* ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಕರೆ
ಹಸಿರು ಇಂಧನ ವಲಯದಲ್ಲಿ ರಾಜ್ಯಗಳೂ ಹೂಡಿಕೆ ಪಾಲುದಾರವಾಗಲಿ
* ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಕರೆ
* ಮುಂಬೈಯಲ್ಲಿ ʼನವೀಕರಿಸಬಹುದಾದ ಇಂಧನ ಶೃಂಗಸಭೆ 2026’ ರೋಡ್‌ಶೋ
* 500 GW ಸಾಮರ್ಥ್ಯದ ಗುರಿ ತಲುಪಲು ₹30 ಲಕ್ಷ ಕೋಟಿ ಹೂಡಿಕೆ ಅಗತ್ಯ
ನವದೆಹಲಿ: ವಿಶ್ವದಲ್ಲೇ ಅತ್ಯಂತ ವೇಗದ ಆರ್ಥಿಕತೆ ರಾಷ್ಟ್ರವಾಗಿ ಹೊರ ಹೊಮ್ಮುತ್ತಿರುವ ಭಾರತ ಹಸಿರು ಇಂಧನ ವಲಯದಲ್ಲೂ ದೇಶ-ವಿದೇಶಿ ಹೂಡಿಕೆಗಳನ್ನು ಗಣನೀಯವಾಗಿ ಆಕರ್ಷಿಸುತ್ತಿದ್ದು, ನಮ್ಮ ರಾಜ್ಯಗಳೂ ಪಾಲುದಾರಿಕೆಗೆ ಮುಂದಾಗಬೇಕು ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಕರೆ ನೀಡಿದರು.
ಮುಂಬೈಯಲ್ಲಿ ಗುರುವಾರ ಏರ್ಪಡಿಸಿದ್ದ ‘ಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ 2026’ರ ರೋಡ್‌ಶೋದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಸ್ವಚ್ಛ-ಶುದ್ಧ ಇಂಧನ ವಲಯದಲ್ಲಿ ಹೂಡಿಕೆಗೆ ಉತ್ತೇಜನ ನೀಡಬೇಕಿದ್ದು, ಹಸಿರು ಇಂಧನ ವಲಯವು ಹೂಡಿಕೆ ಮತ್ತು ಸಹಭಾಗಿತ್ವಕ್ಕೆ ಮಹತ್ವದ ಅವಕಾಶ ಒದಗಿಸುತ್ತದೆ ಎಂದು ಹೇಳಿದರು.
2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಗುರಿ ಸಾಧಿಸಲು ಮುಂಬರುವ 5 ವರ್ಷಗಳಲ್ಲಿ ₹30 ಲಕ್ಷ ಕೋಟಿಗೂ ಅಧಿಕ ಹೂಡಿಕೆಯ ಅಗತ್ಯವಿದ್ದು, ಭಾರತೀಯ ಹಣಕಾಸು ಸಂಸ್ಥೆಗಳು, ಬಂಡವಾಳ ಮಾರುಕಟ್ಟೆಗಳು, ವಿಮಾ ನಿಧಿಗಳು, ಮೂಲಸೌಕರ್ಯ ಹೂಡಿಕೆದಾರರು ಮತ್ತು ಖಾಸಗಿ ಬಂಡವಾಳದ ಮೂಲಕ ಸಂಗ್ರಹಿಸಬೇಕಾಗುತ್ತದೆ ಎಂದು ತಿಳಿಸಿದರು.
ಭಾರತದ ಶುದ್ಧ ಇಂಧನ ಹೂಡಿಕೆ ವ್ಯವಸ್ಥೆಯಲ್ಲಿ ಮುಂಬೈ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದ್ದು, ಎಲ್ಲಾ ರಾಜ್ಯಗಳು ತಮ್ಮ ಯೋಜನೆಗಳ ಪ್ರಸ್ತಾವಿತ ಪಟ್ಟಿಯೊಂದಿಗೆ ಹೂಡಿಕೆಗೆ ಮುಂದಾಗಬೇಕು. ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆಗೆ ಭಾರತ ಮಹತ್ತರ ವೇದಿಕೆ ಒದಗಿಸಿಕೊಡುತ್ತಿದೆ ಎಂದು ಪ್ರತಿಪಾದಿಸಿದರು.
ನ.2ರಿಂದ ನವೀಕರಿಸಬಹುದಾದ ಇಂಧನ ಶೃಂಗಸಭೆ: ʼಭಾರತ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026ʼ ನವದೆಹಲಿಯ ಭಾರತ ಮಂಟಪದಲ್ಲಿ ನವೆಂಬರ್ 2ರಿಂದ 5 ರವರೆಗೆ ನಡೆಯಲಿದ್ದು, ಈ ಶೃಂಗಸಭೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲಿದೆ. BRESE 2026ರಲ್ಲಿ ಮೂರು ಪ್ರಮುಖ ಜಾಗತಿಕ ವೇದಿಕೆಗಳು ಒಂದೇ ಸೂರಿನಡಿ ಸಮಾವೇಶಗೊಳ್ಳಲಿವೆ ಎಂದು ತಿಳಿಸಿದರು.
