ರಾಹುಲ್ ಗಾಂಧಿ ಕ್ಷಮೆ ಯಾಚಿಸಲು ವಿಜಯೇಂದ್ರ ಆಗ್ರಹ
ಬೆಂಗಳೂರು: ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಇದನ್ನು ರಾಹುಲ್ ಗಾಂಧಿ ಅವರಿಗೆ ಸಹಿಸಲು ಆಗುತ್ತಿಲ್ಲ. ಅವರು ದೇಶದ ಜನರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎಚ್ಚರಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಜೀ ಅವರ ಕುರಿತು ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆ ಖಂಡಿಸಿದ ವಿಜಯೇಂದ್ರ ಅವರು, ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದವರು ಈ ರೀತಿ ಬಾಲಿಷವಾಗಿ ಹೇಳಿಕೆ ನೀಡಬಾರದು ಎಂದರು.
ಎಲುಬಿಲ್ಲದ ನಾಲಿಗೆ ಏನೂ ಬೇಕಾದರೂ ನುಡಿಯಬಾರದು. ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ಬಗ್ಗೆ ಅವಮಾನಕರವಾಗಿ ಮಾತನಾಡಬಾರದು. ಹಿಂದುಳಿದ ಸಮಾಜಕ್ಕೆ ಸೇರಿದ ಮೋದಿ ಅವರು ಪ್ರಧಾನಿಯಾಗಿ ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾರೆ. ದೇಶವನ್ನು ನಾಲ್ಕನೇ ಆರ್ಥಿಕ ಶಕ್ತಿಯಾಗಿ ಮಾಡಿದ್ದಾರೆ. ದೇಶದ ಅಭಿವೃದ್ಧಿ ಸಹಿಸದೆ ರಾಹುಲ್ ಗಾಂಧಿ ಅವರು ಈ ರೀತಿ ಮಾತನಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ಕಿತ್ತು ಹಾಕುವ ಧೈರ್ಯ ಕಾಂಗ್ರೆಸ್‍ಗೆ ಇರಲಿಲ್ಲ. ಅದನ್ನು ಕಿತ್ತು ಹಾಕಿದ್ದು ಅಮಿತ್ ಶಾ ಅವರು. ಇದಕ್ಕೆ ರಾಹುಲ್ ಗಾಂಧಿ ಅವರು ಅಮಿತ್ ಶಾ ಅವರನ್ನು ದೇಶದ್ರೋಹಿ ಎಂದು ಕರೆಯುತ್ತಾರೆಯೇ? ದೇಶದಲ್ಲಿ ನಕ್ಸಲರನ್ನು ಬುಡಸಮೇತ ನಾಶ ಮಾಡುವಲ್ಲಿ ಅಮಿತ್ ಶಾ ಅವರು ಕೆಲಸ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಭ್ರμÁ್ಟಚಾರರಹಿತ ಆಡಳಿತ ನೀಡಿದ್ದಾರೆ. ಅದನ್ನು ರಾಹುಲ್ ಗಾಂಧಿಗೆ ಸಹಿಸಲು ಆಗುತ್ತಿಲ್ಲ ಎಂದರು.
ರಾಜ್ಯದಲ್ಲೂ ನಾಲಾಯಕ್ ಕಾಂಗ್ರೆಸ್ ನಾಯಕರು...
ರಾಜ್ಯದಲ್ಲೂ ನಾಲಾಯಕ್ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದಾರೆ. ರಾಜ್ಯದ ಸಚಿವರೇ ವಿದೇಶಾಂಗ ಸಚಿವರಂತೆ, ರಕ್ಷಣಾ ಪರಿಣತರ ರೀತಿ ಹುಚ್ಚು ಹುಚ್ಚಾಗಿ ಮಾತನಾಡುತ್ತಾರೆ. ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಪೌತಿ ಖಾತೆ ಮಾಡಿದ್ದೇ ಸಾಧನೆ ಎಂಬಂತೆ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.
23 ಕ್ಕೆ ನಿತಿನ್ ನಬೀನ್‍ಜೀ ರಾಜ್ಯಕ್ಕೆ ಆಗಮನ...
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬೀನ್ ಜೀ ಅವರು ಇದೇ 23 ಕ್ಕೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ರಾಜ್ಯಕ್ಕೆ ಅವರ ಮೊದಲ ಭೇಟಿ ಇದಾಗಿದೆ. 24 ರಂದು ಬೆಂಗಳೂರು ಉತ್ತರ ಜಿಲ್ಲೆ ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಲಿದ್ದಾರೆ. ಈ ದಿನ ಬಿಜೆಪಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರೊಂದಿಗೆ ಸಭೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರಧಾನಿ ಮೋದಿಜೀ ಸುದೀರ್ಘ ದಾಖಲೆ
ನರೇಂದ್ರ ಮೋದಿ ಜೀ ಅವರು ಪ್ರಧಾನಿಯಾಗಿ 12 ವರ್ಷ ಪೂರೈಸುತ್ತಿದ್ದಾರೆ. ಪ್ರಧಾನಿಗಳಾಗಿ ಇದು ದಾಖಲೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಲವು ಚಟುವಟಿಕೆ, ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ವಿಶ್ವ ಪರಿಸರ ದಿನ, ಯೋಗದಿನ ಆಚರಿಸಲಾಗುವುದು. ಎಲ್ಲಾ ವಿಚಾರಗಳ ಬಗ್ಗೆ ಪ್ರಮುಖರ ಜೊತೆ ಸಮಾಲೋಚನೆ ನಡೆಸುತ್ತೇವೆ. ರಾಜ್ಯದ ರಾಜಕೀಯ ಸ್ಥಿತಿಗತಿ ಚರ್ಚೆ ನಡೆಸಲಾಗುವುದು ಎಂದರು. ಬಿಡದಿ ಟೌನ್ ಶಿಪ್‍ಗೆ ಭೂಮಿ ಕಳೆದುಕೊಂಡು ರೈತರು ಬೀದಿ ಪಾಲಾಗಲು ಬಿಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಧ್ಯ ಕರ್ನಾಟಕದಲ್ಲಿ ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ..
ಕಾಡುಗೊಲ್ಲ ಅಭಿವೃದ್ಧಿ ನಿಗಮದ ಮಾಜಿ ರಾಜ್ಯ ಅಧ್ಯಕ್ಷರಾದ ರಾಜಣ್ಣ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾಗಿರುವುದರಿಂದ ಮಧ್ಯ ಕರ್ನಾಟಕದಲ್ಲಿ ಬಿಜೆಪಿಗೆ ಮತ್ತಷ್ಟು ಬಲ ಬಂದಿದೆ ಎಂದು ಹೇಳಿದರು.
ರಾಜಣ್ಣ ಅವರು ಬಿಜೆಪಿ ಬಂದಿರುವುದರಿಂದ ತುಮಕೂರು ಮತ್ತು ಇತರ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ನಮಗೆ ಇನ್ನಷ್ಟು ಬಲ ಬಂದಿದೆ ಎಂದರು.






Comments
Leave a Comment