ಓಟ್ ಬ್ಯಾಂಕ್ ಸುಭದ್ರ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್: ವಿಜಯೇಂದ್ರ
ಓಟ್ ಬ್ಯಾಂಕ್ ಸುಭದ್ರ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್: ವಿಜಯೇಂದ್ರ
ಬೆಂಗಳೂರು: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದಾಗಿನಿಂದ ತುಷ್ಟೀಕರಣದ ಎಲ್ಲ ಮಿತಿಗಳನ್ನು ದಾಟಿ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಅಲ್ಪಸಂಖ್ಯಾತರನ್ನು ಓಲೈಸಲು ಯಾವ ಮಟ್ಟಕ್ಕಾದರೂ ಈ ಸರ್ಕಾರ ಇಳಿಯಲಿದೆ. ಅಳಂದ ಗಲಭೆ ಪ್ರಕರಣವನ್ನು ಕೈ ಬಿಡಲು ಸಚಿವ ಸಂಪಟು ತೀರ್ಮಾನ ಕೈಗೊಂಡಿದೆ. ದೇಶದ್ರೋಹಿಗಳ ವಿರುದ್ಧ, ಕಾನೂನು ಹಾಳು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸರ್ಕಾರ ಹಾಗೂ ಕಾಂಗ್ರೆಸ್ ತಮ್ಮ ಓಟ್ ಬ್ಯಾಂಕ್ ಸುಭದ್ರ ಮಾಡಿಕೊಳ್ಳುತ್ತಿದೆ ಎಂದು ದೂರಿದರು.
ಹಿಂದೂಗಳಿಗೆ ಪದೇ ಪದೇ ಅಪಮಾನ ಮಾಡುತ್ತಿರುವ ಕಾಂಗ್ರೆಸ್ ನೀತಿಯನ್ನು ರಾಜ್ಯದ ಜನ ಗಮನಿಸಿದ್ದಾರೆ. ವಿರೋಧ ಪಕ್ಷವಾಗಿ ನಾವೂ ಹೋರಾಟ ಮಾಡುತ್ತೇವೆ. ಹಿಂದೂ ವಿರೋಧ ನೀತಿ ಅನುಸರಿಸುತ್ತಿರುವುದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದರು.
ರಿಯಲ್ ಎಸ್ಟೇಟ್ ದಂಧೆ...
ಆನೇಕಲ್ ಸಮೀಪ ರೈತರ ಫಲವತ್ತಾದ ಜಮೀನನ್ನು ಪಡೆದು ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುತ್ತಿರುವ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಅವರು, ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಅಸಡ್ಡೆ ಇದೆ. ಅವರ ಸಮಸ್ಯೆ ತಿಳಿದಿಲ್ಲ. ಬದಲಿಗೆ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದೆ ಎಂದರು. ರಾಜ್ಯದಲ್ಲಿ ನೆರೆ ಬಂದಾಗ ಸರ್ಕಾರ ರೈತರ ಪರವಾಗಿ ನಿಲ್ಲಲಿಲ್ಲ. ಬರಗಾಲ ಇದ್ದಾಗಲೂ ಸಹಾಯ ಮಾಡಲಿಲ್ಲ. ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರು ತಮ್ಮ ಜನರ ನೋವು ಆಲಿಸಲಿಲ್ಲ ಎಂದು ಟೀಕಿಸಿದರು.
ಬೆಂಗಳೂರು ವಿಮಾನನಿಲ್ದಾಣದ ಸಮೀಪ ಸಾವಿರಾರು ಎಕರೆ ಜಾಗ ಇದೆ. ಅಲ್ಲೇ ಸ್ಟೇಡಿಯಂ ನಿರ್ಮಿಸಬಹುದಿತ್ತು. ಅದು ಬಿಟ್ಟು ಆನೇಕಲ್ ನಲ್ಲಿ ಫಲವತ್ತಾದ ಜಮೀನು ಪಡೆದು ರೈತರಿಗೆ ಪದೇ ಪದೇ ತೊಂದರೆ ಕೊಡುತ್ತಿದ್ದಾರೆ. ಅನ್ನದಾತರ ಹಿತಾಸಕ್ತಿ ಕಡೆಗಣಿಸಲು ಅವಕಾಶ ನೀಡುವುದಿಲ್ಲ. ರೈತರ ಪರವಾಗಿ ಬಿಜೆಪಿ ನಿಲ್ಲಲಿದೆ ಎಂದು ಹೇಳಿದರು.
ದೇವೇಗೌಡರಿಗೆ ಬಿಜೆಪಿ ವಿರೋಧಿಸಿಲ್ಲ...
