PRABHAVAA.COM

ಮಾಗಡಿ ರಸ್ತೆ ಕ್ವಾರಿ ದುರಂತ – 7 ಕಾರ್ಮಿಕರ ಬಲಿ

Bengaluru Rural:

Font size:

ಮಾಗಡಿ ರಸ್ತೆ ಕ್ವಾರಿ ದುರಂತ – 7 ಕಾರ್ಮಿಕರ ಬಲಿ

AI Image
ಮಾಗಡಿ ರಸ್ತೆ ಕ್ವಾರಿ ದುರಂತ – 7 ಕಾರ್ಮಿಕರ ಬಲಿ

ಬೆಂಗಳೂರು, ಜುಲೈ 02:
ರಾಜಧಾನಿಯ ಹೊರವಲಯ ತಾವರೆಕೆರೆ ಸಮೀಪದ ಮಾಗಡಿ ರಸ್ತೆಯ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಭೀಕರ ಬಂಡೆ ಕುಸಿತದ ದುರಂತಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ಘಟನಾ ಸ್ಥಳದಲ್ಲಿ ಒಟ್ಟು 20 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಕನಿಷ್ಠ 7 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಆರು ಮಂದಿ ಮಧ್ಯಪ್ರದೇಶ ಮೂಲದವರಾಗಿದ್ದು, ಮತ್ತೋರ್ವ ಕಾರ್ಮಿಕ ಕರ್ನಾಟಕದ ಯಾದಗಿರಿ ಜಿಲ್ಲೆಯವರು.

ಗುರುವಾರ ಬೆಳಗ್ಗೆ 6.50ಕ್ಕೆ ದುರಂತ ಸಂಭವಿಸಿದ್ದು, ಬುಧವಾರ ಸಂಜೆ 4 ಗಂಟೆಯಿಂದಲೇ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ರಾತ್ರಿ ಇಡೀ ಕೆಲಸ ನಡೆದಿದ್ದು, ಬೆಳಗ್ಗಿನ ಜಾವ ಕೆಲಸ ಮುಗಿಯುವ ಹೊತ್ತಿಗೆ ಬಂಡೆ ಕುಸಿದು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕಾರ್ಮಿಕರು ಮುಂಚಿತವಾಗಿ ಅಪಾಯದ ಸೂಚನೆ ನೀಡಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ ಎಂಬ ಆರೋಪಿಸಲಾಗಿದೆ.

ಮೃತರಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಡಿಹಾಳ್ ತಾಂಡದ ವೃದ್ಧ ರಾಮು ನಾಯಕ್ ಕೂಡ ಸೇರಿದ್ದಾರೆ. ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಬೆಂಗಳೂರಿಗೆ ವಲಸೆ ಬಂದಿದ್ದ ರಾಮು, ಕೂಲಿ ಕೆಲಸಕ್ಕಾಗಿ ಕ್ವಾರಿಗೆ ಇಳಿದಿದ್ದರು. ಅವರ ಸಾವಿನ ಸುದ್ದಿ ಸ್ವಗ್ರಾಮದಲ್ಲಿ ಆಕ್ರಂದನ ಮೂಡಿಸಿದ್ದು, ಗ್ರಾಮಸ್ಥರು ಕುಟುಂಬಕ್ಕೆ ನ್ಯಾಯ ಹಾಗೂ ಪರಿಹಾರ ಒದಗಿಸಬೇಕೆಂದು ಆಗ್ರಹಿಸಲಾಗಿದೆ.

ತೀವ್ರವಾಗಿ ಗಾಯಗೊಂಡ ಐವರು ಕಾರ್ಮಿಕರನ್ನು ಕೆಂಗೇರಿಯ ರಾಜರಾಜೇಶ್ವರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿದೆ. ಗುಲಾಬ್ ಸಿಂಗ್ (27), ರಾಜ್ ಪಾಲ್ (30), ಚೋಟು (24), ನೋಹರ್ ಸಿಂಗ್ (21), ಆನಂದ್ (30) ಎಂದು ಗುರುತಿಸಲ್ಪಟ್ಟಿದ್ದು, ಇವರಲ್ಲಿ ಒಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಕೈಕಾಲು ಹಾಗೂ ತಲೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಭವಿಷ್ಯದಲ್ಲಿ ದುಡಿದು ಬದುಕುವುದು ಕಷ್ಟವಾಗುವ ಮಟ್ಟಿಗೆ ಗಾಯವಾಗಿದೆ ಎಂದು ವೈದ್ಯರು ವಿವರಿಸಿದ್ದಾರೆ.

