ಸಿದ್ದರಾಮಯ್ಯ ರಾಜೀನಾಮೆ – ಸಂವಿಧಾನ ಧರ್ಮದ ಹಾದಿಯಲ್ಲಿ, ರಾಜ್ಯ ರಾಜಕಾರಣದಲ್ಲೇ ಮುಂದುವರಿಯುವ ನಿರ್ಧಾರ!”
ಬೆಂಗಳೂರು,ಮೇ.28- ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಮಧ್ಯಾಹ್ನ 3 ಗಂಟೆಗೆ ರಾಜೀನಾಮೆ ಸಲ್ಲಿಸಿದರು. ರಾಜಭವನದ ಕಾರ್ಯದರ್ಶಿಗೆ ಪತ್ರವನ್ನು ನೀಡಿದರು ಇವರ ಜೊತೆ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸಚಿವರುಗಳುಆಗಮಿಸಿದ್ದರು. ಬೆಳಗ್ಗೆ ಉಪಹಾರ ಸಭೆಯಲ್ಲಿ ಸಂಪುಟ ಸಹೋದ್ಯೋಗಿಗಳೊಂದಿಗೆ ತಾವು ಹುದ್ದೆಯಿಂದ ಕೆಳಗಿಳಿಯುವುದಾಗಿ ಪ್ರಕಟಿಸಿದರಲ್ಲದೆ ಕಳೆದ ಮಂಗಳವಾರ ದೆಹಲಿಯಲ್ಲಿ ನಡೆದ ಹೈಕಮಾಂಡ್ ಸಭೆಯಲ್ಲಿ ಅಧಿಕಾರ ಹಸ್ತಾಂತರಕ್ಕೆ ಅವರು ಸಮ್ಮತಿಸಿದ್ದರು.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ರಾಜ್ಯಸಭೆಗೆ ಹೋಗುವ ಆಫರ್ ಬಂದಿದ್ದರೂ ಅದನ್ನು ನಿರಾಕರಿಸಿ, ರಾಜ್ಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. “ಜನ ಆಯ್ಕೆ ಮಾಡಿರುವುದು ಐದು ವರ್ಷಕ್ಕೆ, ಅಲ್ಲಿವರೆಗೆ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ” ಎಂದು ಅವರು ಹೇಳಿದರು. ಸಂವಿಧಾನವಿಲ್ಲದೆ ಇದ್ದಿದ್ದರೆ ವಿದ್ಯಾವಂತನಾಗುತ್ತಿರಲಿಲ್ಲ, ಕುರಿ ಮೇಯಿಸಿಕೊಂಡು ಬದುಕುತ್ತಿದ್ದೆ ಎಂದು ಭಾವೋದ್ರಿಕ್ತವಾಗಿ ಹೇಳಿದರು. ಸಂವಿಧಾನಕ್ಕೆ ಯಾರೇ ಧಕ್ಕೆ ತಂದರೂ ಅವರ ವಿರುದ್ಧ ಹೋರಾಡುತ್ತೇನೆ, ಜನರ ಸಮಾನತೆಯನ್ನು ಕಾಪಾಡುತ್ತೇನೆ ಎಂದರು.
“ನನ್ನ ಮೌಲ್ಯ, ಸಿದ್ಧಾಂತದಲ್ಲಿ ಯಾವತ್ತೂ ರಾಜೀ ಆಗಿಲ್ಲ. ಕಟ್ಟಕಡೆಯ ವ್ಯಕ್ತಿಗೂ ಅನ್ನ, ವಸತಿ, ಶಿಕ್ಷಣ ಒದಗಿಸಬೇಕೆಂಬ ನಂಬಿಕೆ ನನ್ನದು. ಸಮಾಜದಲ್ಲಿರುವ ಬಡವರಿಗಾಗಿ ಗ್ಯಾರಂಟಿ ಯೋಜನೆ ಜಾರಿ ಮಾಡಲಾಗಿದೆ” ಎಂದು ಅವರು ಹೇಳಿದರು. “ನಾನು ಯಾವತ್ತೂ ಅಧಿಕಾರ, ಹಣದ ಹಿಂದೆ ಹೋದವನಲ್ಲ. 1983ರಲ್ಲಿ ಮೊದಲ ಬಾರಿ ಶಾಸಕನಾದವನು, ರಾಜಕಾರಣಕ್ಕೆ ಬಂದು 50 ವರ್ಷ ಆಗಿದೆ. ನನ್ನ ಜೀವನ ತೆರೆದ ಪುಸ್ತಕ” ಎಂದು ವಿವರಿಸಿದರು.
ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ಹೈಕಮಾಂಡ್ ನನಗೆ ರಾಜ್ಯಸಭೆಗೆ ಹೋಗಲು ಹೇಳಿದರು. ನಾನು ಅದನ್ನು ವಿನಮ್ರವಾಗಿ ತಿರಸ್ಕರಿಸಿದ್ದೇನೆ. ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ, ರಾಜ್ಯ ರಾಜಕೀಯದಲ್ಲಿ ಆಸಕ್ತಿ ಇದೆ. ರಾಜ್ಯದ ಜನರು ನನ್ನನ್ನು ಐದು ವರ್ಷಕ್ಕೆ ಆಯ್ಕೆ ಮಾಡಿದ್ದಾರೆ. ಇನ್ನೂ ಎರಡು ವರ್ಷ ಶಾಸಕನಾಗಿ ಕೆಲಸ ಮಾಡುತ್ತೇನೆ. ನಾನು ಸಕ್ರಿಯ ರಾಜಕೀಯದಲ್ಲಿ ಮುಂದುವರಿಯುತ್ತೇನೆ. ನಾನೇ ಸ್ವಯಂಪ್ರೇರಿತವಾಗಿ ಅವರು ಹೇಳಿದ ಕೂಡಲೇ ರಾಜೀನಾಮೆ ಕೊಟ್ಟಿದ್ದೇನೆ. ಹೈಕಮಾಂಡ್ ಹಾಗೂ ಸಿಎಲ್‌ಪಿ ಮುಂದಿನ ಸಿಎಂ ಆಯ್ಕೆ ಮಾಡಲಿದೆ. ಅವರು ಆಯ್ಕೆ ಮಾಡಿದ ವ್ಯಕ್ತಿಯೇ ರಾಜ್ಯದ ಸಿಎಂ ಆಗಿರುತ್ತಾರೆ” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ರಾಜೀನಾಮೆ ಸಲ್ಲಿಸಿದ ಬಳಿಕ ಅವರು “ರಾಜ್ಯಪಾಲರು ನನ್ನ ರಾಜೀನಾಮೆ ಪತ್ರವನ್ನು ಅವರು ಬಂದ ಬಳಿಕ ಅಂಗೀಕಾರ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಸಂವಿಧಾನದ ಪ್ರಕಾರ ಅಂಗೀಕಾರ ಮಾಡಲೇಬೇಕು. ಸಿಎಂ ರಾಜೀನಾಮೆ ಹಾಗೂ ಮುಂದಿನ ಸಿಎಂಗೆ ಅವಕಾಶ ಮಾಡಿಕೊಡುವುದು ಅವರ ಜವಾಬ್ದಾರಿ. ನಮ್ಮ ಪಕ್ಷ 135+1 ಸ್ಥಾನಗಳನ್ನು ಪಡೆದಿದೆ. ಜೊತೆಗೆ ಪಕ್ಷೇತರರು ಬೆಂಬಲ ನೀಡಿದ್ದಾರೆ. ನಾವು ಸಂಪೂರ್ಣ ಬಹುಮತದಲ್ಲಿದ್ದೇವೆ. ಮುಂದಿನ ಸಿಎಂಗೆ ಅವಕಾಶ ಮಾಡಿಕೊಡುವುದು ಸಂವಿಧಾನಬದ್ಧ” ಎಂದು ಹೇಳಿದರು.
