ಶಾಲಾ ಪಾಠಪುಸ್ತಕಗಳಲ್ಲಿ ಅಂಕೆ, ಅಕ್ಷರ, ವಿಜ್ಞಾನ ಮಾತ್ರವಲ್ಲ — ಈಗ ಮೌಲ್ಯಗಳೂ ಪಾಠವಾಗಲಿವೆ,
ಬೆಂಗಳೂರು, ಜೂ , 8- ಶಾಲಾ ಪಾಠಪುಸ್ತಕಗಳಲ್ಲಿ ಅಂಕೆ, ಅಕ್ಷರ, ವಿಜ್ಞಾನ ಮಾತ್ರವಲ್ಲ — ಈಗ ಮೌಲ್ಯಗಳೂ ಪಾಠವಾಗಲಿವೆ, ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಹೊಸ ಸುತ್ತೋಲೆಯ ಮೂಲಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸತ್ಯ, ಸಹಾನುಭೂತಿ, ಜವಾಬ್ದಾರಿ, ಮತ್ತು ನೈತಿಕತೆ ಬೀಜ ಬಿತ್ತುವ ಹೊಸ ಪ್ರಯತ್ನ ಆರಂಭಿಸಿದೆ.
ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) ಶಾಲೆಗಳಲ್ಲಿ ಮೌಲ್ಯ ಶಿಕ್ಷಣವನ್ನು ಜಾರಿಗೊಳಿಸುವ ಕುರಿತು ಮಹತ್ವದ ಸುತ್ತೋಲೆ ಹೊರಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ .2026-27ನೇ ಸಾಲಿನಿಂದ 1ರಿಂದ 10ನೇ ತರಗತಿವರೆಗೆ ಮೌಲ್ಯ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗಿದ್ದು, ತರಗತಿವಾರು ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳನ್ನು ದ್ವಿಭಾಷೆಯಲ್ಲಿ ಸಿದ್ಧಪಡಿಸಿ ಶಾಲೆಗಳಿಗೆ ಸರಬರಾಜು ಮಾಡಲಾಗಿದೆ. ಕಳೆದ ಸಾಲಿನಲ್ಲಿ 1 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಲಾಗಿದ್ದು, ಈ ವರ್ಷ ಎಲ್ಲಾ ಶಿಕ್ಷಕರಿಗೂ ತರಬೇತಿ ನೀಡುವ ಯೋಜನೆ ರೂಪಿಸಲಾಗಿದೆ.
ಶಿಕ್ಷಕರಿಗೆ ತರಗತಿವಾರು, ವಿಷಯವಾರು ಚಟುವಟಿಕೆಗಳನ್ನು ಹಂಚಿಕೆ ಮಾಡುವ Teacher’s Transaction Module ಸಿದ್ಧಪಡಿಸಲಾಗಿದ್ದು, ಶಾಲಾ ವೇಳಾಪಟ್ಟಿಯಲ್ಲಿ ಪ್ರತಿ ತರಗತಿಗೆ ಒಂದು ಅವಧಿ ಮೌಲ್ಯ ಶಿಕ್ಷಣಕ್ಕೆ ಮೀಸಲಾಗಿರುತ್ತದೆ. ವಿದ್ಯಾರ್ಥಿಗಳ ವರ್ತನೆಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಗಮನಿಸಿ, ನಿರಂತರ ಅನುಪಾಲನೆ ಮಾಡುವಂತೆ ಸೂಚಿಸಲಾಗಿದೆ.
ತರಗತಿಗಳಲ್ಲಿ ವಿಷಯವಾರು ಮೌಲ್ಯ ಶಿಕ್ಷಣವನ್ನು ಹೀಗೆ ಅಳವಡಿಸಲಾಗಿದೆ: 1ನೇ ತರಗತಿಯಲ್ಲಿ ಕನ್ನಡದಲ್ಲಿ “ಸತ್ಯ ಹೇಳುವುದು” ಕಥೆ ಹೇಳಿಕೆ, ಗಣಿತದಲ್ಲಿ “ಸಮತೆ” ಆಟದ ಮೂಲಕ ಕಲಿಕೆ. 2ನೇ ತರಗತಿಯಲ್ಲಿ ಪರಿಸರ ವಿಜ್ಞಾನದಲ್ಲಿ “ಸ್ವಚ್ಛತೆ” ಚಟುವಟಿಕೆ, ಇಂಗ್ಲಿಷ್‌ನಲ್ಲಿ “ಮಿತ್ರತೆ” ಕುರಿತ ಕಥೆ ಬರೆಯುವುದು. 