ಸಂಪುಟ ಸೇರ್ಪಡೆಗೆ ಮ್ಯಾನೇಜ್ಮೆಂಟ್, ಪೇಮೆಂಟ್ ಕೋಟಾ!! ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ
ಬೆಂಗಳೂರು, ಜೂ. 22- ಬಿಡದಿ ಟೌನ್ ಶಿಪ್ ಯೋಜನೆ ಕುರಿತು ರಾಜ್ಯದ ರಾಜಕೀಯ ವಾತಾವರಣ ಮತ್ತೊಮ್ಮೆ ಕಾವುಗೊಂಡಿದೆ. ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ಆರೋಪಗಳನ್ನು ಹೊರಹಾಕಿದ್ದಾರೆ. 2007ರಲ್ಲಿ ಅಸೆಂಬ್ಲಿಯಲ್ಲಿ ಇದೇ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದವರು ಇಂದು ಅದೇ ಯೋಜನೆಯನ್ನು ಮುಂದುವರಿಸಲು ಯತ್ನಿಸುತ್ತಿರುವುದು ವಿರೋಧಾಭಾಸ ಎಂದು ಅವರು ಕಿಡಿಕಾರಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, “ಅಂದು ರೈತರ ಪರವಾಗಿ ಮಾತನಾಡಿದ್ದವರು ಇಂದು ರಿಯಲ್ ಎಸ್ಟೇಟ್ ದಂಧೆಗೆ ಕೈಜೋಡಿಸಿದ್ದಾರೆ. 500 ದಿನಗಳಿಂದ ಪ್ರತಿಭಟನೆ ಮಾಡುತ್ತಿರುವವರು ಅಸಲಿ ರೈತರಲ್ಲ ಎಂದು ಹೇಳುವ ಮುಖ್ಯಮಂತ್ರಿಗೆ ನಾನು ಸವಾಲು ಹಾಕುತ್ತೇನೆ — ಬನ್ನಿ ಭೈರಮಂಗಲಕ್ಕೆ, ಅಲ್ಲಿ ಯಾರು ನಕಲಿ, ಯಾರು ನಿಜ ಎಂಬುದು ನಿಮಗೆ ಗೊತ್ತಾಗುತ್ತದೆ,” ಎಂದರು.
ಅವರು ಮುಂದುವರಿದು, “ನಾಗರಬಾವಿಯ ಬಾಡಿಗೆ ಮನೆಯಿಂದ ಟೌನ್ ಶಿಪ್ ದಂಧೆ ನಡೆಯುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ನಡೆಯದೆ, ತೆರೆಮರೆಯಲ್ಲಿ ವ್ಯವಹಾರಗಳು ನಡೆಯುತ್ತಿರುವುದು ಜನರ ಕಣ್ಣಿಗೆ ತಪ್ಪುವುದಿಲ್ಲ. ನಿಮ್ಮ ಪಾಪದ ಕೂಡ ತುಂಬಿದೆ, ಜನರು ನೋಡುತ್ತಿದ್ದಾರೆ,” ಎಂದು ತೀವ್ರವಾಗಿ ಟೀಕಿಸಿದರು.
ಕುಮಾರಸ್ವಾಮಿ 2007ರ ಅಸೆಂಬ್ಲಿ ಕಲಾಪದ ದಾಖಲೆಗಳನ್ನು ಉಲ್ಲೇಖಿಸಿ, “ಅಂದು ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ಬಿಡದಿ ಯೋಜನೆಗೆ ವಿರೋಧಿಸಿದ್ದರು. ‘ಇದು ನಮ್ಮ ಪಕ್ಷದ ಕ್ರೆಡಿಬಿಲಿಟಿ ವಿಚಾರ’ ಎಂದು ಹೇಳಿದ್ದವರು ಇಂದು ರೈತರ ಭೂಮಿಗೆ ಕನ್ನ ಹಾಕುತ್ತಿದ್ದಾರೆ,” ಎಂದು ಹೇಳಿದರು.
ಅವರು ಸಿದ್ದರಾಮಯ್ಯ ಅವರ ಮೌನದ ಮೇಲೂ ಬೇಸರ ವ್ಯಕ್ತಪಡಿಸಿ, “ಅಂದು ರೈತರ ಪರವಾಗಿ ಗಂಟಲು ಬರೆದುಕೊಂಡು ಮಾತನಾಡಿದವರು ಇಂದು ಮೌನ ವಹಿಸಿರುವುದು ವಿಷಾದನೀಯ. ರೈತರ ಭೂಮಿಯನ್ನು ಉಳಿಸಲು ಆಗದಿರುವುದು ಅವರ ಪಕ್ಷದ ವೈಫಲ್ಯ,” ಎಂದು ಹೇಳಿದರು.
ಕುಮಾರಸ್ವಾಮಿ ತಮ್ಮ ಸರ್ಕಾರದ ಕಾಲದಲ್ಲಿ ರೈತರ ಭೂಮಿಯನ್ನು ರಕ್ಷಿಸಲು ರೆಡ್ ಜೋನ್ ಘೋಷಣೆ ಮಾಡಿದ್ದೆ ಎಂದು ಸ್ಪಷ್ಟಪಡಿಸಿದರು. “ರೆಡ್ ಜೋನ್ ಎಂದರೆ ಅಪರಾಧವಲ್ಲ. ಅದು ರೈತರ ಭೂಮಿಯನ್ನು ಉಳಿಸಲು ತೆಗೆದುಕೊಂಡ ಕ್ರಮ,” ಎಂದರು.
