ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಡಿಕೆಶಿ
ಬೆಂಗಳೂರು ಮೇ. 30-ರಾಜ್ಯ ರಾಜಕೀಯದಲ್ಲಿ ಭಾರಿ ತಿರುವು ಮೂಡಿಸಿರುವ ಸಿದ್ದರಾಮಯ್ಯ ಅವರ ರಾಜೀನಾಮೆ ಮತ್ತು ಡಿ.ಕೆ. ಶಿವಕುಮಾರ್ ಅವರ ನೂತನ ನಾಯಕತ್ವ ಆಯ್ಕೆ, ರಾಜ್ಯದ ಅಧಿಕಾರದ ಕೇಂದ್ರದಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ. ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಅವರು ಸ್ಥಾನ ತ್ಯಜಿಸಿ, ತಮ್ಮ ಆಪ್ತನಾದ ಶಿವಕುಮಾರ್ ಅವರನ್ನು ಮುಂದಿನ ನಾಯಕನಾಗಿ ಶಿಫಾರಸು ಮಾಡಿದ ಕ್ಷಣ, ಕಾಂಗ್ರೆಸ್ ಪಕ್ಷದಲ್ಲಿ ನಿರ್ಣಾಯಕ ಘಟ್ಟವಾಗಿ ಪರಿಣಮಿಸಿದೆ. ಜೂನ್ 3ರಂದು ನಡೆಯಲಿರುವ ಪ್ರಮಾಣವಚನ ಸಮಾರಂಭದ ಮುಹೂರ್ತ ಈಗಾಗಲೇ ಕಾರ್ಯಕರ್ತರಲ್ಲಿ ಸಂಭ್ರಮದ ಅಲೆ ಎಬ್ಬಿಸಿದ್ದು ಇದೀಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಡಿ.ಕೆ. ಶಿವಕುಮಾರ್ ಅವರನ್ನು ಆಯ್ಕೆಗೊಂಡಿದ್ದಾರೆ.
ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ಆರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆಯನ್ನು ಘೋಷಿಸಿ, ನೂತನ ನಾಯಕನ ಆಯ್ಕೆ ಪ್ರಕ್ರಿಯೆಯನ್ನು ಹೈಕಮಾಂಡ್‌ಗೆ ಬಿಟ್ಟಿರುವುದಾಗಿ ತಿಳಿಸಿದರು. ನಂತರ ಅವರು ಸಭೆಯಿಂದ ಹೊರನಡೆದು, ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಿದರು.
ಸುಮಾರು 20 ನಿಮಿಷಗಳ ವಿರಾಮದ ಬಳಿಕ ಸಭೆ ಪುನರಾರಂಭಗೊಂಡು, ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ನೂತನ ಶಾಸಕಾಂಗ ಪಕ್ಷದ ನಾಯಕರಾಗಿ ಸೂಚಿಸಿದರು. ಡಾ. ಜಿ. ಪರಮೇಶ್ವರ್ ಅವರು ಈ ಪ್ರಸ್ತಾವನೆಗೆ ಅನುಮೋದನೆ ನೀಡಿದರು. ಸಭೆಯಲ್ಲಿದ್ದ ಶಾಸಕರು ಕೈ ಎತ್ತಿ ಒಕ್ಕೊರಲಿನಿಂದ ಬೆಂಬಲ ವ್ಯಕ್ತಪಡಿಸಿದರು. ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಅಧಿಕೃತವಾಗಿ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಘೋಷಿಸಿದರು.
