||ಬಿಡದಿ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತೆ, ಸಂಪೂರ್ಣ ಯೋಜನೆಗೆ ಸ್ಟೇ ಸಿಗುತ್ತೆ - ನಿಖಿಲ್ ಭರವಸೆ||
ರಾಮನಗರ, ಭೈರಮಂಗಲ
ಕುಮಾರಣ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ 26 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದರು. ಆಗ ಕೇಂದ್ರದ ಕಡೆ ಕೈ ತೋರಿಸಿ ಸುಮ್ಮನೆ ಕುಳಿತಿರಲಿಲ್ಲ. ಈಗಿನ ಮುಖ್ಯಮಂತ್ರಿಗಳು 60:40, 35:65, 50:50 ಎಂದು ಅನುಪಾತ ಮಾತನಾಡುತ್ತಿದ್ದಾರೆ. ಇವರು ನಾಡಿನ ಮುಖ್ಯಮಂತ್ರಿಯೇ ಅಥವಾ ಒಬ್ಬ ರಿಯಲ್ ಎಸ್ಟೇಟ್ ಕಂಪನಿಯ ಸಿಇಒನೇ? ಎಂದು ಪ್ರಶ್ನಿಸಿ, ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಚಾಟಿ ಬೀಸಿದರು.
ಬಿಡದಿ ಭೂಸ್ವಾಧೀನ ವಿರೋಧಿಸಿ ಭೈರಮಂಗಲ ಗ್ರಾಮದಲ್ಲಿ ನಡೆಯುತ್ತಿರುವ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ನೀಡಿ, ರೈತರ ಅಳಲು ಆಲಿಸಿ ಮಾತನಾಡಿದರು.
ರೈತರಿಗೆ ಕೇವಲ 2500 ರೂ. ಪರಿಹಾರ ನೀಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಬಿತ್ತನೆ ಬೀಜ, ರಸಗೊಬ್ಬರದ ಬೆಲೆ ಸರ್ಕಾರಕ್ಕೆ ಗೊತ್ತಿದೆಯೇ? ಪರಿಹಾರ ಕೊಡಲು ಕೇಂದ್ರದ ಕಡೆ ಭಿಕ್ಷೆ ಬೇಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಈ ಸರ್ಕಾರಕ್ಕೆ ಕಣ್ಣು ಕಾಣುತ್ತಿಲ್ಲ, ಕಿವಿಯೂ ಕೇಳುತ್ತಿಲ್ಲ":
ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡಿದರೂ ರೈತರ ಸಮಸ್ಯೆಯನ್ನು ಆಲಿಸಿಲ್ಲ. ಈ ಸರ್ಕಾರಕ್ಕೆ ಕಣ್ಣು ಕಾಣುತ್ತಿಲ್ಲ, ಕಿವಿಯೂ ಕೇಳುತ್ತಿಲ್ಲ. ರೈತರು ದೇವೇಗೌಡರು ಬರುವವರೆಗೂ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುತ್ತೇವೆ ಎಂದು ಹೇಳುತ್ತಿದ್ದಾರೆ. ಭಾನುವಾರ ದೇವೇಗೌಡರನ್ನು ಕರೆಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಕಾನೂನು ಹೋರಾಟಕ್ಕೆ ಅಡ್ಡಿ:
"ಯೋಜನೆ ವಿರುದ್ಧ ಕಾನೂನಾತ್ಮಕ ಹೋರಾಟ ಕೂಡ ನಡೆಯುತ್ತಿದೆ. ಸೆ. 29ರಂದು ಈ ಬಗ್ಗೆ ವಿಚಾರಣೆ ಇದೆ. ಆದರೆ ಸರ್ಕಾರ ಆಕ್ಷೇಪಣೆ ಸಲ್ಲಿಸದೆ ವಿಳಂಬ ಮಾಡುತ್ತಿದೆ. ಕೋರ್ಟ್‌ನಲ್ಲಿ ವಾದ ಆರಂಭವಾದರೆ ಸರ್ಕಾರಕ್ಕೆ ಹಿನ್ನಡೆಯಾಗುತ್ತದೆ ಎಂದು ವಿಳಂಬ ಮಾಡುತ್ತಿದೆ. ಸರ್ಕಾರ ಸಮಿತಿ ರಚನೆ ಮಾಡಿ ಒಂದು ತಿಂಗಳಾಗಿದೆ, ಇನ್ನೂ ಸ್ಥಳಕ್ಕೆ ಬಂದು ರೈತರ ಅಭಿಪ್ರಾಯ ಸಂಗ್ರಹಿಸಿಲ್ಲ. ಆ ಸಮಿತಿಯ ವರದಿ ಏನು ಬರಬಹುದು ಎಂದು ಎಲ್ಲರಿಗೂ ಗೊತ್ತು. ಸಮಿತಿ ರಚನೆ ಮಾಡಿ ಸರ್ಕಾರ ನಾಟಕವಾಡುತ್ತಿದೆ" ಎಂದರು.
