ಘೋಷಣೆಗಳ ಸರ್ಕಾರಕ್ಕೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಸವಾಲು
ಶಿವಮೊಗ್ಗ
ರಾಜ್ಯದಲ್ಲಿ ಆರ್ಥಿಕ ಸಂಕಷ್ಟವಿದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರ, ಒಂದೆಡೆ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಹಣಕಾಸಿನ ಅಡಚಣೆಗಳನ್ನು ಮುಂದಿಡುತ್ತಿದ್ದು, ಮತ್ತೊಂದೆಡೆ ಕಾಂಗ್ರೆಸ್ ಕಾರ್ಯಕರ್ತರಿಗೆ ಅನುಕೂಲ ಕಲ್ಪಿಸುವ ಸಮಿತಿಗಳ ರಚನೆ, ಬೋರ್ಡ್ಗಳು ಮತ್ತು ಕಾರ್ಪೊರೇಷನ್ಗಳ ನೇಮಕಾತಿಗೆ ನೂರಾರು ಕೋಟಿ ರೂಪಾಯಿ ವ್ಯಯಿಸುತ್ತಿದೆ. ಇದು ಜನಸೇವೆಯಲ್ಲ, ತೆರಿಗೆದಾರರ ಹಣವನ್ನು ಪೋಲು ಮಾಡುವ ರಾಜಕೀಯ ವ್ಯವಸ್ಥೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಮೂರೂವರೆ ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ. ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಲ್ಲಿಯೂ ಸರ್ಕಾರ ವಿಫಲವಾಗಿದೆ. ಆದರೆ ಜಾಹೀರಾತುಗಳ ಮೂಲಕ ಸರ್ಕಾರ ಸಾಧನೆ ಮಾಡುತ್ತಿದೆ ಎಂದು ಬಿಂಬಿಸಿಕೊಳ್ಳುವ ಮುಖ್ಯಮಂತ್ರಿ, ವಾಸ್ತವದಲ್ಲಿ ಆಡಳಿತ ವೈಫಲ್ಯವನ್ನು ಮುಚ್ಚಿಹಾಕುವ ಕಪಟ ನಾಟಕ ಮುಂದುವರಿಸಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ ತೆರೆಯುವ ಕೆಲಸ
ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಗಳ ಅಧ್ಯಕ್ಷರನ್ನು ನೇಮಿಸಿ, ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡುವ ಮೂಲಕ ತೆರಿಗೆದಾರರ ಹಣವನ್ನು ಪೋಲು ಮಾಡಲಾಗುತ್ತಿದೆ. ಇದರ ಜೊತೆಗೆ ಭಾರತ್ ಜೋಡೋ ಅನುಷ್ಠಾನ ಸಮಿತಿಯನ್ನು ರಚಿಸಿ, ಅದಕ್ಕಾಗಿ ₹35 ಕೋಟಿ ಮೀಸಲಿಡುವ ನಿರ್ಧಾರ ಕೈಗೊಂಡಿರುವುದು ಸರ್ಕಾರದ ಆದ್ಯತೆಗಳನ್ನು ಸ್ಪಷ್ಟಪಡಿಸುತ್ತದೆ.
ರಾಜ್ಯದಲ್ಲಿ ಭೀಕರ ಬರಗಾಲ ಮತ್ತು ಆರ್ಥಿಕ ಸಂಕಷ್ಟವಿರುವ ಸಂದರ್ಭದಲ್ಲಿ ಇಂತಹ ಸಮಿತಿಗಳ ರಚನೆಯ ಅಗತ್ಯವೇನು? ಇದು ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರ ತೆರೆಯುವ ಪ್ರಯತ್ನವಲ್ಲದೆ ಮತ್ತೇನು? ಮುಖ್ಯಮಂತ್ರಿಗಳ ಕುರ್ಚಿಯನ್ನು ಉಳಿಸಿಕೊಳ್ಳಲು ಶಾಸಕರಿಗೆ ಬೋರ್ಡ್ ಮತ್ತು ಕಾರ್ಪೊರೇಷನ್ಗಳಲ್ಲಿ ಸ್ಥಾನಮಾನ ನೀಡಿ, ಕ್ಯಾಬಿನೆಟ್ ದರ್ಜೆ ಒದಗಿಸುವ ಮೂಲಕ ರಾಜ್ಯದ ಜನರ ಹಣವನ್ನು ಪೋಲು ಮಾಡಲಾಗುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.
