ವಿಧಾನ ಪರಿಷತ್ ಚುನಾವಣೆಯಲ್ಲಿ ಪಿ.ವಿ. ಮೋಹನ್ ಪರ ಜನಪರ ಸಂಘಟನೆಗಳ ಒಗ್ಗಟ್ಟಿನ ಬೆಂಬಲ
From Jayaram Udupi
ಮಂಗಳೂರು, :
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪಿ.ವಿ. ಮೋಹನ್ ಅವರನ್ನು ಪಕ್ಷಾತೀತವಾಗಿ ಬೆಂಬಲಿಸಿ ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಜನಪರ ಸಂಘಟನೆಗಳು ರಾಜ್ಯದ ಶಾಸಕರಿಗೆ ಮನವಿ ಮಾಡಿವೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಸಿಎಸ್‌ಟಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ನಾಲ್ಕು ದಶಕಗಳಿಗೂ ಅಧಿಕ ಕಾಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಪರ ಹೋರಾಟಗಳ ಮೂಲಕ ಗುರುತಿಸಿಕೊಂಡಿರುವ ಪಿ.ವಿ. ಮೋಹನ್ ಅವರನ್ನು ಕಾಂಗ್ರೆಸ್ ಪಕ್ಷವು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಅತ್ಯುತ್ತಮ ನಿರ್ಧಾರ ಎಂದು ಶ್ಲಾಘಿಸಿದರು.
ರಾಜಕೀಯ ಕ್ಷೇತ್ರದಲ್ಲಿ ಸರಳತೆ ಮತ್ತು ಸಜ್ಜನಿಕೆಯಿಂದ ಗುರುತಿಸಿಕೊಂಡಿರುವ ಮೋಹನ್ ಅವರು ವಿಧಾನ ಪರಿಷತ್‌ಗೆ ಆಯ್ಕೆಯಾದರೆ ಜನಪರ ರಾಜಕಾರಣಕ್ಕೆ ಹೊಸ ದಿಕ್ಕು ಸಿಗಲಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಶೋಷಿತ ಸಮುದಾಯಗಳು, ವಿದ್ಯಾರ್ಥಿಗಳು ಮತ್ತು ಯುವಜನರ ಆಶೋತ್ತರಗಳಿಗೆ ಅವರು ಧ್ವನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಹಿಂದ ಉಪಾಧ್ಯಕ್ಷ . ಹನೀಫ್ ಮಾತನಾಡಿ, ಶೋಷಿತ ಸಮುದಾಯಗಳ ಪರ ಧ್ವನಿಯಾಗಿ ಕಾರ್ಯನಿರ್ವಹಿಸಿರುವ ಪಿ.ವಿ. ಮೋಹನ್ ಅವರು ಎಲ್ಲಾ ಸಮುದಾಯಗಳ ಜತೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಅವರು ಆಯ್ಕೆಯಾದರೆ ಶೋಷಿತ ಸಮುದಾಯಗಳಿಗೆ ಪೂರಕವಾದ ನೀತಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಾಲ ಕಾರ್ಮಿಕ ವಿರೋಧಿ ಅಭಿಯಾನದ ಸಂಚಾಲಕ ರೆನ್ನಿ ಡಿಸೋಜಾ, ಎಸ್‌ಎಸ್‌ಟಿ ಅಧ್ಯಯನ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ಆದಿದ್ರಾವಿಡ ಕೊರಗ ಅಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷೆ ಕಮಲಾ, ಕರ್ನಾಟಕ ರಾಜ್ಯ ಆದಿದ್ರಾವಿಡ ಸಂಘದ ರಾಜ್ಯ ಸಮಿತಿ ಸಲಹೆಗಾರ ಅನಿಲ್ ಕುಮಾರ್, ಪಾಣರ ಯಾನೆ ನಲಿಕೆಯವರ ಸಂಘದ ಅಧ್ಯಕ್ಷ ಪದ್ಮನಾಭ ಹಾಗೂ ಸಾಮಾಜಿಕ ಕಾರ್ಯಕರ್ತ ಅಶೋಕ್ ಭಟ್ ಉಪಸ್ಥಿತರಿದ್ದರು

Comments
Leave a Comment