- ರಾಜ್ಯದಲ್ಲಿ ₹1,516 ಕೋಟಿ ಹೂಡಿಕೆ, 5,611 ಉದ್ಯೋಗ ಸೃಷ್ಟಿ
- ಕೇಂದ್ರದ ಪರಿಷ್ಕೃತ ಪ್ರೋತ್ಸಾಹಕ ಯೋಜನೆಯ ಲಾಭ ಪಡೆಯಲು ಜವಳಿ ಉದ್ಯಮಗಳಿಗೆ ವಿಶೇಷ ನೆರವು ಅಭಿಯಾನ
ಬೆಂಗಳೂರು, ಅಕ್ಟೋಬರ್ 29: ಕೇಂದ್ರ ಸರ್ಕಾರದ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (PLI) ಯೋಜನೆಯಡಿ ಜವಳಿ ಕ್ಷೇತ್ರದಲ್ಲಿ ಹೂಡಿಕೆ ಆಕರ್ಷಣೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ. ಈ ಸಾಧನೆಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರದ ಪರಿಷ್ಕೃತ ಪಿಎಲ್ಐ ಯೋಜನೆಯ ಪ್ರಯೋಜನವನ್ನು ರಾಜ್ಯದ ಅರ್ಹ ಜವಳಿ ಉದ್ಯಮಗಳಿಗೆ ತಲುಪಿಸಲು ವಿಶೇಷ ನೆರವು ಅಭಿಯಾನ ಆರಂಭಿಸಲಾಗುವುದು ಎಂದು ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.
ಕೇಂದ್ರ ಜವಳಿ ಸಚಿವಾಲಯವು ಲೋಕಸಭೆಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ, 2026ರ ಮಾರ್ಚ್ 31ರವರೆಗೆ ಪಿಎಲ್ಐ ಯೋಜನೆಯಡಿ ಕರ್ನಾಟಕದ ಆರು ಕಂಪನಿಗಳ ಮೂಲಕ ₹1,515.99 ಕೋಟಿ ಹೂಡಿಕೆಯಾಗಿದ್ದು, 5,611 ಉದ್ಯೋಗಗಳು ಸೃಷ್ಟಿಯಾಗಿವೆ. ಈ ಎರಡೂ ವಿಭಾಗಗಳಲ್ಲಿ ಕರ್ನಾಟಕ ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದೆ.
ಜವಳಿ ಉದ್ಯಮಗಳಿಗೆ ಪಿಎಲ್ಐ ಯೋಜನೆಯ ಅರ್ಹತಾ ನಿಯಮಗಳನ್ನು ಸಡಿಲಗೊಳಿಸಿ, ಯೋಜನೆಯ ಅವಧಿಯನ್ನು ವಿಸ್ತರಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಸಚಿವ ರುದ್ರಪ್ಪ ಲಮಾಣಿ, ಇದರಿಂದ ರಾಜ್ಯದ ಜವಳಿ ಮತ್ತು ಸಿದ್ಧ ಉಡುಪು ತಯಾರಿಕಾ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದರು.
"ಜವಳಿ ಕ್ಷೇತ್ರದ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿರುವುದು ರಾಜ್ಯದ ಕೈಗಾರಿಕಾ ಸಾಮರ್ಥ್ಯ ಹಾಗೂ ಹೂಡಿಕೆದಾರರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರದ ಪರಿಷ್ಕೃತ ಪಿಎಲ್ಐ ಯೋಜನೆಯಿಂದ ಮಧ್ಯಮ ಗಾತ್ರದ ಕೈಗಾರಿಕೆಗಳು ಸೇರಿದಂತೆ ಅರ್ಹ ಉದ್ಯಮಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ. ಈ ಅವಕಾಶಗಳನ್ನು ರಾಜ್ಯದ ಜವಳಿ ಉದ್ಯಮಗಳು ಸಮರ್ಥವಾಗಿ ಬಳಸಿಕೊಳ್ಳಲು ಸರ್ಕಾರ ವಿಶೇಷ ನೆರವು ಅಭಿಯಾನವನ್ನು ಆರಂಭಿಸಲಿದೆ," ಎಂದು ಸಚಿವ ರುದ್ರಪ್ಪ ಲಮಾಣಿ ತಿಳಿಸಿದರು.
ಕೇಂದ್ರದ ಪಿಎಲ್ಐ ಯೋಜನೆಯಲ್ಲಿ ಮಹತ್ವದ ಬದಲಾವಣೆ
ಕೇಂದ್ರ ಜವಳಿ ಸಚಿವಾಲಯವು ಪಿಎಲ್ಐ ಯೋಜನೆಯ ಎರಡನೇ ವಿಭಾಗದಲ್ಲಿ ಕನಿಷ್ಠ ವಹಿವಾಟಿನ ಮಿತಿಯನ್ನು ₹200 ಕೋಟಿಯಿಂದ ₹100 ಕೋಟಿಗೆ ಇಳಿಸಿದೆ. ನಾಲ್ಕನೇ ಸುತ್ತಿನಲ್ಲಿ ಅನುಮೋದನೆ ಪಡೆಯುವ ಕಂಪನಿಗಳಿಗೆ ಯೋಜನೆಯ ಅವಧಿಯನ್ನು 2033–34ನೇ ಹಣಕಾಸು ವರ್ಷದವರೆಗೆ ವಿಸ್ತರಿಸಲಾಗಿದೆ.
