ಮಾಜಿ ಸಚಿವ ರಮಾನಾಥ್ ರೈ ಕಾರಿಗೆ ಖಾಸಗಿ ಬಸ್ ಢಿಕ್ಕಿ: ಪ್ರಾಣಪಾಯದಿಂದ ಪಾರು, ಆಸ್ಪತ್ರೆಗೆ ದಾಖಲು
ಮಾಜಿ ಸಚಿವ ರಮಾನಾಥ್ ರೈ ಕಾರಿಗೆ ಖಾಸಗಿ ಬಸ್ ಢಿಕ್ಕಿ: ಪ್ರಾಣಪಾಯದಿಂದ ಪಾರು, ಆಸ್ಪತ್ರೆಗೆ ದಾಖಲು
From Jayaram Udupi
ಉಡುಪಿ/ಕಾರ್ಕಳ:
ಮಾಜಿ ಸಚಿವ ಬಿ. ರಮಾನಾಥ್ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಢಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು, ರಮಾನಾಥ್ ರೈ ಅವರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಚಿಲಿಂಬಿ ಸಮೀಪ ಈ ಘಟನೆ ನಡೆದಿದೆ.
ಮಾಜಿ ಸಚಿವ ರಮಾನಾಥ್ ರೈ ಅವರು ಮೂಡುಬಿದಿರೆಯಿಂದ ಕಾರ್ಕಳದತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಢಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜಾಗಿದ್ದು, ರಮಾನಾಥ್ ರೈ ಅವರ ಕೈ ಹಾಗೂ ಕಾಲಿಗೆ ಗಾಯಗಳಾಗಿವೆ.
ಅಪಘಾತ ಸಂಭವಿಸಿದ ತಕ್ಷಣವೇ ಸ್ಥಳಕ್ಕಾಗಮಿಸಿದ ಮೂಡುಬಿದಿರೆ ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಜಗದೀಶ್, ಶಿಶಿರ್ ಹಾಗೂ ಸ್ಥಳೀಯರು ಹರಸಾಹಸ ಪಟ್ಟು ಕಾರಿನೊಳಗೆ ಸಿಲುಕಿಕೊಂಡಿದ್ದ ಮಾಜಿ ಸಚಿವ ರಮಾನಾಥ್ ರೈ ಮತ್ತು ಅವರ ಚಾಲಕನನ್ನು ಹೊರತೆಗೆದರು. ಬಳಿಕ ಗಾಯಾಳುಗಳನ್ನು ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಯಿತು.
ಸದ್ಯ ರಮಾನಾಥ್ ರೈ ಹಾಗೂ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.







Comments
Leave a Comment