ಆಶಾ ಕಾರ್ಯಕರ್ತೆಯರ ನೋವಿಗೆ ಸ್ಪಂದಿಸದ ಸರ್ಕಾರ
ರಾಜ್ಯದ ಆಶಾ ಕಾರ್ಯಕರ್ತೆಯರು ತಮ್ಮ ಮನೆಮಠಗಳನ್ನು ಬಿಟ್ಟು ಜನರ ಆರೋಗ್ಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ಏಳನೇ ದಿನಕ್ಕೆ ಕಾಲಿಟ್ಟಿದೆ. ಅವರ ಸಂಕಷ್ಟ ಸರ್ಕಾರಕ್ಕೆ ತಿಳಿದಿದ್ದರೂ ಗೌರವಧನ ಹೆಚ್ಚಿಸುವ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ.
ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಿದ ಮುಖ್ಯಮಂತ್ರಿ, ರಾಜ್ಯದ ಹಣಕಾಸಿನ ಪರಿಸ್ಥಿತಿ ಸರಿಯಿಲ್ಲ ಎಂದು ಹೇಳಿ ಅವರಿಗೆ ಪಾಠ ಹೇಳಿ ಕಳುಹಿಸಿದ್ದಾರೆ. ಆದರೆ ಹಿರಿಯೂರಿನಲ್ಲಿ ಆಶಾ ಕಾರ್ಯಕರ್ತೆಯರಿಗೆ ನಾನು ನಿಮ್ಮ ಸಹೋದರ ಎಂದು ಹೇಳುವ ಮುಖ್ಯಮಂತ್ರಿಗಳು, ನಿಜವಾಗಿಯೂ ಸಹೋದರನಾಗಿದ್ದರೆ ಅವರ ಸಂಕಷ್ಟಕ್ಕೆ ಸ್ಪಂದಿಸಬೇಕಿತ್ತು.
ಆಶಾ ಕಾರ್ಯಕರ್ತೆಯರಿಗೆ ವರ್ಷಕ್ಕೆ ₹350 ಕೋಟಿ ಗೌರವಧನ ಹೆಚ್ಚಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲವೇ? ಜನಸೇವೆಯಲ್ಲಿ ತೊಡಗಿರುವ ಕಾರ್ಯಕರ್ತೆಯರಿಗೆ ಹಣ ನೀಡುವುದು ಸರ್ಕಾರಕ್ಕೆ ಹೊರೆಯಾಗಿದೆಯೇ? ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಥಾನಮಾನ, ಸಮಿತಿಗಳಿಗೆ ಹಣ ನೀಡಲು ಸರ್ಕಾರದ ಬಳಿ ಸಂಪನ್ಮೂಲವಿದೆ; ಆದರೆ ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳಿಗೆ ಮಾತ್ರ ಹಣಕಾಸಿನ ನೆಪ ಹೇಳಲಾಗುತ್ತಿದೆ ಎಂದು ಕಿಡಿಕಾರಿದರು.
ಘೋಷಣೆಗಳ ಮೂಲಕ ಜನರನ್ನು ವಂಚಿಸುತ್ತಿರುವ ಕಾಂಗ್ರೆಸ್ ಸರ್ಕಾರ
ದಕ್ಷಿಣ ಕನ್ನಡಕ್ಕೆ ತೆರಳಿ ₹32 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡುವುದು, ಬೆಂಗಳೂರು ಜಿಬಿಎ ಚುನಾವಣೆ ಹಿನ್ನೆಲೆಯಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಫ್ಲೈಓವರ್ ಮತ್ತು ಅಭಿವೃದ್ಧಿ ಯೋಜನೆಗಳ ಘೋಷಣೆ ಮಾಡುವುದು, ರಾಜ್ಯದ ರಸ್ತೆ ಅಭಿವೃದ್ಧಿಗೆ ₹16 ಸಾವಿರ ಕೋಟಿ ನೀಡುವುದಾಗಿ ಹೇಳುವುದು ಇವೆಲ್ಲವೂ ಜನರನ್ನು ಮರುಳು ಮಾಡುವ ರಾಜಕೀಯ ಘೋಷಣೆಗಳಾಗಿವೆ.