ಮಾನವ ನಿರ್ಮಿತ ನಾರಿನ ಸಿದ್ಧ ಉಡುಪುಗಳು (MMF Apparel), ಬಟ್ಟೆಗಳು (MMF Fabrics) ಹಾಗೂ ತಾಂತ್ರಿಕ ಜವಳಿ ಉತ್ಪನ್ನಗಳ ತಯಾರಿಕೆಗೆ ಸಂಬಂಧಿಸಿದ ಅರ್ಹ ಉದ್ಯಮಗಳು ನವೆಂಬರ್ 1ರಿಂದ ಡಿಸೆಂಬರ್ 31ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ರಾಜ್ಯದ ಜವಳಿ ಉದ್ಯಮಗಳಿಗೆ ಪರಿಷ್ಕೃತ ಮಾರ್ಗಸೂಚಿಗಳ ಕುರಿತು ಅರಿವು ಮೂಡಿಸುವುದು, ಅರ್ಹ ಕೈಗಾರಿಕೆಗಳನ್ನು ಗುರುತಿಸುವುದು ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಲು ಕೈಮಗ್ಗ ಮತ್ತು ಜವಳಿ ಇಲಾಖೆಯ ಮೂಲಕ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಈ ಉಪಕ್ರಮವು ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ *ಕರ್ನಾಟಕ ಜವಳಿ ಮತ್ತು ಸಿದ್ಧ ಉಡುಪು ನೀತಿ 2026–31*ಕ್ಕೆ ಪೂರಕವಾಗಿರಲಿದೆ. ₹4,000 ಕೋಟಿ ಅನುದಾನ ಒದಗಿಸುವ ಈ ನೀತಿಯ ಮೂಲಕ ಐದು ವರ್ಷಗಳಲ್ಲಿ ₹20,000 ಕೋಟಿ ಹೂಡಿಕೆ ಆಕರ್ಷಿಸಿ, ಐದು ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ.
ಈ ಕುರಿತು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಐಎಎಸ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪ್ರಯೋಜನಗಳನ್ನು ಉದ್ಯಮಿಗಳಿಗೆ ತಲುಪಿಸುವ ಮೂಲಕ ಜವಳಿ ಕ್ಷೇತ್ರದ ಬೆಳವಣಿಗೆಗೆ ಆದ್ಯತೆ ನೀಡಲಾಗುವುದು ಎಂದರು.
"ಜವಳಿ ಪಿಎಲ್ಐ ಯೋಜನೆಯಡಿ ಕರ್ನಾಟಕ ಈಗಾಗಲೇ ಉತ್ತಮ ಸಾಧನೆ ಮಾಡಿದೆ. ಕೇಂದ್ರ ಸರ್ಕಾರದ ಪರಿಷ್ಕೃತ ಅರ್ಹತಾ ನಿಯಮಗಳಿಂದ ಹೆಚ್ಚಿನ ಉದ್ಯಮಗಳಿಗೆ ಯೋಜನೆಯ ಪ್ರಯೋಜನ ಪಡೆಯುವ ಅವಕಾಶ ದೊರೆಯಲಿದೆ. ಕೈಗಾರಿಕಾ ಸಂಘಟನೆಗಳು ಮತ್ತು ಉದ್ಯಮಿಗಳೊಂದಿಗೆ ಸಮನ್ವಯ ಸಾಧಿಸಿ, ಅರ್ಜಿ ಸಲ್ಲಿಕೆಗೆ ಮಾರ್ಗದರ್ಶನ ನೀಡುವುದು ಹಾಗೂ ಎದುರಾಗುವ ಪ್ರಕ್ರಿಯಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ನೆರವಾಗಲಾಗುವುದು. ಕೇಂದ್ರದ ಪ್ರೋತ್ಸಾಹಕ ಯೋಜನೆ ಮತ್ತು ರಾಜ್ಯದ ನೂತನ ಜವಳಿ ನೀತಿಯ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೂಡಿಕೆ ಆಕರ್ಷಣೆ, ಉತ್ಪಾದನಾ ಸಾಮರ್ಥ್ಯ ವಿಸ್ತರಣೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು," ಎಂದು ರೋಹಿಣಿ ಸಿಂಧೂರಿ ತಿಳಿಸಿದರು.
ವಿಶೇಷ ಅಭಿಯಾನದಡಿ ಉದ್ಯಮಿಗಳೊಂದಿಗೆ ಸಂವಾದ, ಜಾಗೃತಿ ಕಾರ್ಯಕ್ರಮಗಳು ಹಾಗೂ ಅರ್ಜಿ ಸಲ್ಲಿಕೆಗೆ ಮಾರ್ಗದರ್ಶನ ನೀಡುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ಭಾಗಗಳಲ್ಲೂ ಜವಳಿ ಕೈಗಾರಿಕೆಗಳ ವಿಸ್ತರಣೆಗೆ ಆದ್ಯತೆ ನೀಡಲಾಗುವುದು.
ಅರ್ಹ ಜವಳಿ ಉದ್ಯಮಿಗಳು ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ https://pli.texmin.gov.in ಮೂಲಕ ಡಿಸೆಂಬರ್ 31ರೊಳಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಬಳಸಿಕೊಳ್ಳುವಂತೆ ಕೋರಲಾಗಿದೆ.






Comments
Leave a Comment