ಅಧಿವೇಶನದಲ್ಲಿ ಬಿಡದಿ ಚರ್ಚೆಗೆ ಅವಕಾಶ ಇಲ್ಲ:
"ಅಧಿವೇಶನದಲ್ಲಿ ಬಿಡದಿ ಕುರಿತು ಪ್ರಸ್ತಾಪ ಮಾಡಲು ಅವಕಾಶ ನೀಡಲಿಲ್ಲ. ಒಬ್ಬ ಭ್ರಷ್ಟನನ್ನು ರಕ್ಷಣೆ ಮಾಡಲು ಕಾಂಗ್ರೆಸ್ ಇಡೀ ಸದನವನ್ನು ಹಾಳು ಮಾಡಿತು. ಅದೇ ವಿಚಾರಕ್ಕಾಗಿ ಸಂಪೂರ್ಣ ಸದನ ಹಾಳಾಯಿತು. ಬೇರೆ ವಿಷಯ ಪ್ರಸ್ತಾಪ ಮಾಡುವುದಕ್ಕೆ ಸರ್ಕಾರ ಅವಕಾಶ ಕೊಡಲಿಲ್ಲ. ಚರ್ಚೆ ಮಾಡುವುದಕ್ಕೆ ನಮ್ಮ ಶಾಸಕರು ಸಿದ್ಧರಾಗಿದ್ದರು, ಆದರೆ ಅವಕಾಶ ಸಿಗಲಿಲ್ಲ" ಎಂದು ಆರೋಪಿಸಿದರು.
ಸರ್ಕಾರಕ್ಕೆ ಹೃದಯವೇ ಇಲ್ಲ:
"ರಾಜ್ಯ ಸರ್ಕಾರಕ್ಕೆ ಹೃದಯವೇ ಇಲ್ಲ, ರೈತರ ಕಣ್ಣೀರು ಕಾಣುತ್ತಿಲ್ಲ. ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಮೂರುವರೆ ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಬ್ಬ ರೈತನ ಪರಿಸ್ಥಿತಿಯನ್ನು ಆಲಿಸಲು ಸರ್ಕಾರ ಮುಂದಾಗಿಲ್ಲ. ಹಿಂದೆ ಕುಮಾರಣ್ಣನವರು ರೈತರ ಕಷ್ಟ ನೋಡಿ ಸಾಲಮನ್ನಾ ಮಾಡಿದರು. ಆಗ ಇದು ರಾಹುಲ್ ಗಾಂಧಿ ಅವರ ಕನಸು ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಈಗ 136 ಸ್ಥಾನಗಳನ್ನು ಗೆದ್ದಿದ್ದೀರಲ್ಲ, ಕಡಿದು ಕಟ್ಟೆ ಹಾಕುತ್ತೀರಾ? ಈಗ ರೈತರ ಸಾಲಮನ್ನಾ ಮಾಡುವುದಿಲ್ಲವೇ? ಈಗ ರಾಹುಲ್ ಗಾಂಧಿ ಹೇಳುತ್ತಿಲ್ಲವೇ?" ಎಂದು ಪ್ರಶ್ನಿಸಿದರು.