ಪ್ರಾಥಮಿಕ ವರದಿಗಳ ಪ್ರಕಾರ, ನಿಯಮ ಉಲ್ಲಂಘನೆಯೇ ದುರಂತಕ್ಕೆ ಕಾರಣವಾಗಿದೆ. ಘಟನಾ ಸ್ಥಳದಲ್ಲಿ ಪಕ್ಕಪಕ್ಕದಲ್ಲೇ ಎರಡು ಕ್ವಾರಿಗಳು ಕಾರ್ಯನಿರ್ವಹಿಸುತ್ತಿದ್ದು, ನಿಯಮದ ಪ್ರಕಾರ 7.5 ಅಡಿ ಬಫರ್ ಜೋನ್ ಬಿಡಬೇಕಾಗಿದ್ದರೂ, ಮಾಲೀಕರು ಅಕ್ರಮವಾಗಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. ಆನಂದ್ ಸ್ವಾಮಿ ಅವರ ಕ್ವಾರಿಯಲ್ಲಿ ಕೆಲಸ ಸ್ಥಗಿತಗೊಂಡಿದ್ದರೂ, ಕಾವೇರಿ ಕ್ವಾರಿಯಲ್ಲಿ ನಿರಂತರ ಕೆಲಸ ನಡೆಯುತ್ತಿತ್ತು. ಮೇಲ್ಭಾಗದಲ್ಲಿ ಬಂಡೆ ಜರುಗಿಸುವಾಗ ಕೆಳಗಡೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಂಡೆ ಕುಸಿದು ಬಿದ್ದಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಮಾಗಡಿ ರಸ್ತೆಯ ಕ್ವಾರಿಯಲ್ಲಿ ದುರಂತ ಸಂಭವಿಸಿ 6 ರಿಂದ 7 ಜನ ಮೃತಪಟ್ಟಿದ್ದಾರೆ. ಇದು ಸ್ಫೋಟದಿಂದ ಅಲ್ಲ, ಬಂಡೆ ಕುಸಿತದಿಂದ ಸಂಭವಿಸಿದೆ. ಕ್ವಾರಿ ಲೀಗಲ್ ಆಗಿದೆಯೇ ಅಥವಾ ಇಲ್ಲವೇ ಎಂಬುದರ ವರದಿ ಮಧ್ಯಾಹ್ನ ತರಿಸಿಕೊಳ್ಳುತ್ತೇನೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರಿಹಾರ ಘೋಷಣೆ ಕೂಡ ವರದಿ ಪರಿಶೀಲನೆಯ ಬಳಿಕ ಮಾಡಲಾಗುವುದು” ಎಂದು ತಿಳಿಸಿದ್ದಾರೆ.

ಸದ್ಯ ತಾವರೆಕೆರೆ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಕಂಟ್ರ್ಯಾಕ್ಟ್ ಮೇಸ್ತ್ರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕಾವೇರಿ ಸಂಸ್ಥೆಯ ಮಾಲೀಕ ಉದಯ್ ಶಂಕರ್ ಹಾಗೂ ಆನಂದ್ ಸ್ವಾಮಿ ಅವರ ವಿಚಾರಣೆ ಕೂಡ ನಡೆಯುತ್ತಿದೆ.

---

ಬೆಂಗಳೂರು, ಜು.02:

“ಮಾಗಡಿ ರಸ್ತೆ ಬಳಿ ಎರಡು ಕ್ವಾರಿಯಲ್ಲಿ ಕುಸಿತವಾಗಿದ್ದು 7 ಮಂದಿ ಮೃತಪಟ್ಟಿರುವ ಪ್ರಕರಣದ ಬಗ್ಗೆ ಅಧಿಕೃತ ಮಾಹಿತಿ ಪಡೆದ ನಂತರ ಕೈಗೊಳ್ಳಬೇಕಾಗಿರುವ ಅಗತ್ಯ ಕ್ರಮಗಳ ಬಗ್ಗೆ ತೀರ್ಮಾನ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

