ಕರ್ನಾಟಕ ಪತ್ತಿನ ಸಹಕಾರ ಮಹಾಮಂಡಳದಲ್ಲಿ ಮಾಜಿ ಅಧ್ಯಕ್ಷರ ಅವಧಿಯಲ್ಲಿ ರೂ. 23.75 ಕೋಟಿ ದುರುಪಯೋಗ ಆರೋಪ, ಎಸ್. ಚಂದ್ರಶೇಖರ್ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಕ್ರಮಕ್ಕೆ ಒತ್ತಾಯ
ಬೆಂಗಳೂರು,ಜೂ. 11-ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳ ನಿಯಮಿತದಲ್ಲಿ ಮಾಜಿ ಅಧ್ಯಕ್ಷರುಗಳಾದ ಸಿ.ಎಂ. ಮಾರೇಗೌಡ, ಕೆ. ಲಲಿತಾ ಜಿ.ಟಿ. ದೇವೇಗೌಡ ಹಾಗೂ ವಿ. ರಾಜು ಅವರ ಅವಧಿಯಲ್ಲಿ ಒಟ್ಟು ರೂ. 23.75 ಕೋಟಿ ಹಣ ದುರುಪಯೋಗವಾಗಿರುವುದು ಲೆಕ್ಕಪರಿಶೋಧನಾ ವರದಿಗಳ ಮೂಲಕ ದೃಢಪಟ್ಟಿದೆ , 2016ರಿಂದ 2024ರವರೆಗೆ ನಡೆದಿರುವ ಅಕ್ರಮ ಹಣ ದುರುಪಯೋಗ ಆಗಿದೆ ಎಂದುನಿರ್ದೇಶಕರಾದ ಎಸ್. ಚಂದ್ರಶೇಖರ್ ಅವರು ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಮಾಜಿ ಅಧ್ಯಕ್ಷರುಗಳಾದ ಸಿ.ಎಂ. ಮಾರೇಗೌಡ, ಕೆ. ಲಲಿತಾ ಜಿ.ಟಿ. ದೇವೇಗೌಡ ಹಾಗೂ ವಿ. ರಾಜು ಅವರ ಅವಧಿಯಲ್ಲಿ ಒಟ್ಟು ರೂ. 23.75 ಕೋಟಿ ಹಣ ದುರುಪಯೋಗವಾಗಿರುವುದು ಲೆಕ್ಕಪರಿಶೋಧನಾ ವರದಿಗಳ ಮೂಲಕ ದೃಢಪಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.
ಮಹಾಮಂಡಳದ ನಿಯಮ ಪ್ರಕಾರ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಜಂಟಿ ಸಹಿ ಮಾಡಿದ ನಂತರವೇ ಹಣ ವಹಿವಾಟು ನಡೆಯಬೇಕಿತ್ತು. ಆದರೆ ಈ ನಿಯಮವನ್ನು ಉಲ್ಲಂಘಿಸಿ ರಾಜಕೀಯ ಪ್ರಭಾವ ಹಾಗೂ ಹಣದ ಪ್ರಭಾವದಿಂದ ಅಕ್ರಮವಾಗಿ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ದಾಖಲೆಗಳಿಂದ ಸಾಬೀತಾಗಿದೆ ಎಂದು ಚಂದ್ರಶೇಖರ್ ಹೇಳಿದರು.
ಸಹಕಾರ ಸಚಿವರಾದ ಕೆ.ಎನ್. ರಾಜಣ್ಣರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಆಶಾಲತಾ ತಪ್ಪು ಮಾಹಿತಿ ನೀಡಿರುವುದು ಬ್ಯಾಂಕ್ ವ್ಯವಸ್ಥಾಪಕರ ಹೇಳಿಕೆಯಿಂದ ಬಹಿರಂಗವಾಗಿದೆ. ಇದರಿಂದಲೇ ತನಿಖೆಗೆ ಆದೇಶ ನೀಡಲಾಗಿದ್ದು, ಲೆಕ್ಕಪರಿಶೋಧಕರ ತಂಡ 2015-16ರಿಂದ 2023-24ರವರೆಗಿನ ದಾಖಲೆಗಳನ್ನು ಪರಿಶೀಲಿಸಿ ವರದಿ ಬಿಡುಗಡೆ ಮಾಡಿದೆ.
ಆ ವರದಿಯಲ್ಲಿ ಲಲಿತಾ ಜಿ.ಟಿ. ದೇವೇಗೌಡ ಅವರ ಅವಧಿಯಲ್ಲಿ ರೂ. 12.77 ಕೋಟಿ, ಮಾರೇಗೌಡ ಅವರ ಅವಧಿಯಲ್ಲಿ ರೂ. 8.78 ಕೋಟಿ, ರಾಜು ಅವರ ಅವಧಿಯಲ್ಲಿ ರೂ. 14.85 ಲಕ್ಷ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅವಧಿಯಲ್ಲಿ ರೂ. 2.04 ಕೋಟಿ ದುರುಪಯೋಗವಾಗಿರುವುದು ಸ್ಪಷ್ಟವಾಗಿದೆ.
ಈ ಪ್ರಕರಣವನ್ನು ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ನಂತರ ಸಿ.ಐ.ಡಿ.ಗೆ ವರ್ಗಾವಣೆ ಮಾಡಲಾಗಿದೆ. ಆದರೆ ಇಂದಿಗೂ ಆರೋಪಪಟ್ಟಿ ಸಲ್ಲಿಸದಿರುವುದು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಅವರು ಆರೋಪಿಸಿದರು.
ಚಂದ್ರಶೇಖರ್ ಅವರು ಮುಖ್ಯಮಂತ್ರಿಗಳು, ಲೋಕಾಯುಕ್ತ, ಜಾರಿ ನಿರ್ದೇಶನಾಲಯ, ಸಹಕಾರ ಇಲಾಖೆ ಹಾಗೂ ನಿಬಂಧಕರಿಗೆ ಮನವಿ ಮಾಡುತ್ತಾ ತಕ್ಷಣವೇ ಆರೋಪಪಟ್ಟಿ ಸಿದ್ಧಪಡಿಸಿ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿ ದುರುಪಯೋಗವಾದ ಹಣವನ್ನು ವಸೂಲಾತಿ ಮಾಡಿ ಸಹಕಾರಿಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಸದರಿ ಹಣ ವಾಪಸ್ಸು ಬರುವವರೆಗೂ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮುಂದುವರಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.







Comments
Leave a Comment