ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ: ವಿದ್ಯಾರ್ಥಿಗಳಿಗೆ ಜಾಗೃತಿ ಮತ್ತು ಮಾರ್ಗದರ್ಶನ
“ಒತ್ತಡಮುಕ್ತ ಮನಸ್ಸು ಆರೋಗ್ಯವಂತ ಸಮಾಜದ ಬುನಾದಿ” – ಗಂಡಸಿ ಸದಾನಂದ ಸ್ವಾಮಿ
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ: ವಿದ್ಯಾರ್ಥಿಗಳಿಗೆ ಜಾಗೃತಿ ಮತ್ತು ಮಾರ್ಗದರ್ಶನ
“ಒತ್ತಡಮುಕ್ತ ಮನಸ್ಸು ಆರೋಗ್ಯವಂತ ಸಮಾಜದ ಬುನಾದಿ” – ಗಂಡಸಿ ಸದಾನಂದ ಸ್ವಾಮಿ
ಬೆಂಗಳೂರು: ಮಾನಸಿಕ ಆರೋಗ್ಯದ ಮಹತ್ವ, ಒತ್ತಡ ನಿರ್ವಹಣೆ ಹಾಗೂ ಅಂಗಾಂಗ ದಾನದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಹನುಮಂತನಗರದಲ್ಲಿರುವ ಶ್ರೀ ಬಾಲಾಜಿ ಪದವಿ ಕಾಲೇಜಿನಲ್ಲಿ ಜಾಗೃತಿ ಮತ್ತು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಯುವಜನ ಮಹಿಳಾ ಮತ್ತು ಮಕ್ಕಳ ಸ್ಪಂದನ ಸೇವಾ ಟ್ರಸ್ಟ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA), ಬೆಂಗಳೂರು ನಗರ ಹಾಗೂ ಡೆಮಾಕ್ರಸಿ ವಾರಿಯರ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಹಾಗೂ ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ನಿಮ್ಹಾನ್ಸ್ನ ಮೋಹನ್ ಫೌಂಡೇಶನ್ನ ಯೋಜನಾ ವ್ಯವಸ್ಥಾಪಕಿ ಹಾಗೂ ಮೈಕ್ರೋಬಯಾಲಜಿಸ್ಟ್ ಡಾ. ರಂಜಿನಿ ಶಂಕರ್ ಎಂ.ಎಸ್. ಅವರು ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಮತ್ತು ಅಂಗಾಂಗ ದಾನದ ಮಹತ್ವದ ಕುರಿತು ಮಾಹಿತಿ ನೀಡಿದರು.
ಆಧುನಿಕ ಜೀವನಶೈಲಿಯಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡವನ್ನು ಸಮರ್ಥವಾಗಿ ಎದುರಿಸುವುದು ಅತ್ಯಗತ್ಯ. ಮಾನಸಿಕ ಆರೋಗ್ಯದ ಕುರಿತು ಮುಕ್ತವಾಗಿ ಮಾತನಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರನ್ನು ತಾತ್ಸಾರದಿಂದ ಕಾಣದೆ, ಅವರಿಗೆ ಸಹಾನುಭೂತಿ, ಕಾಳಜಿ ಮತ್ತು ಬೆಂಬಲ ನೀಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮೆದುಳಿನ ಸಾವು ಮತ್ತು ಅಂಗಾಂಗ ದಾನದ ಮಹತ್ವವನ್ನು ವಿವರಿಸಿದ ಅವರು, ರಸ್ತೆ ಅಪಘಾತಗಳು ಹಾಗೂ ತೀವ್ರ ಮಿದುಳಿನ ರಕ್ತಸ್ರಾವದಂತಹ ಸಂದರ್ಭಗಳಲ್ಲಿ ಮೆದುಳಿನ ಸಾವು ಸಂಭವಿಸಬಹುದು ಎಂದು ತಿಳಿಸಿದರು. ಮೆದುಳಿನ ಸಾವು ಎಂದರೇನು, ಅದನ್ನು ವೈದ್ಯಕೀಯವಾಗಿ ಹೇಗೆ ದೃಢೀಕರಿಸಲಾಗುತ್ತದೆ ಮತ್ತು ಅಂಗಾಂಗ ದಾನದ ಮೂಲಕ ಇತರರ ಜೀವ ಉಳಿಸಲು ಹೇಗೆ ಸಾಧ್ಯ ಎಂಬುದರ ಕುರಿತು ಸಾರ್ವಜನಿಕರಲ್ಲಿ ವೈಜ್ಞಾನಿಕ ಅರಿವು ಮೂಡಿಸುವುದು ಅಗತ್ಯ ಎಂದರು. ಅಂಗಾಂಗ ದಾನವು ಮತ್ತೊಬ್ಬರಿಗೆ ಹೊಸ ಬದುಕಿನ ಅವಕಾಶ ಕಲ್ಪಿಸುವ ಮಹತ್ಕಾರ್ಯವಾಗಿದೆ ಎಂದು ಹೇಳಿದರು.
ಸೀ ಸ್ಕೌಟ್ಸ್ ಮತ್ತು ಗೈಡ್ಸ್, ಬಿ ಪ್ಯಾಕ್ ಸಿವಿಕ್ ಅಡ್ವೊಕಸಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (DLSA) ಪ್ಯಾರಾ-ಲೀಗಲ್ ಸ್ವಯಂಸೇವಕಿ ದೀಪಿಕಾ ಎಂ. ಅವರು ಮಾತನಾಡಿ, ಆಧುನಿಕ ಜೀವನದ ಒತ್ತಡಗಳ ನಡುವೆ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಅಗತ್ಯವನ್ನು ವಿವರಿಸಿದರು.
ಮಾನಸಿಕ ಅಸ್ವಸ್ಥತೆಗಳ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳು ಮತ್ತು ಕಳಂಕವನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಪರಸ್ಪರ ಸಹಾನುಭೂತಿ, ಕಾಳಜಿ ಮತ್ತು ಬೆಂಬಲದ ಮೂಲಕ ಒತ್ತಡಮುಕ್ತ ವಾತಾವರಣ ನಿರ್ಮಿಸಿ ಆರೋಗ್ಯವಂತ ಸಮಾಜ ಕಟ್ಟಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಉಮೇಶ್ ದಕ್ಷಿಣಮೂರ್ತಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದೇಶ್ ಚಂದ್ರ ಪೆಂಡಾರನಹಳ್ಳಿ, ಸುನಿಲ್ ಕುಮಾರ್ ಎಚ್.ಜೆ., ವೀಣಾಕುಮಾರಿ ಜಿ.ಎಸ್., ಅರ್ಪಿತಾ ಎ.ಆರ್. ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯದ ಮಹತ್ವ, ಸಾಮಾಜಿಕ ಹೊಣೆಗಾರಿಕೆ ಹಾಗೂ ಅಂಗಾಂಗ ದಾನದ ಕುರಿತು ಅರಿವು ಮೂಡಿಸುವ ಮೂಲಕ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.









Comments
Leave a Comment