₹5,000 ಕೋಟಿ ಹಗರಣ: ಸರ್ಕಾರ ವಿರುದ್ಧ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ
"ನಾನು ಕನ್ನಡಿಗ ಅನ್ನೋದೆ ನನ್ನ ಸ್ಟೇಟಸ್" - ಡಿ.ಕೆ. ಶಿವಕುಮಾರ್‌ಗೆ ನಿಖಿಲ್ ಕುಮಾರಸ್ವಾಮಿ ಕೌಂಟರ್
"ಡಿಕೆಶಿ ಕಾಕ್ರೋಚ್ ಪಾರ್ಟಿಗೆ ಅಧ್ಯಕ್ಷರಾಗಿ 50 ಸೀಟು ಗೆದ್ದು ತೋರಿಸಲಿ" - ನಿಖಿಲ್ ಕಿಡಿ
ಬೆಂಗಳೂರು: ನಾನು ಕನ್ನಡ ನಾಡಿನ ಹುಡುಗ, ಇಲ್ಲಿ ನಾನು ತೆರಿಗೆ ಕಟ್ತಾ ಇದ್ದೇನೆ. ನಾಡಿನ ಜನರ ಪರವಾಗಿ ಸಾಮಾನ್ಯ ಪ್ರಜೆಯಾಗಿ ಪ್ರಶ್ನೆ ಮಾಡ್ತಿದ್ದೇನೆ. ಇದು ನನ್ನ ಸ್ಟೇಟಸ್ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಜೆ.ಪಿ. ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟೇಟಸ್ ಬಗ್ಗೆ ಟೀಕೆ ಮಾಡಿದ ಡಿಕೆಶಿಗೆ ನಾನು ಕಾಮನ್ ಮ್ಯಾನ್ ಆಗಿ ಬರ್ತೇನೆ. ನನಗೆ ಯಾವ ಸ್ಟೇಟಸ್ ಕೂಡ ಬೇಡ ಎಂದು ಟಾಂಗ್ ಕೊಟ್ಟರು.
"ಕಾಕ್ರೋಚ್ ಪಾರ್ಟಿಗೆ ಅಧ್ಯಕ್ಷರಾಗಿ"
ಸೋಶಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಅಂತ ಸೆನ್ಸೇಷನ್ ಶುರುವಾಗಿದೆ. ಉಪಮುಖ್ಯಮಂತ್ರಿಗಳು ಅಲ್ಲಿಗೆ ಹೋಗಿ ಅಧ್ಯಕ್ಷರಾಗಲಿ" ಎಂದು ನಿಖಿಲ್ ವ್ಯಂಗ್ಯವಾಡಿದರು. ನಿನ್ನೆ ಪ್ರತಿಭಟನೆಯಲ್ಲಿ ಸಿಎಂ ಹಾಗೂ ಡಿಸಿಎಂ ಐ ಆಮ್ ಕಾಕ್ರೋಚ್ ಟೀ-ಶರ್ಟ್ ಬಿಡುಗಡೆ ಮಾಡಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದವರಾಗಿ ಕಾಕ್ರೋಚ್ ಪಾರ್ಟಿ ಟೀ-ಶರ್ಟ್ ಬಿಡುಗಡೆ ಮಾಡಿದ್ದಾರೆ" ಎಂದು ಕಿಡಿಕಾರಿದರು.
"50% ಸ್ಥಳೀಯರಿಗೆ ಉದ್ಯೋಗ ಕಾನೂನು ತನ್ನಿ"
ಬಿಡದಿ ಕೈಗಾರಿಕಾ ಮಹಾ ಯೋಜನೆ ಭೂಸ್ವಾಧೀನವನ್ನು ತೀವ್ರವಾಗಿ ಖಂಡಿಸಿದ ನಿಖಿಲ್, ಈ ಯೋಜನೆ ಹೆಚ್.ಡಿ. ಕುಮಾರಸ್ವಾಮಿ ಅವರ ಕನಸಿನ ಕೂಸಾಗಿದ್ದರೂ, 'ಕೃಷ್ಣಾ' ಕಚೇರಿಯಲ್ಲಿ ರೈತರೊಂದಿಗೆ ಸಭೆ ನಡೆಸಿದ ಬಳಿಕ ಅವರ ಮನವಿಗೆ ಸ್ಪಂದಿಸಿ ಯೋಜನೆಯನ್ನು ಕೈಬಿಡಲಾಗಿತ್ತು ಎಂದು ನೆನಪಿಸಿದರು.
"ಆದರೆ ಈಗಿನ ಸರ್ಕಾರ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. 'ಅಲ್ಲಿ ರೈತರೇ ಇಲ್ಲ' ಎಂದು ಡಿಸಿಎಂ ಹಠ ಹಿಡಿದಿದ್ದಾರೆ. ಕೃಷಿ ಜಮೀನನ್ನೇ ಏಕೆ ರೈತರಿಂದ ಬಲವಂತವಾಗಿ ಕಿತ್ತುಕೊಳ್ಳುತ್ತಿದ್ದೀರಿ? ಡಿಸಿಎಂ ಮೊದಲು ಹಳ್ಳಿಗಳಿಗೆ ಬಂದು ರೈತರ ಕ್ಷಮೆ ಕೇಳಲಿ" ಎಂದರು.
