ಬೆಂಗಳೂರು ವಾರ್ಡ್ ಮರುವಿಂಗಡಣೆ ಕುರಿತ ಚರ್ಚೆ ಬಗ್ಗೆ ಕುಮಾರಸ್ವಾಮಿಗೆ ಅರಿವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು
ಬೆಂಗಳೂರು, ಏ.21:
"ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಗುಣವಾಗಿ ವಿರೋಧ ಪಕ್ಷದ ಶಾಸಕರು, ಸಾರ್ವಜನಿಕರನ್ನು ವಿಶ್ವಾಸಕ್ಕೆ ಪಡೆದು ಜಿಬಿಎ ಪಾಲಿಕೆಗಳು ಹಾಗೂ ವಾರ್ಡ್ ಗಳ ಮರುವಿಂಗಡಣೆ ಮಾಡಲಾಗಿದೆ. ಆದರೆ ಈ ಬಗ್ಗೆ ಕುಮಾರಸ್ವಾಮಿ ಅವರಿಗೆ ಅರಿವಿಲ್ಲ. ಬೇಕಿದ್ದರೇ ಅವರ ಶಾಸಕರನ್ನೇ ಕೇಳಿ ತಿಳಿದುಕೊಳ್ಳಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.
ಕೇಂದ್ರ ಸರ್ಕಾರದ ಲೋಕಸಭಾ ಕ್ಷೇತ್ರ ಮರುವಿಂಗಡಣೆ ವಿಧೇಯಕ ಸಮರ್ಥಿಸಿಕೊಳ್ಳುವ ಭರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಬೆಂಗಳೂರು ಪಾಲಿಕೆಗಳ ವಾರ್ಡ್ ಮರುವಿಂಗಡಣೆ ಬಗ್ಗೆ ಯಾರೊಂದಿಗೂ ಚರ್ಚೆ ನಡೆಸಿಲ್ಲ ಎಂದು ಮಾಡಿರುವ ಆರೋಪದ ಬಗ್ಗೆ ಕೇಳಿದಾಗ, “ಬೆಂಗಳೂರು ವಾರ್ಡ್ ಗಳ ಮರುವಿಂಗಡಣೆ ವೇಳೆ ಎಲ್ಲಾ ಪಕ್ಷದ ಶಾಸಕರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಅವರ ಪಕ್ಷದ ಶಾಸಕರು ಸಮಿತಿಯ ಭಾಗವಾಗಿದ್ದರು. ಜೆಡಿಎಸ್ ಹಾಗೂ ಬಿಜೆಪಿ ಶಾಸಕರ ಜತೆ ಚರ್ಚೆ ಮಾಡಿ, ಅವರೆಲ್ಲರ ಅಭಿಪ್ರಾಯ ಪಡೆದ ನಂತರವೇ ಅಂತಿಮ ತೀರ್ಮಾನ ಮಾಡಲಾಗಿದೆ” ಎಂದರು.
“ಕುಮಾರಸ್ವಾಮಿ ಅವರು ದೊಡ್ಡ ವ್ಯಕ್ತಿ ಇರಬಹುದು. ನನಗೂ ಸಣ್ಣ ಅನುಭವವಿದೆ. ಈ ಅನುಭವದ ಮೇಲೆ ಹೇಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಶಾಸಕರು, ನಾಯಕರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುದು ನನಗೂ ಗೊತ್ತಿದೆ. ನಾನು ಅವರ ಶಾಸಕರ ಜತೆ ಎಷ್ಟು ಗಂಟೆಗಳ ಕಾಲ ಚರ್ಚೆ ಮಾಡಿದ್ದೇನೆ, ಎಷ್ಟು ಗಂಟೆಗಳ ಕಾಲ ಸಾರ್ವಜನಿಕರೊಂದಿಗೆ ಸಂವಾದ ಮಾಡಲಾಗಿದೆ ಎಂದು ಕುಮಾರಸ್ವಾಮಿ ಅವರು ತಿಳಿದುಕೊಂಡು ಮಾತನಾಡುವುದು ಸೂಕ್ತ” ಎಂದು ಛೇಡಿಸಿದರು.
ಜಿಬಿಎ ಪಾಲಿಕೆಗಳ ಚುನಾವಣೆ ಯಾವಾಗ ನಡೆಯಲಿದೆ ಎಂದು ಕೇಳಿದಾಗ, “ನಾವು ಚುನಾವಣೆಗೆ ಸಿದ್ಧವಿರುವುದಾಗಿ ತಿಳಿಸಿದ್ದೇವೆ. ಉಳಿದಂತೆ ಆ ಪ್ರಕ್ರಿಯೆ ನಡೆಸಲು ರಾಜ್ಯ ಚುನಾವಣಾ ಆಯೋಗವಿದೆ, ನ್ಯಾಯಾಲಯವಿದೆ” ಎಂದು ತಿಳಿಸಿದರು.
ಮುಸಲ್ಮಾನರ ಬಗ್ಗೆ ಹಗೆ ಸುಳ್ಳು ಆರೋಪ
ಮುಸಲ್ಮಾನ ಸಮುದಾಯದ ಮುಖಂಡರು ಹೈಕಮಾಂಡ್ ನಾಯಕರಿಗೆ ಪತ್ರ ಬರೆದು ಸಮುದಾಯದ ಮೇಲೆ ಹಗೆ ಸಾಧಿಸಲಾಗುತ್ತಿದೆ ಎಂದು ಆರೋಪ ಮಾಡಿರುವ ಬಗ್ಗೆ ಕೇಳಿದಾಗ, “ಅದೆಲ್ಲ ಸುಳ್ಳು. ಯಾರೂ ಹಗೆ ಸಾಧಿಸುತ್ತಿಲ್ಲ. ಪಕ್ಷವು ಶಿಸ್ತು ಪಾಲನೆಗೆ ಆದ್ಯತೆ ನೀಡುತ್ತಿದೆ. ಎಲ್ಲರೂ ಶಿಸ್ತು ಅಳವಡಿಸಿಕೊಳ್ಳಬೇಕು” ಎಂದು ತಿಳಿಸಿದರು.
ಬೇಸಿಗೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ನಿರ್ವಹಣೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಈಗಾಗಲೇ ಬಿಡಬ್ಲ್ಯೂಎಸ್ಎಸ್ ಬಿ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಅಂತರ್ಜಲ ಹೆಚ್ಚಳದ ಬಗ್ಗೆ ಮಾತನಾಡಿದ್ದು, ಏನೇ ಸಮಸ್ಯೆ ಬಂದರೂ ನಾವು ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ” ಎಂದು ತಿಳಿಸಿದರು.






Comments
Leave a Comment