ಅವರು ಡಿನೋಟಿಫಿಕೇಶನ್ ವಿಚಾರದಲ್ಲೂ ಸ್ಪಷ್ಟನೆ ನೀಡುತ್ತಾ, “ರೈತರ ಪರವಾಗಿ ಯೋಜನೆ ಕೈಬಿಟ್ಟರೆ ಸಿಎಂ ಜೈಲಿಗೆ ಹೋಗುವುದಿಲ್ಲ. ಇದು ಕೇವಲ ಜನರನ್ನು ಭಯಪಡಿಸುವ ನಾಟಕ,” ಎಂದು ಹೇಳಿದರು.
ಅಂತಿಮವಾಗಿ, “ನಾನು ಎಸಿ ರೂಂನಲ್ಲಿ ಕೂತು ಮಾತನಾಡುವವನಲ್ಲ. ಬೀದಿಯಲ್ಲಿ ನಿಂತು ಚರ್ಚೆಗೆ ಸಿದ್ಧನಿದ್ದೇನೆ. ನಿಮಗೆ ಧೈರ್ಯ ಇದ್ದರೆ ಬೈರಮಂಗಲಕ್ಕೆ ಬನ್ನಿ,” ಎಂದು ಡಿ.ಕೆ. ಶಿವಕುಮಾರ್ ಅವರಿಗೆ ನೇರ ಸವಾಲು ಹಾಕಿದರು.
ಮಾಧ್ಯಮಗೋಷ್ಠಿಯಲ್ಲಿ ಮಾಜಿ ಶಾಸಕರಾದ ಆರ್. ಮಂಜುನಾಥ್, ಹೆಚ್.ಎಂ. ರಮೇಶ್ ಗೌಡ, ಜವರಾಯಿಗೌಡ, ಕೆ.ಎ. ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಸಂಪುಟ ವಿಸ್ತರಣೆ ಮ್ಯಾನೇಜ್‌ಮೆಂಟ್ ಕೋಟಾ ;ಹೆಚ್.ಡಿ. ಕುಮಾರಸ್ವಾಮಿ ಆರೋಪ
ರಾಜ್ಯ ರಾಜಕೀಯದಲ್ಲಿ ಸಂಪುಟ ವಿಸ್ತರಣೆ ಕುರಿತ ಚರ್ಚೆ ತೀವ್ರಗೊಂಡಿರುವ ಸಂದರ್ಭದಲ್ಲಿ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಂಪುಟ ಸೇರ್ಪಡೆ ವಿಷಯದಲ್ಲಿ ಮ್ಯಾನೇಜ್‌ಮೆಂಟ್ ಕೋಟಾ ನಡೆಯುತ್ತಿದೆ. ಸಚಿವರಾಗಲು ಪೇಮೆಂಟ್ ಅಥವಾ ಲಾಬಿ ಮೂಲಕ ಸ್ಥಾನ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ,” ಎಂದು ಆರೋಪಿಸಿದರು.
ಕುಮಾರಸ್ವಾಮಿ ಹೇಳಿದರು, “ಸಂಪುಟ ಆಕಾಂಕ್ಷಿಗಳಿಂದ ಸಿಎಂ ಡಿ.ಕೆ. ಶಿವಕುಮಾರ್ ಹಣ ವಸೂಲಿ ಮಾಡುತ್ತಿದ್ದಾರೆ. ಹೈಕಮಾಂಡ್‌ಗೆ ಕೊಡಬೇಕೆಂದು ಶಾಸಕರಿಂದ ಹಣ ಪೀಕುತ್ತಿರುವ ಮಾಹಿತಿ ಇದೆ. ಮ್ಯಾನೇಜ್‌ಮೆಂಟ್ ಕೋಟಾಕ್ಕೆ ಶೇಕಡಾ 5%, ಪೇಮೆಂಟ್ ಕೋಟಾಕ್ಕೆ 95% ಸೀಟುಗಳನ್ನು ನಿಗದಿಪಡಿಸಲಾಗಿದೆ,” ಎಂದು ವ್ಯಂಗ್ಯವಾಡಿದರು.
ಅವರು ಮುಂದುವರಿದು, “ವೃತ್ತಿಪರ ಕೋರ್ಸ್‌ಗಳಿಗೆ ಸರ್ಕಾರಿ ಮತ್ತು ಮ್ಯಾನೇಜ್‌ಮೆಂಟ್ ಕೋಟಾ ಇರುತ್ತದೆ ಎಂಬುದು ನನಗೆ ಗೊತ್ತು. ಆದರೆ ಈಗ ಕರ್ನಾಟಕದಲ್ಲಿ ಸಂಪುಟ ಸೇರ್ಪಡೆಗೂ ಹೈಕಮಾಂಡ್ ಕೋಟಾ, ಮ್ಯಾನೇಜ್‌ಮೆಂಟ್ ಕೋಟಾ ಎಂಬ ಹೊಸ ಪದ್ಧತಿ ಆರಂಭವಾಗಿದೆ. ಮಂತ್ರಿಯಾಗಬೇಕಾದರೆ ಕಾಸು ಕೊಡಬೇಕು, ಎಗ್ಗಿಲ್ಲದೆ ವಸೂಲಿ ನಡೆಯುತ್ತಿದೆ,” ಎಂದು ಕಟುವಾಗಿ ಟೀಕಿಸಿದರು.
ಈ ಆರೋಪಗಳಿಂದ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದ್ದು, ಸಂಪುಟ ವಿಸ್ತರಣೆ ವಿಳಂಬಕ್ಕೆ ಕಾರಣ ಇದೇನಾ ಎಂಬ ಪ್ರಶ್ನೆ ಎದ್ದಿದೆ.
.



Comments
Leave a Comment