ಮಾಧ್ಯಮಗೋಷ್ಟಿಯಲ್ಲಿ ಅವರು ತಮ್ಮ ರಾಜಕೀಯ ಪಯಣವನ್ನು ನೆನಪಿಸಿಕೊಂಡು, “ಮೇರು ನಟ ರಾಜಕುಮಾರ್ ಅಭಿಮಾನಿಗಳನ್ನು ದೇವರು ಅಂತ ಕರೆಯುತ್ತಿದ್ದರು. ನಾನು ಸಂವಿಧಾನವನ್ನೇ ಧರ್ಮ ಎಂದು ತಿಳಿದುಕೊಂಡವನು. ಮತದಾರರೇ ನಮ್ಮ ಅಭಿಮಾನಿ ದೇವರು. ಕನ್ನಡ ನಾಡಿನ ಏಳು ಕೋಟಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಎರಡು ಬಾರಿ ಸಿಎಂ ಆಗುವ ಅವಕಾಶ, ಎರಡು ಬಾರಿ ವಿಪಕ್ಷ ನಾಯಕನಾಗುವ ಅವಕಾಶ ಸಿಕ್ಕಿತ್ತು. ಈ ಅವಕಾಶ ಕೊಟ್ಟ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಪಾರವಾದ ಧನ್ಯವಾದ” ಎಂದರು.
2006ರಲ್ಲಿ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ, “ಅಲ್ಲಿಂದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಶಾಸಕರು, ಸಂಸದರು ನನಗೆ ಪ್ರೀತಿ ತೋರಿಸಿದ್ದಾರೆ. ಅವರಿಗೆಲ್ಲರಿಗೂ ಧನ್ಯವಾದ. ಎರಡು ಬಾರಿ ಸಿಎಂ ಆಗಿದ್ದಾಗ ನನ್ನ ಜೊತೆ ಕೆಲಸ ಮಾಡಿದ ಸಹೋದ್ಯೋಗಿಗಳು ಬೆಂಬಲ, ಸಹಕಾರ, ಪ್ರೀತಿ ತೋರಿದ್ದಾರೆ. ಅವರಿಗೆ ಯಾವಾಗಲೂ ಚಿರಋಣಿಯಾಗಿರುತ್ತೇನೆ. ನಾನು ಹಳ್ಳಿಗಾಡಿನಿಂದ ಬಂದವನು. ಶಾಸಕ, ಮಂತ್ರಿ, ಸಿಎಂ ಆಗುತ್ತೇನೆ ಎಂಬ ಕನಸು ಕಂಡಿರಲಿಲ್ಲ. ರಾಜಕಾರಣಕ್ಕೆ ಬಂದದ್ದು ಆಕಸ್ಮಿಕ. ನನ್ನ ಕುಟುಂಬದವರು ಯಾರೂ ರಾಜಕಾರಣದಲ್ಲಿ ಇರಲಿಲ್ಲ. ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ ತತ್ವಗಳಲ್ಲಿ ನಂಬಿಕೆ ಇಟ್ಟವನು. ಸಂವಿಧಾನದಲ್ಲಿ ಅಪಾರವಾದ ನಂಬಿಕೆ ಇಟ್ಟವನು. ನಾವು ಎಲ್ಲರೂ ಕುಟುಂಬವಾಗಿ ಬಾಳಬೇಕು, ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು ಎಂಬ ನಂಬಿಕೆ ನನ್ನದು” ಎಂದು ಹೇಳಿದರು.
