ಸ್ಕಾಲರ್‌ಶಿಪ್ ಮಾಸ್ಟರ್ ನಾರಾಯಣ್ ನಾಯಕ್‌ಗೆ 12ನೇ ಮೂಲತ್ವ ವಿಶ್ವಪ್ರಶಸ್ತಿ
From Jayaram Udupi
ಮಂಗಳೂರು: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಹಾಗೂ ವಿವಿಧ ಸ್ಕಾಲರ್‌ಶಿಪ್‌ಗಳನ್ನು ದೊರಕಿಸಿಕೊಡುವ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ‘ಸ್ಕಾಲರ್‌ಶಿಪ್ ಮಾಸ್ಟರ್’ ಎಂದೇ ಖ್ಯಾತರಾದ ನಾರಾಯಣ್ ನಾಯಕ್ ಅವರನ್ನು 2026ನೇ ಸಾಲಿನ 12ನೇ ಮೂಲತ್ವ ವಿಶ್ವಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಪ್ರಕಾಶ್ ಮೂಲತ್ವ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.26ರಂದು ಬೆಳಗ್ಗೆ 10 ಗಂಟೆಗೆ ಬಲ್ಮಠದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಫಲಕದೊಂದಿಗೆ ₹1,00,001 ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಮಾನವೀಯತೆ ಹಾಗೂ ಪರಸ್ಪರ ಸಹಕಾರದ ಆಶಯದೊಂದಿಗೆ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಕಳೆದ ಸುಮಾರು 20 ವರ್ಷಗಳಿಂದ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಸಾಮೂಹಿಕ ಪ್ರಾರ್ಥನೆ, ಮಾನಸಿಕ ಆರೋಗ್ಯಕ್ಕೆ ಪೂರಕ ಕಾರ್ಯಕ್ರಮಗಳು, ಮಾಹಿತಿ ಶಿಬಿರಗಳು, ಸ್ವಚ್ಛತಾ ಅಭಿಯಾನ, ಉಚಿತ ವೈದ್ಯಕೀಯ ಶಿಬಿರ, ಬಡ ಮಕ್ಕಳಿಗೆ ಶೈಕ್ಷಣಿಕ ನೆರವು, ವೈದ್ಯಕೀಯ ಹಾಗೂ ವಿವಾಹ ನೆರವು ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ನಿಸ್ವಾರ್ಥವಾಗಿ ಸಮಾಜ ಸೇವೆ ಸಲ್ಲಿಸುವ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಮೂಲತ್ವ ವಿಶ್ವಪ್ರಶಸ್ತಿಯನ್ನು ಆರಂಭಿಸಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾದ ಡಾ. ಜಗದೀಶ್ ಬಾಳ ಹಾಗೂ ಆರ್.ಜೆ. ನಯನ ಶೆಟ್ಟಿ, ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಕಲ್ಪನಾ ಕೋಟ್ಯಾನ್, ಶೈನಿ ಮೂಲತ್ವ, ಅಕ್ಷತ ಹಾಗೂ ಪ್ರೊ. ರಾಜ್ ಮೋಹನ್ ರಾವ್ ಉಪಸ್ಥಿತರಿದ್ದರು.







Comments
Leave a Comment