ಆಶಾ ಕಾರ್ಯಕರ್ತೆಯರಿಗೆ ₹350 ಕೋಟಿ ನೀಡಲು ಹಣವಿಲ್ಲ ಎಂದು ಹೇಳುವ ಸರ್ಕಾರ, ರಸ್ತೆ ಅಭಿವೃದ್ಧಿಗೆ ₹16 ಸಾವಿರ ಕೋಟಿ ಎಲ್ಲಿಂದ ತರುತ್ತದೆ? ಘೋಷಣೆಗಳ ಮೇಲೆ ಘೋಷಣೆ ಮಾಡುವುದರಿಂದ ಅಭಿವೃದ್ಧಿಯಾಗುವುದಿಲ್ಲ. ಜನರ ಬದುಕಿನೊಂದಿಗೆ ಚೆಲ್ಲಾಟವಾಡುವ ಮತ್ತು ಗ್ಯಾರಂಟಿಗಳ ಹೆಸರಿನಲ್ಲಿ ಜನರಿಗೆ ವಂಚನೆ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ವಿಜಯೇಂದ್ರ ಟೀಕಿಸಿದರು.
ಮುಖ್ಯಮಂತ್ರಿಗಳ ನಿವಾಸದ ಅಲಂಕಾರಕ್ಕೆ ₹100 ಕೋಟಿ ವೆಚ್ಚವೇ?
ಬರಗಾಲ ಮತ್ತು ಆರ್ಥಿಕ ಸಂಕಷ್ಟದ ನಡುವೆ ಮುಖ್ಯಮಂತ್ರಿಗಳ ನಿವಾಸದ ಶೃಂಗಾರ ಮತ್ತು ಅಲಂಕಾರಕ್ಕೆ ₹100 ಕೋಟಿ ವೆಚ್ಚ ಮಾಡಿರುವುದಾಗಿ ಆರೋಪಿಸಿದ ವಿಜಯೇಂದ್ರ, ಇದು ಮುಖ್ಯಮಂತ್ರಿಗಳ ಪ್ರಾಮಾಣಿಕತೆ ಮತ್ತು ಜನಸೇವೆಯ ಬದ್ಧತೆಯನ್ನು ಪ್ರಶ್ನಿಸುವ ವಿಚಾರವಾಗಿದೆ ಎಂದರು.
ನಿಜವಾಗಿಯೂ ಪ್ರಜಾಸೇವಕ ಎಂಬ ಮನೋಭಾವ ಇದ್ದಿದ್ದರೆ, ಮುಖ್ಯಮಂತ್ರಿಗಳು ತಮ್ಮ ನಿವಾಸದ ಅಲಂಕಾರಕ್ಕೆ ಇಷ್ಟು ದೊಡ್ಡ ಮೊತ್ತ ವ್ಯಯಿಸುತ್ತಿರಲಿಲ್ಲ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸದೆ, ರಾಜಕೀಯ ನೇಮಕಾತಿಗಳಿಗೆ ಹಣ ವ್ಯಯಿಸುವುದು ಸರ್ಕಾರದ ಆದ್ಯತೆಗಳ ದಿಕ್ಕು ತಪ್ಪಿರುವುದನ್ನು ತೋರಿಸುತ್ತದೆ ಎಂದು ಹೇಳಿದರು.
ಹಿರಿಯೂರಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ
ಹಿರಿಯೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಬಾಗಿಲಿಗೆ ಬಂದರೆ ಬಹಿಷ್ಕರಿಸಿ ಎಂದು ಮುಖ್ಯಮಂತ್ರಿ ಹೇಳಿರುವುದು ಅವರ ಉದ್ಧಟತನದ ಮನೋಭಾವವನ್ನು ತೋರಿಸುತ್ತದೆ. ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಮತದಾರರು ನೀಡಿರುವ ತೀರ್ಪು ಸರ್ಕಾರದ ವಿರುದ್ಧದ ಜನಾಭಿಪ್ರಾಯಕ್ಕೆ ಸಾಕ್ಷಿಯಾಗಿದೆ.