ವಿಪಕ್ಷಗಳ ವಿರುದ್ಧ ತೀವ್ರವಾಗಿ ಪ್ರತಿಕ್ರಿಯಿಸಿದ ಅವರು, “ಗ್ಯಾರಂಟಿ ಯೋಜನೆ ಜಾರಿಗೆ ಆಗಲ್ಲ, ರಾಜ್ಯ ದಿವಾಳಿ ಆಗುತ್ತದೆ ಎಂದು ಅಪಪ್ರಚಾರ ಮಾಡಿದರು. ಆದರೆ ಗ್ಯಾರಂಟಿ ಯೋಜನೆ ಜಾರಿ ಮಾಡಿದ ಮೇಲೆ ಕರ್ನಾಟಕ ತಲಾ ಆದಾಯದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ” ಎಂದು ಹೇಳಿದರು.
ಅವರು ತಮ್ಮ ನಂಬಿಕೆಗಳನ್ನು ಪುನರುಚ್ಚರಿಸಿ, “ನಾನು ಯಾವತ್ತೂ ಅಧಿಕಾರ, ಹಣದ ಹಿಂದೆ ಹೋದವನಲ್ಲ. ಆಸ್ತಿ ಪಾಸ್ತಿ ಬಗ್ಗೆ ಯೋಚನೆ ಮಾಡಿಲ್ಲ. 1978ರಲ್ಲಿ ತಾಲೂಕು ಬೋರ್ಡ್ ಸದಸ್ಯನಾದವನು. ಸುಮಾರು 50 ವರ್ಷ ರಾಜಕಾರಣದಲ್ಲಿ ಇದ್ದೇನೆ. ನನ್ನ ಜೀವನ ತೆರೆದ ಪುಸ್ತಕ. ಇಂದಿನ ರಾಜಕೀಯದಲ್ಲಿ ಜನಶಕ್ತಿ ಇರುವವರು ಮಾತ್ರ ಇರಲು ಸಾಧ್ಯ. ನಾನು ನಂಬಿದ ಮೌಲ್ಯ, ಸಿದ್ಧಾಂತಗಳಲ್ಲಿ ರಾಜಿ ಮಾಡಿಲ್ಲ. ಪ್ರತಿ ಮನುಷ್ಯನಿಗೂ ಅನ್ನ, ಆರೋಗ್ಯ, ಶಿಕ್ಷಣ, ವಸತಿ, ಉದ್ಯೋಗ ದೊರೆಯಬೇಕು ಎಂಬುದು ನನ್ನ ನಂಬಿಕೆ. ಅದಕ್ಕಾಗಿ ಬಡವರಿಗೆ ಅನ್ನ, ಗೃಹಲಕ್ಷ್ಮಿ ಮೂಲಕ 2000 ರೂ., ಗೃಹಜ್ಯೋತಿ ಮೂಲಕ ಉಚಿತ ವಿದ್ಯುತ್, ಯುವ ನಿಧಿ, ಶಕ್ತಿ ಯೋಜನೆಗಳನ್ನು ಜಾರಿ ಮಾಡಿದ್ದೇನೆ. ಬರ ಬಂದಾಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ರಾಜ್ಯದ ಜಲ, ನೆಲ, ಭಾಷೆ ಹಕ್ಕುಗಳ ಬಗ್ಗೆ ಯಾವತ್ತೂ ರಾಜಿ ಮಾಡಿಲ್ಲ. 8 ವರ್ಷ ಸಿಎಂ ಆಗಲು, ಎರಡು ಬಾರಿ ಪ್ರತಿಪಕ್ಷ ನಾಯಕನಾಗಲು ಕಾಂಗ್ರೆಸ್ ಅವಕಾಶ ಕೊಟ್ಟಿದೆ” ಎಂದು ಹೇಳಿದರು.