75ಕ್ಕೂ ಹೆಚ್ಚು ದೇಶಗಳ ಮುಖ್ಯಸ್ಥರು ಭಾಗಿ: ಬಿಆರ್‌ಇ (BRE) ಶೃಂಗಸಭೆ ಮತ್ತು ಎಕ್ಸ್‌ಪೋ, ಅಂತರಾಷ್ಟ್ರೀಯ ಸೌರ ಮೈತ್ರಿಕೂಟದ 9ನೇ ಸಾಮಾನ್ಯ ಸಭೆ ಹಾಗೂ 4ನೇ ಅಂತಾರಾಷ್ಟ್ರೀಯ ಹಸಿರು ಜಲಜನಕ ಸಮ್ಮೇಳನ ಸಹ ನಡೆಯಲಿದ್ದು, ನಾಲ್ಕು ದಿನಗಳ ಈ ಕಾರ್ಯಕ್ರಮದಲ್ಲಿ 75ಕ್ಕೂ ಹೆಚ್ಚು ದೇಶಗಳ ಸರ್ಕಾರದ ಮುಖ್ಯಸ್ಥರು ಮತ್ತು ಇಂಧನ ಸಚಿವರು, ಜಾಗತಿಕ ಸಾಂಸ್ಥಿಕ ಹೂಡಿಕೆದಾರರು, ತಂತ್ರಜ್ಞಾನ ಪೂರೈಕೆದಾರರು ಹಾಗೂ 25,000ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
303 GW ದಾಟಿದ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ: ಭಾರತ 300 ಗಿಗಾವ್ಯಾಟ್‌ಗೂ ಅಧಿಕ ಸ್ಥಾಪಿತ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ ದಾಟಿದ್ದು, ಇದೀಗ ಸುಮಾರು 302-303 ಗಿಗಾವ್ಯಾಟ್ ತಲುಪಿದೆ. ಅಂತೆಯೇ ಪಿಎಂ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆ ಸುಮಾರು 53.5 ಲಕ್ಷ ಕುಟುಂಬಗಳನ್ನು ತಲುಪಿದೆ. ಕಳೆದ 12 ವರ್ಷಗಳಲ್ಲಿ ಭಾರತದ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ 80.3 ಗಿಗಾವ್ಯಾಟ್‌ನಿಂದ 300.5 ಗಿಗಾವ್ಯಾಟ್‌ಗೆ ಏರಿಕೆಯಾಗಿದ್ದು, ಶೇ.275ರಷ್ಟು ಏರಿಕೆ ದಾಖಲಿಸಿದೆ ಎಂದು ಪ್ರಲ್ಹಾದ ಜೋಶಿ ಇದೇ ವೇಳೆ ಅಕಿಅಂಶ ಸಹಿತ ವಿವರಿಸಿದರು.
ಸೌರಶಕ್ತಿ ಸಾಮರ್ಥ್ಯ 2.8 ಗಿಗಾವ್ಯಾಟ್‌ನಿಂದ 165 ಗಿಗಾವ್ಯಾಟ್‌ಗೆ ಏರಿಕೆ ಕಂಡಿದೆ. ಅಂದರೆ ಸುಮಾರು 58 ಪಟ್ಟು ಬೆಳವಣಿಗೆಯಾಗಿದೆ. ಪವನಶಕ್ತಿ ಸಾಮರ್ಥ್ಯ 21 ಗಿಗಾವ್ಯಾಟ್‌ನಿಂದ 58 ಗಿಗಾವ್ಯಾಟ್, ಶೇ.176ರಷ್ಟು ಹೆಚ್ಚಳವಾಗಿದೆ. 2026–27ನೇ ಹಣಕಾಸು ವರ್ಷದ ಮೊದಲ 4 ತಿಂಗಳಲ್ಲಿ ಭಾರತ 17 ಗಿಗಾವ್ಯಾಟ್‌ಗೂ ಅಧಿಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸೇರ್ಪಡೆಗೊಳಿಸಿದ್ದು, 14.33 ಗಿಗಾವ್ಯಾಟ್ ಸೌರಶಕ್ತಿ ಹಾಗೂ 2 ಗಿಗಾವ್ಯಾಟ್‌ಗೂ ಅಧಿಕ ಪವನಶಕ್ತಿ ಸಾಮರ್ಥ್ಯ ಸೇರಿದೆ ಎಂದು ತಿಳಿಸಿದರು.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ, ಜಂಟಿ ಕಾರ್ಯದರ್ಶಿ ಜೆವಿಎನ್ ಸುಬ್ರಹ್ಮಣ್ಯಂ, ಮಹಾರಾಷ್ಟ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವ ಅತುಲ್ ಮೋರೆಶ್ವರ್ ಸಾವೆ ಮತ್ತಿತರರು ಉಪಸ್ಥಿತರಿದ್ದರು.







Comments
Leave a Comment