"ಅಷ್ಟೊಂದು ಮಾತಾಡುವ ಡಿಸಿಎಂ, ಈ ಯೋಜನೆಯಲ್ಲಿ ಸ್ಥಳೀಯರಿಗೆ ಕಡ್ಡಾಯವಾಗಿ ಶೇ. 50ರಷ್ಟು ಉದ್ಯೋಗ ನೀಡಲೇಬೇಕು ಎಂಬ ಕಾನೂನನ್ನು ತರಲಿ ನೋಡೋಣ, ಆಗ ನಾನು ಒಪ್ಪುತ್ತೇನೆ. ಕುಮಾರಸ್ವಾಮಿ ಅವರಿಗೆ ಚಾಲೆಂಜ್ ಮಾಡುವುದನ್ನು ಬಿಟ್ಟು ರೈತರ ಪ್ರಶ್ನೆಗಳಿಗೆ ಉತ್ತರಿಸಲಿ. ನಾನು ಯಾವುದೇ ಸ್ಟೇಟಸ್ ಇಲ್ಲದೆ ಕಾಮನ್ ಮ್ಯಾನ್ ಆಗಿ ಹಳ್ಳಿಗಳಿಗೆ ಬರಲು ಸಿದ್ಧ" ಎಂದು ಸವಾಲು ಹಾಕಿದರು.
-
₹5,000 ಕೋಟಿ ಹಗರಣ: ಸರ್ಕಾರ ವಿರುದ್ಧ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ
ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಗೃಹಲಕ್ಷ್ಮಿ’ ಹೆಸರಿನಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಜೆ.ಪಿ. ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿ ನೇರ ಸವಾಲುಗಳನ್ನು ಎಸೆದರು.
ಗೃಹಲಕ್ಷ್ಮಿ ಬಾಕಿ ಕಂತು ಏನಾಯ್ತು?
ಈ ವೇಳೆ ಗೃಹಲಕ್ಷ್ಮಿ ಬಾಕಿ ಕಂತಿನ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, "2024-25ನೇ ಸಾಲಿನಲ್ಲಿ ಹತ್ತು ತಿಂಗಳ ಕಂತು ಕೊಟ್ಟಿದ್ದಾರೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಬಂದಿಲ್ಲ. ಸುಮಾರು ₹5,000 ಕೋಟಿ ಹಣ. ಬಜೆಟ್‌ನಲ್ಲಿ ಪ್ರಾವಿಜನ್ ತೋರಿಸಿದ್ದಾರೆ. ಆದರೆ ಹಣ ಕೊಟ್ಟಿಲ್ಲ. ಈ ಹಣ ಯಾವಾಗ ಕೊಡ್ತೀವಿ ಅಂತಾದರೂ ಹೇಳಬೇಕು. ಇಲ್ಲ ಬೇರೆಯದಕ್ಕೆ ಬಳಸಿಕೊಂಡಿದ್ದಾರಾ ಅನ್ನೋ ಲೆಕ್ಕನಾದರೂ ತೋರಿಸಿ" ಎಂದು ಪ್ರಶ್ನಿಸಿದರು.
"ಮಿಸ್ ಆಗಿರುವ ಎರಡು ತಿಂಗಳ ಹಣದ ಬಗ್ಗೆ ಸಚಿವರು ಉತ್ತರ ಕೊಡಲೇ ಇಲ್ಲ. ನಾಡಿನ ಹೆಣ್ಣುಮಕ್ಕಳು, ತೆರಿಗೆದಾರರು ಕ್ಷಮಿಸುವ ವಿಚಾರ ಅಲ್ಲ. ನಿಮ್ಮಲ್ಲಿ ಸ್ಪಷ್ಟತೆ ಇದ್ದರೆ, ಇಷ್ಟರಲ್ಲಿ ಉತ್ತರ ಕೊಡಬೇಕಿತ್ತು. 'ಆರ್ಥಿಕ ಇಲಾಖೆಯಿಂದ ಸಕಾಲದಲ್ಲಿ ಹಣ ಬಿಡುಗಡೆ ಆಗದ ಕಾರಣ ಫಲಾನುಭವಿಗಳಿಗೆ ಸಕಾಲದಲ್ಲಿ ಹಣ ಬಿಡುಗಡೆ ಆಗಿಲ್ಲ' ಎಂದು ಸದನದಲ್ಲಿ ಹೇಳ್ತಾರೆ" ಎಂದು ಕಿಡಿಕಾರಿದರು.
ಅಂಕಿ-ಅಂಶಗಳ ಲೆಕ್ಕಾಚಾರ:
2024-25ರ ಆರ್ಥಿಕ ವರ್ಷ: ಒಟ್ಟು 1,28,80,594 ಗೃಹಲಕ್ಷ್ಮಿ ಫಲಾನುಭವಿಗಳು.
