರ್ವಹಿಸಿ ಸ್ವಚ್ಛ, ಸುರಕ್ಷಿತ ಹಾಗೂ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವ ಬೆಂಗಳೂರಿನ ನಿರ್ಮಾಣಕ್ಕೆ ಮಾರ್ಗಸೂಚಿಯಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.





Comments
Leave a Comment