3ನೇ ತರಗತಿಯಲ್ಲಿ ಸಮಾಜಶಾಸ್ತ್ರದಲ್ಲಿ “ಸಹಕಾರ” ಗುಂಪು ಚಟುವಟಿಕೆ, ವಿಜ್ಞಾನದಲ್ಲಿ “ಪ್ರಕೃತಿ ಸಂರಕ್ಷಣೆ” ಗಿಡ ನೆಡುವುದು. 4ನೇ ತರಗತಿಯಲ್ಲಿ ಗಣಿತದಲ್ಲಿ “ಸಮಯ ಪಾಲನೆ” ದಿನಚರಿ ಬರೆಯುವುದು, ಕನ್ನಡದಲ್ಲಿ “ಅಹಿಂಸೆ” ಕುರಿತ ಕವನ. 5ನೇ ತರಗತಿಯಲ್ಲಿ ವಿಜ್ಞಾನದಲ್ಲಿ “ಪರಿಸರ ಸಂರಕ್ಷಣೆ” ಪ್ರಬಂಧ, ಸಮಾಜಶಾಸ್ತ್ರದಲ್ಲಿ “ಸಮಾನತೆ” ಚರ್ಚೆ. 6ನೇ ತರಗತಿಯಲ್ಲಿ ಇಂಗ್ಲಿಷ್‌ನಲ್ಲಿ “ಸತ್ಯನಿಷ್ಠೆ” ಪಾತ್ರಾಭಿನಯ, ಗಣಿತದಲ್ಲಿ “ನ್ಯಾಯ” ಸಮಸ್ಯೆ ಪರಿಹಾರ. 7ನೇ ತರಗತಿಯಲ್ಲಿ ಸಮಾಜಶಾಸ್ತ್ರದಲ್ಲಿ “ಸಮಯ ಪಾಲನೆ” ಚರ್ಚೆ, ವಿಜ್ಞಾನದಲ್ಲಿ “ಜವಾಬ್ದಾರಿ” ಪ್ರಯೋಗ. 8ನೇ ತರಗತಿಯಲ್ಲಿ ಕನ್ನಡದಲ್ಲಿ “ಸಹಾನುಭೂತಿ” ಕಥೆ ಬರೆಯುವುದು, ಇಂಗ್ಲಿಷ್‌ನಲ್ಲಿ “ಸಾಮಾಜಿಕ ಹೊಣೆಗಾರಿಕೆ” ವಾದವಿವಾದ. 9ನೇ ತರಗತಿಯಲ್ಲಿ ವಿಜ್ಞಾನದಲ್ಲಿ “ಪ್ರಕೃತಿ ಸಂರಕ್ಷಣೆ” ಯೋಜನೆ, ಸಮಾಜಶಾಸ್ತ್ರದಲ್ಲಿ “ಸಮಾನತೆ” ಚರ್ಚೆ. 10ನೇ ತರಗತಿಯಲ್ಲಿ ಸಮಾಜಶಾಸ್ತ್ರದಲ್ಲಿ “ಸಾಮಾಜಿಕ ಹೊಣೆಗಾರಿಕೆ” ಸಮುದಾಯ ಸೇವಾ ಯೋಜನೆ, ಇಂಗ್ಲಿಷ್‌ನಲ್ಲಿ “ನೈತಿಕತೆ” ಕುರಿತ ಪ್ರಬಂಧ.
ಪ್ರಸಕ್ತ ಸಾಲಿನಲ್ಲಿ ಸಮಗ್ರ ಪ್ರಗತಿ ಪತ್ರ (HPC) ಮುದ್ರಿಸಿ ಶಾಲೆಗಳಿಗೆ ಸರಬರಾಜು ಮಾಡಲಾಗಿದ್ದು, ವಿದ್ಯಾರ್ಥಿಗಳು ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತಿರುವ ಬಗ್ಗೆ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಶಿಕ್ಷಕರು ನಿರಂತರ ಅವಲೋಕನದ ಮೂಲಕ ಮಾಹಿತಿಯನ್ನು ದಾಖಲಿಸಿ, ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದು ಮುಖ್ಯ ಗುರಿಯಾಗಿದೆ ಎಂದು DSERT ನಿರ್ದೇಶಕರು ತಿಳಿಸಿದ್ದಾರೆ.
ಕಳೆದ ಮೇ ತಿಂಗಳ ೨೫ ರಂದೇ ಈ ಸುತ್ತೋಲೆ ಸಿದ್ದವಾಗಿದೆ , ಇದಕ್ಕೆ ಜೂನ್ ೧ ರಂದು ನಿರ್ದೇಶಕರು ಸಹಿ ಹಾಕಿದ್ದಾರೆ.
ಶಿಕ್ಷಣದ ಗುರಿ ಕೇವಲ ಜ್ಞಾನವಲ್ಲ, ಮನುಷ್ಯತ್ವವೂ ಆಗಬೇಕು ಎಂಬ ಧ್ಯೇಯದೊಂದಿಗೆ DSERT 2026-27ನೇ ಸಾಲಿನಿಂದ ಶಾಲೆಗಳಲ್ಲಿ ಮೌಲ್ಯ ಶಿಕ್ಷಣವನ್ನು ಪಠ್ಯಕ್ರಮದ ಭಾಗವನ್ನಾಗಿ ಮಾಡಿದೆ. ಈ ಯೋಜನೆಯಡಿ 1ರಿಂದ 10ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ತರಗತಿವಾರು ಚಟುವಟಿಕೆಗಳ ಮೂಲಕ ಮೌಲ್ಯಗಳನ್ನು ಕಲಿಸುವ ಹೊಸ ಅಧ್ಯಾಯ ಆರಂಭವಾಗಿದೆ.






Comments
Leave a Comment