“ಪೊಲೀಸ್ ಅಧಿಕಾರಿಗಳು, ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದುರಂತ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಫೋಟದಿಂದಾಗಿ ಇದು ಸಂಭವಿಸಿಲ್ಲ ಎಂಬ ಮಾಹಿತಿ ಬಂದಿದ್ದು, ಈ ಕ್ವಾರಿ ಕಾನೂನುಬದ್ಧವಾಗಿ ನಡೆಸಲಾಗುತ್ತಿದೆಯೇ ಇಲ್ಲವೇ ಎಂಬ ವರದಿಯನ್ನು ಪಡೆದು ನಂತರ ಕ್ರಮ ಕೈಗೊಳ್ಳಲಾಗುವುದು. ಕ್ವಾರಿ ನಡೆಸುವಾಗ ಅದರದೇ ಆದ ನಿಯಮಗಳಿದ್ದು, ಅವುಗಳ ಪಾಲನೆಯಾಗುತ್ತಿವೆಯೇ ಇಲ್ಲವೇ ಎಂಬ ಪರಿಶೀಲನೆ ಮಾಡಲಾಗುವುದು” ಎಂದು ತಿಳಿಸಿದರು.

ಕಳೆದ ಬಾರಿ ಸ್ಫೋಟದ ವೇಳೆ ಚಿರತೆ ಸತ್ತಿತ್ತು ಈ ಹಿಂದೆ ತನಿಖೆ ಮಾಡದೇ ಪ್ರಕರಣ ಮುಚ್ಚಿಹಾಕಲಾಗಿತ್ತು ಎಂಬ ಸ್ಥಳೀಯ ಶಾಸಕರ ಆರೋಪದ ಬಗ್ಗೆ ಕೇಳಿದಾಗ, “ಶಾಸಕರು ನಮಗೆ ಮಾಹಿತಿ ನೀಡಿದ್ದು, ಅಧಿಕೃತ ವರದಿ ತರಿಸಿಕೊಂಡು ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ” ಎಂದರು.

ಪರಿಹಾರದ ವಿಚಾರವಾಗಿ ಕೇಳಿದಾಗ, “ಮೊದಲು ಎಷ್ಟು ಜನ ಸತ್ತಿದ್ದಾರೆ ಎಂಬ ಮಾಹಿತಿಗಳು ಬರಲಿ, ಆನಂತರ ಪರಿಹಾರದ ಬಗ್ಗೆ ತೀರ್ಮಾನ ಮಾಡೋಣ. ತರಾತುರಿಯಲ್ಲಿ ಪರಿಹಾರ ಘೋಷಿಸಿದ ಮಾತ್ರಕ್ಕೆ ಸತ್ತವರು ಮರಳಿ ಬರುವುದಿಲ್ಲ. ಇದಕ್ಕೆಲ್ಲಾ ಅದರದೇ ಆದ ಪ್ರಕ್ರಿಯೆಗಳಿವೆ. ಖಂಡಿತವಾಗಿ ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ” ಎಂದು ತಿಳಿಸಿದರು.

---

ಮಾದಪಟ್ಟಣದ ಕ್ವಾರಿ ದುರಂತ; ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಮೃತರ ಕುಟುಂಬಗಳಿಗೆ ಸರ್ಕಾರದಿಂದ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಬೆಂಗಳೂರು, ಜುಲೈ 2

ಮಾದಪಟ್ಟಣದ ಕ್ವಾರಿಯಲ್ಲಿ ಬಂಡೆ ಬಿದ್ದು ಏಳು ಕಾರ್ಮಿಕರು ಮೃತಪಟ್ಟಿರುವುದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಮೃತರ ಕುಟುಂಬಗಳಿಗೆ ಸರ್ಕಾರದಿಂದ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯಲ್ಲಿ ಗುರುತು ಸಿಗಲಾರದ ಮಟ್ಟಿಗೆ ದೇಹಗಳು ಛಿದ್ರಗೊಂಡಿವೆ. ನಾನು ವೈದ್ಯರನ್ನು ಭೇಟಿ ಮಾಡಿ ತಕ್ಷಣ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ. ರಾಜ್ಯದಲ್ಲಿ ಅನೇಕ ಕಡೆ ಕ್ವಾರಿ ದಂಧೆ ನಡೆಯುತ್ತಿದೆ. ರಾಜಕಾರಣಿಗಳ ಹೆಸರು ಹೇಳಿಕೊಂಡು ಲೈಸೆನ್ಸ್‌ ಇಲ್ಲದೆಯೇ ಅನಧಿಕೃತವಾಗಿ ಕ್ವಾರಿ ಗಣಿ ನಡೆಯುತ್ತಿದೆ. ಬೆಂಗಳೂರಿಗೆ 15 ಕಿ.ಮೀ. ದೂರದ ಕ್ವಾರಿಯಲ್ಲಿ ಪರಿಶೀಲನೆ ಮಾಡುವ ಯೋಗ್ಯತೆ ಇಲ್ಲದೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಜಕ್ಕೂ ಸತ್ತುಹೋಗಿದೆ ಎಂದು ದೂರಿದರು.