ಜೆಡಿಎಸ್ ಪಕ್ಷದಿಂದ ವಜಾ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡು, “ಅಹಿಂದ ಚಟುವಟಿಕೆ ಮಾಡುತ್ತಿದ್ದಾಗ ಕಾಂಗ್ರೆಸ್‌ನ ಅಹಮದ್ ಪಟೇಲ್ ಮೂಲಕ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರಿದೆ. ಆ ಸಮಯದಲ್ಲಿ ನನ್ನ ಜೊತೆ ಎಂಟು ಶಾಸಕರು ಸೇರಿದ್ದರು. ಅವರಿಗೆ ನಾನು ಚಿರಋಣಿ. ರಾಜಕಾರಣದಲ್ಲಿ ಕೊನೆ ಉಸಿರಿರುವವರೆಗೂ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ. ಸಂವಿಧಾನ ಇಲ್ಲದಿದ್ದರೆ ವಿದ್ಯಾವಂತನಾಗುತ್ತಿರಲಿಲ್ಲ, ಶಾಸಕ, ಮಂತ್ರಿ, ಸಿಎಂ ಆಗುತ್ತಿರಲಿಲ್ಲ. ಸಂವಿಧಾನ ಇಲ್ಲದಿದ್ದರೆ ಕುರಿ ಮೇಯಿಸುತ್ತಿದ್ದೆ. ಸಂವಿಧಾನಕ್ಕೆ ಯಾರೇ ಧಕ್ಕೆ ತಂದರೂ ಅವರ ವಿರುದ್ಧ ಹೋರಾಟ ಮಾಡುತ್ತೇನೆ. ಜನರ ಸಮಾನತೆಗಾಗಿ ನಿರಂತರ ಹೋರಾಟ ಮುಂದುವರಿಸುತ್ತೇನೆ. ಮತ್ತೊಮ್ಮೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದ” ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯ ತಮ್ಮ ರಾಜಕೀಯ ಪಯಣವನ್ನು ನೆನಪಿಸಿಕೊಂಡು “ನಾನು ಹಳ್ಳಿಗಾಡಿನಿಂದ ಬಂದವನು. ರಾಜಕಾರಣಕ್ಕೆ ಬಂದದ್ದು ಆಕಸ್ಮಿಕ. ನನ್ನ ಕುಟುಂಬದವರು ಯಾರೂ ರಾಜಕಾರಣದಲ್ಲಿ ಇರಲಿಲ್ಲ. ಬುದ್ಧ, ಬಸವ, ಅಂಬೇಡ್ಕರ್, ಗಾಂಧೀಜಿ ತತ್ವಗಳಲ್ಲಿ ನಂಬಿಕೆ ಇಟ್ಟವನು. ಸಂವಿಧಾನದಲ್ಲಿ ಅಪಾರವಾದ ನಂಬಿಕೆ ಇಟ್ಟವನು” ಎಂದು ಹೇಳಿದರು.
ಅವರು ತಮ್ಮ ಜೀವನದ ಹಾದಿಯನ್ನು ವಿವರಿಸಿ “77 ವರ್ಷಗಳ ಪಯಣದಲ್ಲಿ ಹಲವರು ಕೈಹಿಡಿದು ಮುನ್ನಡೆಸಿದ್ದಾರೆ. ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡುತ್ತಿದ್ದ ನನ್ನನ್ನು ಶಾಲೆಗೆ ಕರೆದೊಯ್ದ ರಾಜಪ್ಪ ಮಾಸ್ತರ್, ಸಮಾಜವಾದದ ಪಾಠ ಕಲಿಸಿದ ಎಂ.ಡಿ. ನಂಜುಂಡಸ್ವಾಮಿ, ರಾಜಕೀಯದಲ್ಲಿ ಅವಕಾಶ ನೀಡಿದ ರಾಮಕೃಷ್ಣ ಹೆಗಡೆ ಅವರ ನೆರವಿಲ್ಲದೆ ನಾನು ಇಷ್ಟು ದೂರ ಬಂದಿರಲಿಲ್ಲ” ಎಂದು ಹೇಳಿದರು.
