ಶ್ರೀ ಸದ್ಗುರು ಆಧಾರ್ ಫೌಂಡೇಶನ್ ಪುನರ್ ವಸತಿ ಕೇಂದ್ರ ಉದ್ಘಾಟನೆ
ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಲ್ಲಿರುವ ಶ್ರೀ ಸದ್ಗುರು ಆಧಾರ್ ಫೌಂಡೇಶನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಿರಿಯ ನಾಗರಿಕರ ಆರೋಗ್ಯ, ಆರೈಕೆ ಹಾಗೂ ಮನರಂಜನೆಗಾಗಿ ಆರಂಭಿಸಲಾದ ಪುನರ್ ವಸತಿ ಕೇಂದ್ರದ ಉದ್ಘಾಟನಾ ಸಮಾರಂಭ ಇಂದು ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ್ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಹಿರಿಯ ನಾಗರಿಕರ ಸೇವೆ ಅತ್ಯಂತ ಮಹತ್ವದ್ದಾಗಿದ್ದು, ಇಂತಹ ಸೇವಾ ಮನೋಭಾವದ ಸಂಸ್ಥೆಗಳು ಇನ್ನಷ್ಟು ಬೆಳೆಯಬೇಕು ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ನಟ ಹಾಗೂ ನಿರ್ಮಾಪಕರಾದ ಗಂಡಸಿ ಸದಾನಂದಸ್ವಾಮಿ ಭಾಗವಹಿಸಿ, ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಹಿರಿಯರ ಬದುಕಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಫೌಂಡೇಶನ್ ಟ್ರಸ್ಟಿಗಳಾದ ವಿನಯ್ ಕುಮಾರ್, ಶ್ರೀಮತಿ ಜ್ಯೋತಿ ವಿನಯ್ ಕುಮಾರ್, ಪ್ರವೀಣ್ ಹಾಗೂ ಮೌಶಿಯ ಸುಲ್ತಾನ್ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಚಲನಚಿತ್ರ ನಟ ಶಂಕರ್ ಭಟ್, ನಟಿ ಮಧುಶ್ರೀ, ಶ್ರೀ ಲಕ್ಷ್ಮೀಭಟ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಆರೈಕೆ, ಆರೋಗ್ಯ ಸೇವೆ ಹಾಗೂ ಪುನರ್ವಸತಿ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗಿದ್ದು, ಸಮಾಜ ಸೇವೆಯಲ್ಲಿ ಫೌಂಡೇಶನ್ ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ಕೈಗೊಳ್ಳಲಿದೆ ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದರು.



Comments
Leave a Comment