ರಾಜ್ಯಸಭೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಚರ್ಚೆ ಆಗಿದೆ. ಒಬ್ಬರಿಗೆ ಅವಕಾಶ ಇದೆ. ದೇವೇಗೌಡರನ್ನು ರಾಜ್ಯಸಭೆಗೆ ಕಳಿಸಲು ಬಿಜೆಪಿ ವಿರೋಧಿಸಿಲ್ಲ. ದೇವೇಗೌಡರಿಗೆ ಅವಕಾಶ ನೀಡುವ ನಿರ್ಧಾರ ರಾಷ್ಟ್ರೀಯ ನಾಯಕರದ್ದು. ಈ ಸಂಬಂಧ ಯಾವುದೇ ಸೂಚನೆ ಸಿಕ್ಕಿಲ್ಲ ಎಂದರು.
ಸಿದ್ದರಾಮಯ್ಯ ಅವರೇ ತೆರಿಗೆ ಕಡಿಮೆ ಮಾಡಲಿ...
ಕೇಂದ್ರದಿಂದ ಮೂರನೇ ಬಾರಿಗೆ ತೈಲ ಬೆಲೆ ಏರಿಕೆ ಆಗಿದೆ. ಜಾಗತಿಕ ಬೆಳವಣಿಗೆಯಿಂದ ಅನಿವಾರ್ಯವಾಗಿ ಕೇಂದ್ರ ಸರ್ಕಾರ ತೈಲ ಬೆಲೆ ಏರಿಸಿದೆ. ಸರ್ಕಾರಕ್ಕೆ ಇಷ್ಟ ಇಲ್ಲದೇ ಇದ್ದರೂ ಕಠಿಣ ನಿರ್ಧಾರ ಕೈಗೊಂಡಿದೆ. ಸಿದ್ದರಾಮಯ್ಯ ಅವರು ಈ ಹಿಂದೆ ತೈಲ ಬೆಲೆ ಹತ್ತು ರೂಪಾಯಿ ಕಡಿಮೆ ಮಾಡುತ್ತೇನೆ ಎಂದು ಹೇಳಿದ್ದರು. ಈಗ ಅವರು ರಾಜ್ಯದ ಜನರ ಒಳಿತಿಗಾಗಿ ತೈಲದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲಿ ಎಂದರು. ಜಾಗತಿಕ ಸ್ಥಿತಿಗತಿಯನ್ನು ಸಿದ್ದರಾಮಯ್ಯ ಅವರು ಅರ್ಥ ಮಾಡಿಕೊಂಡು ತೈಲದ ಮೇಲಿನ ಹೆಚ್ಚುವರಿ ತೆರಿಗೆಯನ್ನು ಇಳಿಸಲಿ ಎಂದು ಆಗ್ರಹಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಗೆ ಬುದ್ಧಿ ಹೇಳುವುದು ಬಿಟ್ಟು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ತೆರಿಗೆಯನ್ನು ಕಡಿಮೆ ಮಾಡಿ ದೇಶಕ್ಕೆ ಮಾದರಿಯಾಗುವ ಕೆಲಸ ಮಾಡಿಸಲಿ. ಈ ವಿಷಯದಲ್ಲಿ ಅವರು ಸಿಎಂಗೆ ಬುದ್ಧಿ ಹೇಳಲಿ ಎಂದರು
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಜೀ ಅವರು, ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿತಿನ್ ನಬಿನ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದರು.
ನಾಳೆ (ಮೇ 24) ಮುಂಜಾನೆ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮನೆಯಲ್ಲಿ ಉಪಾಹಾರ ಸೇವಿಸಲಿದ್ದಾರೆ ಎಂದು ವಿವರಿಸಿದರು. ನಂತರ ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವ ಅವರು, ಹತ್ತು ಗಂಟೆಗೆ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ ಆಗಮಿಸಲಿದ್ದಾರೆ. ಎರಡು ಗಂಟೆಗಳ ಕಾಲ ರಾಜ್ಯದ ಬಿಜೆಪಿ ಸಂಸದರು, ಶಾಸಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ರಾಜ್ಯದ ರಾಜಕೀಯ ಸ್ಥಿತಿಗತಿಯ ಅವಲೋಕನ ಮಾಡಲಿದ್ದಾರೆ ಎಂದು ಹೇಳಿದರು.
ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿ ನಂತರ ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ನಡೆಯಲಿರುವ ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಪ್ರಶಿಕ್ಷಣದಲ್ಲಿ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯ. ನಮ್ಮ ಕಾರ್ಯಕರ್ತರಿಗೆ ರಾಷ್ಟ್ರೀಯ ಅಧ್ಯಕ್ಷರು ಸ್ಫೂರ್ತಿ ತುಂಬಲಿದ್ದಾರೆ ಎಂದು ತಿಳಿಸಿದರು.






Comments
Leave a Comment