“ನಾನು ದುಡ್ಡು, ಆಸ್ತಿಪಾಸ್ತಿ ಮಾಡಲು ರಾಜಕಾರಣಕ್ಕೆ ಬಂದವನಲ್ಲ. ಮತದಾರ ದೇವರುಗಳು ನೀಡಿದ ಅಧಿಕಾರವನ್ನು ಅವರ ಕಲ್ಯಾಣಕ್ಕಾಗಿ ಬಳಸಿದ್ದೇನೆ. ಜಾತಿ, ದುಡ್ಡು, ತೋಳ್ಭಲಗಳ ನೆರವಿಲ್ಲದೆ ರಾಜಕೀಯದಲ್ಲಿ ಹೆಜ್ಜೆ ಇಡುವುದು ಕಷ್ಟ. ಆದರೆ ನಾನು ನಂಬಿದ ಮೌಲ್ಯಗಳಲ್ಲಿ ರಾಜೀ ಮಾಡಿಲ್ಲ. ಜನತೆಗೆ ದ್ರೋಹ ಮಾಡಿಲ್ಲ” ಎಂದು ಹೇಳಿದರು.
ರಾಜಕೀಯ ಜೀವನದಲ್ಲಿ ಎದುರಿಸಿದ ಸಂಕಷ್ಟಗಳನ್ನು ನೆನಪಿಸಿಕೊಂಡು “ನನ್ನ ಕುಟುಂಬವೂ ರಾಜಕೀಯ ದ್ವೇಷಕ್ಕೆ ಬಲಿಯಾಗಿದೆ. ಪತ್ನಿಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದರು. ಆದರೆ ಶತ್ರುಗಳ ದಾಳಿಗೆ ಹೆದರಿ ಪಲಾಯನವಾದಿಯಾಗಲಿಲ್ಲ. ಹೋರಾಟ ಮುಂದುವರಿಸಿದೆ” ಎಂದು ಹೇಳಿದರು.
ನಾನು ರಾಜಕಾರಣಕ್ಕೆ ಪ್ರವೇಶ ಮಾಡಿದಾಗ ನುಡಿದಂತೆ ನಡೆಯಬೇಕು, ಜನತೆ ಇಟ್ಟಿರುವ ವಿಶ್ವಾಸಕ್ಕೆ ಭಂಗ ಉಂಟು ಮಾಡಬಾರದೆಂಬ ಪ್ರಮಾಣವನ್ನು ಮನಸ್ಸಿನೊಳಗೆ ಮಾಡಿದ್ದೆ. ಜನರಿಗೆ ನೀಡಿದ ವಚನಪಾಲನೆಯೇ ನಿಜವಾದ ರಾಜಧರ್ಮ ಎಂದು ನಂಬಿದವನು ನಾನು. ಅದನ್ನು ತ್ರಿಕರಣಪೂರ್ವಕವಾಗಿ ಪಾಲಿಸಿದ್ದೇನೆ ಎಂಬ ವಿಶ್ವಾಸ ನನಗಿದೆ. ನುಡಿದಂತೆಯೇ ನಡೆದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ.
ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ಬದುಕಿನ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗದ ಭಾಗ್ಯ ಲಭಿಸಬೇಕು. ಬಡವ-ಬಲ್ಲಿದನೆಂಬ ಭೇದ ಇಲ್ಲದೆ ಎಲ್ಲರೂ ನಿರ್ಭಯವಾಗಿ ಘನತೆ ಮತ್ತು ಗೌರವರಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಬೇಕು. ಕೃಷಿ ಸಂಪತ್ತು ಬೆಳೆಯಬೇಕು. ಉದ್ಯಮ ಕ್ಷೇತ್ರದಲ್ಲಿ ಪ್ರಗತಿಯಾಗಬೇಕು. ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು. ಮೂಲಸೌಲಭ್ಯಗಳು ವೃದ್ಧಿಯಾಗಬೇಕು. ನೆಮ್ಮದಿಯಿಂದ ಬದುಕುವಷ್ಟು ಆದಾಯ ಪ್ರತಿ ಕುಟುಂಬದ ಪಾಲಿಗಿರಬೇಕು. ಸಂಪತ್ತು, ಅಧಿಕಾರ ಮತ್ತು ಅವಕಾಶ ಸಮಾನವಾಗಿ ಎಲ್ಲರಿಗೂ ಹಂಚಿಕೆಯಾಗಬೇಕು- ಇದು ರಾಜಕೀಯ ಕ್ಷೇತ್ರಕ್ಕೆ ಕಾಲಿಡುವಾಗ ನಾನು ಕಂಡ ಕನಸು.