ಎಷ್ಟು ಜನಕ್ಕೆ ಪರಿಹಾರ ನೀಡಿದ್ದೀರಿ ಎಂದು ಶ್ವೇತಪತ್ರ ಹೊರಡಿಸಿ
"ನ್ಯಾಯಾಲಯಕ್ಕೆ ಹೆದರಿ ಜಿಲ್ಲಾಧಿಕಾರಿಗಳು ನಿನ್ನೆ ಬಂದು ಹೋಗಿದ್ದಾರೆ. ಈ ಕಾನೂನು ಹೋರಾಟದಲ್ಲಿ ನಿಮಗೆ ಜಯ ಸಿಕ್ಕೇ ಸಿಗುತ್ತದೆ. ಸಂಪೂರ್ಣ ಯೋಜನೆಗೆ ತಡೆಯಾಜ್ಞೆ ಸಿಗುವ ಸಾಧ್ಯತೆ ಇದೆ. ಜಿಬಿಡಿಎ ಬಳಿ ಹಣವೇ ಇಲ್ಲ, ಹುಡ್ಕೋದಿಂದ ಸಾಲಕ್ಕೆ ಅರ್ಜಿ ಹಾಕಿದ್ದಾರೆ. ಇಲ್ಲಿಯವರೆಗೂ ಎಷ್ಟು ಜನಕ್ಕೆ ಪರಿಹಾರ ನೀಡಿದ್ದೀರಿ ಎಂದು ಶ್ವೇತಪತ್ರ ಹೊರಡಿಸಿ. ಈ ಯೋಜನೆಯ ಪಿತಾಮಹ ಕಾಂಗ್ರೆಸ್‌ನವರು. ಈಗ ಕುಮಾರಸ್ವಾಮಿ ಅವರ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ."
"ಈ ಬಿಡದಿ ಯೋಜನೆ ಬಗ್ಗೆ ದೇವೇಗೌಡರು ಎಲ್ಲ ಮಾಹಿತಿ ಪಡೆಯುತ್ತಿದ್ದಾರೆ. ಯೋಜನೆಗೆ ತಡೆಯಾಜ್ಞೆ ಸಿಗುತ್ತಿಲ್ಲ, ನಾನೇ ಹೋರಾಟಕ್ಕೆ ಬರಬೇಕೇ ಎಂದು ಕೇಳುತ್ತಿದ್ದಾರೆ. ದಯಮಾಡಿ ಯಾರೂ ಉಪವಾಸ ಮಾಡಿ ಆರೋಗ್ಯ ಕೆಡಿಸಿಕೊಳ್ಳಬೇಡಿ. ಈಗಾಗಲೇ ನಾಲ್ಕು ಜನ ಅಸ್ವಸ್ಥರಾಗಿದ್ದಾರೆ. ದಯಮಾಡಿ ಉಪವಾಸ ಸತ್ಯಾಗ್ರಹವನ್ನು ಕೈಬಿಡಿ" ಎಂದು ಮನವಿ ಮಾಡಿದರು.
ದೇವೇಗೌಡರಿಗೆ ಕರೆ:
ಈ ವೇಳೆ ರೈತರು ದೇವೇಗೌಡರನ್ನು ಭೈರಮಂಗಲ ಗ್ರಾಮಕ್ಕೆ ಕರೆಸುವಂತೆ ಒತ್ತಾಯಿಸಿ, "ಬರಲೇ ಬೇಕು, ಬರಲೇ ಬೇಕು, ದೇವೇಗೌಡರು ಬರಲೇಬೇಕು" ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ ಅವರು "ದೇವೇಗೌಡರು ಬರುತ್ತಾರೆ" ಎಂದು ಭರವಸೆ ನೀಡಿದರು.








Comments
Leave a Comment