135 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಿದ್ದಾರೆ. ಹಿರಿಯೂರಿನ ಉಪಚುನಾವಣೆಯಲ್ಲಿಯೂ ಎನ್ಡಿಎ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಮ್ಮೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ವಿಜಯೇಂದ್ರ ಹೇಳಿದರು.
ಕಾಡುಗೊಲ್ಲ ಸಮುದಾಯದ ಬಗ್ಗೆ ಚುನಾವಣೆಗಾಗಿ ಮೊಸಳೆ ಕಣ್ಣೀರು
ಹಿರಿಯೂರಿನ ಉಪಚುನಾವಣೆ ಎದುರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಾಡುಗೊಲ್ಲ ಸಮುದಾಯದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಕಳೆದ ಮೂರೂವರೆ ವರ್ಷಗಳಲ್ಲಿ ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸರ್ಕಾರ ಯಾವ ಪ್ರಯತ್ನ ಮಾಡಿದೆ? ಚುನಾವಣೆ ಬಂದಾಗ ಮಾತ್ರ ಸಮುದಾಯ ನೆನಪಾಗುವುದು ರಾಜಕೀಯ ಲಾಭದ ಉದ್ದೇಶವಲ್ಲದೆ ಮತ್ತೇನು?
ಹಿರಿಯೂರಿಗೆ ನೀರು ಹರಿಸುವ ಯೋಜನೆಗಳ ವಿಚಾರದಲ್ಲಿ ಬಿಜೆಪಿ ಸರ್ಕಾರ, ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಕೈಗೊಂಡ ಕ್ರಮಗಳು ಮತ್ತು ಅನುದಾನದಿಂದ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕಾಂಗ್ರೆಸ್ ಸರ್ಕಾರ ಕಳೆದ ಮೂರೂವರೆ ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗೆ ಎಷ್ಟು ಅನುದಾನ ನೀಡಿದೆ ಎಂಬುದನ್ನು ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಲು ಸಿದ್ಧವಿದ್ದೇವೆ.
ಕಾಡುಗೊಲ್ಲರು ಸೇರಿದಂತೆ ಹಿಂದುಳಿದ, ಶೋಷಿತ ಸಮುದಾಯಗಳ ಬಗ್ಗೆ ಬಿಜೆಪಿಗೆ ಬದ್ಧತೆ ಇದೆ. ಜನರು ಪದೇಪದೇ ಮೋಸ ಹೋಗುವುದಿಲ್ಲ. ಹಿರಿಯೂರಿನ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಸವಣ್ಣನವರ ಕುರಿತು ಅವಹೇಳನಕಾರಿ ಬರಹಕ್ಕೆ ಕ್ರಮ ಕೈಗೊಳ್ಳಲಿ
ಅಮೆರಿಕದಿಂದ ಬಂದಿರುವ ರವಿ ಹಂಚ್ ಅವರು ಅಣ್ಣ ಬಸವಣ್ಣನವರ ಕುರಿತು ಪುಸ್ತಕದಲ್ಲಿ ಆಕ್ಷೇಪಾರ್ಹವಾಗಿ ಬರೆದಿರುವ ವಿಚಾರ ನಾಡಿನ ಜನರಲ್ಲಿ ಆಕ್ರೋಶ ಮೂಡಿಸಿದೆ. ವೀರಶೈವ-ಲಿಂಗಾಯತ ಸಮುದಾಯ ಮಾತ್ರವಲ್ಲದೆ, ನಾಡಿನ ಜನರ ಭಾವನೆಗಳಿಗೂ ಧಕ್ಕೆ ಉಂಟಾಗಿದೆ.