ಆ ಕನಸು ನನಸಾಗುವ ದಾರಿಯಲ್ಲಿ ಕರ್ನಾಟಕ ಭರದಿಂದ ಮುನ್ನಡೆದಿದೆ. ಇಂದು ಕರ್ನಾಟಕವು ದೇಶದಲ್ಲಿಯೇ ತಲಾದಾಯದಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಾವು ಮೇಲಕ್ಕೇರುತ್ತಿದ್ದೇವೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಜನತೆಗೆ ಸಾಮಾಜಿಕ ಭದ್ರತೆಯನ್ನು ಒದಗಿಸಿದ್ದೇವೆ. ಹಸಿವುಮುಕ್ತ ಕರ್ನಾಟಕ ನಿರ್ಮಾಣಗೊಳ್ಳುತ್ತಿದೆ, ಅಪೌಷ್ಠಿಕತೆಯಿಂದ ನರಳುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿದಿದೆ, ಆರೋಗ್ಯ ಸೇವೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಅತಿವೃಷ್ಟಿ-ಅನಾವೃಷ್ಟಿಗಳು ಎದುರಾದರೂ ಸಮರ್ಥವಾಗಿ ಎದುರಿಸಿದ್ದೇವೆ, ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನ ಮತ್ತು ಬೆಳೆದ ಬೆಳೆಗೆ ವೈಜ್ಞಾನಿಕವಾದ ಬೆಲೆ ನಿಗದಿಯಿಂದಾಗಿ ಸರ್ಕಾರದ ಬಗ್ಗೆ ರೈತರಲ್ಲಿ ಭರವಸೆ ಮೂಡಿದೆ. ನೀರಿನ ಹಕ್ಕಿನ ರಕ್ಷಣೆಗಾಗಿ ಸರ್ಕಾರ ನಡೆಸುತ್ತಿರುವ ಪ್ರಯತ್ನ ಅವರಿಗೆ ಸಮಾಧಾನ ತಂದಿದೆ. ನೆಲ-ಜಲ-ಭಾಷೆಯ ರಕ್ಷಣೆಯ ವಿಚಾರದಲ್ಲಿ ರಾಜಿ ಇಲ್ಲದ ನಮ್ಮ ನಿಲುವು ಕನ್ನಡಿಗರ ಮನ ಗೆದ್ದಿದೆ.
ನಾಡಿನ ಇತಿಹಾಸದಲ್ಲಿಯೇ ಅತಿಹೆಚ್ಚು ಬಜೆಟ್‌ಗಳನ್ನು ಮಂಡಿಸುವ ಅವಕಾಶ ಲಭ್ಯವಾಗಿದ್ದರ ಬಗ್ಗೆ ನನಗೆ ತೃಪ್ತಿ ಇದೆ. ನಾನು ಮಂಡಿಸಿದ ಹದಿನೇಳು ಬಜೆಟ್‌ಗಳಲ್ಲಿಯೂ ಸಾಮಾಜಿಕ ನ್ಯಾಯ ಹಾಗೂ ಅಭಿವೃದ್ಧಿಪರವಾದ ಯೋಜನೆಗಳಿಗೆ ಸಮಾನ ಪ್ರಾಶಸ್ತ್ಯವನ್ನು ನೀಡಿದ್ದೇನೆ.