ಬಜೆಟ್‌ನಲ್ಲಿ ನಿಗದಿ: ವರ್ಷಕ್ಕೆ ₹28,608.40 ಕೋಟಿ* ವೆಚ್ಚವಾಗಬೇಕಿತ್ತು.
ಸರ್ಕಾರ ಜಮೆ ಮಾಡಿದ್ದು: ಕೇವಲ 10 ತಿಂಗಳಿಗೆ ಮಾತ್ರ ಅಂದರೆ *₹23,608.40 ಕೋಟಿ ರೂ.
ಕಾಣೆಯಾದ ಮೊತ್ತ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ 2 ಕಂತುಗಳ ಒಟ್ಟು ₹5,000 ಕೋಟಿ ರೂ. ಹಣವನ್ನು ಮಹಿಳೆಯರ ಖಾತೆಗೆ ಹಾಕಿಲ್ಲ. ಆರ್ಥಿಕ ಇಲಾಖೆ ಈ ಹಣ ಬಿಡುಗಡೆ ಮಾಡದಿರುವುದನ್ನು ಸಚಿವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ.
*ಚುನಾವಣೆಗೆ ಬಳಕೆ ಆಯಿತೇ?
ಈ ₹5,000 ಕೋಟಿ ರೂ. ಹಣ ಎಲ್ಲಿ ಹೋಯಿತು? ಇದನ್ನು ಚುನಾವಣೆಗೆ ಬಳಕೆ ಮಾಡಿದ್ದೀರಾ ಅಥವಾ ಬೇರೆ ಯಾವುದಕ್ಕೆ ವರ್ಗಾಯಿಸಿದ್ದೀರಾ? ಇದಕ್ಕೆ ಮುಖ್ಯಮಂತ್ರಿಗಳೇ ನೇರ ಹೊಣೆ, ಅವರು ಉತ್ತರ ನೀಡಬೇಕು ಎಂದು ನಿಖಿಲ್ ಒತ್ತಾಯಿಸಿದರು.
ಯೋಜನೆ ಆರಂಭವಾದಾಗಿನಿಂದ ಒಟ್ಟು 21 ಕಂತುಗಳನ್ನು ನೀಡಬೇಕಿತ್ತು. ಆದರೆ 2023-24ರಲ್ಲಿ 8 ಕಂತು, 2024-25ರಲ್ಲಿ 10 ಕಂತು ಮಾತ್ರ ನೀಡಲಾಗಿದೆ. ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸುಳ್ಳು ಹೇಳಿ ಎರಡು ಕಂತಿನ ಹಣವನ್ನು ಮುಚ್ಚಿಟ್ಟಿದ್ದಾರೆ. ಶಾಸಕ ಮಹೇಶ್ ತೆಂಗಿನಕಾಯಿ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 2025ರ ಡಿಸೆಂಬರ್ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ 5 ತಿಂಗಳಾದರೂ ಉತ್ತರವಿಲ್ಲ. ಇದು ಸಿಎಂ ಕಚೇರಿಯಲ್ಲಿ ಮುಚ್ಚಿಡುವ ದಾಖಲೆಯಲ್ಲ, ಜನರ ಮುಂದೆ ಇಡಬೇಕಾದ ವಿಚಾರ" ಎಂದರು.
ಈಗಾಗಲೇ ಈ ಕುರಿತು ಮಹಿಳೆಯರು ಹೈಕೋರ್ಟ್‌ನಲ್ಲಿ PIL Writ Petition No. 15928/2026 ಸಲ್ಲಿಸಿದ್ದು, ನ್ಯಾಯಾಲಯ ಸರ್ಕಾರಕ್ಕೆ ಚಾಟಿ ಬೀಸಲಿದೆ. ಇದರ ವಿರುದ್ಧ ಜೆಡಿಎಸ್ ದೊಡ್ಡ ಮಟ್ಟದ ಹೋರಾಟ ರೂಪಿಸಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕೋರ್ ಕಮಿಟಿ ಅಧ್ಯಕ್ಷರಾದ ಜೆ.ಕೆ. ಕೃಷ್ಣಾರೆಡ್ಡಿ, ವಿಧಾನಪರಿಷತ್ ಸದಸ್ಯರಾದ ಜವರಾಯಿಗೌಡ, ಟಿ.ಎನ್. ಶರವಣ್, ಮಾಜಿ ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಚೌಡರೆಡ್ಡಿ, ಹೆಚ್.ಎಂ. ರಮೇಶ್ ಕುಮಾರ್, ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ರಶ್ಮಿ ರಾಮೇಗೌಡ, ವಕ್ತಾರರಾದ ದೇವರಾಜು, ಗಂಗಾಧರ್ ಮೂರ್ತಿ, ಪ್ರದೀಪ್ ಉಪಸ್ಥಿತರಿದ್ದರು.






Comments
Leave a Comment