ಗೃಹ ಸಚಿವರು ಕೇವಲ ಬಂಧಿಸಿ ಬಿಡುಗಡೆ ಮಾಡುವ ಕ್ರಮಕ್ಕೆ ಸೀಮಿತವಾಗದೆ, ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಬಸವಣ್ಣನವರು ಸೇರಿದಂತೆ ನಾಡಿನ ದಾರ್ಶನಿಕರ ಬಗ್ಗೆ ಜನರ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ಬರೆಯುವವರಿಗೆ ತಕ್ಕ ಶಿಕ್ಷೆಯಾಗಬೇಕು. ಇಂತಹ ಕೃತ್ಯಗಳಿಗೆ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ವಿಜಯೇಂದ್ರ ಆಗ್ರಹಿಸಿದರು.
ಬೆಲೆ ಏರಿಕೆ ವಿರುದ್ಧ ಚಳಿಗಾಲದ ಅಧಿವೇಶನದಲ್ಲಿ ಹೋರಾಟ
ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು, ಬಡವರು ಮತ್ತು ಮಧ್ಯಮ ವರ್ಗದವರು ತತ್ತರಿಸಿದ್ದಾರೆ. ಗ್ಯಾರಂಟಿಗಳ ಹೆಸರಿನಲ್ಲಿ ಜನರ ಮೇಲೆ ಬೆಲೆ ಏರಿಕೆಯ ಹೊರೆ ಹಾಕುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸಭೆ ಮತ್ತು ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ.
ಬೆಲೆ ಏರಿಕೆಯ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ. ವಿಧಾನಸಭಾ ಚುನಾವಣೆಯವರೆಗೂ ಜನಪರ ಹೋರಾಟಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ಹೇಳಿದರು.
ಹಿರಿಯೂರಿನಲ್ಲಿ ಬಿಜೆಪಿ-ಜೆಡಿಎಸ್ ಒಮ್ಮತದ ಅಭ್ಯರ್ಥಿ
ಹಿರಿಯೂರಿನ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಲಾಗಿದೆ. ಎರಡೂ ಪಕ್ಷಗಳು ಎನ್ಡಿಎ ಅಭ್ಯರ್ಥಿಯನ್ನು ಗೆಲ್ಲಿಸುವ ಉದ್ದೇಶದಿಂದ ಕಾರ್ಯತಂತ್ರ ರೂಪಿಸಲಿವೆ.
ಅಭ್ಯರ್ಥಿ ಮತ್ತು ಚುನಾವಣಾ ಕಾರ್ಯತಂತ್ರದ ಕುರಿತು ಅಂತಿಮ ನಿರ್ಧಾರ ರಾಷ್ಟ್ರಮಟ್ಟದಲ್ಲಿ ಚರ್ಚೆಯ ನಂತರ ಕೈಗೊಳ್ಳಲಾಗುವುದು ಎಂದು ವಿಜಯೇಂದ್ರ ತಿಳಿಸಿದರು.
ಶಿಕ್ಷಣ ಸಚಿವರ ಹೇಳಿಕೆ ಖಂಡನೀಯ; ಕ್ಷಮೆಯಾಚಿಸಲಿ
ಶಿಕ್ಷಣ ಸಚಿವರು ನೀಡಿರುವ ಉದ್ಧಟತನದ ಹೇಳಿಕೆ ರಾಜ್ಯದಾದ್ಯಂತ ಖಂಡನೆಗೆ ಒಳಗಾಗಿದೆ. ಶಿಕ್ಷಣ ಸಚಿವರಾಗಿ ಇಂತಹ ಅವಿವೇಕದ ಮಾತುಗಳನ್ನು ಆಡಿರುವುದು ಯಾರಿಗೂ ಒಪ್ಪುವಂತಹದ್ದಲ್ಲ.
ಶಿಕ್ಷಣ ಸಚಿವರಿಗೆ ಗೌರವ ಮತ್ತು ಜವಾಬ್ದಾರಿಯ ಅರಿವಿದ್ದರೆ, ಕೂಡಲೇ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
ರಾಜ್ಯದ ಜನರ ಸಮಸ್ಯೆಗಳನ್ನು ಬದಿಗಿಟ್ಟು ರಾಜಕೀಯ ನೇಮಕಾತಿ, ಪ್ರಚಾರ ಮತ್ತು ಘೋಷಣೆಗಳಲ್ಲಿ ತೊಡಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.







Comments
Leave a Comment