ನಾಡು ಕಂಡ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂದು ಇತಿಹಾಸದಲ್ಲಿ ದಾಖಲಾಗುವುದಕ್ಕಿಂತ ಹೆಚ್ಚಾಗಿ ನಾಡಿನ ಅಭಿವೃದ್ಧಿಗೆ, ನಾಡಿನ ಜನತೆಯ ಏಳಿಗೆಗೆ ಕಾರಣವಾಗುವಂತಹ ಮಹತ್ವದ ಯೋಜನೆಗಳನ್ನು ನೀಡಿದ ಮುಖ್ಯಮಂತ್ರಿ ನಾನಾಗಬೇಕು ಎನ್ನುವ ಹಂಬಲದಿಂದ ಇಲ್ಲಿಯವರೆಗೆ ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ.
ಕರ್ನಾಟಕದ ಜನತೆ, ವಿಶೇಷವಾಗಿ ನಾಡಿನ ಮೂಲೆಮೂಲೆಗಳಲ್ಲಿರುವ ದೀನದಲಿತರು, ದಮನಿತರು, ದನಿಯಿಲ್ಲದವರು, ಅಶಕ್ತರು, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು ನನ್ನನ್ನು ತಮ್ಮ ದನಿಯಾಗಿಸಿಕೊಂಡಿದ್ದಕ್ಕೆ ನಾನು ಚಿರಋಣಿಯಾಗಿರುತ್ತೇನೆ. ಅವರು ನನ್ನಲ್ಲಿ ತುಂಬಿದ ಶಕ್ತಿಯಿಂದಾಗಿಯೇ ನಾನು ನಾಡಿನ ಜನತೆಯ ಸೇವೆಯನ್ನು ಇಷ್ಟು ದೀರ್ಘಕಾಲ ಮಾಡಲು ಸಾಧ್ಯವಾಗಿದೆ.
ನನ್ನನ್ನು ನಾಯಕನನ್ನಾಗಿ ಸ್ವೀಕರಿಸಿ ಬೆಂಬಲ ನೀಡಿದ ನನ್ನ ಎಲ್ಲ ಶಾಸಕ ಮಿತ್ರರಿಗೆ, ಸರ್ಕಾರದ ಯಂತ್ರವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಸಹಕಾರ ನೀಡಿದ ಅಧಿಕಾರಿವರ್ಗಕ್ಕೆ ನಾನು ವಿಶೇಷವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ರಾಜಕಾರಣಿಗಳಿಗೆ ನಿವೃತ್ತಿ ಇಲ್ಲ, ನಾನು ಚುನಾವಣಾ ರಾಜಕಾರಣದಿಂದ ದೂರ ಸರಿಯಬಹುದು, ಆದರೆ ರಾಜಕೀಯ ಕ್ಷೇತ್ರದಲ್ಲಿರುತ್ತೇನೆ. ಮುಂಬರುವ ದಿನಗಳಲ್ಲಿ ರಾಜ್ಯದ ಜನತೆ ಇಲ್ಲವೆ ಪಕ್ಷ ನೀಡುವ ಕರೆಗೆ ಓಗೊಟ್ಟು ಸಹಕಾರ ನೀಡುತ್ತೇನೆ
ಕೊನೆಗೆ ಅವರು “ಜನರಿಗೆ ನೀಡಿದ ವಚನಪಾಲನೆಯೇ ನಿಜವಾದ ರಾಜಧರ್ಮ. ಕಟ್ಟಕಡೆಯ ಮನುಷ್ಯನಿಗೂ ಅನ್ನ, ಆರೋಗ್ಯ, ಶಿಕ್ಷಣ, ವಸತಿ, ಉದ್ಯೋಗ ದೊರೆಯಬೇಕು. ಸಂಪತ್ತು, ಅಧಿಕಾರ, ಅವಕಾಶ ಸಮಾನವಾಗಿ ಹಂಚಿಕೆ ಆಗಬೇಕು. ಆ ಕನಸು ನನಸಾಗುವ ದಾರಿಯಲ್ಲಿ ಕರ್ನಾಟಕ ಮುನ್ನಡೆದಿದೆ. ಇಂದು ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ” ಎಂದು ಹೇಳಿದರು.





Comments
Leave a Comment