ಕೂಲಿಗಾಗಿ ಬೇರೆ ರಾಜ್ಯದಿಂದ ಬಂದ ಕಾರ್ಮಿಕರು ಮೃತಪಟ್ಟಿದ್ದಾರೆ. ಸರ್ಕಾರ ಅನಧಿಕೃತ ಕ್ವಾರಿ ಗಣಿಗಾರಿಕೆಗೆ ಅವಕಾಶ ನೀಡುವುದು ಸರಿಯಲ್ಲ. ಇದಕ್ಕೆ ಹಿಂದೆಯೂ ಇಂತಹ ಘಟನೆ ನಡೆದಿದ್ದರೂ ಕ್ರಮ ವಹಿಸಿಲ್ಲ. ವಿರೋಧಿಗಳಿದ್ದರೆ ಪೊಲೀಸರು ಹುಡುಕಿಕೊಂಡು ಹೋಗುತ್ತಿದ್ದರು. ಆದರೆ ಇಷ್ಟು ಸಮಯವಾದರೂ ಒಬ್ಬರನ್ನೂ ಬಂಧಿಸಿಲ್ಲ. ಜಿಲ್ಲಾಧಿಕಾರಿಗೆ ಕರೆ ಮಾಡಿದರೆ ಫೋನ್‌ ಕರೆ ಸ್ವೀಕರಿಸುತ್ತಿಲ್ಲ. ಸಚಿವರು ಕೂಡ ಈ ಕಡೆ ಬಂದಿಲ್ಲ. ನಾನು ಸ್ಥಳಕ್ಕೆ ಬಂದು ಕ್ರಮ ವಹಿಸಿ ಎಂದು ಹೇಳುವ ಸ್ಥಿತಿ ಬಂದಿದೆ. ಈ ಸರ್ಕಾರದ ನಿರ್ಲಕ್ಷ್ಯದಿಂದಲೇ ಈ ದುರಂತ ನಡೆದಿದೆ ಎಂದರು.

ಈ ಘಟನೆಗೆ ಕಾರಣರಾದ ತಪ್ಪಿಸ್ಥರನ್ನು ಬಂಧಿಸಬೇಕು. ಕಾರ್ಮಿಕರ ಕುಟುಂಬಕ್ಕೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು. ಗಾಯಾಳುಗಳು ಚೇತರಿಸಿಕೊಳ್ಳಲು ಬಹಳ ಕಾಲ ಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರಿಗೂ 10 ಲಕ್ಷ ರೂ. ಸಹಾಯ ನೀಡಬೇಕು ಎಂದು ಆಗ್ರಹಿಸಿದರು.

52 ಕ್ರಿಮಿನಲ್‌ ಪ್ರಕರಣ ಹಿಂಪಡೆದ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್‌ ತಡೆಯಾಜ್ಞೆ ನೀಡಿರುವ ಕುರಿತು ಪ್ರತಿಕ್ರಿಯಸಿದ ಅವರು, ಮುಸ್ಲಿಮರಿಗೆ ಒಂದು, ಹಿಂದೂಗಳಿಗೆ ಒಂದು ಎಂಬ ಕಾನೂನು ಮಾಡಬಾರದು. ಕಾಂಗ್ರೆಸ್‌ ಸರ್ಕಾರ ಮುಸ್ಲಿಂ ಸಂಘಟನೆಗಳ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆದು, ದೇಶ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡಿದೆ. ಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ಸರ್ಕಾರಕ್ಕೆ ಕಪಾಳ ಮೋಕ್ಷವಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಾಮ ಹಾಕಿಕೊಂಡು ದೇವಾಲಯ ಸುತ್ತಿದರೆ ಹಿಂದೂ ಎಂದು ಯಾರೂ ನಂಬಲ್ಲ ಎಂದರು.

Comments

Leave a Comment

Prev Post ವಿಧಾನ ಪರಿಷತ್‌ಗೆ ಆಯ್ಕೆಯಾದ ಏಳು ಸದಸ್ಯರ ಪ್ರಮಾಣ ವಚನ
Next Post ಜನಸ್ಪಂದನಕ್ಕೆ ಹೊಸ ದಿಕ್ಕು – ಸರ್ಕಾರದ ಸುತ್ತೋಲೆ ಮೂಲಕ ಜನರ ನೇರ ಸಂವಾದಕ್ಕೆ ಬುನಾದಿ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News