ಸಭೆಯ ಆರಂಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಪ್ರಕ್ರಿಯೆಗೆ ಚಾಲನೆ ನೀಡಿದ್ದು, “ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದೆ” ಎಂಬ ನಿರ್ಣಯವನ್ನು ಸಿದ್ದರಾಮಯ್ಯ ಮಂಡಿಸಿದರು. ಪರಮೇಶ್ವರ್ ಅವರು ಅದನ್ನು ಅನುಮೋದಿಸಿದರು. ಎಲ್ಲ ಶಾಸಕರು ಕೈ ಎತ್ತಿ ಬೆಂಬಲಿಸಿದ ನಂತರ ಸಭೆಗೆ ವಿರಾಮ ನೀಡಲಾಯಿತು. ವಿರಾಮದ ಬಳಿಕ ಸಿದ್ದರಾಮಯ್ಯ, ವೇಣುಗೋಪಾಲ್ ಮತ್ತು ಸುರ್ಜೆವಾಲ ಅವರು ಸಿಎಂ ಕೊಠಡಿಗೆ ತೆರಳಿ ಚರ್ಚೆ ನಡೆಸಿ, ನಂತರ ಸಭಾಂಗಣಕ್ಕೆ ಮರಳಿ ನೂತನ ನಾಯಕನ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.
ನೂತನ ನಾಯಕನಾಗಿ ಆಯ್ಕೆಯಾದ ಬಳಿಕ ಡಿ.ಕೆ. ಶಿವಕುಮಾರ್ ಅವರು ನಿರ್ಗಮಿತ ನಾಯಕ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಅವಧಿಯ ಸೇವೆಯನ್ನು ಕೊಂಡಾಡುವ ನಿರ್ಣಯ ಮಂಡಿಸಿದರು. ಸಭೆಯು ಇದನ್ನು ಒಕ್ಕೊರಲಿನಿಂದ ಬೆಂಬಲಿಸಿತು.
ಸಭೆಗೆ ಗೈರಾದ ಶಾಸಕರಲ್ಲಿ ಸ್ಪೀಕರ್ ಯು.ಟಿ. ಖಾದರ್, ಅನಾರೋಗ್ಯದಿಂದ ರಾಜು ಕಾಗೆ, ತಂದೆಯವರ ನಿಧನದ ಕಾರಣದಿಂದ ಕೆ. ವೆಂಕಟೇಶ್, ಹಜ್ ಯಾತ್ರೆಯಲ್ಲಿದ್ದ ರಹೀಂ ಖಾನ್ ಹಾಗೂ ಅನಿವಾರ್ಯ ಕಾರಣದಿಂದ ಗೈರಾದ ಜಿ.ಟಿ. ಪಾಟೀಲ್ ಸೇರಿದ್ದಾರೆ.
ಇದರೊಂದಿಗೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭಕ್ಕೂ ದಿನಾಂಕ ನಿಗದಿಯಾಗಿದೆ. ತುಮಕೂರು ಜಿಲ್ಲೆಯ ನೊಣವಿನಕೆರೆಯ ಶ್ರೀ ಕಾಡಸಿದ್ಧೇಶ್ವರ ಅಜ್ಜಯ್ಯ ಪೀಠದ ನಿರ್ದೇಶನದಂತೆ, ಜೂನ್ 3ರಂದು ಬುಧವಾರ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜಕೀಯ ವಲಯದಲ್ಲಿ ಮೇ 31 ಅಥವಾ ಜೂನ್ 1ರಂದು ಪದಗ್ರಹಣ ನಡೆಯಲಿದೆ ಎಂಬ ಚರ್ಚೆಗಳಿದ್ದರೂ, ಅಜ್ಜಯ್ಯ ಪೀಠದ ಶ್ರೀಗಳು ಡಿ.ಕೆ. ಶಿವಕುಮಾರ್ ಅವರ ವೈಯಕ್ತಿಕ ಜಾತಕ ಮತ್ತು ಗ್ರಹಗತಿಗಳನ್ನು ಪರಿಶೀಲಿಸಿ ಜೂನ್ 3ರ ದಿನವೇ ಅತ್ಯಂತ ಶ್ರೇಷ್ಠ ಹಾಗೂ ವಿಜಯದಾಯಕ ಮುಹೂರ್ತ ಎಂದು ಘೋಷಿಸಿದ್ದಾರೆ.
ಅಜ್ಜಯ್ಯ ಪೀಠದ ಪರಮ ಭಕ್ತನಾದ ಡಿ.ಕೆ. ಶಿವಕುಮಾರ್ ಅವರು ಈ ದಿನಾಂಕವನ್ನು ಅಂತಿಮಗೊಳಿಸಲು ಹೈಕಮಾಂಡ್ ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆ, ಸಿಎಂ ರೇಸ್ ಹಾಗೂ ಇತ್ತೀಚಿನ ರಾಜಕೀಯ ಬಿಕ್ಕಟ್ಟುಗಳ ಸಂದರ್ಭದಲ್ಲೂ ಅವರು ಪೀಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. “ಅಜ್ಜಯ್ಯನವರು ಹೇಳಿದಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಈಗ ಅವರೇ ನೀಡಿದ ಮುಹೂರ್ತದ ಪ್ರಕಾರ ಪದಗ್ರಹಣ ನಡೆಯಲಿದೆ” ಎಂದು ಅವರ ಆಪ್ತ ವಲಯದ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜಭವನದಲ್ಲಿ ದಿನಾಂಕದ ಅಧಿಕೃತ ಪ್ರಕಟಣೆಯ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಜೂನ್ 3ರ ಮಹೂರ್ತದ ಸುದ್ದಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಾರಿ ಉತ್ಸಾಹ ಮತ್ತು ಸಂಭ್ರಮವನ್ನುಂಟುಮಾಡಿದೆ.
ಮೇ 28ರಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಕಚೇರಿಗೆ ಪತ್ರ ಒಪ್ಪಿಸಿದರು. ಹೈಕಮಾಂಡ್ ಸೂಚನೆಯಂತೆ ಅವರು ಸ್ಥಾನ ತ್ಯಜಿಸಿದ್ದು, ಡಿ.ಕೆ. ಶಿವಕುಮಾರ್ ಅವರನ್ನು ಮುಂದಿನ ಮುಖ್ಯಮಂತ್ರಿ ಆಗಿ ನೇಮಿಸುವ ಸಾಧ್ಯತೆ ಖಚಿತವಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ರಾಜೀನಾಮೆ ಸಲ್ಲಿಸಿದ ಬಳಿಕ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ, “ನಾನು ಹೈಕಮಾಂಡ್ ಸೂಚಿಸಿದಾಗಲೇ ರಾಜೀನಾಮೆ ನೀಡುತ್ತೇನೆ ಎಂದು ಹಲವು ಬಾರಿ ಹೇಳಿದ್ದೆ. ಎರಡು ದಿನಗಳ ಹಿಂದೆ ಸೂಚನೆ ನೀಡಿದ್ದು, ಇಂದು ರಾಜೀನಾಮೆ ಸಲ್ಲಿಸಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ರಾಜ್ಯಪಾಲರು ರಾಜ್ಯದ ಹೊರಗಿದ್ದ ಕಾರಣ, ವಿಶೇಷ ಕಾರ್ಯದರ್ಶಿ ಪ್ರಭು ಶಂಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಲಾಯಿತು. ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರವನ್ನು ಪಕ್ಷದ ಹಿತಕ್ಕಾಗಿ ತೆಗೆದುಕೊಂಡ ತ್ಯಾಗವೆಂದು ಕೊಂಡಾಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, “ಸಿದ್ದರಾಮಯ್ಯ ಅವರ ತ್ಯಾಗ ಪಕ್ಷದ ಹಿತಕ್ಕಾಗಿ, ಜನರ ಹಿತಕ್ಕಾಗಿ. ಅವರ ಸೇವೆ ಅಪ್ರತಿಮ” ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ರಾಜೀನಾಮೆಯ ನಂತರ, “ನಾನು ರಾಜೀನಾಮೆ ನೀಡಿದ್ದು ಕೇವಲ ಮುಖ್ಯಮಂತ್ರಿ ಸ್ಥಾನಕ್ಕೆ. ರಾಜಕೀಯದಿಂದ ಹಿಂದೆ ಸರಿಯುವುದಿಲ್ಲ. ಸಂವಿಧಾನ ರಕ್ಷಣೆ, ಸಾಮಾಜಿಕ ನ್ಯಾಯ, ಧರ್ಮನಿರಪೇಕ್ಷತೆಗಾಗಿ ಹೋರಾಟ ಮುಂದುವರಿಸುತ್ತೇನೆ” ಎಂದು ಘೋಷಿಸಿದರು. ಅವರು ತಮ್ಮ ಅವಧಿಯಲ್ಲಿ ಜನತೆಗೆ ನೀಡಿದ 550 ಭರವಸೆಗಳಲ್ಲಿ 300ಕ್ಕೂ ಹೆಚ್ಚು ಪೂರೈಸಿದ್ದೇನೆ ಎಂದು ಭಾವೋದ್ರಿಕ್ತವಾಗಿ ಹೇಳಿದ್ದರು.
ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಡಿಕೆಶಿ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಆಯ್ಕೆಯಾದ ಬಳಿಕ ಡಿ.ಕೆ. ಶಿವಕುಮಾರ್ ಅವರು ಶನಿವಾರ ರಾತ್ರಿ ಸಿದ್ದರಾಮಯ್ಯ ಸೇರಿ ಹಿರಿಯ ನಾಯಕರೊಂದಿಗೆ ಲೋಕಭವನಕ್ಕೆ ತೆರಳಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಅಧಿಕೃತವಾಗಿ ಘೋಷಿಸಿದ್ದು, ಅದರ ನಂತರವೇ ಈ ಭೇಟಿ ನಡೆಯಿತು.
ರಾಜ್ಯಪಾಲರಿಗೆ ಡಿ.ಕೆ. ಶಿವಕುಮಾರ್ ಅವರು ಪತ್ರ ಸಲ್ಲಿಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೆವಾಲಾ, ಕೆ.ಸಿ. ವೇಣುಗೋಪಾಲ್, ಕೆ.ಜೆ. ಜಾರ್ಜ್, ಎನ್.ಎ. ಹ್ಯಾರಿಸ್ ಮತ್ತಿತರರು ಉಪಸ್ಥಿತರಿದ್ದರು. ರಾಜ್ಯಪಾಲರು ಪತ್ರ ಪರಿಶೀಲಿಸಿದ ಬಳಿಕ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಆಹ್ವಾನಿಸಿದರು. ಜೂನ್ 3ರಂದು ಸಂಜೆ 4.05ಕ್ಕೆ ಲೋಕಭವನದಲ್ಲಿ ನೂತನ ಸಿಎಂ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ.
ಇದಕ್ಕೂ ಮೊದಲು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಅವಿರೋಧವಾಗಿ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, “ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಸಿದ್ದರು, ಅದನ್ನು ಅಂಗೀಕರಿಸಲಾಗಿದೆ. ಈಗ ಹೈಕಮಾಂಡ್ ನಿರ್ಧಾರದಂತೆ ಡಿ.ಕೆ. ಶಿವಕುಮಾರ್ ಅವರನ್ನು ಸಿಎಲ್‌ಪಿ ನಾಯಕರಾಗಿ ನೇಮಕ ಮಾಡಲಾಗಿದೆ. ಪರಮೇಶ್ವರ್ ಅವರು ಅನುಮೋದನೆ ನೀಡಿದರು. ಮತ್ತೊಮ್ಮೆ ಶಾಸಕಾಂಗ ಪಕ್ಷದ ನಾಯಕನನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ” ಎಂದು ಘೋಷಿಸಿದರು.
ಸಿದ್ದರಾಮಯ್ಯ ಅವರ ಬೆಂಬಲದೊಂದಿಗೆ 2028ರಲ್ಲಿಯೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ವೇಣುಗೋಪಾಲ್, “ಅಧಿಕಾರ ಹಂಚಿಕೆ ವಿಚಾರ ಬಂದಾಗ ದೊಡ್ಡ ಕೋಲಾಹಲ ನಡೆಯುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಾವು ಒಂದೇ ಕುಟುಂಬದಂತೆ ಇದ್ದೇವೆ, ಇದು ಕಾಂಗ್ರೆಸ್ ಪಕ್ಷ” ಎಂದು ಹೇಳಿದರು.







Comments
Leave a Comment